ರೈತರ ಹೋರಾಟ: ಪಂಜಾಬ್‌ ವಿವಿ ವಿದ್ಯಾರ್ಥಿಗಳ ಪತ್ರ ಆಧರಿಸಿ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡ ಸುಪ್ರೀಂ ಕೋರ್ಟ್‌

ಕೃಷಿ ಕಾಯಿದೆಗಳನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ಮತ್ತು ಅರೆಸೇನಾ ಪಡೆಗಳು ದಾಳಿ ಮಾಡಿವೆ ಎಂಬ ಆರೋಪ ಪರಿಶೀಲಿಸಲು ಸುಪ್ರೀಂ ಕೋರ್ಟ್‌ನಿಂದ ಸ್ವಯಂ ಪ್ರೇರಿತ ದೂರು ದಾಖಲು.
Farmers Protest
Farmers Protest
Published on

ಕೇಂದ್ರ ಸರ್ಕಾರವು ಈಚೆಗೆ ಜಾರಿಗೊಳಿಸಿರುವ ಕೃಷಿ ಕಾಯಿದೆಗಳನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ಮತ್ತು ಅರೆಸೇನಾ ಪಡೆಗಳು ದಾಳಿ ಮಾಡಿವೆ ಎಂಬ ಆರೋಪ ಪರಿಶೀಲಿಸಲು ಸುಪ್ರೀಂ ಕೋರ್ಟ್‌ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ.

ರೈತರ ಸಮಸ್ಯೆಗಳನ್ನು ಉಲ್ಲೇಖಿಸಿ ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶಿಸಬೇಕು ಎಂದು ಕೋರಿ ಪಂಜಾಬ್‌ ವಿಶ್ವವಿದ್ಯಾಲಯದ ಮಾನವ ಹಕ್ಕುಗಳು ಮತ್ತು ಕರ್ತವ್ಯಗಳ ಕೇಂದ್ರದ ವಿದ್ಯಾರ್ಥಿಗಳು ಬರೆದಿದ್ದ ಬಹಿರಂಗ ಪತ್ರ ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತಮ್ಮ ಸ್ವಂತ ರಾಜ್ಯಗಳಲ್ಲಿ ಎರಡು ತಿಂಗಳು ಸತತವಾಗಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರೂ ಯಾವುದೇ ಫಲ ದೊರೆಯದಿದ್ದಾಗ ರೈತರು ದೆಹಲಿಗೆ ಪ್ರತಿಭಟನೆ ಹೊರಟಿದ್ದಾರೆ. ಆದರೆ, ಅವರ ಮೇಲೆ ದೆಹಲಿಯ ಗಡಿಗಳಲ್ಲಿ ಅವರನ್ನು ದುಂಡಾವರ್ತನೆ ಎಸಗಲಾಗಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ರೈತರ ಸಮಸ್ಯೆಗಳನ್ನು ಭಿತ್ತಿರಿಸುವುದಕ್ಕೆ ಬದಲಾಗಿ ಪ್ರತಿಭಟನಾನಿರತರನ್ನು ಪ್ರತ್ಯೇಕತಾವಾದಿಗಳು ಎಂದು ಬಿಂಬಿಸುವ ಕೆಲಸವನ್ನು ಪಕ್ಷಪಾತಿ ಮಾಧ್ಯಮಗಳು ಮತ್ತು ಸರ್ಕಾರ ಮಾಡುತ್ತಿವೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

“ಈ ಭೀಕರ ಸಮಸ್ಯೆಯನ್ನು ಎತ್ತು ತೋರುವುದಕ್ಕೆ ಬದಲಾಗಿ ಸರ್ಕಾರ ಮತ್ತು ಆತ್ಮಸಾಕ್ಷಿಯಿಲ್ಲದ ಪಕ್ಷಪಾತಿ ಮಾಧ್ಯಮ ಸಂಸ್ಥೆಗಳು ಶಾಂತಿಯುತವಾದ ಆಂದೋಲವನ್ನು ಪ್ರತ್ಯೇಕತಾವಾದಿ ಹೋರಾಟದ ಜೊತೆ ತಳುಕು ಹಾಕುತ್ತಿವೆ. ಅರೆಸೇನಾ ಪಡೆಗಳಿಂದ ಹೊಡೆತ ತಿಂದು, ದೇಹದಲ್ಲಾದ ಗಾಯಗಳನ್ನು ಹೊತ್ತುಕೊಂಡ ನಂತರವೂ, ಭಾರತದ ರೈತರು ಕೋಮು ಭಾವನೆ ರಹಿತ ಲಂಗರ್‌ಗಳ (ದಾಸೋಹ ಕೇಂದ್ರ) ಮೂಲಕ ಭದ್ರತಾ ಪಡೆಯ ಸಿಬ್ಬಂದಿಗೆ ಊಟ-ಉಪಾಹಾರ ನೀಡುತ್ತಿದ್ದಾರೆ,” ಎಂದು ವಿದ್ಯಾರ್ಥಿಗಳು ಪತ್ರದಲ್ಲಿ ವಿವರಿಸಿದ್ದಾರೆ.

ರೈತರ ಮೇಲೆ ಹರಿಯಾಣ ಪೊಲೀಸರು ಜಲ ಫಿರಂಗಿಗಳು, ಅಶ್ರುವಾಯು ಮತ್ತು ಲಾಠಿ ದಾಳಿ ನಡೆಸಿರುವುದರ ಬಗ್ಗೆ ತನಿಖೆ ನಡೆಸಬೇಕು ಎಂದು ಪತ್ರದಲ್ಲಿ ವಿವರಿಸಲಾಗಿದೆ. ರಾಜಕೀಯ ಪ್ರೇರಿತವಾಗಿ ರೈತರ ವಿರುದ್ಧ ದೂರು ದಾಖಲಿಸಲಾಗಿದ್ದು, ಅವುಗಳನ್ನು ಹಿಂಪಡೆಯುವಂತೆ ಹರಿಯಾಣ ಮತ್ತು ದೆಹಲಿ ಪೊಲೀಸರಿಗೆ ಸೂಚಿಸುವಂತೆ ಮನವಿ ಮಾಡಲಾಗಿದೆ. ಹೋರಾಟವನ್ನು ತಪ್ಪಾಗಿ ವರದಿ ಮಾಡಿರುವ ಮತ್ತು ಧ್ರುವೀಕರಣಗೊಳಿಸುವ ಪ್ರಯತ್ನದಲ್ಲಿ ತೊಡಗಿರುವ ಟಿವಿ ಚಾನೆಲ್‌ಗಳ ವಿರುದ್ಧ ಕ್ರಮಕೈಗೊಳ್ಳುವಂತೆಯೂ ಕೋರಿಕೆ ಸಲ್ಲಿಸಲಾಗಿದೆ.

ಪ್ರತಿಭಟನಾ ಸ್ಥಳದಿಂದ ರೈತರನ್ನು ತೆರವುಗೊಳಿಸುವುದರಿಂದ ಸಂಚಾರದ ಸಮಸ್ಯೆ ಪರಿಹಾರವಾಗಲಿದ್ದು, ಸಾರ್ವಜನಿಕರಿಗೆ ಆಗುತ್ತಿರುವ ಅನನುಕೂಲ ತಪ್ಪಿಸಬಹುದು ಎಂಬ ಮನವಿಯು ಈಗಾಗಲೇ ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿದೆ.

Also Read
ಕೃಷಿ ಕಾಯಿದೆಗಳ ವಿರುದ್ಧ ‘ಸುಪ್ರೀಂ’ ಮೊರೆಹೋದ ಮತ್ತೊಬ್ಬ ಸಂಸದ: ಸಂಪೂರ್ಣ ಅಸಾಂವಿಧಾನಿಕ ಎಂದ ಡಿಎಂಕೆಯ ತಿರುಚ್ಚಿ ಶಿವ

“ಪ್ರತಿಭಟಿಸುವ ಹಕ್ಕು ಮೂಲಭೂತ ಹಕ್ಕಿನ ಭಾಗ. ವಾಸ್ತವದಲ್ಲಿ ಅದು ಸಾರ್ವಜನಿಕ ಸುವ್ಯವಸ್ಥೆಗೆ ಒಳಪಟ್ಟಿರುತ್ತದೆ. ಈ ಹಂತದಲ್ಲಿ ಪ್ರತಿಭಟನೆಯನ್ನು ಯಾವುದೇ ಅಡೆತಡೆಯಿಲ್ಲದೆ ಮತ್ತು ಯಾವುದೇ ಶಾಂತಿಗೆ ಭಂಗ ತರದೇ ಪ್ರತಿಭಟನಾಕಾರರು ನಡೆಸಬಹುದಾಗಿದ್ದು, ಪೊಲೀಸರು ಅದಕ್ಕೆ ಸಹಕಾರ ಮುಂದುವರಿಸಬೇಕು,” ಎಂದು ನ್ಯಾಯಾಲಯ ಹಿಂದೆ ಹೇಳಿತ್ತು.

ಕೃಷಿ ಕ್ಷೇತ್ರದಲ್ಲಿನ ತಜ್ಞರು ಮತ್ತು ಸ್ವತಂತ್ರ ವ್ಯಕ್ತಿಗಳನ್ನು ಒಳಗೊಂಡ ಸಮಿತಿ ರಚಿಸುವ ಮೂಲಕ ಕೇಂದ್ರ ಸರ್ಕಾರ ಹಾಗೂ ರೈತರ ನಡುವಿನ ಬಿಕ್ಕಟ್ಟಿಗೆ ಪರಿಹಾರ ಹುಡುಕುವ ಪ್ರಯತ್ನ ಮಾಡುವುದಾಗಿ ನ್ಯಾಯಾಲಯ ಹೇಳಿತ್ತು.

Kannada Bar & Bench
kannada.barandbench.com