
ತೀವ್ರ ನಿಗಾ ಘಟಕಗಳು (ಐಸಿಯುಗಳು) ಮತ್ತು ನಿರ್ಣಾಯಕ ಆರೈಕೆ ಸೌಕರ್ಯ ಒದಗಿಸುವಾಗ ರೋಗಿಗಳ ಸುರಕ್ಷತೆಗಾಗಿ ಏಕರೂಪದ ಮಾನದಂಡ ರೂಪಿಸುವಂತೆ ತಾನು ನೀಡಿದ್ದ ನಿರ್ದೇಶನ ಪಾಲಿಸಲು ವಿಫಲವಾದ ಕಾರಣಕ್ಕೆ ಕರ್ನಾಟಕ ಸೇರಿ 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ (ಯುಟಿಗಳು) ಸುಪ್ರೀಂ ಕೋರ್ಟ್ ಶೋಕಾಸ್ ನೋಟಿಸ್ ನೀಡಿದೆ [ಅಸಿತ್ ಬರನ್ ಮಂಡಲ್ ಮತ್ತಿತರರು ಹಾಗೂ ಡಾ. ರೀಟಾ ಸಿನ್ಹಾ ಇನ್ನಿತರರ ನಡುವಣ ಪ್ರಕರಣ] .
ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ನವೆಂಬರ್ 20ರಂದು ನ್ಯಾಯಾಲಯದ ಮುಂದೆ ಶೋಕಾಸ್ ಅಫಿಡವಿಟ್‌ಗಳೊಂದಿಗೆ ಖುದ್ದು ಹಾಜರಿರುವಂತೆ ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಎನ್ ಕೆ ಸಿಂಗ್ ಅವರಿದ್ದ ಪೀಠ ಆದೇಶಿಸಿತು.
ತನ್ನ ನಿರ್ದೇಶನದ ಬಗ್ಗೆ ಅಸಡ್ಡೆಯಿಂದ ವರ್ತಿಸಿದ್ದಕ್ಕಾಗಿ ಕ್ರಮ ಕೈಗೊಳ್ಳಬಾರದೇಕೆ ಎಂದು ವಿವರಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇಲ್ಲವೇ ಇಲಾಖೆಯ ಹಿರಿಯ ಅಧಿಕಾರಿಗೆ ನೋಟಿಸ್ ನೀಡಿ. ಮುಂದಿನ ವಿಚಾರಣೆಯ ದಿನವಾದ 20.11.2025ರಂದು ಅಧಿಕಾರಿಗಳು ಶೋಕಾಸ್ ಅಫಿಡವಿಟ್ ಜೊತೆಗೆ ಖುದ್ದು ಹಾಜರಿರಬೇಕು. ಯಾವುದೇ ನೆಪ ಹೇಳುವಂತಿಲ್ಲ ಎಂದು ನ್ಯಾಯಾಲಯ ತಾಕೀತು ಮಾಡಿತು.
ಕರ್ನಾಟಕ, ಅರುಣಾಚಲ ಪ್ರದೇಶ, ಅಸ್ಸಾಂ, ಛತ್ತೀಸ್‌ಗಢ, ಗೋವಾ, ಗುಜರಾತ್, ಹಿಮಾಚಲ ಪ್ರದೇಶ, ಜಾರ್ಖಂಡ್ , ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮಿಜೋರಾಂ, ಒಡಿಶಾ, ಪಂಜಾಬ್, ರಾಜಸ್ಥಾನ, ಸಿಕ್ಕಿಂ, ತೆಲಂಗಾಣ, ತ್ರಿಪುರ, ಪಶ್ಚಿಮ ಬಂಗಾಳ, ಚಂಡೀಗಢ, ದೆಹಲಿ, ಜಮ್ಮು ಮತ್ತು ಕಾಶ್ಮೀರ, ಪುದುಚೇರಿ, ಲಡಾಖ್, ಲಕ್ಷದ್ವೀಪ, ದಾದ್ರಾ- ನಗರ ಹವೇಲಿ ಮತ್ತು ದಮನ್- ದಿಯು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಇಲಾಖೆ ಮುಖ್ಯಸ್ಥರಿಗೆ ನೋಟಿಸ್ ನೀಡಲಾಗಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ಉಂಟಾಗುವ ವೈದ್ಯಕೀಯ ನಿರ್ಲಕ್ಷ್ಯ ಹಾಗೂ ಐಸಿಯು, ಸಿಸಿಯುಗಳಿಗೆ ಏಕರೂಪದ ಮಾನದಂಡ ಇಲ್ಲದಿರುವ ಬಗ್ಗೆ 2016 ರಲ್ಲಿ ಪ್ರಕರಣ ದಾಖಲಿಸಲಾಗಿತ್ತು ಮೇಲ್ಮನವಿಯನ್ನು 2024 ರಲ್ಲಿ ವಜಾಗೊಳಿಸಲಾಗಿದ್ದರೂ, ಸುಪ್ರೀಂ ಕೋರ್ಟ್ ದೇಶಾದ್ಯಂತ ನಿರ್ಣಾಯಕ ಆರೈಕೆಯನ್ನು ಪ್ರಮಾಣೀಕರಿಸುವ ವಿಸ್ತೃತ ವಿಚಾರದ ಮೇಲ್ವಿಚಾರಣೆ ಮುಂದುವರೆಸಿತ್ತು.
ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿ ಕೆಲಸ ಮಾಡುವಂತೆ ನಿರ್ದೇಶಿಸುವ ವಿವಿಧ ಆದೇಶಗಳನ್ನು ಅಂದಿನಿಂದ ಹೊರಡಿಸುತ್ತಾ ಬಂದಿತ್ತು.
ಆಗಸ್ಟ್ 2025ರಲ್ಲಿ, ರಾಜ್ಯಗಳಿಗೆ ಐಸಿಯು/ಸಿಸಿಯು, ಕೋವಿಡ್ ವೈದ್ಯಕೀಯ ನಿಗಾ, ಸಿಬ್ಬಂದಿ, ಶುಚಿತ್ವ, ಸೌಲಭ್ಯ ಇತ್ಯಾದಿ ಅಂಶಗಳನ್ನು ಒಳಗೊಂಡಂತೆ ಮಾನದಂಡಗಳನ್ನು ರೂಪಿಸಲು ಸೂಚನೆ ನೀಡಲಾಗಿತ್ತು. ಆದರೆ ಹಲವು ರಾಜ್ಯಗಳು ನಿಗದಿತ ಸಮಯದಲ್ಲಿ ವರದಿ ಸಲ್ಲಿಸಿರಲಿಲ್ಲ. ಹೀಗಾಗಿ ನ್ಯಾಯಾಲಯ ಪ್ರಸ್ತುತ ಸಮನ್ಸ್ ಜಾರಿ ಮಾಡಿದೆ.