ಕಳೆದ ಅಕ್ಟೋಬರ್‌ನಲ್ಲಿ ಕರ್ನಾಟಕ ಹೈಕೋರ್ಟ್ ಹೊರಡಿಸಿದ್ದ ಆದೇಶದ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋಗಿರುವುದಾಗಿ ಕಾವೇರಿ ಕಾಲಿಂಗ್ ಯೋಜನೆಯ ಉಸ್ತುವಾರಿ ಸಂಸ್ಥೆ ಸದ್ಗುರು ಜಗ್ಗಿ ವಾಸುದೇವ್ ಅವರ ಈಶ ಔಟ್‌ರೀಚ್ ಬುಧವಾರ ಉಚ್ಚ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ. ಕಾವೇರಿ ಕಾಲಿಂಗ್ ಯೋಜನೆಯ ಅಂಗವಾಗಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸದಂತೆ ಸೂಚಿಸಬೇಕೆಂದು ಕೋರಲಾಗಿದ್ದ ಮನವಿಯನ್ನು ಸ್ವಯಂ ಪ್ರೇರಿತ ಅರ್ಜಿ ಎಂದು ಪರಿಗಣಿಸಿರುವುದಾಗಿ ರಾಜ್ಯ ಹೈಕೋರ್ಟ್ ಅಕ್ಟೋಬರ್ 15ರಂದು ತಿಳಿಸಿತ್ತು.
ಈಶ ಪ್ರತಿಷ್ಠಾನದ ವಕೀಲರ ವಿವರಣೆ ಆಧಾರದ ಮೇಲೆ , ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠ “ಈಶ ಔಟ್‌ರೀಚ್ ವಿಶೇಷ ಅನುಮತಿ ಅರ್ಜಿ ಸಲ್ಲಿಸುವ ಮೂಲಕ 15 ಅಕ್ಟೋಬರ್ 2020 ರ ಆದೇಶವನ್ನು ಪ್ರಶ್ನಿಸಲಾಗಿದೆ ಎಂದು ವಿವರಣಾಪತ್ರ ಸಲ್ಲಿಸಿದೆ. ಆದ್ದರಿಂದ ಈಶ ಔಟ್‌ರೀಚ್ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ನೀಡಲಾಗುವುದು” ಎಂದ ನ್ಯಾಯಾಲಯ ಮೇ 25ಕ್ಕೆ ಅರ್ಜಿಯ ವಿಚಾರಣೆ ನಿಗದಿಪಡಿಸುವಂತೆ ಸೂಚಿಸಿತು.
ಕಾವೇರಿ ಕೂಗು ಯೋಜನೆಯ ಬಗ್ಗೆ ಮಾಡುತ್ತಿದ್ದ ಕಾರ್ಯಕ್ರಮ ಪ್ರಸಾರ ನಿಲ್ಲಿಸುವಂತೆ ಕೋರಿ ಡಿಸ್ಕವರಿ ಚಾನೆಲ್‌ಗೆ ಕಾನೂನು ನೋಟಿಸ್ ಕಳುಹಿಸಿದ ನಂತರ 2020 ರ ಅಕ್ಟೋಬರ್ 15 ರಂದು ಹೈಕೋರ್ಟ್ ಎ ವಿ ಅಮರನಾಥನ್ ಅವರನ್ನು ಅರ್ಜಿದಾರಿಕೆಯಿಂದ ತೆಗೆದುಹಾಕಿತ್ತು. ಕಾರ್ಯಕ್ರಮ ಪ್ರಸಾರ ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಅರ್ಜಿದಾರರು ತಪ್ಪಾಗಿ ನಿರೂಪಿಸಿದ್ದಾರೆ ಎಂಬ ಅಂಶವನ್ನು ಹೈಕೋರ್ಟ್ ಪರಿಗಣಿಸಿತ್ತು.
ʼಕಾವೇರಿ ಕೂಗುʼ ಎಂಬುದು ಸರ್ಕಾರಿ ಯೋಜನೆ ಎಂದು ಬಿಂಬಿಸುವ ಮೂಲಕ ಈಶ ಪ್ರತಿಷ್ಠಾನ ಹಣ ಸಂಗ್ರಹಿಸಿದೆಯೇ ಎಂದು ತನಿಖೆ ನಡೆಸಲು ಸಿದ್ಧರಿದ್ದೀರಾ ಎಂದು ಸರ್ಕಾರವನ್ನು ನ್ಯಾಯಾಲಯ ಇತ್ತೀಚೆಗೆ ಪ್ರಶ್ನಿಸಿತ್ತು. ಯೋಜನೆಯ ಭಾಗವಾಗಿ, ಈಶ ಪ್ರತಿಷ್ಠಾನ ಸರ್ಕಾರಿ ಜಮೀನಿನಲ್ಲಿ ಸಸಿಗಳನ್ನು ನೆಡುತ್ತಿದೆ ಮತ್ತು ಅದಕ್ಕಾಗಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದೆ ಎಂದು ಅಮರನಾಥನ್ ಅವರು ಸಲ್ಲಿಸಿದ್ದ ಅರ್ಜಿಯಲ್ಲಿ ಆರೋಪಿಸಲಾಗಿದೆ.
ಯೋಜನೆಯ ಸಾಧಕ-ಬಾಧಕಗಳನ್ನು ಅಧ್ಯಯನ ಮಾಡದೆ ಸರ್ಕಾರ ತನ್ನ ಭೂಮಿಯನ್ನು ಖಾಸಗಿ ಸಂಸ್ಥೆ ಬಳಸಲು ಹೇಗೆ ಅನುಮತಿ ನೀಡಿತು ಎಂದು ಕಳವಳ ವ್ಯಕ್ತಪಡಿಸಲಾಗಿತ್ತು. ಪ್ರತಿಷ್ಠಾನ , ರೂ 10,626 ಕೋಟಿಗಳನ್ನು ದೇಣಿಗೆ ರೂಪದಲ್ಲಿ ಸಂಗ್ರಹಿಸುವ ನಿರೀಕ್ಷೆಯಿರುವುದರಿಂದ "ಸಾರ್ವಜನಿಕರಿಂದ ಹಣ ಸಂಗ್ರಹಿಸುವುದು ಕಳವಳಕಾರಿ" ಎಂದು ಅರ್ಜಿದಾರರು ವಾದ ಮಂಡಿಸಿದ್ದರು.