ಐ- ಪ್ಯಾಕ್ ದಾಳಿ ವೇಳೆ ಏನನ್ನೂ ವಶಪಡಿಸಿಕೊಂಡಿಲ್ಲ ಎಂದ ಇ ಡಿ: ಟಿಎಂಸಿ ಅರ್ಜಿ ಮುಕ್ತಾಯಗೊಳಿಸಿದ ಕಲ್ಕತ್ತಾ ಹೈಕೋರ್ಟ್

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಸಿಬಿಐ ತನಿಖೆ ನಡೆಸಲು ನಿರ್ದೇಶಿಸುವಂತೆ ಕೋರಿ ಇ ಡಿ ಸಲ್ಲಿಸಿದ್ದ ಅರ್ಜಿಯನ್ನು ಅದರ ಮನವಿ ಮೇರೆಗೆ ನ್ಯಾಯಾಲಯ ಮುಂದೂಡಿದೆ.
Mamata Banerjee and EDfacebook
Mamata Banerjee and EDfacebook
Published on

ರಾಜಕೀಯ ಸಲಹಾ ಸಂಸ್ಥೆ ಐ- ಪ್ಯಾಕ್‌ ಕಚೇರಿ ಹಾಗೂ ಅದರ ಸಹಸ್ಥಾಪಕ ಪ್ರತಿಕ್ ಜೈನ್ ಅವರ ನಿವಾಸದಲ್ಲಿ ಇತ್ತೀಚೆಗೆ ನಡೆಸಿದ ದಾಳಿಗಳ ವೇಳೆ ಯಾವುದೇ ದತ್ತಾಂಶ ವಶಪಡಿಸಿಕೊಂಡಿಲ್ಲ ಎದು ಜಾರಿ ನಿರ್ದೇಶನಾಲಯ ಬುಧವಾರ ತಿಳಿಸಿದ ಹಿನ್ನೆಲೆಯಲ್ಲಿ ದಾಳಿ ಸಂಬಂಧ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಸಲ್ಲಿಸಿದ್ದ ಅರ್ಜಿಯನ್ನು ಕಲ್ಕತ್ತಾ ಹೈಕೋರ್ಟ್‌ ಮುಕ್ತಾಯಗೊಳಿಸಿದೆ.

ತನಗೆ ಸಂಬಂಧಪಟ್ಟ ಗುಪ್ತ ಮಾಹಿತಿಯನ್ನು ಇ ಡಿ ವಶಪಡಿಸಿಕೊಂಡಿದೆ ಎಂದು ಟಿಎಂಸಿ ವ್ಯಕ್ತಪಡಿಸಿದ್ದ ಆತಂಕಕ್ಕೆ ಪ್ರತಿಕ್ರಿಯಿಸಿದ ಇ ಡಿಯನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌ ವಿ ರಾಜು ಅವರು ಸಂಸ್ಥೆ ಏನನ್ನೂ ವಶಪಡಿಸಿಕೊಂಡಿಲ್ಲ. ಬದಲಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ದಾಖಲೆಗಳು ಹಾಗೂ ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ಒಯ್ದಿರುವುದು ಎಂದರು.

Also Read
ಐ-ಪ್ಯಾಕ್ ಶೋಧ ಕಾರ್ಯಾಚರಣೆಗೆ ಮಮತಾ ಬ್ಯಾನರ್ಜಿ ಅಡ್ಡಿ ಆರೋಪ: ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ ಇ ಡಿ

ಹೇಳಿಕೆ ದಾಖಲಿಸಿಕೊಂಡ ನ್ಯಾಯಮೂರ್ತಿ ಸುವ್ರಾ ಘೋಷ್ ಅವರು ಸಂಸ್ಥೆಯ ದಾಳಿಯ ಸಮಯದಲ್ಲಿ ಇಡಿ ಐ-ಪಿಎಸಿಯಿಂದ ವಶಪಡಿಸಿಕೊಂಡಿರಬಹುದಾದ ಯಾವುದೇ ಸೂಕ್ಷ್ಮ ರಾಜಕೀಯ ದತ್ತಾಂಶಗಳ ರಕ್ಷಣೆ ಕೋರಿ ಟಿಎಂಸಿ ಸಲ್ಲಿಸಿದ್ದ ಅರ್ಜಿಯನ್ನು ಮುಕ್ತಾಯಗೊಳಿಸಿದರು.

ಇ ಡಿ ದಾಳಿಯ ಸಮಯದಲ್ಲಿ ಅದು ಐ-ಪ್ಯಾಕ್‌ನಿಂದ ವಶಪಡಿಸಿಕೊಂಡಿರಬಹುದಾದ ಯಾವುದೇ ಸೂಕ್ಷ್ಮ ರಾಜಕೀಯ ದತ್ತಾಂಶಗಳನ್ನು ಸೋರಿಕೆ ಮಾಡದಂತೆ ಟಿಎಂಸಿ ಮಾಡಿದ್ದ ಏಕೈಕ ಮನವಿಯಾಗಿತ್ತು. ಬೇರೆ ಮನವಿಗಳಿಲ್ಲ. ಪ್ರತಿವಾದಿಗಳ (ಇ ಡಿ, ಕೇಂದ್ರ ಸರ್ಕಾರ) ಪರ ವಕೀಲರು, ಐ- ಪ್ಯಾಕ್‌ ಕಚೇರಿ ಹಾಗೂ ಅದರ ನಿರ್ದೇಶಕರ ಮನೆಯಿಂದ ಏನನ್ನೂ ವಶಪಡಿಸಿಕೊಳ್ಳಲಾಗಿಲ್ಲ ಎಂದು ಹೇಳಿದ್ದಾರೆ. ಶೋಧ ಮತ್ತು ವಶ ಕಾರ್ಯಾಚರಣೆ ನಡೆದ ಸ್ಥಳಗಳಲ್ಲಿದ್ದ ಪಂಚನಾಮೆ ಪ್ರತಿಗಳು ಎರಡೂ ಸ್ಥಳಗಳಿಂದ ಏನನ್ನೂ ವಶಪಡಿಸಿಕೊಂಡಿಲ್ಲ ಎಂಬುದನ್ನು ತೋರಿಸುತ್ತವೆ. ಪ್ರತಿವಾದಿಗಳ ವಾದದ ಹಿನ್ನೆಲೆಯಲ್ಲಿ ಅರ್ಜಿಯಲ್ಲಿ ಪರಿಗಣಿಸುವಂತಹುದು ಏನೂ ಉಳಿದಿಲ್ಲ. ಆದ್ದರಿಂದ ಅರ್ಜಿ ವಜಾಗೊಳಿಸಲಾಗಿದೆ ಎಂದು ನ್ಯಾಯಾಲಯ ವಿವರಿಸಿದೆ.

ಐ- ಪ್ಯಾಕ್‌ ಮೇಲೆ ನಡೆಸಿದ ದಾಳಿಗಳ ವೇಳೆ ಸಂಸ್ಥೆಯ ಕಾರ್ಯಾಚರಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಸ್ತಕ್ಷೇಪ ಮಾಡಿದ್ದಾರೆ ಎಂಬ ಆರೋಪದ ಆಧಾರದಲ್ಲಿ, ಅವರ ವಿರುದ್ಧ ಸಿಬಿಐ ತನಿಖೆ ನಡೆಸುವಂತೆ ಕೋರಿ ಜಾರಿಗೆ ನಿರ್ದೇಶನಾಲಯ (ಇ ಡಿ) ಸಲ್ಲಿಸಿದ್ದ ಅರ್ಜಿಯನ್ನು, ಇ ಡಿ ಮನವಿಯ ಮೇರೆಗೆ ಮುಂದೂಡಲಾಗಿದೆ. ಇದೇ ರೀತಿಯ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮುಂದೆ ಸಲ್ಲಿಸಿರುವುದರಿಂದ ವಿಚಾರಣೆಯನ್ನು ಮುಂದೂಡಲು ಇ ಡಿ ಕೋರಿತು.

Also Read
ಇ ಡಿ ಮತ್ತು ಮಮತಾ ನಡುವಿನ ಪ್ರಕರಣ: ಕಲ್ಕತ್ತಾ ಹೈಕೋರ್ಟ್‌ ವಿಚಾರಣೆ ಮುಂದೂಡಿದ್ದೇಕೆ?

ಗುರುವಾರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆಯಿದೆ. ಇ ಡಿ ಯ ಈ ಅರ್ಜಿಯಲ್ಲಿ, ಐ- ಪ್ಯಾಕ್‌ ಗೆ ಸಂಬಂಧಿಸಿದ ಸ್ಥಳಗಳಿಂದ ಮುಖ್ಯಮಂತ್ರಿ ಬ್ಯಾನರ್ಜಿ ತೆಗೆದುಕೊಂಡಿದ್ದಾರೆ ಎನ್ನಲಾಗಿರುವ ದಾಖಲೆಗಳು ಹಾಗೂ ಎಲೆಕ್ಟ್ರಾನಿಕ್ ಸಾಮಗ್ರಿಗಳನ್ನು ಮರಳಿ ನೀಡುವಂತೆ ಕೂಡ ಮನವಿ ಮಾಡಲಾಗಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕೀಯ ಸಲಹಾ ಸಂಸ್ಥೆ ಇಂಡಿಯನ್ ಪ್ಯಾಕ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್ (ಐ-ಪ್ಯಾಕ್‌) ಆವರಣ ಮತ್ತು ಅದರ ಸಹ-ಸಂಸ್ಥಾಪಕ ಪ್ರತೀಕ್ ಜೈನ್ ಅವರ ನಿವಾಸದಲ್ಲಿ ತಾನು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅಲ್ಲಿಗೆ ಧಾವಿಸಿ ಕೆಲವು ಕಡತಗಳನ್ನು ಹೊತ್ತೊಯ್ದರು. ಈ ಆರೋಪಕ್ಕೆ ಸಂಬಂಧಿಸಿದಂತೆ ಮಮತಾ ಅವರ ವಿರುದ್ಧ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಜಾರಿ ನಿರ್ದೇಶನಾಲಯ ಅರ್ಜಿ ಸಲ್ಲಿಸಿತ್ತು. ದಾಳಿ ವೇಳೆ ಇ ಡಿ ತನಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿದೆ ಎಂದು ದೂರಿ ಟಿಎಂಸಿ ಕೂಡ ಅರ್ಜಿ ಸಲ್ಲಿಸಿತ್ತು.

Kannada Bar & Bench
kannada.barandbench.com