[ಚುನಾವಣಾ ಅಕ್ರಮ ಪ್ರಕರಣ] ನನಗೆ ಮತ ಹಾಕದಂತೆ ಬಿಬಿಎಂಪಿ ಅಧಿಕಾರಿಗಳಿಂದ ಬೆದರಿಕೆ: ತುಳಸಿ ಮುನಿರಾಜು ಗೌಡ ವಿವರಣೆ

ಅರ್ಜಿದಾರರು ಯಾವೆಲ್ಲಾ ವಿಷಯಗಳನ್ನು ಹೇಳಲು ಬಯಸುತ್ತಾರೋ ಹೇಳಲು ಬಿಡಿ. ಅದಕ್ಕೆ ತಡೆ ಒಡ್ಡಬೇಡಿ. ನಾನು ಎಲ್ಲವನ್ನೂ ಯಥಾವತ್‌ ದಾಖಲಿಸಿಕೊಳ್ಳುತ್ತೇನೆ. ವಾದ ಮಾಡುವಾಗ ಬೇಕಿದ್ದರೆ ಅದನ್ನು ಪರಿಶೀಲಿಸೋಣ ಎಂದ ಪೀಠ.
High Court of Karnataka
High Court of Karnataka

ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿನ 9,564 ಮತದಾರರ ಮೂಲ ಗುರುತಿನ ಚೀಟಿಗಳನ್ನು ಮುನಿರತ್ನ ತಮ್ಮ ವಶದಲ್ಲಿ ಇಟ್ಟುಕೊಂಡಿದ್ದರು. ಇವುಗಳನ್ನು ಫ್ಲ್ಯಾಟ್‌ ಒಂದರಲ್ಲಿ 2018ರ ಮೇ 8ರಂದು ವಶಪಡಿಸಿಕೊಳ್ಳಲಾಗಿತ್ತು. ಅಕ್ರಮವಾಗಿ ವಶಪಡಿಸಿಕೊಂಡಿದ್ದ ಈ ಚೀಟಿಗಳನ್ನು ಮತದಾರರಿಗೆ ಮರಳಿಸುವಂತೆ ರಾಜ್ಯ ಚುನಾವಣಾ ಆಯೋಗವು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳಿಗೆ ನಿರ್ದೇಶಿಸಿತ್ತು. ಅವುಗಳನ್ನು ಹಿಂದಿರುಗಿಸುವಾಗ ಅಧಿಕಾರಿಗಳು ಮತದಾರರಿಗೆ ನನ್ನ ಪರ ಮತ ಹಾಕದಂತೆ ಬೆದರಿಕೆ ಹಾಕಿದ್ದಾರೆ ಎಂದು ಸೋಮವಾರ ವಿಧಾನ ಪರಿಷತ್‌ ಸದಸ್ಯ ತುಳಸಿ ಮುನಿರಾಜು ಗೌಡ ಆರೋಪಿಸಿದರು.

ಸಚಿವ ಮುನಿರತ್ನ ವಿರುದ್ಧ ವಿಧಾನ ಪರಿಷತ್‌ ಸದಸ್ಯ ತುಳಸಿ ಮುನಿರಾಜು ಗೌಡ ದಾಖಲಿಸಿರುವ ಚುನಾವಣಾ ಅಕ್ರಮ ಆರೋಪದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್‌ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ಮೊದಲ ಬಾರಿಗೆ ಮುನಿರಾಜು ಗೌಡ ಅವರನ್ನು ಪಾಟಿ ಸವಾಲಿಗೆ ಒಳಪಡಿಸಿದ ಮುನಿರತ್ನ ಪರ ಹಿರಿಯ ವಕೀಲ ಜಿ ಕೃಷ್ಣಮೂರ್ತಿ ಅವರು, ಮುನಿರಾಜುಗೌಡ ವಿವರವಾಗಿ ಉತ್ತರ ಕೊಡುತ್ತಿದ್ದುದಕ್ಕೆ ಆಕ್ಷೇಪಿಸಿದರು.

ಇದನ್ನು ಒಪ್ಪದ ನ್ಯಾಯಮೂರ್ತಿಗಳು, ಪಾಟಿ ಸವಾಲಿನ ವೇಳೆ ಅರ್ಜಿದಾರರು ಹೇಳುವ ಪ್ರತಿಯೊಂದು ವಿವರವನ್ನೂ ನ್ಯಾಯಾಲಯ ದಾಖಲು ಮಾಡಿಕೊಳ್ಳಬೇಕಾಗುತ್ತದೆ. ಇದು ಭಾರತೀಯ ಸಾಕ್ಷ್ಯ ಅಧಿನಿಯಮಗಳ ಪಾಲನೆಯ ಮೂಲ ಗುಣ. ಅರ್ಜಿದಾರರು ಯಾವೆಲ್ಲಾ ವಿಷಯಗಳನ್ನು ಹೇಳಲು ಬಯಸುತ್ತಾರೋ ಹೇಳಲು ಬಿಡಿ. ಅದಕ್ಕೆ ತಡೆ ಒಡ್ಡಬೇಡಿ. ನಾನು ಎಲ್ಲವನ್ನೂ ಯಥಾವತ್‌ ದಾಖಲಿಸಿಕೊಳ್ಳುತ್ತೇನೆ. ವಾದ ಮಾಡುವಾಗ ಬೇಕಿದ್ದರೆ ಅದನ್ನು ಪರಿಶೀಲಿಸೋಣ. ಇದು ನ್ಯಾಯಾಲಯದ ವಿವೇಚನಾಧಿಕಾರಕ್ಕೆ ಒಳಪಟ್ಟ ವಿಚಾರ ಎಂದು ಮೌಖಿಕವಾಗಿ ಸ್ಪಷ್ಟಪಡಿಸಿ ವಿಚಾರಣೆಯನ್ನು ಇದೇ 17ಕ್ಕೆ ಮುಂದೂಡಿದರು. ಮುನಿರಾಜುಗೌಡ ಪರ ವಕೀಲ ಎಂ ಶಿವಪ್ರಕಾಶ್‌ ಹಾಜರಿದ್ದರು.

ಪ್ರಕರಣದ ಹಿನ್ನೆಲೆ: 2018ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಅಕ್ರಮ ಆರೋಪದಡಿ ಮುನಿರತ್ನ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆ, ನಂದಿನಿ ಲೇಔಟ್ ಪೊಲೀಸ್ ಠಾಣೆ, ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ಮತ್ತು ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ನಾಲ್ಕು ಕ್ರಿಮಿನಲ್ ಪ್ರಕರಣ ದಾಖಲಾಗಿವೆ.

ಈಗ ಸಚಿವರಾಗಿರುವ ಮುನಿರತ್ನ ಅವರು 2018ರ ಚುನಾವಣೆಯಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪ‍ರ್ಧಿಸಿದ್ದರು. ಅಂದು ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಪಿ ಎಂ ಮುನಿರಾಜು ಗೌಡ ಈ ಅರ್ಜಿ ಸಲ್ಲಿಸಿದ್ದಾರೆ. ಮುನಿರತ್ನ ಅವರ ಅಂದಿನ ಆಯ್ಕೆಯನ್ನು ಜನತಾ ಪ್ರತಿನಿಧಿ ಕಾಯಿದೆ–1951ರ ಸೆಕ್ಷನ್‌ 123ರ ಅನುಸಾರ ಅನೂರ್ಜಿತಗೊಳಿಸಬೇಕು ಎಂದು ಕೋರಿದ್ದಾರೆ.

Related Stories

No stories found.
Kannada Bar & Bench
kannada.barandbench.com