ಬಂಕೆ ಬಿಹಾರಿ ದೇವಾಲಯ: ವಿಶೇಷ ಪೂಜೆ ಹೆಸರಿನಲ್ಲಿ ಶ್ರೀಮಂತರಿಂದ ದೇವರ ಶೋಷಣೆ ಎಂದು ಸುಪ್ರೀಂ ಕೋರ್ಟ್‌ ಅಸಮಾಧಾನ

ದೇವರಿಗೆ ಒಂದು ನಿಮಿಷವೂ ವಿಶ್ರಾಂತಿ ಪಡೆಯಲು ಬಿಡುತ್ತಿಲ್ಲ. ವಿಶೇಷ ಪೂಜೆ ವೇಳೆ ದೇವರನ್ನು ಹೆಚ್ಚು ಶೋಷಿಸಲಾಗುತ್ತಿದೆ ಎಂದು ಪೀಠ ಆಕ್ಷೇಪ ವ್ಯಕ್ತಪಡಿಸಿತು.
Supreme Court of India
Supreme Court of India
Published on

ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಶ್ರೀ ಕೃಷ್ಣನ ಆರಾಧನಾ ಸ್ಥಳವಾದ ಬಂಕೆ ಬಿಹಾರಿಜೀ ದೇಗುಲದಲ್ಲಿ ನ್ಯಾಯಾಲಯ ರಚಿಸಿದ್ದ ಸಮಿತಿ ನಿಗದಿಪಡಿಸಿದ್ದ ದರ್ಶನ ಸಮಯ ಮತ್ತು ದೇಗುಲ ಪದ್ದತಿಗೆ ಆಕ್ಷೇಪ ವ್ಯಕ್ತಪಡಿಸಿದ್ದ ಅರ್ಜಿ ಕುರಿತಂತೆ ಉನ್ನತಾಧಿಕಾರ ಹೊಂದಿರುವ ದೇವಾಲಯ ನಿರ್ವಹಣಾ ಸಮಿತಿ ಮತ್ತು ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೋಮವಾರ ನೋಟಿಸ್‌ ಜಾರಿ ಮಾಡಿದೆ [ಠಾಕೂರ್‌ ಶ್ರೀ ಬಂಕೆ ಬಿಹಾರಿಜೀ ಮಹಾರಾಜ್‌ ದೇವಸ್ಥಾನ ಮತ್ತಿತರರು ಹಾಗೂ ಉನ್ನತಾಧಿಕಾರ ಹೊಂದಿರುವ ದೇವಾಲ ನಿರ್ವಹಣಾ ಸಮಿತಿ ನಡುವಣ ಪ್ರಕರಣ].

ಪ್ರಸ್ತುತ ವ್ಯವಸ್ಥೆ ದೇವರನ್ನು ಶೋಷಣೆಗೀಡು ಮಾಡುವಂತಿದೆ ಎಂದು ಸಿಜೆಐ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜೊಯಮಲ್ಯ ಬಾಗ್ಚಿ ಹಾಗೂ ವಿಪುಲ್ ಎಂ ಪಾಂಚೋಲಿ ಅವರಿದ್ದ ಪೀಠ ಮೇಲ್ನೋಟದ ಅಭಿಪ್ರಾಯ ವ್ಯಕ್ತಪಡಿಸಿತು.

Also Read
ತಿರುಮಲ ದೇವಸ್ಥಾನ ಹುಂಡಿ ಕಳವು ಪ್ರಕರಣ: ಸಿಐಡಿ ತನಿಖೆಗೆ ಆಂಧ್ರಪ್ರದೇಶ ಹೈಕೋರ್ಟ್ ಆದೇಶ

ಈ ಹಂತದಲ್ಲಿ ಸಿಜೆಐ ಅವರು “ಮಧ್ಯಾಹ್ನ 12 ಗಂಟೆಗೆ ದೇವಸ್ಥಾನ ಮುಚ್ಚಿದ ನಂತರವೂ ದೇವರಿಗೆ ಒಂದು ನಿಮಿಷವೂ ವಿಶ್ರಾಂತಿ ನೀಡುವುದಿಲ್ಲ. ಆ ವೇಳೆ ದೇವರನ್ನು ಹೆಚ್ಚು ಶೋಷಣೆ ಮಾಡಲಾಗುತ್ತಿದೆ. ಭಾರೀ ಹಣ ಪಾವತಿಸಬಲ್ಲ ಶ್ರೀಮಂತರಿಗೆ ವಿಶೇಷ ಪೂಜೆಗೆ ಅವಕಾಶ ನೀಡಲಾಗುತ್ತಿದೆ” ಎಂದರು.

ದೇವಸ್ಥಾನದ ಆಡಳಿತ 1939ರ ನಿರ್ವಹಣಾ ಯೋಜನೆ ಮೂಲಕ ನಡೆದು ಬಂದಿದ್ದರೂ, 2025ರ ಉತ್ತರ ಪ್ರದೇಶ ಶ್ರೀ ಬಂಕೆ ಬಿಹಾರಿ ಜೀ ದೇವಸ್ಥಾನ ಟ್ರಸ್ಟ್ ಸುಗ್ರೀವಾಜ್ಞೆ ಮೂಲಕ ರಾಜ್ಯ ನಿಯಂತ್ರಿತ ಟ್ರಸ್ಟ್ ಸ್ಥಾಪಿಸಲು ಸರ್ಕಾರ ಮುಂದಾಗಿದೆ. ಇದರಿಂದ ಪರಂಪರಾನುಗತ ಆಚರಣೆಗಳ ಮೇಲೆ ಪರಿಣಾಮ ಉಂಟಾಗುತ್ತಿದೆ ಎಂಬ ಆಕ್ಷೇಪಗಳು ವ್ಯಕ್ತವಾಗಿದ್ದವು.

ಕಳೆದ ಆಗಸ್ಟ್‌ನಲ್ಲಿ ಉತ್ತರ ಪ್ರದೇಶ ಸರ್ಕಾರದ ಆದೇಶ ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ದೇವಸ್ಥಾನದ ದಿನವಹಿ ಕಾರ್ಯಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಉನ್ನತಾಧಿಕಾರ ಸಮಿತಿ ರಚಿಸಿತ್ತು. ಆದರೆ ಸರ್ಕಾರದ ಆದೇಶ ಕುರಿತು ಅಲಾಹಾಬಾದ್‌ ಹೈಕೋರ್ಟ್‌ ನಿರ್ಧರಿಸಬೇಕು ಎಂದು ಸೂಚಿಸಿತ್ತು.

ದೇವಸ್ಥಾನದ ಮೇಲ್ವಿಚಾರಣೆ ಮಾಡಲು ಸುಪ್ರೀಂ ಕೋರ್ಟ್‌ ನೇಮಿಸಿದ್ದ ಉನ್ನತಾಧಿಕಾರ ಸಮಿತಿ, ದೇಗುಲದ ದಿನನಿತ್ಯದ ಕಾರ್ಯಚಟುವಟಿಕೆಗಳು, ಭಕ್ತರ ಸುರಕ್ಷತೆ, ಜನಸಂದಣಿ ನಿಯಂತ್ರಣ ಮತ್ತು ಮೂಲಭೂತ ಸೌಲಭ್ಯ ಒದಗಿಸುವ ಕುರಿತಂತೆ ಕೆಲ ನಿರ್ಧಾರಗಳನ್ನು ಕೈಗೊಂಡಿತ್ತು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಶ್ಯಾಮ್‌ ದಿವಾನ್‌ ಅವರು ದರ್ಶನ ಸಮಯ ಮತ್ತು ದೇವಾಲಯದ ಪದ್ಧತಿಗಳಲ್ಲಿನ ಬದಲಾವಣೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿ, ಅಂತಹ ವಿಷಯಗಳನ್ನು ಎಚ್ಚರಿಕೆಯಿಂದ ನಿರ್ವಹಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದರು.

Also Read
ಧರ್ಮಸ್ಥಳದ ದೇವಸ್ಥಾನ, ಕಾರ್ಯದರ್ಶಿ ವಿರುದ್ಧ ಮಾನಹಾನಿ ಸುದ್ದಿ ಪ್ರಕಟಿಸದಂತೆ ಮಾಧ್ಯಮಗಳಿಗೆ ನ್ಯಾಯಾಲಯದ ನಿರ್ಬಂಧ

ವಿಚಾರಣೆಯ ಒಂದು ಹಂತದಲ್ಲಿ ಸೂರ್ಯ ಕಾಂತ್‌ ಅವರು ಶ್ರೀಮಂತರಿಗೆ ಒದಗಿಸುವ ವಿಶೇಷ ದರ್ಶನ ವ್ಯವಸ್ಥೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ದಿವಾನ್‌ ಅವರೂ ತಲೆದೂಗಿದರು.

ನಂತರ ನ್ಯಾಯಾಲಯ ಉನ್ನತಾಧಿಕಾರ ಸಮಿತಿ ಮತ್ತು ಉತ್ತರ ಪ್ರದೇಶ ಸರ್ಕಾರದ ಪ್ರತಿಕ್ರಿಯೆ ಕೇಳಿತು. ವಿಚಾರಣೆಯಲ್ಲಿ, ಉನ್ನತ ಅಧಿಕಾರದ ದೇವಾಲಯ ಸಮಿತಿಯ ಸದಸ್ಯ ಕಾರ್ಯದರ್ಶಿಯನ್ನು ಪ್ರತಿವಾದಿಯನ್ನಾಗಿ ಸೇರಿಸಬೇಕೆಂದು ಪೀಠ ನಿರ್ದೇಶಿಸಿತು. ಪ್ರಕರಣದ ಮುಂದಿನ ವಿಚಾರಣೆ ಜನವರಿ ಮೊದಲ ವಾರದಲ್ಲಿ ನಡೆಯಲಿದೆ.

Kannada Bar & Bench
kannada.barandbench.com