ಪತ್ರಿಕೆಯಲ್ಲಿ ಪ್ರಕಟವಾದ ಮಾತ್ರಕ್ಕೆ ನ್ಯಾಯಾಂಗೇತರ ತಪ್ಪೊಪ್ಪಿಗೆ ವಿಶ್ವಾಸಾರ್ಹವಾಗದು: ಸುಪ್ರೀಂನಿಂದ ಆರೋಪಿಗಳ ಖುಲಾಸೆ

ಪತ್ರಿಕಾ ವರದಿಗಳ ಆಧಾರದ ಮೇಲೆ ಕೊಲೆ ಶಿಕ್ಷೆ ಎತ್ತಿ ಹಿಡಿದಿರುವ ಕರ್ನಾಟಕ ಹೈಕೋರ್ಟ್ ತೀರ್ಪಿನ ಬಗ್ಗೆ ನ್ಯಾಯಾಲಯ ಆಶ್ಚರ್ಯ ವ್ಯಕ್ತಪಡಿಸಿದೆ.
Newspapers
Newspapers
Published on

ಪತ್ರಿಕೆಗಳಲ್ಲಿ ಸಾರ್ವಜನಿಕವಾಗಿ ಪ್ರಕಟವಾದ ಮಾತ್ರಕ್ಕೆ ನ್ಯಾಯಾಂಗೇತರ ತಪ್ಪೊಪ್ಪಿಗೆ ವಿಶ್ವಾಸಾರ್ಹತೆ ಗಳಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಈಚೆಗೆ ಸ್ಪಷ್ಟಪಡಿಸಿದೆ [ದಿನೇಶ್ ಬಿ ಎಸ್ ಮತ್ತು ಕರ್ನಾಟಕ ಸರ್ಕಾರ ನಡುವಣ ಪ್ರಕರಣ].

ಪತ್ರಿಕಾ ವರದಿಗಳ ಆಧಾರದ ಮೇಲೆ ಆರೋಪಿಯ ಕೊಲೆ ಶಿಕ್ಷೆಯನ್ನು ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್ ತೀರ್ಪು 'ಆಶ್ಚರ್ಯಕರ' ಎಂದು ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಪಂಕಜ್ ಮಿತ್ತಲ್‌ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.

"... ಪತ್ರಿಕೆಯಲ್ಲಿ ಪ್ರಕಟವಾಗಿ ಸಾರ್ವಜನಿಕರಿಗೆ ವ್ಯಾಪಕವಾಗಿ ಲಭ್ಯವಿದೆ ಎಂದ ಮಾತ್ರಕ್ಕೆ ಕಾನೂನುಬಾಹಿರ ತಪ್ಪೊಪ್ಪಿಗೆಗೆ ಹೆಚ್ಚಿನ ವಿಶ್ವಾಸಾರ್ಹತೆ ಇರುವುದಿಲ್ಲ. ವೃತ್ತಪತ್ರಿಕೆ ವರದಿಗಳನ್ನು ಮಧ್ಯಮ ಸಾಕ್ಷ್ಯವಾಗಿ ಮಾತ್ರ ಬಳಸಬಹುದು ಎಂಬುದು ಉತ್ತಮ ರೀತಿಯಲ್ಲಿ ಇತ್ಯರ್ಥಗೊಂಡ ವಿಚಾರವಾಗಿದೆ" ಎಂದು ನ್ಯಾಯಾಲಯ ನುಡಿದಿದೆ.

ಇಬ್ಬರು ಆರೋಪಿಗಳನ್ನು 1994ರಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖುಲಾಸೆಗೊಳಿಸುವಾಗ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಇಬ್ಬರೂ ಆರೋಪಿಗಳು ನಿರ್ದೋಷಿಗಳೆಂದು ವಿಚಾರಣಾ ನ್ಯಾಯಾಲಯ ತೀರ್ಪು ನೀಡಿತ್ತು. ಆದರೂ, ಅವರನ್ನು ಖುಲಾಸೆಗೊಳಿಸಿದ್ದ ಆದೇಶ ರದ್ದುಗೊಳಿಸಿ 2009ರಲ್ಲಿ, ಹೈಕೋರ್ಟ್ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಇದರಿಂದಾಗಿ ಆರೋಪಿಗಳು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

ಕನ್ನಡ ಪತ್ರಿಕೆಯೊಂದರಲ್ಲಿ ಪ್ರಕಟವಾದ ಸುದ್ದಿಯನ್ನು ಪ್ರಾಥಮಿಕವಾಗಿ ಆಧರಿಸಿ  ಆರೋಪಿಗಳಲ್ಲಿ ಒಬ್ಬನಿಗೆ ಶಿಕ್ಷೆ ವಿಧಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ ಗಮನಿಸಿತು.

Also Read
ಕಾನೂನುಬಾಹಿರ ಕಟ್ಟಡ ತೆರವು ಪ್ರಕರಣ: ಬಿಬಿಎಂಪಿ ವಿಶ್ವಾಸಾರ್ಹತೆ ಬಗ್ಗೆ ಸಂದೇಹ ವ್ಯಕ್ತಪಡಿಸಿದ ಹೈಕೋರ್ಟ್‌

ಸುದ್ದಿಯ ವರದಿಗಾರರರೊಬ್ಬರನ್ನು ಪ್ರಾಸಿಕ್ಯೂಷನ್ ಸಾಕ್ಷಿಯಾಗಿ ವಿಚಾರಣೆಗೆ ಒಳಪಡಿಸಲಾಗಿತ್ತು. ಆಗ ವಿಚಾರಣೆ ವೇಳೆ, ಆರೋಪಿ ಜೈಲಿನಲ್ಲಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ವರದಿಗಾರ ಹೇಳಿದ್ದರು. ಆದರೂ ಸಾಕ್ಷ್ಯಗಳನ್ನು ಪರಿಶೀಲಿಸಿದಾಗ, ಆರೋಪಿಗಳೊಂದಿಗೆ ನೇರವಾಗಿ ಸಂವಾದ ನಡೆಸಿದ್ದು ಸಂಬಂಧಪಟ್ಟ ಉಪಸಂಪಾದಕರೇ ಹೊರತು ವರದಿಗಾರರಲ್ಲ. ಆದರೆ ವಿಚಾರಣೆ ವೇಳೆ ಉಪ ಸಂಪಾದಕನನ್ನು ಪ್ರಶ್ನಿಸಿರಲಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ವರದಿಗಾರ ಇತರ ವಿಚಾರಣಾಧೀನ ಕೈದಿಗಳೊಂದಿಗಷ್ಟೇ ಮಾತನಾಡಿದ್ದು ತಾವು ತಪ್ಪೊಪ್ಪಿಗೆ ವಿಚಾರವನ್ನು ಆಕಸ್ಮಿಕವಾಗಿ ಕೇಳಿಸಿಕೊಂಡಿದ್ದಾಗಿ ಹೇಳಿದ್ದರು. ಇನ್ನೊಬ್ಬ ಆರೋಪಿಗೆ ಸಂಬಂಧಿಸಿದಂತೆ ಇದೇ ರೀತಿ ಮಾತನಾಡಿದ ಉಳಿದವರನ್ನು ಪ್ರಶ್ನಿಸಿದಂತೆ ಪ್ರಶ್ನಿಸಿರಲಿಲ್ಲ ಎಂದು ಅದು ವಿವರಿಸಿದೆ.

ಇದಲ್ಲದೆ, ಮೃತ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆತಂದಿರುವುದಾಗಿ ಪ್ರಾಸಿಕ್ಯೂಷನ್ ಸಾಕ್ಷಿ ನುಡಿದ ಸಾಕ್ಷ್ಯದಲ್ಲಿಯೂ ವ್ಯತ್ಯಯಗಳಿವೆ ಎಂದ ನ್ಯಾಯಾಲಯ ಅಂತಿಮವಾಗಿ ಎರಡೂ ಮೇಲ್ಮನವಿಗಳನ್ನು ಪುರಸ್ಕರಿಸಿ ಇಬ್ಬರು ಆರೋಪಿಗಳನ್ನೂ ಖುಲಾಸೆಗೊಳಿಸಿತು.

ಹಿರಿಯ ವಕೀಲ ದಾಮ ಶೇಷಾದ್ರಿ ನಾಯ್ಡು, ವಕೀಲರಾದ ಪೈ ಅಮಿತ್, ಎನ್.ಎಸ್.ನಪ್ಪಿನೈ ಮತ್ತು ವಿ.ಬಾಲಾಜಿ ಇಬ್ಬರು ಮೇಲ್ಮನವಿದಾರರನ್ನು ಪ್ರತಿನಿಧಿಸಿದ್ದರು. ಕರ್ನಾಟಕ ಸರ್ಕಾರದ ಪರವಾಗಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ನಿಶಾಂತ್ ಪಾಟೀಲ್ ವಾದ ಮಂಡಿಸಿದ್ದರು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
Dinesh_BS_vs_State_of_Karnataka.pdf
Preview
Kannada Bar & Bench
kannada.barandbench.com