ಆನ್‌ಲೈನ್‌ ಜೂಜು: ಸಚಿವ ಸಂಪುಟದ ಮುಂದೆ ಮಸೂದೆ ಇರಿಸಲಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ಗೆ ಮಾಹಿತಿ ನೀಡಿದ ಸರ್ಕಾರ

ಜೂಜು ರದ್ದುಪಡಿಸುವ ಕುರಿತಂತೆ ನಿಲುವು ತಿಳಿಸಲು ವಿಳಂಬ ಧೋರಣೆ ಅನುಸರಿಸುತ್ತಿರುವ ರಾಜ್ಯ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ ಮುಂದಿನ ಎರಡು ವಾರಗಳಲ್ಲಿ ತನ್ನ ನಿಲುವು ತಿಳಿಸುವಂತೆ ಸರ್ಕಾರಕ್ಕೆ ಗಡುವು ವಿಧಿಸಿತು.
ಆನ್‌ಲೈನ್‌ ಜೂಜು: ಸಚಿವ ಸಂಪುಟದ ಮುಂದೆ ಮಸೂದೆ ಇರಿಸಲಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ಗೆ ಮಾಹಿತಿ ನೀಡಿದ ಸರ್ಕಾರ

ಆನ್‌ಲೈನ್ ಜೂಜು ಕುರಿತಂತೆ ಮಸೂದೆ ಸಿದ್ಧಪಡಿಸಿ ಸಚಿವ ಸಂಪುಟದ ಮುಂದೆ ಇರಿಸಲಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ. ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅಫಿಡವಿಟ್ ಸಲ್ಲಿಸಿದ್ದಾರೆ. ಸಂಪುಟದ ಮುಂದೆ ಮಸೂದೆ ಮಂಡಿಸಲು ಎಲ್ಲಾ ಸಿದ್ಧತೆಗಳನ್ನು ಗೃಹ ಇಲಾಖೆ ಮಾಡಿಕೊಂಡಿದೆ ಎಂದು ಅವರು ಹೇಳಿದ್ದಾರೆ.

ಎಲ್ಲಾ ಬಗೆಯ ಆನ್‍ಲೈನ್ ಜೂಜು ರದ್ದುಪಡಿಸುವಂತೆ ಕೋರಿ ದಾವಣಗೆರೆಯ ಡಿ ಆರ್ ಶಾರದಾ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎ ಎಸ್‌ ಓಕಾ ಮತ್ತು ಅಶೋಕ್‌ ಜಿ ನಿಜಗಣ್ಣವರ್‌ ಅವರಿದ್ದ ಪೀಠ ಗುರುವಾರ ನಡೆಸಿತು.

ಸಚಿವ ಸಂಪುಟ ಮತ್ತು ಶಾಸನಸಭೆಯ ಅನುಮೋದನೆ ಪಡೆದ ನಂತರ ಸರ್ಕಾರದ ನಿಲುವನ್ನು ನ್ಯಾಯಾಯಲಯಕ್ಕೆ ತಿಳಿಸಲಾಗುವುದು ಎಂದು ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ.

Also Read
ಆನ್‌ಲೈನ್‌ ಜೂಜು ನಿಷೇಧ: ತಮಿಳುನಾಡು ರಾಜ್ಯಪಾಲರಿಂದ ಸುಗ್ರೀವಾಜ್ಞೆ

ಇದೇ ವೇಳೆ ರಾಜ್ಯದಲ್ಲಿ ಆನ್‍ಲೈನ್ ಜೂಜು ರದ್ದುಪಡಿಸುವ ಕುರಿತಂತೆ ನಿಲುವು ತಿಳಿಸಲು ವಿಳಂಬ ಧೋರಣೆ ಅನುಸರಿಸುತ್ತಿರುವ ರಾಜ್ಯ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ ಮುಂದಿನ ಎರಡು ವಾರಗಳಲ್ಲಿ ತನ್ನ ನಿಲುವು ತಿಳಿಸುವಂತೆ ಗಡುವು ವಿಧಿಸಿತು.

ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಅವರು ಸರ್ಕಾರದ ಪರ ವಾದ ಮಂಡಿಸಿ, ಆನ್‍ಲೈನ್ ಜೂಜು ನಿಷೇಧಿಸುವ ಸಂಬಂಧ ಕ್ರಮ ಕೈಗೊಳ್ಳುವ ಪ್ರಕ್ರಿಯೆ ಆರಂಭಿಸಲಾಗಿದೆ. ಆನ್‍ಲೈನ್ ಜೂಜಿಗೆ ಸಂಬಂಧಿದಂತೆ ಕಾಯ್ದೆ ರೂಪಿಸಲಾಗುತ್ತಿದೆ. ಶೀಘ್ರದಲ್ಲೇ ಕರಡು ಪ್ರತಿಯನ್ನು ಸಚಿವ ಸಂಪುಟದ ಮುಂದಿಟ್ಟು ಚರ್ಚಿಸಲಾಗುವುದು. ಪ್ರಸ್ತುತ ಆನ್‍ಲೈನ್ ಜೂಜು ನಿಯಂತ್ರಣಕ್ಕೆ ಪೊಲೀಸ್ ಕಾಯಿದೆ ಬಿಟ್ಟರೆ ಬೇರೆ ಕಾನೂನುಗಳಿಲ್ಲ. ಹೀಗಾಗಿ ಕರಡು ಮಸೂದೆ ತಯಾರಿಸಿ ಸಂಪುಟಕ್ಕೆ ನೀಡಲಾಗುವುದು ಇದಕ್ಕೆ ಕಾಲಾವಕಾಶ ನೀಡಬೇಕು ಎಂದು ಕೋರಿದರು.

Also Read
ಆನ್‌ಲೈನ್‌ ಜೂಜು, ಬೆಟ್ಟಿಂಗ್‌ ನಿಷೇಧ ಕೋರಿ ಪಿಐಎಲ್‌ ಸಲ್ಲಿಕೆ: ರಾಜ್ಯ ಸರ್ಕಾರದ ಪ್ರತಿಕ್ರಿಯೆ ಬಯಸಿದ ಹೈಕೋರ್ಟ್‌

ವಕೀಲರ ವಾದ ಆಲಿಸಿದ ಪೀಠ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು. ಈ ವರ್ಷದ ಫೆಬ್ರುವರಿಯಿಂದಲೂ ಜೂಜು ನಿಯಂತ್ರಣಕ್ಕೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಅನೇಕ ಬಾರಿ ನೀಡಲಾದ ನಿರ್ದೇಶನದ ಹೊರತಾಗಿಯೂ ಸರ್ಕಾರ ತನ್ನ ಅಭಿಪ್ರಾಯ ತಿಳಿಸಿಲ್ಲ. ಅಂತಿಮವಾಗಿ ಎರಡು ವಾರ ಕಾಲಾವಕಾಶ ನೀಡಲಾಗುವುದು. ಅಷ್ಟರೊಳಗೆ ಸಂಪುಟದಲ್ಲಿ ನಿರ್ಧಾರ ಕೈಗೊಂಡು ತಿಳಿಸುವಂತೆ ಸೂಚಿಸಿತು.

ತಮಿಳುನಾಡು ಮತ್ತು ಗುಜರಾತ್‌ ಹೈಕೋರ್ಟ್‌ಗಳು ತಮ್ಮ ವ್ಯಾಪ್ತಿಯ ರಾಜ್ಯ ಶಾಸಕಾಂಗಗಳಿಗೆ ಜೂಜು ನಿಯಂತ್ರಣ ಕ್ರಮ ಕೈಗೊಳ್ಳುವಂತೆ ಸೂಚಿಸಿವೆ. ಕೇರಳದಲ್ಲಿ ಇತ್ತೀಚೆಗೆ ಅಲ್ಲಿನ ಹೈಕೋರ್ಟ್‌ ನಿರ್ದೇಶನದಂತೆ ರಾಜ್ಯ ಸರ್ಕಾರ ಆನ್‌ಲೈನ್‌ ಜೂಜನ್ನು ಅಕ್ರಮ ಎಂದು ಪರಿಗಣಿಸಿದೆ. ದೆಹಲಿ ಹೈಕೋರ್ಟ್‌ ಕೂಡ ಈ ನಿಟ್ಟಿನಲ್ಲಿ ಹೆಜ್ಜೆ ಇರಿಸಿರುವುದನ್ನು ಇಲ್ಲಿ ಗಮನಿಸಬಹುದು.

Related Stories

No stories found.
Kannada Bar & Bench
kannada.barandbench.com