[ಮುಡಾ ಪ್ರಕರಣ] ಸಕ್ಷಮ ಪ್ರಾಧಿಕಾರ ಅಂತಿಮ ಆದೇಶ ಮಾಡುವವರೆಗೆ ನಿವೇಶನ ವಶ, ಪರಭಾರೆ ಮಾಡುವಂತಿಲ್ಲ: ಹೈಕೋರ್ಟ್‌ ಆದೇಶ

“ಇ ಡಿ ನೀಡಿರುವ ಷೋಕಾಸ್‌ ನೋಟಿಸ್‌ ಅನ್ವಯ ಸಕ್ಷಮ ಪ್ರಾಧಿಕಾರವು ಪಿಎಂಎಲ್‌ಎ ಸೆಕ್ಷನ್‌ 8ರ ಅಡಿ ಮುಂದುವರಿಯುವ ಸ್ವಾತಂತ್ರ್ಯ ಹೊಂದಿದ್ದು, ಅರ್ಜಿದಾರರಿಗೂ ತಮ್ಮ ವಾದ ಆಲಿಸಲು ಅವಕಾಶ ಕಲ್ಪಿಸಿ ಆನಂತರ ಸೂಕ್ತ ಆದೇಶ ಮಾಡಬೇಕು” ಎಂದಿರುವ ಪೀಠ.
ED and Karnataka HC
ED and Karnataka HC
Published on

ಮುಡಾ 50:50 ಅನುಪಾತದಲ್ಲಿ ಫಲಾನುಭವಿಗಳಿಗೆ ಹಂಚಿಕೆ ಮಾಡಿರುವ ನಿವೇಶನಗಳ ಸಂಬಂಧ ಸಕ್ಷಮ ಪ್ರಾಧಿಕಾರವು ಅಕ್ರಮ ಹಣ ವರ್ಗಾವಣೆ ಕಾಯಿದೆ (ಪಿಎಂಎಲ್‌ಎ) ಅಡಿ ಅಂತಿಮ ನಿರ್ಧಾರ ಪ್ರಕಟಿಸುವವರೆಗೆ ಜಾರಿ ನಿರ್ದೇಶನಾಲಯವು ನಿವೇಶನಗಳನ್ನು ವಶಪಡಿಸಿಕೊಳ್ಳುವಂತಿಲ್ಲ. ಹಾಗೆಯೇ ಅರ್ಜಿದಾರರು ತಮಗೆ ಹಂಚಿಕೆ ಮಾಡಿರುವ ನಿವೇಶನಗಳನ್ನು ಪರಭಾರೆ ಮಾಡುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಮಧ್ಯಂತರ ಆದೇಶ ಮಾಡಿದೆ.

ಜಾರಿ ನಿರ್ದೇಶನಾಲಯವು 17.1.2025ರಂದು ದಾಖಲಿಸಿರುವ ಪ್ರಕರಣ ಮತ್ತು ತಾತ್ಕಾಲಿಕ ಜಫ್ತಿ ಆದೇಶ ರದ್ದುಪಡಿಸುವಂತೆ ಕೋರಿ ಮೈಸೂರಿನ ಎಂ ರವಿ ಕುಮಾರ್‌, ಸುಜಾತಾ, ಮಹೇಶ್‌, ಕುಮಾರಿ, ಎಂ ರಾಜು, ಎಂ ಬಸವರಾಜು, ವಿ ಸತೀಶ್‌ ಮತ್ತು ಅಬ್ದುಲ್‌ ವಾಹೀದ್‌ ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಹೇಮಂತ್‌ ಚಂದನಗೌಡರ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

“ಅರ್ಜಿದಾರರಿಗೆ ಜಾರಿ ನಿರ್ದೇಶನಾಲಯವು ನೀಡಿರುವ ಷೋಕಾಸ್‌ ನೋಟಿಸ್‌ ಅನ್ವಯ ಸಕ್ಷಮ ಪ್ರಾಧಿಕಾರವು ಪಿಎಂಎಲ್‌ಎ ಸೆಕ್ಷನ್‌ 8ರ ಅಡಿ ಮುಂದುವರಿಯುವ ಸ್ವಾತಂತ್ರ್ಯ ಹೊಂದಿದ್ದು, ಅರ್ಜಿದಾರರಿಗೂ ತಮ್ಮ ವಾದ ಆಲಿಸಲು ಅವಕಾಶ ಕಲ್ಪಿಸಿ ಆನಂತರ ಕಾನೂನಿನ ಅನ್ವಯ ಸೂಕ್ತ ಆದೇಶ ಮಾಡಬೇಕು” ಎಂದು ನ್ಯಾಯಾಲಯ ಆದೇಶಿಸಿದೆ.

“ಸಕ್ಷಮ ಪ್ರಾಧಿಕಾರವು ಪಿಎಂಎಲ್‌ಎ ಸೆಕ್ಷನ್‌ 8ರ ಅಡಿ ಅಂತಿಮ ಆದೇಶ ಹೊರಡಿಸುವವರೆಗೆ, ಪ್ರತಿವಾದಿಗಳಿಂದ ನಿವೇಶನಗಳನ್ನು ವಶಪಡಿಸಿಕೊಳ್ಳುವಂತಿಲ್ಲ ಮತ್ತು ಅರ್ಜಿದಾರರು ನಿವೇಶನಗಳನ್ನು ಪರಭಾರೆ ಮಾಡುವಂತಿಲ್ಲ. ಪಕ್ಷಕಾರರ ಎಲ್ಲಾ ವಾದಗಳನ್ನು ಮುಕ್ತವಾಗಿ ಇರಲಿಸಲಾಗಿದೆ” ಎಂದು ನ್ಯಾಯಾಲಯ ಆದೇಶಿಸಿದೆ.

Also Read
ಮುಡಾ ಪ್ರಕರಣ: ಲೋಕಾಯುಕ್ತ ಪೊಲೀಸರ ನಡೆಗೆ ಅತೃಪ್ತಿ; ವಿಸ್ತೃತ ವರದಿ ಸಲ್ಲಿಸಲು ಆದೇಶಿಸಿದ ವಿಶೇಷ ನ್ಯಾಯಾಲಯ

2023ರ ಸೆಪ್ಟೆಂಬರ್‌ನಲ್ಲಿ ರವಿ ಅವರ ಹೆಸರಿನಲ್ಲಿ ಒಂದೇ ದಿನ ಹಲವು ನಿವೇಶನಗಳನ್ನು ನೋಂದಣಿ ಮಾಡಲಾಗಿದ್ದು, ಮೈಸೂರಿನ ವಿಜಯನಗರ, ದಟ್ಟಗಳ್ಳಿ, ಕುವೆಂಪುನಗರದಲ್ಲಿ ನಿವೇಶನ ಹಂಚಿಕೆ ಮಾಡಲಾಗಿತ್ತು. ಅಂತೆಯೇ 2023ರ ಮಾರ್ಚ್‌ ಮತ್ತು ಅಕ್ಟೋಬರ್‌ನಲ್ಲಿ ಅಬ್ದುಲ್‌ ವಾಹೀದ್‌ ಅವರ ಹೆಸರಿನಲ್ಲಿ ಹಲವು ನಿವೇಶಗಳನ್ನು ನೋಂದಾಯಿಸಲಾಗಿತ್ತು ಎಂದು ಇ ಡಿ ಹೇಳಿತ್ತು. ಇದರ ಭಾಗವಾಗಿ ಅವರಿಗೆ ತನಿಖೆಗೆ ಹಾಜರಾಗಲು ಸಮನ್ಸ್‌ ಜಾರಿ ಮಾಡಿತ್ತು. ಇದನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.

ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಮತ್ತು ಏಜೆಂಟ್‌ಗಳ ಹೆಸರಿನಲ್ಲಿ ಪ್ರಭಾವಿಗಳು ನಿವೇಶನಗಳನ್ನು ನೋಂದಣಿ ಮಾಡಿಸಿದ್ದಾರೆ ಎಂದು ಇ ಡಿ ಹೇಳಿಕೆ ಬಿಡುಗಡೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಅರ್ಜಿದಾರರ ಪರವಾಗಿ ವಕೀಲ ಜೆ ಎಂ ಅನಿಲ್‌ ಕುಮಾರ್‌ ವಕಾಲತ್ತು ಹಾಕಿದ್ದಾರೆ.

Kannada Bar & Bench
kannada.barandbench.com