ತುರ್ತು ಪರಿಸ್ಥಿತಿ ವೇಳೆ ಸುಪ್ರೀಂ ಕೋರ್ಟ್‌ ನ್ಯಾಯಾಂಗ ಇತಿಹಾಸದಲ್ಲೇ 'ಕರಾಳ' ತೀರ್ಪು ನೀಡಿತು: ಉಪರಾಷ್ಟ್ರಪತಿ ಧನಕರ್

ಸುಪ್ರೀಂ ಕೋರ್ಟ್ ತೀರ್ಪು ಸರ್ವಾಧಿಕಾರ ಮತ್ತು ಪರಮಾಧಿಕಾರವನ್ನು ಕಾನೂನುಬದ್ಧಗೊಳಿಸಿತು ಎಂದು ಧನಕರ್ ಹೇಳಿದರು.
ತುರ್ತು ಪರಿಸ್ಥಿತಿ ವೇಳೆ ಸುಪ್ರೀಂ ಕೋರ್ಟ್‌ ನ್ಯಾಯಾಂಗ ಇತಿಹಾಸದಲ್ಲೇ 'ಕರಾಳ' ತೀರ್ಪು ನೀಡಿತು: ಉಪರಾಷ್ಟ್ರಪತಿ ಧನಕರ್
Published on

ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದು ನ್ಯಾಯಾಂಗ ಇತಿಹಾಸದಲ್ಲಿಯೇ ಅತ್ಯಂತ ಕರಾಳವಾದ ತೀರ್ಪು ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್‌ ಹೇಳಿದ್ದಾರೆ.

ರಾಜ್ಯಸಭೆಯ ನೂತನ ಸದಸ್ಯರಿಗಾಗಿ ಶುಕ್ರವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Also Read
ತುರ್ತು ಪರಿಸ್ಥಿತಿ ಸಂತ್ರಸ್ತರಿಗೆ ʼಸ್ವಾತಂತ್ರ್ಯ ಹೋರಾಟಗಾರರ ಸ್ಥಾನಮಾನʼ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ

ಬಿಕ್ಕಟ್ಟಿನ ಸಮಯದಲ್ಲಿ ಜನರು ರಕ್ಷಣೆಗಾಗಿ ನ್ಯಾಯಾಂಗದ ಕಡೆ ಮುಖಮಾಡುತ್ತಾರೆ. ಆದರೆ ಸುಪ್ರೀಂ ಕೋರ್ಟ್‌ ಅಂದು (ತುರ್ತು ಪರಿಸ್ಥಿತಿಯ ವೇಳೆ) ಮೂಲಭೂತ ಹಕ್ಕುಗಳನ್ನು ಎತ್ತಿಹಿಡಿಯಲಿಲ್ಲ  ಎಂದರು.

"ತುರ್ತು ಪರಿಸ್ಥಿತಿ ಇರಲಿ ಅಥವಾ ಇಲ್ಲದೇ ಇರಲಿ, ಜನರಿಗೆ ಮೂಲಭೂತ ಹಕ್ಕುಗಳು ಇರಬೇಕು ನ್ಯಾಯ ವ್ಯವಸ್ಥೆಯ ಲಭ್ಯತೆಗೆ ಅವಕಾಶವಿರಬೇಕು ಎಂದು ದೇಶದ ಒಂಬತ್ತು ಹೈಕೋರ್ಟ್‌ಗಳು ಅದ್ಭುತವಾಗಿ ವ್ಯಾಖ್ಯಾನಿಸಿದವು. ದುರದೃಷ್ಟವಶಾತ್, ಸುಪ್ರೀಂ ಕೋರ್ಟ್ ಎಲ್ಲಾ ಒಂಬತ್ತು ಹೈಕೋರ್ಟ್‌ ತೀರ್ಪುಗಳನ್ನು ರದ್ದುಗೊಳಿಸಿ, ಕಾನೂನಾತ್ಮಕ ಆಡಳಿತ ವ್ಯವಸ್ಥೆಯಲ್ಲಿ ನಂಬಿಕೆ ಇಡುವ ವಿಶ್ವದ ಯಾವುದೇ ನ್ಯಾಯಾಂಗ ಸಂಸ್ಥೆಯ ಇತಿಹಾಸದಲ್ಲಿಯೇ ಅತ್ಯಂತ ಕರಾಳ ತೀರ್ಪು ಎಂದು ಕರೆಯಲಾಗುವ ತೀರ್ಪು ನೀಡಿತು" ಎಂದು ಅವರು ಹೇಳಿದರು.

ಅವರು ಹೇಬಿಯಸ್ ಕಾರ್ಪಸ್ ಪ್ರಕರಣ ಎಂದೇ ಪ್ರಸಿದ್ಧವಾಗಿರುವ ಎಡಿಎಂ ಜಬಲ್ಪುರ್ ಪ್ರಕರಣವನ್ನು ಈ ವೇಳೆ ಉಲ್ಲೇಖಿಸಿದರು. ಇದು ಭಾರತದ ತುರ್ತು ಪರಿಸ್ಥಿತಿಯ ಅವಧಿಯಲ್ಲಿ (1975–1977) ಉದ್ಭವಿಸಿದ ಒಂದು ಮಹತ್ವದ ವ್ಯಾಜ್ಯವಾಗಿತ್ತು.

ತುರ್ತು ಪರಿಸ್ಥಿತಿಯ ಸಮಯದಲ್ಲಿ,ಪ್ರಭುತ್ವದ ಬಂಧನ  ವಿರೋಧಿಸಿ ವ್ಯಕ್ತಿಗಳು ಹೈಕೋರ್ಟ್‌ಗಳಿಂದ ಪರಿಹಾರ  ಪಡೆಯಲು ಸಾಧ್ಯವಿಲ್ಲ ಎಂದು 4–1 ಬಹುಮತದೊಂದಿಗೆ ಹೊರಬಿದ್ದ ಸುಪ್ರೀಂ ಕೋರ್ಟ್‌ ತೀರ್ಪು ಹೇಳಿತ್ತು. ಈ ತೀರ್ಪು ತುರ್ತು ಪರಿಸ್ಥಿತಿಯ ಸಮಯದಲ್ಲಿ ಮೂಲಭೂತ ಹಕ್ಕುಗಳನ್ನು, ವಿಶೇಷವಾಗಿ ವಿಧಿ 21ರ ಅಡಿಯಲ್ಲಿ ಒದಗಿಸಲಾಗಿದ್ದ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ಅಮಾನತುಗೊಳಿಸಲು ಪರಿಣಾಮಕಾರಿಯಾಗಿ ಅವಕಾಶ ಮಾಡಿಕೊಟ್ಟಿತು.

ಸುಪ್ರೀಂ ಕೋರ್ಟ್ ತೀರ್ಪು ಸರ್ವಾಧಿಕಾರ ಮತ್ತು ಪರಮಾಧಿಕಾರವನ್ನು ಕಾನೂನುಬದ್ಧಗೊಳಿಸಿತು ಎಂದು ಧನಕರ್ ಹೇಳಿದರು. ಕಾರ್ಯಾಂಗ ತನಗೆ ಸೂಕ್ತವೆನಿಸುವವರೆಗೆ ತುರ್ತು ಪರಿಸ್ಥಿತಿ ಹೇರುವ ಅವಕಾಶ ದೊರೆಯಿತು ಎಂದು ಅವರು ಹೇಳಿದರು.

Also Read
ತುರ್ತು ಪರಿಸ್ಥಿತಿ ಘೋಷಣೆಯ ಸಿಂಧುತ್ವದ ಬಗೆಗಿನ ತಕರಾರು: ಪರಿಶೀಲನೆಯ ಜಿಜ್ಞಾಸೆಯ ಬಗ್ಗೆ ಆಲಿಸಲು ಮುಂದಾದ ಸುಪ್ರೀಂ

ಅಲ್ಲದೆ ತುರ್ತು ಪರಿಸ್ಥಿತಿಯ ಸಮಯದಲ್ಲಿ, ಯಾವುದೇ ಮೂಲಭೂತ ಹಕ್ಕುಗಳಿರಲಿಲ್ಲ. ಆದ್ದರಿಂದ ಸುಪ್ರೀಂ ಕೋರ್ಟ್‌ ತೀರ್ಪು ಅತ್ಯಂತ ಹಳೆಯ ಮತ್ತು ಈಗ ಅತ್ಯಂತ ಚೈತನ್ಯಶೀಲ ಪ್ರಜಾಪ್ರಭುತ್ವ ಹೊಂದಿರುವ ಭಾರತದಲ್ಲಿ ಸರ್ವಾಧಿಕಾರವನ್ನು ಕಾನೂನುಬದ್ಧಗೊಳಿಸಿತು ಎಂದರು.

ಸಚಿವ ಸಂಪುಟದ ಸಲಹೆ ಪಡೆಯದೆ ಕೇವಲ ಪ್ರಧಾನಿ ಇಂದಿರಾ ಗಾಂಧಿಯವರ ಆದೇಶದ ಮೇರೆಗೆ ತುರ್ತು ಪರಿಸ್ಥಿತಿ ಘೋಷಣೆಗೆ ಸಹಿ ಹಾಕಲು ಅಂದಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಅವರು ನಿರ್ಧಾರ ತೆಗೆದುಕೊಂಡ ಬಗೆಯನ್ನೂ ಧನಕರ್‌ ಪ್ರಶ್ನಿಸಿದರು. 

ಪ್ರಸ್ತುತ ಸರ್ಕಾರ ಪ್ರತಿ ವರ್ಷ ಜೂನ್ 25 ಅನ್ನು 'ಸಂವಿಧಾನ ಹತ್ಯೆ ದಿನ' ಎಂದು ಆಚರಿಸುತ್ತಿರುವುದು ವಿವೇಕಯುತವಾಗಿದೆ ಎಂದು ಅವರು ಹೇಳಿದರು.  

[ವೀಡಿಯೊ]

Kannada Bar & Bench
kannada.barandbench.com