ಪತಿಯ ನಡವಳಿಕೆ ತಿದ್ದಲು ಪತ್ನಿ ಐಪಿಸಿ ಸೆಕ್ಷನ್ 498ಎ ಅಡಿ ಸುಳ್ಳು ಪ್ರಕರಣ ದಾಖಲಿಸುವುದು ಕ್ರೌರ್ಯ: ಬಾಂಬೆ ಹೈಕೋರ್ಟ್

ಇಂತಹ ಕ್ರಮಗಳು ದಾಂಪತ್ಯದಲ್ಲಿ ಸಾಮರಸ್ಯ ಮತ್ತು ನಂಬಿಕೆಗೆ ಭಂಗ ತರುವುದಲ್ಲದೆ, ದಾಂಪತ್ಯವನ್ನು ಮುಂದುವರಿಸಲು ಅಸಾಧ್ಯವಾಗುವಂತೆ ಅದರ ಮೂಲ ಮೌಲ್ಯಗಳನ್ನು ಕುಗ್ಗಿಸುತ್ತವೆ ಎಂದು ನ್ಯಾಯಾಲಯ ಹೇಳಿದೆ.
Bombay High Court
Bombay High Court
Published on

ಐಪಿಸಿ ಸೆಕ್ಷನ್ 498 ಎ ಅಡಿಯಲ್ಲಿ ಗಂಡನ ನಡವಳಿಕೆ ಸರಿಪಡಿಸುವ ಸಲುವಾಗಿ ಆತನ ವಿರುದ್ಧ ಸುಳ್ಳು ಕ್ರಿಮಿನಲ್‌ ದೂರು ದಾಖಲಿಸಿದರೆ ಅದು ಹಿಂದೂ ವಿವಾಹ ಕಾಯಿದೆ- 1955ರ ಸೆಕ್ಷನ್ 13(1) (i-ಎ) ಅಡಿಯಲ್ಲಿ ಕ್ರೌರ್ಯ ಎನಿಸಿಕೊಳ್ಳುತ್ತದೆ ಎಂದು ಬಾಂಬೆ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ.  

ಇಂತಹ ಕ್ರಮಗಳು ದಾಂಪತ್ಯದಲ್ಲಿ ಸಾಮರಸ್ಯ ಮತ್ತು ನಂಬಿಕೆಗೆ ಭಂಗ ತರುವುದಲ್ಲದೆ, ದಾಂಪತ್ಯವನ್ನು ಮುಂದುವರಿಸಲು ಅಸಾಧ್ಯವಾಗುವಂತೆ ಅದರ ಮೂಲ ಮೌಲ್ಯಗಳನ್ನು ಕುಗ್ಗಿಸುತ್ತವೆ ಎಂದು ನ್ಯಾಯಮೂರ್ತಿ ಜಿಎಸ್ ಕುಲಕರ್ಣಿ ಮತ್ತು ನ್ಯಾಯಮೂರ್ತಿ ಅದ್ವೈತ್ ಎಂ ಸೇಠ್ನಾ ಅವರಿದ್ದ ಪೀಠ ತಿಳಿಸಿದೆ.

Also Read
ಪತ್ನಿಯ ಅಸಮಂಜಸ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲು ಪತಿ ವಿರುದ್ಧ ಐಪಿಸಿ ಸೆಕ್ಷನ್ 498 ಎ ದುರ್ಬಳಕೆ: ಸುಪ್ರೀಂ ಬೇಸರ

ಪತಿಯ ನಡವಳಿಕೆಯನ್ನು ಸರಿಪಡಿಸಬೇಕು ಎನ್ನುವ ಪತ್ನಿಯ ನಡೆಯಿಂದಾಗಿ ಪತಿ ಮತ್ತು ಅವರ ಕುಟುಂಬದ ಸದಸ್ಯರು ಸುಳ್ಳು ಕ್ರಿಮಿನಲ್ ಮೊಕದ್ದಮೆಗಳ ಗಂಭೀರ ಆರೋಪಗಳ ಅಗ್ನಿಪರೀಕ್ಷೆ  ಎದುರಿಸುತ್ತಿದ್ದಾರೆ. ಇಂತಹ ನಡೆಗೆ ಸಾಮಾನ್ಯವಾಗಿ ದಂಪತಿಗಳು ಹೊಂದಿರುವ ಪರಸ್ಪರ ನಂಬಿಕೆ, ಗೌರವ, ವಾತ್ಸಲ್ಯದ ಸಾಮರಸ್ಯದ ಸಂಬಂಧಗಳಲ್ಲಿ ಸ್ಥಾನ ಇರದು ಎಂಬುದಾಗಿ ನ್ಯಾಯಾಲಯ ಟೀಕಿಸಿದೆ.

ವೈವಾಹಿಕ ಸಂಬಂಧದಲ್ಲಿ ಒಮ್ಮೆ ಒಬ್ಬರು ಮತ್ತೊಬ್ಬರ ವಿರುದ್ಧ ಸುಳ್ಳು ಕ್ರಿಮಿನಲ್‌ ಮೊಕದ್ದಮೆ ಹೂಡಿದರೆ ಆಗ ತಾರ್ಕಿಕತೆ ಮತ್ತು ಸಮರ್ಥನೆ ಇಲ್ಲದಾಗುತ್ತದೆ ಜೊತೆಗೆ ವಿವಾಹದ ಸಂಬಂಧ ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ ಎಂದು ಪೀಠ ಹೇಳಿದೆ.

ಸಂಗಾತಿಯ ವಿರುದ್ಧ ಸುಳ್ಳು ಮೊಕದ್ದಮೆ ಹೂಡಲು ಮತ್ತೊಬ್ಬ ಸಂಗಾತಿಯ ಮನಸ್ಸು ಭ್ರಷ್ಟಗೊಂಡರೆ ಆಗ ತನ್ನವಿವಾಹದ ಗಾಂಭೀರ್ಯ ಕಾಪಾಡಿಕೊಳ್ಳುವ ಎಲ್ಲಾ ಸಕಾರಣ ಮತ್ತು ತಾರ್ಕಿಕತೆ ಕಳೆದುಕೊಂಡಂತೆಯೇ ಸರಿ. ಸುಳ್ಳು ಮತ್ತು ಕರಾಳ ವಿಧಾನದಿಂದ ಸಂಗಾತಿಯನ್ನು ಮಣಿಸುವುದು ಕ್ರೌರ್ಯವಾಗಿದ್ದು ವಿಚ್ಛೇದನ ನೀಡಲು ಆಧಾರವಾಗುತ್ತದೆ ಎಂದು ನ್ಯಾಯಾಲಯ ವಿವರಿಸಿದೆ.

ಮಾರ್ಚ್ 2006 ರಲ್ಲಿ ವಿವಾಹವಾಗಿದ್ದ ದಂಪತಿ ಮದುವೆಯಾದ ಕೆಲ ತಿಂಗಳಲ್ಲೇ ದೂರವಾಗಿದ್ದರು. ಐಪಿಸಿ ಸೆಕ್ಷನ್‌ 498 ಎ (ಕೌಟುಂಬಿಕ ದೌರ್ಜನ್ಯ ಕಾಯಿದೆ) ಅಡಿ ತನ್ನ ಮೇಲೆ ಕ್ರೌರ್ಯ ಎಸಗಲಾಗಿದೆ ಎಂಬ ದೂರನ್ನು ಪತಿಯ ವಿರುದ್ಧ ಪತ್ನಿ ದಾಖಲಿಸಿದ್ದರು. ಆದರೆ ಆಕೆಯ ಅರ್ಜಿಯನ್ನು ವಿಚಾರಣಾ ಮತ್ತು ಮೇಲ್ಮನವಿ ನ್ಯಾಯಾಲಯಗಳು ವಜಾಗೊಳಿಸಿದ್ದವು. ಪತಿಯನ್ನು ಪ್ರಕರಣದಲ್ಲಿ ಖುಲಾಸೆಗೊಳಿಸಿದರೂ ಆಕೆ ಹೈಕೋರ್ಟ್‌ ಕದ ತಟ್ಟಿದ್ದರು.

ಆದರೆ ಮೇಲ್ಮನವಿ ಕುರಿತು ಪತಿಗೆ ಯಾವುದೇ ನೋಟಿಸ್‌ ನೀಡದೆ, ಪ್ರಕರಣದ ವಿವರ ಮತ್ತು ಸಂಖ್ಯೆಯನ್ನು ಒದಗಿಸದೆ ಮೇಲ್ಮನವಿ ಸಲ್ಲಿಸುವುದನ್ನು ಆಕೆ ಮುಂದುವರೆಸಿದ್ದನ್ನು ಕೌಟುಂಬಿಕ ನ್ಯಾಯಾಲಯ ಗಮನಿಸಿತ್ತು. ಹೆಂಡತಿ ತನ್ನ ಪ್ರಕರಣ ಮುಂದುವರಿಸಿದ್ದರಿಂದ ಜೊತೆಗೆ ಗಂಡನೊಟ್ಟಿಗೆ ಸಂಬಂಧ ಮುಂದುವರೆಸಲು ಆಸಕ್ತಿ ಇರಿಸಿಕೊಳ್ಳದ ಕಾರಣ ಕೌಟುಂಬಿಕ ನ್ಯಾಯಾಲಯ ದಂಪತಿಗೆ ವಿಚ್ಚೇದನ ನೀಡುವುದು ಸೂಕ್ತವೆಂದು ಪರಿಗಣಿಸಿತ್ತು.

Also Read
ಕಾನೂನಿ ಲೇಪನ ಇರುವ ವೈವಾಹಿಕ ಮಹಿಳೆಯರಿಗೂ ಐಪಿಸಿ ಸೆಕ್ಷನ್ 498 ಎ ಅಡಿ ರಕ್ಷಣೆ: ಕೇರಳ ಹೈಕೋರ್ಟ್

ಮಾರ್ಚ್ 2018ರಲ್ಲಿ ವಿಚ್ಛೇದನ ನೀಡಿದ ಕೌಟುಂಬಿಕ ನ್ಯಾಯಾಲಯ ವಿವಾಹ ವಿಸರ್ಜಿಸಲು ಪತ್ನಿಯ ಸುಳ್ಳು ಮೊಕದ್ದಮೆ ಕಾರಣ ಎಂದು ತಿಳಿಸಿತ್ತು. ಪತಿಗೆ ನ್ಯಾಯಾಲಯದಲ್ಲಿ ಶಿಕ್ಷೆ ಕೊಡಿಸುವುದು ತನ್ನ ಉದ್ದೇಶವಾಗಿರಲಿಲ್ಲ ಬದಲಿಗೆ ಆತನ ನಡವಳಿಕೆ ತಿದ್ದುವ ಉದ್ದೇಶದಿಂದ ದೂರು ಸಲ್ಲಿಸಿದ್ದಾಗಿ ಆಕೆ ಒಪ್ಪಿಕೊಂಡಿರವುದನ್ನು ಅದು ಪ್ರಸ್ತಾಪಿಸಿತ್ತು. ಆಕೆಯ ನಡೆ ಕಾನೂನು ಕ್ರಮದ ದುರುಪಯೋಗವಾಗುತ್ತದೆ ಎಂದು ಕೌಟುಂಬಿಕ ನ್ಯಾಯಾಲಯ ತಿಳಿಸಿತ್ತು.

ಈ ತೀರ್ಪನ್ನು ಎತ್ತಿಹಿಡಿದಿರುವ ಬಾಂಬೆ ಹೈಕೋರ್ಟ್‌ ಪತ್ನಿಯ ಕ್ರಮಗಳು ಕ್ರೌರ್ಯಕ್ಕೆ ಸಮ ಎಂದಿದೆ. ಕೌಟುಂಬಿಕ ನ್ಯಾಯಾಲಯ ನೀಡಿರುವ ಆದೇಶದಲ್ಲಿ ಯಾವುದೇ ಲೋಪ ಇಲ್ಲ ಎಂದು ಅದು ಹೇಳಿದೆ.

Kannada Bar & Bench
kannada.barandbench.com