ನಾವು ಮನುಷ್ಯತ್ವದ ಎಲ್ಲಾ ಸ್ಪರ್ಶ ಕಳೆದುಕೊಂಡಿದ್ದೇವೆಯೇ? ಸ್ಟ್ಯಾನ್ ಸ್ವಾಮಿ ಸಾವು ಕುರಿತಂತೆ ನ್ಯಾ. ದೀಪಕ್ ಗುಪ್ತಾ

ಯುಎಪಿಎ ದುರುಪಯೋಗಪಡಿಸಿಕೊಳ್ಳುತ್ತಿರುವುದರಿಂದ ಬಹಳಷ್ಟು ಜನರನ್ನು ಸೆರೆಹಿಡಿಯಲಾಗುತ್ತಿದ್ದು ಕಾನೂನು ಈಗಿನ ರೂಪದಲ್ಲಿ ಅಸಾಂವಿಧಾನಿಕವಾಗಿದೆ ಎಂದು ಅವರು ಹೇಳಿದರು.
Justice Deepak Gupta
Justice Deepak Gupta
Published on

ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆಯಡಿ (ಯುಎಪಿಎ) 84 ವರ್ಷದ ಆದಿವಾಸಿಗಳ ಪರ ಹೋರಾಟಗಾರ ಫಾದರ್ ಸ್ಟ್ಯಾನ್ ಸ್ವಾಮಿ ಅವರನ್ನು ಜೈಲಿನಲ್ಲಿರಿಸಿದ ಬಗ್ಗೆ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ದೀಪಕ್ ಗುಪ್ತಾ ಶನಿವಾರ ಆಕ್ರೋಶ ವ್ಯಕ್ತಪಡಿಸಿದರು.

ಯುಎಪಿಎ ದುರುಪಯೋಗಪಡಿಸಿಕೊಳ್ಳುತ್ತಿರುವುದರಿಂದ ಬಹಳಷ್ಟು ಜನರನ್ನು ಸೆರೆಹಿಡಿಯಲಾಗುತ್ತಿದ್ದು ಕಾನೂನು ಈಗಿನ ರೂಪದಲ್ಲಿ ಅಸಾಂವಿಧಾನಿಕವಾಗಿದೆ ಎಂದು ಅವರು ಹೇಳಿದರು.

Also Read
ಜಾಮೀನು ನೀಡುವ ನ್ಯಾಯಾಲಯಗಳ ಪಾತ್ರವನ್ನು ಯುಎಪಿಎ ಕಾಯಿದೆ ನಿರ್ಬಂಧಿಸುತ್ತದೆ: ನ್ಯಾ. ಗೋಪಾಲಗೌಡ

“ಫಾದರ್ ಸ್ಟಾನ್ ಸ್ವಾಮಿ, 84 ವರ್ಷ, ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದರು. ಅಂದರೆ ನಾವು ಮನುಷ್ಯರಲ್ಲವೇ, ನಾವು ಮನುಷ್ಯತ್ವದ ಎಲ್ಲಾ ಸ್ಪರ್ಶ ಕಳೆದುಕೊಂಡಿದ್ದೇವೆಯೇ? (ಯುಎಪಿಎ ಕಾಯಿದೆಯ) 43 ಡಿ ಅಥವಾ 43 ಇ (ಅನ್ವಯವಾಗುವಂತೆ) ಇದ್ದರೆ ಈ ವ್ಯಕ್ತಿಗೆ ಜಾಮೀನು ನೀಡಬೇಕು. ಅಲ್ಲಿ ಈ ಜನರಿಗೆ ಜಾಮೀನು ನೀಡಲು ಉನ್ನತ ನ್ಯಾಯಾಲಯದ ಅಧಿಕಾರ ಬಳಕೆಯಾಗಬೇಕು” ಎಂದು ಅವರು ಹೇಳಿದರು.

"ಯುಎಪಿಎ: ಪ್ರಜಾಪ್ರಭುತ್ವ, ಅಭಿಪ್ರಾಯಭೇದ ಮತ್ತು ನಿರ್ದಯ ಕಾನೂನುಗಳು" ಎಂಬ ವಿಷಯದ ಕುರಿತು ‘ಕ್ಯಾಂಪೇನ್‌ ಫಾರ್‌ ಜುಡಿಷಿಯಲ್‌ ಅಕೌಂಟಬಿಲಿಟಿ ಅಂಡ್‌ ರಿಫಾರ್ಮ್ಸ್‌’ ಸಂಘಟನೆ ಆಯೋಜಿಸಿದ್ದ ಸಾರ್ವಜನಿಕ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜೈಲಿನಲ್ಲಿ ಸೂಕ್ತ ಚಿಕಿತ್ಸೆ ಪಡೆಯುತ್ತಿರುವುದು ತಿಳಿದಿದ್ದೂ ಬಾಂಬೆ ಹೈಕೋರ್ಟ್‌ ಸ್ಟ್ಯಾನ್‌ ಸ್ವಾಮಿ ಅವರನ್ನು ಜೈಲಿನಲ್ಲಿರಿಸಲು ಯಾವುದೇ ಕಾರಣವಿರಲಿಲ್ಲ ಎಂದ ನಿವೃತ್ತ ನ್ಯಾಯಮೂರ್ತಿಗಳು “ಜೈಲಿನ ಉದ್ದೇಶವೇನು- ವ್ಯಕ್ತಿಯೊಬ್ಬ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು, ಕಾನೂನಿನಿಂದ ಪಲಾಯನ ಮಾಡಬಾರದು, ತನಿಖೆಗೆ ಲಭ್ಯವಿರಬೇಕು ಎಂಬುದಾಗಿರುತ್ತದೆ. ಫಾದರ್ ಸ್ಟಾನ್ ಸ್ವಾಮಿ ಅಥವಾ ಅವರಂತಹ ಇತರರಿಗೆ ಜಾಮೀನು ನೀಡುವಾಗ ಅಂತಹ ನಿರ್ಬಂಧಗಳನ್ನು ಹೇರಲು ನ್ಯಾಯಾಲಯಕ್ಕೆ ಸಾಕಷ್ಟು ಅಧಿಕಾರವಿತ್ತು” ಎಂದು ಅಭಿಪ್ರಾಯಪಟ್ಟರು.

ಯುಎಪಿಎ ಕಾಯಿದೆಯಡಿ ಉತ್ತರಪ್ರದೇಶ ಸರ್ಕಾರದಿಂದ ಬಂಧಿತರಾಗಿ ಪ್ರಸ್ತುತ ಮಥುರಾ ಜೈಲಿನಲ್ಲಿರುವ ಕೇರಳದ ಪತ್ರಕರ್ತ ಸಿದ್ದೀಕ್ ಕಪ್ಪನ್, ಜಹೂರ್ ಅಹ್ಮದ್ ಷಾ ವಟಾಲಿ ಪ್ರಕರಣ ಸೇರಿದಂತೆ ಅನೇಕ ಉದಾಹರಣೆಗಳನ್ನು ಅವರು ನೀಡಿದರು.

Also Read
ಯುಎಪಿಎ ಕಾಯಿದೆ ರದ್ದುಗೊಳಿಸುವಂತೆ ಕೋರಿ ನಡೆಯುತ್ತಿದೆ ಪತ್ರ ಚಳವಳಿ

“ಇತ್ತೀಚೆಗೆ ನಡೆಯುತ್ತಿರುವುದು ಕಳವಳಕಾರಿಯಾಗಿದೆ. ಮೊಹಮ್ಮದ್ ಲಿಲಿಯಾಸ್ ಮತ್ತು ಮೊಹಮ್ಮದ್ ಇರ್ಫಾನ್ ಅವರನ್ನು 9 ವರ್ಷಗಳ ನಂತರ ಬಿಡುಗಡೆ ಮಾಡಲಾಯಿತು. ಸೂರತ್‌ನಲ್ಲಿ 122 ಜನರು 20 ವರ್ಷಗಳ ನಂತರ ಬಿಡುಗಡೆಯಾಗಿದ್ದಾರೆ. ನತಾಶಾ ನರ್ವಾಲ್ ಜಾಮೀನು ಪಡೆದರು. ಆದರೆ ನತಾಶಾ ಜೈಲಿನಲ್ಲಿದ್ದಾಗಲೇ ಆಕೆಯ ತಂದೆ ನಿಧನರಾದರು. ಅದೇ ರೀತಿ, ಸಿದ್ದೀಕ್ ಕಪ್ಪನ್ ಅವರು ಜೈಲಿನಲ್ಲಿದ್ದಾಗ ಅವರ ತಾಯಿ ನಿಧನರಾದರು” ಎಂದು ಹೇಳಿದರು.

ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸಿಫ್ ಇಕ್ಬಾಲ್ ಸಿನ್ಹಾ, ದೇವಂಗನಾ ಕಲಿತಾ ಮತ್ತು ನತಾಶಾ ನರ್ವಾಲ್ ಅವರಿಗೆ ಜಾಮೀನು ನೀಡಿದ ದೆಹಲಿ ಹೈಕೋರ್ಟ್‌ ತೀರ್ಪನ್ನು ನ್ಯಾಯಮೂರ್ತಿ ಗುಪ್ತಾ ಶ್ಲಾಘಿಸಿದರು. ಅಲ್ಲದೆ ಯುಎಪಿಎ ಕಾಯಿದೆ ಪ್ರಸ್ತುತ ರೂಪದಲ್ಲಿ ಉಳಿಯಬಾರದು. ಭಯೋತ್ಪಾದನೆಯನ್ನು ವಿರೋಧಿಸುವುದು ಮುಖ್ಯವಾದರೂ ಅದನ್ನು ನಿಖರವಾಗಿ ಅರ್ಥೈಸಬೇಕು ಮತ್ತು ದುರುಪಯೋಗಕ್ಕೆ ಅವಕಾಶ ಇಲ್ಲದ ರೀತಿಯಲ್ಲಿ ಕರಡು ರಚಿಸಬೇಕು ಎಂದರು.

Kannada Bar & Bench
kannada.barandbench.com