
ಬಿಹಾರದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಮತದಾರರ ಪಟ್ಟಿ ವಿಶೇಷ ಆಮೂಲಾಗ್ರ ಪರಿಷ್ಕರಣೆ (ಎಸ್‌ಐಆರ್) ಬಳಿಕ ಮತದಾರರ ಮಾಹಿತಿ ಬಹಿರಂಗಪಡಿಸುವ ಹೊಣೆಗಾರಿಕೆ ಬಗ್ಗೆ ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ತಿಳಿದಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ಬಿಹಾರ ಎಸ್‌ಐಆರ್ ಪ್ರಶ್ನಿಸಿ ಸರ್ಕಾರೇತರ ಸಂಸ್ಥೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಲ್ಲಿಸಿದ ಅರ್ಜಿ ಸೇರಿದಂತೆ ವಿವಿಧ ಮನವಿಗಳ ವಿಚಾರಣೆ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠದೆದುರು ನಡೆಯಿತು.
ಇಸಿಐಗೆ ತನ್ನ ಜವಾಬ್ದಾರಿ ಅರಿವಿದ್ದು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮತ್ತು ತೆಗೆದುಹಾಕಿದ ನಂತರ ಆ ವಿವರಗಳನ್ನು ಪ್ರಕಟಿಸಲು ಅದು ಬದ್ಧವಾಗಿರುತ್ತದೆ. ಪ್ರಕರಣ ಮುಕ್ತಾಯಗೊಂಡಿಲ್ಲ ಎಂದು ನ್ಯಾ. ಕಾಂತ್ ವಿವರಿಸಿದರು.
ಚುನಾವಣಾ ಆಯೋಗವು ಪಟ್ಟಿಯಿಂದ ತೆಗೆದು ಹಾಕಲಾದ ಮತ್ತು ಸೇರ್ಪಡಿಸಲಾದ ಮತದಾರರ ಪಟ್ಟಿಯನ್ನು ಪ್ರತ್ಯೇಕವಾಗಿ ಪ್ರಕಟಿಸಬೇಕು ಎಂದು ಅರ್ಜಿದಾರರ ಪರವಾಗಿ ಹಾಜರಾದ ವಕೀಲ ಪ್ರಶಾಂತ್ ಭೂಷಣ್ ಮನವಿ ಸಲ್ಲಿಸಿದರು.
ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು ಪಟ್ಟಿ ಬದಲಾವಣೆ ಕುರಿತು ನ್ಯಾಯಾಲಯ ಹೆಚ್ಚಿನದೇನನ್ನೂ ಮಾಡಲಾಗದು. ಕನಿಷ್ಠ ಮತದಾರರ ಪಟ್ಟಿ ಹಾಗೂ ತೆಗೆದುಹಾಕಲಾದ ಹೆಸರುಗಳನ್ನು ಇಸಿಐ ಪ್ರಕಟಿಸುವಂತಾಗಬೇಕು ಎಂದು ಅವರು ವಾದಿಸಿದರು.
ನ್ಯಾಯಾಲಯದ ನಿರ್ದೇಶನ ನೀಡುವ ಅಗತ್ಯವಿಲ್ಲ. ಮಾಹಿತಿ ಪ್ರಕಟಿಸಲಾಗುವುದು ಎಂದು ಇಸಿಐ ಪರ ಹಾಜರಾದ ಹಿರಿಯ ವಕೀಲ ರಾಕೇಶ್ ದ್ವಿವೇದಿ ವಾದಿಸಿದರು.
ಪ್ರತಿ ಕ್ಷೇತ್ರದ ಅಂತಿಮ ಪಟ್ಟಿ ಪ್ರತಿಯೊಂದು ರಾಜಕೀಯ ಪಕ್ಷ ಮತ್ತು ಮತಗಟ್ಟೆ ಏಜೆಂಟ್ ಬಳಿಯೂ ಇರಬೇಕು ಎಂದು ನ್ಯಾಯಮೂರ್ತಿ ಕಾಂತ್ ಹೇಳಿದರು. ಪ್ರಕರಣದ ಮುಂದಿನ ವಿಚಾರಣೆ ನವೆಂಬರ್ 4 ರಂದು ನಡೆಯಲಿದೆ.
ಸೆಪ್ಟೆಂಬರ್ 30ರಂದು ಎಸ್ಐಆರ್ ಪ್ರಕ್ರಿಯೆ ಪೂರ್ಣಗೊಂಡಿತು. ಬಿಹಾರದಲ್ಲಿ ಜೂನ್ 24ಕ್ಕೆ ಅನ್ವಯವಾಗುವಂತೆ 7.89 ಕೋಟಿ ಮತದಾರರಿದ್ದು, 7.42 ಕೋಟಿ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಉಳಿಸಿಕೊಳ್ಳಲಾಗಿದೆ. 47 ಲಕ್ಷ ಹೆಸರುಗಳನ್ನು ತೆಗೆದು ಹಾಕಲಾಗಿದೆ.