

ಮದುವೆಯ ಸಂದರ್ಭದಲ್ಲಿ ಮಹಿಳೆಯ ಪೋಷಕರು ನೀಡಿದ ಚಿನ್ನ, ನಗದು ಮತ್ತಿತರ ಉಡುಗೊರೆಗಳು ಪತ್ನಿಯ ವೈಯಕ್ತಿಕ ಸ್ವತ್ತಾಗಿದ್ದು, ವಿಚ್ಛೇದನದ ನಂತರ ಅವುಗಳನ್ನು ಪತಿಯಿಂದ ಮರಳಿ ಪಡೆಯುವ ಹಕ್ಕು 1986ರ ಮುಸ್ಲಿಂ ಮಹಿಳೆಯರ (ವಿಚ್ಛೇದನದ ವೇಳೆ ಹಕ್ಕುಗಳ ರಕ್ಷಣೆ) ಕಾಯಿದೆಯ ಅಡಿ ಮುಸ್ಲಿಂ ಮಹಿಳೆಗಿದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ [ರೌಸನಾರಾ ಬೇಗಂ ಮತ್ತು ಎಸ್‌ಕೆ ಸಲಾಹುದ್ದೀನ್ ಇನ್ನಿತರರ ನಡುವಣ ಪ್ರಕರಣ].
1986ರ ಕಾನೂನಿನ ವಿಶಾಲ ಸಾಮಾಜಿಕ ಉದ್ದೇಶವನ್ನು ನಿರ್ಲಕ್ಷಿಸಿದ ಕಲ್ಕತ್ತಾ ಹೈಕೋರ್ಟ್, ವ್ಯಾಜ್ಯವನ್ನು ಕೇವಲ ಸಿವಿಲ್ ಪ್ರಕರಣವಾಗಿ ಪರಿಗಣಿಸಿದೆ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಹಾಗೂ ಎನ್ ಕೆ ಸಿಂಗ್ ಅವರಿದ್ದ ಪೀಠ ತಿಳಿಸಿತು.
ಮುಸ್ಲಿಂ ಮಹಿಳೆಯರ ಸಮಾನತೆ, ಸ್ವಾಯತ್ತತೆ ಮತ್ತು ಘನತೆಯನ್ನು ರಕ್ಷಿಸುವ ಉದ್ದೇಶ ಈ ಕಾಯಿದೆಯದ್ದಾಗಿದ್ದು ಅದನ್ನು ವಿಚ್ಛೇದಿತ ಮಹಿಳೆಯರು ನೈಜ ಜೀವನದಲ್ಲಿ ಎದುರಿಸುವ ಸಾಮಾಜಿಕ ಮತ್ತು ಆರ್ಥಿಕ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡೇ ವ್ಯಾಖ್ಯಾನಿಸಬೇಕು ಎಂದು ಪೀಠ ಹೇಳಿದೆ.
ಸಂವಿಧಾನ ಎಲ್ಲರಿಗೂ ನಿಗದಿ ಪಡಿಸಿರುವ ಸಮಾನತೆಯ ಆಶಯ ಇನ್ನೂ ಈಡೇರಿಲ್ಲ. ನ್ಯಾಯಾಲಯಗಳು ಈ ನಿಟ್ಟಿನಲ್ಲಿ ತಮ್ಮ ಕೈಲಾದಷ್ಟು ಕೆಲಸ ಮಾಡುವಾಗ ಸಾಮಾಜಿಕ ನ್ಯಾಯದ ತೀರ್ಪಿನಲ್ಲಿ ತಮ್ಮ ತಾರ್ಕಿಕತೆಯನ್ನು ಆಧರಿಸಿರಬೇಕು. ಇದನ್ನು ಪ್ರಸ್ತುತ ಸಂದರ್ಭಕ್ಕೆ ಅನ್ವಯಿಸುವುದಾದರೆ 1986ರ ಕಾಯಿದೆಯ ವ್ಯಾಪ್ತಿ ಮತ್ತು ಉದ್ದೇಶವು ಮುಸ್ಲಿಂ ಮಹಿಳೆ ವಿಚ್ಛೇದನದ ನಂತರ ಘನತೆ ಮತ್ತು ಆರ್ಥಿಕ ರಕ್ಷಣೆಯನ್ನು ಭದ್ರಪಡಿಸುವುದನ್ನು ಹೇಳಲಿದ್ದು, ಇದು ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಮಹಿಳೆಯರ ಹಕ್ಕುಗಳಿಗೆ ಹೊಂದಿಕೆಯಾಗುತ್ತದೆ. ಆದ್ದರಿಂದ ಈ ಕಾನೂನಿನ ವ್ಯಾಖ್ಯಾನವನ್ನು ಸಮಾನತೆ, ಗೌರವ ಮತ್ತು ಸ್ವಾಯತ್ತತೆಯನ್ನು ಕೇಂದ್ರವಾಗಿ ಇಟ್ಟುಕೊಂಡೇ ಮಾಡಬೇಕು. ವಿಶೇಷವಾಗಿ ಸಣ್ಣ ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಕಾಣಿಸಿಕೊಳ್ಳುವ ಪಿತೃಪ್ರಧಾನ ಸಮಾಜದ ಭೇದಭಾವದ ನೈಜ ಅನುಭವಗಳನ್ನು ಗಮನದಲ್ಲಿಟ್ಟುಕೊಂಡೇ ಇದನ್ನು ಅರ್ಥೈಸಬೇಕು " ಎಂದು ನ್ಯಾಯಾಲಯ ಹೇಳಿದೆ.
2005ರಲ್ಲಿ ವಿವಾಹವಾಗಿದ್ದ ದಂಪತಿ 2011ರಲ್ಲಿ ವಿಚ್ಛೇದನ ಪಡೆದಿದ್ದರು. ವಿಚ್ಛೇದನದ ನಂತರ ಮಹಿಳೆ 1986ರ ಕಾಯಿದೆಯ ಸೆಕ್ಷನ್ 3 ಅಡಿಯಲ್ಲಿ ದಾವೆ ಹೂಡಿ ₹17.67 ಲಕ್ಷ ಮೌಲ್ಯದ ಮದುವೆ ವೇಳೆ ತನ್ನ ತಂದೆ ದಂಪತಿಗೆ ನೀಡಿದ್ದ ನಗದು, ಚಿನ್ನ, ಪೀಠೋಪಕರಣಗಳನ್ನು ಮರಳಿಸಲು ನಿರ್ದೇಶಿಸುವಂತೆ ಕೋರಿದ್ದರು. ಆದರೆ ಆಕೆಯ ವಾದವನ್ನು ಕಲ್ಕತ್ತಾ ಹೈಕೋರ್ಟ್ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಆಕೆ ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು.
ಹೈಕೋರ್ಟ್ ತರ್ಕ ದೋಷಪೂರಿತ ಎಂದಿರುವ ಸುಪ್ರೀಂ ಕೋರ್ಟ್ ಮದುವೆಯ ಮೊದಲು, ವಿವಾಹ ನಡೆದ ವೇಳೆ ಅಥವಾ ಬಳಿಕ — ಕುಟುಂಬ, ಸ್ನೇಹಿತರು, ಅಥವಾ ಪತಿ/ಪತಿಯ ಕುಟುಂಬ ನೀಡಿದ ಯಾವುದೇ ಉಡುಗೊರೆ ಅಥವಾ ಸ್ವತ್ತುಗಳನ್ನು ಮರಳಿ ಪಡೆಯುವುದು ಸೆಕ್ಷನ್ 3(1) ಪ್ರಕಾರ, ವಿಚ್ಛೇದಿತ ಮುಸ್ಲಿಂ ಮಹಿಳೆಯ ಹಕ್ಕು ಎಂದಿತು. ಕಾಯಿದೆಯನ್ನು ಅಂತಹ ಮಹಿಳೆಯ ಆರ್ಥಿಕ ಭದ್ರತೆ ಮತ್ತು ಗೌರವ ಕಾಪಾಡಲು ರೂಪಿಸಲಾಗಿದೆ ಎಂದಿತು.
ಅಂತೆಯೇ ಮಹಿಳೆಯ ಮನವಿ ಪುರಸ್ಕರಿಸಿದ ಅದು ಕಲ್ಕತ್ತಾ ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸಿತು. ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶಿಸಿದ್ದಂತೆ ಮಹಿಳೆಯ ಆರ್ಥಿಕ ಭದ್ರತೆ ಮತ್ತು ಗೌರವ ಕಾಪಾಡಲು ₹7 ಲಕ್ಷ ಮತ್ತು ಚಿನ್ನವನ್ನು ಮಹಿಳೆಗೆ ಮರಳಿಸಬೇಕು ಎಂದಿತು.
[ತೀರ್ಪಿನ ಪ್ರತಿ]