
ಯಾವುದೇ ಉದ್ಯೋಗಿಗಳು ತನ್ನ ಮಾಜಿ ಉದ್ಯೋಗದಾತರೊಂದಿಗೆ ಮಾತ್ರವೇ ಕೆಲಸ ಮಾಡಬೇಕು ಇಲ್ಲವೇ ನಿಷ್ಕ್ರಿಯವಾಗಿರಬೇಕು ಎಂದು ಮಾಜಿ ಉದ್ಯೋಗದಾತ ಸಂಸ್ಥೆಯು ಒತ್ತಾಯಿಸುವಂತಿಲ್ಲ ಎಂಬುದಾಗಿ ದೆಹಲಿ ಹೈಕೋರ್ಟ್ ಈಚೆಗೆ ತೀರ್ಪು ನೀಡಿದೆ [ವರುಣ್ ತ್ಯಾಗಿ ಮತ್ತು ಡ್ಯಾಫೋಡಿಲ್ ಸಾಫ್ಟ್‌ವೇರ್ ಪ್ರೈವೇಟ್ ಲಿಮಿಟೆಡ್ ನಡುವಣ ಪ್ರಕರಣ].
ಸ್ಪರ್ಧಾ ನಿಷೇಧ ಷರತ್ತುಗಳನ್ನು ಹೊಂದಿರುವ ಉದ್ಯೋಗದಾತ-ನೌಕರ ಒಪ್ಪಂದಗಳನ್ನು ನ್ಯಾಯಾಲಯಗಳು ಕಟ್ಟುನಿಟ್ಟಾಗಿ ಪರಿಶೀಲನೆಗೆ ಒಳಪಡಿಸಬೇಕಿದ್ದು ಏಕೆಂದರೆ ಉದ್ಯೋಗದಾತರು ಉದ್ಯೋಗಿಗಳಿಗಿಂತ ಹೆಚ್ಚಿನ ಸೌಲಭ್ಯ ಹೊಂದಿದ್ದು ಉದ್ಯೋಗಿ ಬಹುತೇಕ ಪ್ರಮಾಣಿತ ಒಪ್ಪಂದಗಳಿಗೆ ಸಹಿ ಹಾಕಬೇಕಾಗುತ್ತದೆ ಅಥವಾ ನಿರುದ್ಯೋಗ ಎದುರಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಉದ್ಯೋಗಿಯೊಬ್ಬ ತನ್ನ ಕಂಪೆನಿಯ ಕೆಲಸ ತೊರೆದ ಬಳಿಕ ಆ ಕಂಪೆನಿಗೆ ಪ್ರತಿಸ್ಪರ್ಧಿಯಾಗಿ ಕೆಲಸ ಮಾಡದಂತೆ ಇಲ್ಲವೇ ಸ್ಪರ್ಧೆಯೊಡ್ಡುವ ಕಂಪೆನಿಯಲ್ಲಿ ಉದ್ಯೋಗಕ್ಕೆ ಸೇರ್ಪಡೆಯಾಗದಂತೆ ಕಂಪೆನಿಯೊಂದು ತನ್ನ ಉದ್ಯೋಗಿಯೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಯನ್ನು ಸ್ಪರ್ಧಾ ನಿಷೇಧ ಷರತ್ತು ಎನ್ನಲಾಗುತ್ತದೆ.
ಉದ್ಯೋಗದಾತ ಮತ್ತು ಉದ್ಯೋಗಿಯ ನಡುವಿನ ಒಪ್ಪಂದ ರದ್ದುಗೊಂಡ ನಂತರ ಸ್ಪರ್ಧಾ ನಿಷೇಧಕ್ಕೆ ಸಂಬಂಧಿಸಿದ ನಿರ್ಬಂಧಗಳನ್ನು ಜಾರಿಗೊಳಿಸುವುದು ಭಾರತೀಯ ಒಪ್ಪಂದ ಕಾಯಿದೆಯ ಸೆಕ್ಷನ್ 27ರ ಉಲ್ಲಂಘನೆ ಎಂದು ತೀರ್ಪು ಹೇಳಿದೆ.
ಡ್ಯಾಫೋಡಿಲ್ ಸಾಫ್ಟ್‌ವೇರ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪೆನಿಗೆ ಸರ್ಕಾರಿ ಸಂಸ್ಥೆ ಡಿಜಿಟಲ್ ಇಂಡಿಯಾ ಕಾರ್ಪೊರೇಷನ್ ಕ್ಲೈಂಟ್ ಆಗಿತ್ತು. ಡ್ಯಾಫೊಡಿಲ್‌ನಲ್ಲಿ ಕೆಲಸ ಮಾಡುತ್ತಿದ್ದ ವರುಣ್ ತ್ಯಾಗಿ ನಂತರ ಆ ಕಂಪೆನಿ ತೊರೆದು ಮಕ್ಕಳಿಗೆ ಪೌಷ್ಟಿಕಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಡಿಜಿಟಲ್ ಇಂಡಿಯಾ ಕಾರ್ಪೊರೇಷನ್‌ನ ಪೋಷಣ್ ಟ್ರ್ಯಾಕರ್ ಯೋಜನೆಯಲ್ಲಿ ಉಪ ಮಹಾ ನಿರ್ದೇಶಕರಾಗಿ ಕೆಲಸ ಆರಂಭಿಸಿದ್ದರು. ಆದರೆ ತ್ಯಾಗಿ ಅವರು ಡ್ಯಾಫೊಡಿಲ್ ಜೊತೆ ಮಾಡಿಕೊಂಡಿರುವ ಸ್ಪರ್ಧಾ ನಿಷೇಧ ಒಪ್ಪಂದದಂತೆ ಅವರು ತನ್ನ ಕ್ಲೈಂಟ್ ಆಗಿರುವ ಡಿಜಿಟಲ್ ಇಂಡಿಯಾ ಕಾರ್ಪೊರೇಷನ್‌ನಲ್ಲಿ ಕೆಲಸ ಮಾಡದೆ ನಿಷ್ಕ್ರಿಯವಾಗಿರಬೇಕು ಎಂದು ಡ್ಯಾಫೊಡಿಲ್ ವಿಚಾರಣಾ ನ್ಯಾಯಾಲಯದಿಂದ ಮಧ್ಯಂತರ ತಡೆಯಾಜ್ಞೆ ತಂದಿತ್ತು.
ಈ ತಡೆಯಾಜ್ಞೆ ರದ್ದುಗೊಳಿಸಿರುವ ನ್ಯಾಯಮೂರ್ತಿ ತೇಜಸ್ ಕಾರಿಯಾ "ತನ್ನ ಹಿಂದಿನ ಉದ್ಯೋಗದಾತರಿಗಾಗಿ ಕೆಲಸ ಮಾಡು ಅಥವಾ ನಿಷ್ಕ್ರಿಯವಾಗಿರು ಎಂಬ ಸ್ಥಿತಿಯನ್ನು ಉದ್ಯೋಗಿ ಎದುರಿಸುವಂತಿಲ್ಲ. ಉದ್ಯೋಗ ಒಪ್ಪಂದ ಮುಕ್ತಾಯದ ನಂತರ ಉದ್ಯೋಗಿಗೆ ಉದ್ಯೋಗ ಪಡೆಯುವ ಹಕ್ಕಿನ ಮೇಲೆ ನಿರ್ಬಂಧ ವಿಧಿಸುವ ಸ್ಪರ್ಧಾ ನಿಷೇಧ ಒಪ್ಪಂದದ ಯಾವುದೇ ನಿಯಮಗಳು ಭಾರತೀಯ ಒಪ್ಪಂದ ಕಾಯಿದೆಯ ಸೆಕ್ಷನ್ 27ಕ್ಕೆ ವಿರುದ್ಧವಾಗಿರುವುದರಿಂದ ಅದು ಅನೂರ್ಜಿತ ಎಂದರು.