ಧರ್ಮವನ್ನು ಅಣಕಿಸುವ ಸಿನಿಮಾಗೆ ಜಾತ್ಯತೀತ ಸಮಾಜದಲ್ಲಿ ಆಸ್ಪದ ಇರದು: ಮಾಸೂಮ್ ಕಾತಿಲ್ ಬಗ್ಗೆ ದೆಹಲಿ ಹೈಕೋರ್ಟ್ ತೀರ್ಪು

ಮಾಸೂಮ್ ಕಾತಿಲ್ ಹೆಸರಿನ ಚಲನಚಿತ್ರಕ್ಕೆ ಪ್ರಮಾಣಪತ್ರ ನೀಡದ ಸಿಬಿಎಫ್‌ಸಿ ನಿಲುವು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತು.
ಮಾಸೂಮ್ ಕಾತಿಲ್, ದೆಹಲಿ ಹೈಕೋರ್ಟ್
ಮಾಸೂಮ್ ಕಾತಿಲ್, ದೆಹಲಿ ಹೈಕೋರ್ಟ್
Published on

ಧರ್ಮಗಳನ್ನು ಅಪಹಾಸ್ಯ ಮಾಡುವ, ದ್ವೇಷ  ಪ್ರಚೋದಿಸುವ ಅಥವಾ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವ ಚಲನಚಿತ್ರವನ್ನು ವೈವಿಧ್ಯಮಯ ಮತ್ತು ಜಾತ್ಯತೀತ ಸಮಾಜದಲ್ಲಿ ಸಾರ್ವಜನಿಕ ವೀಕ್ಷಣೆಗಾಗಿ ಅನುಮತಿಸಲಾಗದು ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ಶ್ಯಾಮ್ ಭಾರ್ತಿ ಮತ್ತು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ದೆಹಲಿ ಪ್ರಾದೇಶಿಕ ಅಧಿಕಾರಿ ಇನ್ನಿತರರ ನಡುವಣ ಪ್ರಕರಣ] .

ಸಾರ್ವಜನಿಕ ಪ್ರದರ್ಶನಕ್ಕಾಗಿ ಚಲನಚಿತ್ರ ಪ್ರಮಾಣೀಕರಣ ನಿಯಮಾವಳಿ - 1991ರ ಪ್ರಕಾರ, ಚಲನಚಿತ್ರಗಳಲ್ಲಿ ಸಮುದಾಯಗಳನ್ನು ಅವಮಾನಿಸುವ, ಧರ್ಮಗಳ ಬಗ್ಗೆ ಅವಹೇಳನ ಮಾಡುವ ಮತ್ತು ಜಾತಿ ಆಧಾರಿತ ಅಥವಾ ಕೋಮುಭಾವನೆ ಕೆರಳಿಸುವ ಹೇಳಿಕೆಗಳನ್ನು ನಿಷೇಧಿಸಲಾಗಿದೆ ಎಂದು  ನ್ಯಾಯಮೂರ್ತಿ ಮನ್‌ಮೀತ್‌ ಪ್ರೀತಮ್ ಸಿಂಗ್ ಅರೋರಾ ಹೇಳಿದರು.

Also Read
ಆದಿತ್ಯನಾಥ್‌ ಕುರಿತ ಚಿತ್ರ: ಯಾವುದೇ ಬದಲಾವಣೆ ಇಲ್ಲದೆ 'ಅಜಯ್' ಸಿನಿಮಾ ಬಿಡುಗಡೆ ಮಾಡಲು ಬಾಂಬೆ ಹೈಕೋರ್ಟ್ ಅನುಮತಿ

ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ತಮ್ಮ ಹಿಂದಿ ಚಿತ್ರ 'ಮಾಸೂಮ್ ಕಾತಿಲ್'ಗೆ ಪ್ರಮಾಣಪತ್ರ ನೀಡದೆ ಇರುವುದನ್ನು ಪ್ರಶ್ನಿಸಿ ಚಿತ್ರ ನಿರ್ಮಾಪಕ ಶ್ಯಾಮ್ ಭಾರ್ತಿ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಅರೋರಾ ಈ ಅಭಿಪ್ರಾಯ ವ್ಯಕ್ತಪಡಿಸಿದರು.

‌ಸಾಂಪ್ರದಾಯಿಕ ಕುಟುಂಬದಿಂದ ಬಂದ ಬಾಲಕನೊಬ್ಬ 12ನೇ ತರಗತಿ ಅಧ್ಯಯನ ಮಾಡುತ್ತಿದ್ದಾಗ ಪ್ರಾಣಿಹತ್ಯೆಯಲ್ಲಿ ತೊಡಗಿರುವ ಕಟುಕರನ್ನು ಕೊಲ್ಲಲು ರಸಾಯನಿಕ ಕಂಡುಹಿಡಿಯುತ್ತಾನೆ. ನಂತರ ಗೆಳತಿಯೊಡನೆ ಸೇರಿ ಅವರ ಹತ್ಯೆಗೆ ಮುಂದಾಗುತ್ತಾರೆ. ಆತನ ಗೆಳತಿ ವೇದಿಕಾ ದೇಶಾದ್ಯಂತ ಕಸಾಯಿಖಾನೆಗಳು ಮತ್ತು ಕೋಳಿ ಸಾಕಣೆದಾರರನ್ನು ನಿರ್ಮೂಲನೆ ಮಾಡುವ ಕಾರ್ಯಾಚರಣೆ ಮುನ್ನಡೆಸುತ್ತಾಳೆ.

ವಿಚಕ್ಷಣೆಯನ್ನಷ್ಟೇ ವೈಭವೀಕರಿಸದ ಚಿತ್ರದಲ್ಲಿ, ಭೀಕರ ಹಿಂಸೆ, ನರಭಕ್ಷಣೆ, ಕೋಮು ಉದ್ವಿಗ್ನತೆ ಪ್ರಚೋದಿಸುವ ದೃಶ್ಯಗಳೂ ಇವೆ. ಅಶ್ಲೀಲ ಪದ ಬಳಕೆ, ಪ್ರಾಣಿ ಹಿಂಸೆ, ಮನುಷ್ಯರ ನಡುವಿನ ಹಿಂಸಾಚಾರದ ಜೊತೆಗೆ ಅಪರಾಧ ಕೃತ್ಯಗಳಲ್ಲಿ ಅಪ್ರಾಪ್ತ ವಯಸ್ಸಿನವರ ಬಳಕೆ ಮಾಡಲಾಗಿದೆ ಎಂಬ ಕಾರಣಕ್ಕೆ ಚಿತ್ರವನ್ನು ಸಿಬಿಎಫ್‌ಸಿಯ ದೆಹಲಿ ಪರಿಶೀಲನಾ ಸಮಿತಿ ಮತ್ತು ಮುಂಬೈನ ಪರಿಷ್ಕರಣಾ ಸಮಿತಿ ಸರ್ವಾನುಮತದಿಂದ ತಿರಸ್ಕರಿಸಿದ್ದವು.  

ಈ ನಿರ್ಧಾರವನ್ನು ಎತ್ತಿ ಹಿಡಿದಿರುವ ದೆಹಲಿ ಹೈಕೋರ್ಟ್‌ ಯೂಟ್ಯೂಬ್‌ನಲ್ಲಿ ಟ್ರೇಲರ್‌ ವೀಕ್ಷಿಸಿದ ಬಳಿಕ ಚಿತ್ರದಲ್ಲಿ ಘೋರ ಹಿಂಸೆ ಇರುವುದರಿಂದ ಚಿತ್ರ ವೀಕ್ಷಣೆ ಕಷ್ಟವಾಗುತ್ತಿದೆ ಎಂದು ಅಭಿಪ್ರಾಯಪಟ್ಟಿತು.

Also Read
ಉದಯಪುರ ಫೈಲ್ಸ್ ಸಿನಿಮಾ ಅಪರಾಧಕ್ಕೆ ಸಂಬಂಧಿಸಿದ್ದಾಗಿದೆ; ಯಾವುದೇ ಸಮುದಾಯದ ವಿರುದ್ಧ ಇಲ್ಲ: ಕೇಂದ್ರ

ಸಿನಿಮಾದ ಪ್ರಮುಖ ಪಾತ್ರಧಾರಿಗಳು ಶಾಲಾ ಮಕ್ಕಳಾಗಿದ್ದು, ಅವರು ಹಿಂಸೆ, ಕಾನೂನು ಉಲ್ಲಂಘನೆ ಮತ್ತು ಸಮಾಜ ವಿರೋಧಿ ಕ್ರಿಯೆಗಳಲ್ಲಿ ತೊಡಗಿಸಿಕೊಂಡಂತೆ ಚಿತ್ರಿಸಲಾಗಿದೆ. ಚಿತ್ರದಲ್ಲಿ ಇಂತಹ ತಪ್ಪು ವರ್ತನೆಗಳನ್ನು ಖಂಡಿಸಿಲ್ಲ ಅಥವಾ ಸರಿಪಡಿಸುವುದೂ ಇಲ್ಲ. ಇದರಿಂದ ಯುವ ವೀಕ್ಷಕರ ನೈತಿಕತೆ ಮುಕ್ಕಾಗುವ ಅಪಾಯವಿದೆ, ಮಕ್ಕಳು ತಪ್ಪು ಕೆಲಸ ಎಸಗಲು ಇಂಬು ನೀಡುತ್ತದೆ ಎಂದು ಅದು ಹೇಳಿತು.

ಕಾನೂನು ಪಾಲಿಸುವ ಕಾನೂನು ಕೈಗೆತ್ತಿಕೊಳ್ಳುವುದೇ ಸರಿ ಎಂದು ಚಿತ್ರ ಬಿಂಬಿಸಿದರೆ ಜನ ಕಾನೂನು ವ್ಯವಸ್ಥೆಯಲ್ಲಿ ನಂಬಿಕೆ ಕಳೆದುಕೊಳ್ಳುತ್ತಾರೆ ಎಂದ ಅದು ಹತ್ಯೆ ನರಭಕ್ಷಣೆಯಂತಹ ದೃಶ್ಯಗಳು ಜನರಲ್ಲಿ ಹಿಂಸೆಗೆ ಪ್ರೇರೇಪಿಸಿ ಸಾರ್ವಜನಿಕ ಶಾಂತಿಗೆ ಭಂಗ ಉಂಟು ಮಾಡುತ್ತವೆ ಎಂದಿತು.

Kannada Bar & Bench
kannada.barandbench.com