ಪೊಲೀಸ್ ಅಧಿಕಾರಿಗಳ ಹತ್ಯೆಗೆ ಸಂಚು ಆರೋಪ: ಜಾಮೀನು ಕೋರಿ ಕೇರಳ ಹೈಕೋರ್ಟ್ ಮೊರೆ ಹೋದ ನಟ ದಿಲೀಪ್

ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸ್ ಅಧಿಕಾರಿಗಳ ಹತ್ಯೆಗೆ ಸಂಚು ರೂಪಿಸಿದ್ದಕ್ಕಾಗಿ ನಟ ದಿಲೀಪ್ ವಿರುದ್ಧ ಹೊಸ ಪ್ರಕರಣ ದಾಖಲಾಗಿದ್ದು ಈ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಅವರು ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.
Dileep, Kerala High court

Dileep, Kerala High court

ತಮ್ಮ ವಿರುದ್ಧದ ಲೈಂಗಿಕ ದೌರ್ಜನ್ಯದ ಪ್ರಕರಣದ ತನಿಖೆ ನಡೆಸುತ್ತಿದ್ದ ತನಿಖಾಧಿಕಾರಿಗಳನ್ನು ಕೊಲ್ಲಲು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿ ಕೇರಳ ಪೊಲೀಸರು ತಮ್ಮ ಮೇಲೆ ಹೊಸದಾಗಿ ದಾಖಲಿಸಿರುವ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಮಲಯಾಳಂ ನಟ ದಿಲೀಪ್‌ ಕೇರಳ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

Also Read
ಮಲಯಾಳಂ ನಟ ದಿಲೀಪ್ ಪ್ರಕರಣದ ವರ್ಗಾವಣೆಗೆ ಎರ್ನಾಕುಲಂ ನ್ಯಾಯಾಲಯ ನಕಾರ: ನ. 3 ರಂದು ವಿಚಾರಣೆ ಪುನರಾರಂಭ

ಮಲಯಾಳಂ ನಟಿಯೊಬ್ಬರನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯ ನಡೆಸಿ, ಫೋಟೋ ತೆಗೆಸುವ ಮೂಲಕ ಸೇಡು ತೀರಿಸಿಕೊಳ್ಳಲು ಸಂಚು ರೂಪಿಸಿದ್ದಕ್ಕಾಗಿ ನಟ ಮತ್ತು ಅವರ ಸಹಚರರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ದಿಲೀಪ್‌ ತನ್ನ ಪತ್ನಿಯಿಂದ (ಮಂಜು ವಾರಿಯರ್‌) ಬೇರೆಯಾಗುವಲ್ಲಿ ಸಂತ್ರಸ್ತೆ ನಟಿಯ ಪಾತ್ರ ಇದೆ ಎಂದು ಆರೋಪಿಸಲಾಗಿತ್ತು. ದಿಲೀಪ್‌ ಸೂಚನೆಯಂತೆ ನಟಿಯನ್ನು ಕಾರಿನಲ್ಲಿ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ ಆರು ಜನರನ್ನು ಬಂಧಿಸಲಾಗಿತ್ತು.

ಪ್ರಕರಣದಲ್ಲಿ ದಿಲೀಪ್ ಭಾಗಿಯಾಗಿರುವ ಆರೋಪದ ಬಗ್ಗೆ ಚಲನಚಿತ್ರ ನಿರ್ದೇಶಕ ಬಾಲಚಂದ್ರ ಕುಮಾರ್ ಅವರು ಹೇಳಿಕೆ ನೀಡಿದ ನಂತರ ಹೆಚ್ಚಿನ ತನಿಖೆ ಅಗತ್ಯವಿದೆ ಎಂದು ಎರ್ನಾಕುಲಂ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿ ತಿಳಿಸಿದ್ದರು. ತನಿಖಾಧಿಕಾರಿಯ ವಿರುದ್ಧ ಸೇಡು ತೀರಿಸಿಕೊಳ್ಳಲು ದಿಲೀಪ್‌ ಸಂಚು ರೂಪಿಸಲು ಮುಂದಾಗಿದ್ದ ಬಗ್ಗೆ ತಾವು ಕೇಳಿರುವುದಾಗಿ ಬಾಲಚಂದ್ರ ಕುಮಾರ್‌ ಅವರು ಹೇಳಿದ್ದರು.

Also Read
ದಿಲೀಪ್ ಪ್ರಕರಣ: ಹಿಂದೆ ಸರಿದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್; ರಾಜೀನಾಮೆ ನೀಡಿದ ಎರಡನೇ ಎಸ್‌ಪಿಪಿ

ಈ ಹಿನ್ನೆಲೆಯಲ್ಲಿ ದಿಲೀಪ್‌ ಮತ್ತು ಐವರ ವಿರುದ್ಧ ಕೇರಳ ಪೊಲೀಸ್‌ ಅಪರಾಧ ವಿಭಾಗ ಹೊಸ ಎಫ್‌ಐಆರ್‌ ದಾಖಲಿಸಿದೆ. ದಿಲೀಪ್, ಅವರ ಸಹೋದರ ಅನೂಪ್ ಹಾಗೂ ಸಂಬಂಧಿ ಸೂರಜ್ ನಿರೀಕ್ಷಣಾ ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋಗಿದ್ದಾರೆ.

Related Stories

No stories found.
Kannada Bar & Bench
kannada.barandbench.com