ಆರೋಪಿಯನ್ನು ಖುಲಾಸೆಗೊಳಿಸುವ ನಿಟ್ಟಿನಲ್ಲಿ ನ್ಯಾಯಾಲಯ ತಿರಸ್ಕರಿಸಿದ್ದ ಮರಣಶಯ್ಯೆ ಹೇಳಿಕೆ ಅದೇ ಪ್ರಕರಣದ ಮತ್ತೊಬ್ಬ ಆರೋಪಿಯನ್ನು ಶಿಕ್ಷಿಸಲು ಆಧಾರವಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಸ್ಪಷ್ಟಪಡಿಸಿದೆ [ಫುಲೇಲ್ ಸಿಂಗ್ ಮತ್ತು ಹರಿಯಾಣ ಸರ್ಕಾರ ನಡುವಣ ಪ್ರಕರಣ].
ಮಹಿಳೆಯ ಮರಣಶಯ್ಯೆ ಹೇಳಿಕೆ ಆಕೆಯ ಪತಿಯನ್ನು ಅಪರಾಧಿ ಎನ್ನಲು ಮಾತ್ರ ಆಧಾರವಾಗಿದೆ ಆದರೆ ಮಾವನ ವಿರುದ್ಧ ಮಾಡಿದ ಆರೋಪಗಳನ್ನು ಅಂಗೀಕರಿಸಿರಲಿಲ್ಲ ಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ, ಪಿ ಎಸ್ ನರಸಿಂಹ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರಿದ್ದ ಪೀಠ ಹೇಳಿದೆ.
ಸಂದರ್ಭಗಳನ್ನು ಒಟ್ಟಾರೆಯಾಗಿ ಗಮನಿಸಿದಾಗ ಮರಣಶಯ್ಯೆ ಘೋಷಣೆ ಶಂಕೆಯಿಂದ ಮುಕ್ತ ಎಂದು ಹೇಳಲಾಗದು. ಎದ್ದು ಕಾಣುವ ಅಂಶ ಎಂದರೆ ಮೃತಳ ಮಾವನಿಗೆ ಸಂಬಂಧಿಸಿದಂತೆ ಆಕೆ ನೀಡಿದ ಹೇಳಿಕೆಯನ್ನು ಖುದ್ದು ಹೈಕೋರ್ಟ್ ನಂಬುವುದಿಲ್ಲ. ಒಬ್ಬ ಆರೋಪಿಯನ್ನು ಅಪರಾಧಿ ಎಂದು ನಿರ್ಣಯಿಸಲು ಒಪ್ಪದ ಮರಣಶಯ್ಯೆ ಹೇಳಿಕೆ ಅದೇ ಪ್ರಕರಣದಲ್ಲಿ ಆರೋಪಿಯಾಗಿರುವ ಅಪೀಲುದಾರನನ್ನು ಅಪರಾಧಿ ಎಂದು ಹೇಗೆ ನಿರ್ಣಯಿಸುತ್ತದೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಪೀಠ ನುಡಿದಿದೆ.
ಹೀಗಾಗಿ ಮೃತ ಮಹಿಳೆಯ ಮರಣಶಯ್ಯೆ ಹೇಳಿಕೆಯನ್ನು ಸಂಪೂರ್ಣ ನಂಬಲು ಸಾಧ್ಯವಿಲ್ಲ ಎಂದ ಅದು ಪತಿಯನ್ನು ಖುಲಾಸೆಗೊಳಿಸಿತು.
ವರದಕ್ಷಿಣೆ ಸಾವಿಗೆ ಸಂಬಂಧಿಸಿದಂತೆ ಪತಿಗೆ ಏಳು ವರ್ಷ ಜೈಲು ಶಿಕ್ಷೆ ಎತ್ತಿಹಿಡಿದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ 2009ರಲ್ಲಿ ನೀಡಿದ್ದ ತೀರ್ಪಿನ ವಿರುದ್ಧದ ಮೇಲ್ಮನವಿಯ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಿತು. ವಿಚಾರಣಾ ನ್ಯಾಯಾಲಯ 1999 ರಲ್ಲಿ ಪತಿಯ ಪೋಷಕರನ್ನು ಖುಲಾಸೆಗೊಳಿಸಿ ಗಂಡನಿಗೆ ಶಿಕ್ಷೆ ವಿಧಿಸಿತ್ತು. ಪತ್ನಿಯ ಮರಣಶಯೆ ಹೇಳಿಕೆ ಆಧರಿಸಿದ್ದ ಹೈಕೋರ್ಟ್ ಪತಿಗೆ ವಿಧಿಸಿದ್ದ ಶಿಕ್ಷೆಯನ್ನು ಎತ್ತಿಹಿಡಿದಿತ್ತು. ಇದನ್ನು ಪತಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]