ನಕಲಿ ಓಆರ್‌ಎಸ್‌ ಲೇಬಲ್ ಆರೋಗ್ಯಕ್ಕೆ ಅಪಾಯಕಾರಿ; ಅದು ಮಾರುಕಟ್ಟೆ ಪ್ರವೇಶಿಸಬಾರದು: ದೆಹಲಿ ಹೈಕೋರ್ಟ್

ಒಆರ್‌ಎಸ್‌ ಹೆಸರಿನಲ್ಲಿ ಮಾರುಕಟ್ಟೆಗೆ ಬರುವ ಪಾನೀಯಗಳ ಮಾರಾಟ ನಿಷೇಧಿಸುವಂತೆ ಎಫ್ಎಸ್ಎಸ್ಎಐ ನೀಡಿದ್ದ ನಿರ್ದೇಶನದಲ್ಲಿ ತಾನು ಹಸ್ತಕ್ಷೇಪ ಮಾಡುವುದಿಲ್ಲ ಎಂದಿದೆ ಪೀಠ.
Delhi High Court and ORS
Delhi High Court and ORS
Published on

ಒಆರ್‌ಎಸ್‌ ಹೆಸರಿನಲ್ಲಿ ಹಣ್ಣಿನ ಪಾನೀಯ ಮಾರಾಟ ಮಾಡದಂತೆ ನಿಷೇಧ ವಿಧಿಸಿದ್ದ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ನೀಡಿದ್ದ ನಿರ್ದೇಶನದಲ್ಲಿ ತಾನು ಹಸ್ತಕ್ಷೇಪ ಮಾಡುವುದಿಲ್ಲ ಎಂದು ದೆಹಲಿ ಹೈಕೋರ್ಟ್‌ ಶುಕ್ರವಾರ ತಿಳಿಸಿದೆ  [ಡಾ. ರೆಡ್ಡೀಸ್ ಲ್ಯಾಬೋರೇಟರೀಸ್ ಲಿಮಿಟೆಡ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ] .

ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯೂಎಚ್‌ಒ) ಸೂತ್ರದಂತೆ ಒಆರ್‌ಎಸ್‌ ತಯಾರಿಸದೆ ಕೇವಲ ಒಆರ್‌ಎಸ್‌ ಹೆಸರಿನಲ್ಲಿ ಪಾನೀಯಗಳ ಮಾರಾಟ ಮಾಡುವುದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ- 2006ರ ಉಲ್ಲಂಘನೆಯಾಗುತ್ತದೆ ಎಂದು ಎಫ್ಎಸ್ಎಸ್ಎಐ ಅಧಿಸೂಚನೆ ಹೊರಡಿಸಿತ್ತು.

Also Read
ಐಸಿಯು ಸುರಕ್ಷತೆಗೆ ಇಲ್ಲ ಕ್ರಮ: ಕರ್ನಾಟಕ ಸೇರಿ 28 ರಾಜ್ಯ, ಯುಟಿಗಳ ಆರೋಗ್ಯ ಕಾರ್ಯದರ್ಶಿಗಳಿಗೆ ಸುಪ್ರೀಂ ಸಮನ್ಸ್

ನಿರ್ಜಲೀಕರಣದಿಂದ ಬಳಲುತ್ತಿರುವವರಿಗೆ ಡಬ್ಲ್ಯೂಎಚ್‌ಒ ಶಿಫಾರಸು ಮಾಡಿದ ಮೌಖಿಕ ಪುನರ್ಜಲೀಕರಣ ದ್ರಾವಣವನ್ನು ಒಆರ್‌ಎಸ್‌ ಎಂದು ಕರೆಯಲಾಗುತ್ತದೆ. ಹೈದರಾಬಾದ್‌ ಮೂಲದ ವೈದ್ಯೆ ಡಾ. ಶಿವರಂಜನಿ ಸಂತೋಷ್‌ ಅವರು ಸುಮಾರು ಎಂಟು ವರ್ಷಗಳ ಕಾಲ ನಡೆಸಿದ ನಿರಂತರ ಹೋರಾಟದ ಫಲವಾಗಿ ಪಾನೀಯಗಳ ಮೇಲೆ ಒಆರ್‌ಎಸ್‌ ಪದ ಬಳಸದಂತೆ ಆದೇಶಿಸಲಾಗಿತ್ತು.

ಇದು ಸಾರ್ವಜನಿಕ ಆರೋಗ್ಯಕ್ಕೆ ಅಪಾಯಕಾರಿ. ಇಂತಹ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟದ ಮೇಲೆ ಇರುವ ನಿಷೇಧ ಮುಂದುವರೆಯುತ್ತದೆ. ಸಾರ್ವಜನಿಕ ಆರೋಗ್ಯ ಕುರಿತಾದ ಆತಂಕ ಪರಿಗಣಿಸಿ ತಾನು ಈ ನಿರ್ಬಂಧ ತೆಗೆದುಹಾಕುತ್ತಿಲ್ಲ‌ ಎಂದು ನ್ಯಾ. ಸಚಿನ್‌ ದತ್ತ ಅವರಿದ್ದ ಪೀಠ ಇಂದು ತಿಳಿಸಿದೆ.

ರೆಬ್ಯಾಲಾಂಜ್ ವಿಟೋರ್ಸ್ ಹೆಸರಿನ ಪಾನೀಯವನ್ನು ಡಾ. ರೆಡ್ಡೀಸ್ ಲ್ಯಾಬೋರೇಟರೀಸ್ ತಯಾರಿಸುತ್ತಿತ್ತು. ಆದರೆ ಅದರ ಜಾಹೀರಾತು ಮತ್ತು ಲೇಬಲಿಂಗ್‌ ಸ್ಥಗಿತಗೊಳಿಸುವಂತೆ ಎಫ್ಎಸ್ಎಸ್ಎಐ ಅಕ್ಟೋಬರ್ 14 ಮತ್ತು 15 ರಂದು ನೀಡಿದ್ದ ಆದೇಶ ಪ್ರಶ್ನಿಸಿ  ಅದು ನ್ಯಾಯಾಲಯದ ಮೆಟ್ಟಿಲೇರಿತ್ತು.

Also Read
ಆರೋಗ್ಯ ಕವಚ ಸೇವೆ: ಜಿಲ್ಲಾವಾರು ನೇಮಕಾತಿ ಪ್ರಕ್ರಿಯೆ ಮಾಹಿತಿ ಒದಗಿಸಲು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಹೊಸ ಬ್ಯಾಚ್‌ನ ಪಾನೀಯ ತಯಾರಿಕೆ ನಿಲ್ಲಿಸಲಾಗಿದೆ. ಉತ್ಪನ್ನದ ಹೆಸರನ್ನು ಬದಲಿಸಲಾಗುವುದು. ಆದರೆ ಮಾರುಕಟ್ಟೆಯಲ್ಲಿ ಹಾಲಿ ಇರುವ ಉತ್ಪನ್ನಗಳ ಮಾರಾಟ ಮುಂದುವರೆಸಲು ಅನುಮತಿಸಬೇಕು ಎಂದು ಕಂಪೆನಿ ಪರ ವಕೀಲರು ಕೋರಿದ್ದರು. ಎಫ್‌ಎಸ್‌ಎಸ್‌ಎಐ ಪರ ವಕೀಲರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಅಂತಿಮವಾಗಿ, ಡಾ. ರೆಡ್ಡೀಸ್ ಲ್ಯಾಬೋರೇಟರೀಸ್ ಉತ್ಪನ್ನದ ಮರುನಾಮಕರಣ ಮತ್ತು ಮಾರುಕಟ್ಟೆಯಲ್ಲಿರುವ ಉತ್ಪನ್ನದ ಮಾರಾಟದ ಕುರಿತು ಎಫ್‌ಎಸ್‌ಎಸ್‌ಎಐಗೆ ಪತ್ರ ಬರೆಯಬಹುದು ಎಂದು ನ್ಯಾಯಾಲಯ ಇಂದು ಹೇಳಿದೆ. ಡಾ. ರೆಡ್ಡೀಸ್ ಅವರ ಮನವಿಯನ್ನು ಪರಿಗಣಿಸಲು ಮತ್ತು ನಿರ್ಧರಿಸಲು ಎಫ್‌ಎಸ್‌ಎಸ್‌ಎಐಗೆ ಕಾಲಮಿತಿ ವಿಧಿಸುವುದಾಗಿ  ನ್ಯಾಯಮೂರ್ತಿ ದತ್ತಾ ಹೇಳಿದರು. ಆದರೆ ಉತ್ಪನ್ನಗಳ ಮಾರಾಟ ಅಥವಾ ತಯಾರಿಕೆಗೆ ಅವಕಾಶ ನೀಡುವ ಯಾವುದೇ ಆದೇಶವನ್ನು ತಾನು ಹೊರಡಿಸುತ್ತಿಲ್ಲ ಎಂದು ನ್ಯಾಯಾಲಯ ತಿಳಿಸಿತು.

Kannada Bar & Bench
kannada.barandbench.com