ನಾಲ್ಕು ವಿಭಾಗವಾಗಿ ಕಸ ವಿಂಗಡಣೆ, ನಿರ್ಲಕ್ಷ್ಯ ತೋರಿದರೆ ಕ್ರಿಮಿನಲ್‌ ದಾವೆ: ಸುಪ್ರೀಂ ಕೋರ್ಟ್‌ ದೇಶವ್ಯಾಪಿ ನಿರ್ದೇಶನ

ಹಸಿ, ಒಣ, ಸ್ಯಾನಿಟರಿ ಮತ್ತು ವಿಶೇಷ ಸಂಸ್ಕರಣೆ ಅಗತ್ಯ ಇರುವ ತ್ಯಾಜ್ಯ ಎಂದು ನಾಲ್ಕು ವಿಭಾಗಗಳಲ್ಲಿ ಬೇರ್ಪಡಿಸಬೇಕು ಅದಕ್ಕೆ ಅಗತ್ಯವಾದ ಮೂಲ ಸೌಕರ್ಯ ರೂಪಿಸಬೇಕು ಎಂದಿದೆ ಪೀಠ.
Garbage, cows
Garbage, cows Image for representative purposes only
Published on

ಏಪ್ರಿಲ್ 1 ರಿಂದ ಜಾರಿಗೆ ಬರಲಿರುವ ಘನ ತ್ಯಾಜ್ಯ ನಿರ್ವಹಣಾ ನಿಯಮಾವಳಿ- 2026 ಅನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಸಂಬಂಧ ಸುಪ್ರೀಂ ಕೋರ್ಟ್‌ ದೇಶವ್ಯಾಪಿ ಅನ್ವಯವಾಗುವಂತಹ ನಿರ್ದೇಶನಗಳನ್ನು ನೀಡಿದೆ. [ಭೋಪಾಲ್‌ ನಗರ ಪಾಲಿಕೆ ಮತ್ತು ಡಾ. ಸುಭಾಷ್ ಸಿ ಪಾಂಡೆ ನಡುವಣ ಪ್ರಕರಣ].

ಫೆಬ್ರವರಿ 19 ರಂದು ಹೊರಡಿಸಿದ ಆದೇಶದಲ್ಲಿ, ನ್ಯಾಯಮೂರ್ತಿ ಪಂಕಜ್ ಮಿತ್ತಲ್‌ ಮತ್ತು ನ್ಯಾಯಮೂರ್ತಿ ಎಸ್‌ವಿಎನ್ ಭಟ್ಟಿ ಅವರಿದ್ದ ಪೀಠ ಈ ಆದೇಶ ನೀಡಿದೆ.

Also Read
ಅತ್ಯಾಚಾರ ಸಂತ್ರಸ್ತೆ ಅಪಹರಣ: ಎಚ್‌ ಡಿ ರೇವಣ್ಣ ಆರೋಪ ನಿಗದಿಗೆ ಅನುಮತಿಸಿದ ಹೈಕೋರ್ಟ್‌; ಮಧ್ಯಂತರ ಆದೇಶ ತೆರವು

ದೇಶದೆಲ್ಲೆಡೆ ನಿಯಮ ಜಾರಿಯಲ್ಲಿ ಕೊರತೆ ಇರುವುದನ್ನು ಪರಿಗಣಿಸಿದ ನ್ಯಾಯಾಲಯ ತ್ಯಾಜ್ಯವನ್ನು ಮೂಲದಲ್ಲಿಯೇ ಹಸಿ, ಒಣ ಹಾಗೂ ಅಪಾಯಕಾರಿ ಎಂದು ವಿಂಗಡಿಸುವುದು ಕಡ್ಡಾಯವಾಗಿದ್ದರೂ ಅನೇಕ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಇದು ಸಂಪೂರ್ಣವಾಗಿ ಅನುಷ್ಠಾನಗೊಂಡಿಲ್ಲ. ಮಹಾನಗರಗಳಲ್ಲಿ ಭಾರೀ ಕಸದ ಗುಡ್ಡಗಳು ಇನ್ನೂ ಕಂಡುಬರುತ್ತಿದೆ. ಸಂಸ್ಕರಿಸದ ಕಸ ಅವೈಜ್ಞಾನಿಕವಾಗಿ ನೆಲ ಸೇರುತ್ತಿದೆ ಎಂದಿತು.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಪ್ರಕಾರ, ದೇಶದಲ್ಲಿ ಪ್ರತಿದಿನ ಸುಮಾರು 1.7 ಲಕ್ಷ ಟನ್ ಘನ ತ್ಯಾಜ್ಯವು ನಗರಗಳ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುತ್ತಿದ್ದು, ಅದರಲ್ಲೂ ಸಂಪೂರ್ಣ ಸಂಸ್ಕರಣೆ ನಡೆಯುತ್ತಿಲ್ಲ. ಸಂಗ್ರಹಣೆ ಸುಧಾರಿಸಿಕೊಂಡಿದ್ದರೂ, ಕಸದ ಸಂಸ್ಕರಣೆ ಪ್ರಮುಖ ಅಡಚಣೆಯಾಗಿದೆ ಎಂದು ಪೀಠ ಹೇಳಿದೆ.

ಶುದ್ಧ ಮತ್ತು ಆರೋಗ್ಯಕರ ಪರಿಸರದ ಹಕ್ಕು ಸಂವಿಧಾನದ ವಿಧಿ 21ರಡಿಯಲ್ಲಿ ಜೀವಿಸುವ ಹಕ್ಕಿನ ಭಾಗ ಎಂದು ಅದು ಸ್ಪಷ್ಟಪಡಿಸಿದೆ.

ಈ ಹಿನ್ನೆಲೆಯಲ್ಲಿ ನಿಯಮಗಳ ಸಮರ್ಪಕ ಅನುಷ್ಠಾನಕ್ಕಾಗಿ ಅದು ವಿವರವಾದ ನಿರ್ದೇಶನಗಳನ್ನು ನೀಡಿದೆ:

  • ಹಸಿ, ಒಣ, ಸ್ಯಾನಿಟರಿ ಹಾಗೂ ವಿಶೇಷ ಸಂಸ್ಕರಣೆ ಅಗತ್ಯವಿರುವ ತ್ಯಾಜ್ಯ ಎಂಬ ನಾಲ್ಕು ವಿಭಾಗಗಳಾಗಿ ಕಸ ವಿಂಗಡಿಸುವುದನ್ನು ಕಡ್ಡಾಯಗೊಳಿಸಬೇಕು. ಅದಕ್ಕಾಗಿ ಅಗತ್ಯ ಮೂಲ ಸೌಕರ್ಯ ಒದಗಿಸಬೇಕು.

  • ಘನ ತ್ಯಾಜ್ಯ ನಿರ್ವಹಣಾ ನಿಯಮಾವಳಿ ಜಾರಿಗಾಗಿ ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ವಿಸ್ತರಿಸಬೇಕು.

  • ನಾಗರಿಕರ ಸಕ್ರಿಯ ಭಾಗವಹಿಸುವಿಕೆಯನ್ನು ಉತ್ತೇಜಿಸಬೇಕು, ಕೌನ್ಸಿಲರ್‌ಗಳು, ಮೇಯರ್‌ಗಳು, ಅಧ್ಯಕ್ಷರು ಈ ಪ್ರಕ್ರಿಯೆಯನ್ನು ಸುಗಮಗೊಳಿಸಬೇಕು

  • ಜಿಲ್ಲಾಧಿಕಾರಿಗಳ ಸೂಕ್ತ ಮೇಲ್ವಿಚಾರಣೆ ನಡೆಸಬೇಕು, ಅನುಪಾಲನೆ ಮಾಡದ ಪ್ರಕರಣಗಳನ್ನು ಕೇಂದ್ರ, ರಾಜ್ಯ ಸರ್ಕಾರಗಳಿಗೆ ವರದಿ ಮಾಡಬೇಕು

  • ನಿಯಮ ಪಾಲನೆ ಮಾಡದ ಅಧಿಕಾರಿಗಳ ವಿರುದ್ಧ ದಂಡ ಹಾಗೂ ಕ್ರಿಮಿನಲ್ ಪ್ರಕರಣ ದಾಖಲಿಸುವ ಕ್ರಮ.

Also Read
ಬೈಕ್‌ ಟ್ಯಾಕ್ಸಿ ಸೇವೆಗೆ ಅನುಮತಿಸಿದ ಹೈಕೋರ್ಟ್‌: ಏಕಸದಸ್ಯ ಪೀಠದ ಆದೇಶ ರದ್ದು, ರಾಜ್ಯ ಸರ್ಕಾರಕ್ಕೆ ಹಿನ್ನಡೆ

ಪರಿಸರ ಸಚಿವಾಲಯ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಿಯಮಗಳು ಜಾರಿಯಾಗುವಂತೆ ನೋಡಿಕೊಳ್ಳಬೇಕು ಹಾಗೂ ಮಹಾನಗರ ಪಾಲಿಕೆಗಳಿಗೆ ಅವುಗಳ ಕಾರ್ಯಕ್ಷಮತೆಯ ಆಧಾರಿಸಿ ರ‍್ಯಾಂಕ್ ನೀಡಬೇಕು ಎಂದು ಅದು ಸೂಚಿಸಿದೆ.

ಈಗ ಈ ಕಾರ್ಯ ಸಾಧ್ಯವಾಗದಿದ್ದರೆ ಇನ್ನೆಂದೂ ಸಾಧ್ಯವಾಗದು ಎಂಬ ಎಚ್ಚರಿಕೆ ನೀಡಿದ ನ್ಯಾಯಾಲಯ ಕಸ ರಹಿತ ಭಾರತದ ನಿರ್ಮಾಣ ಎಲ್ಲ ಹಂತದ ಆಡಳಿತ ಮತ್ತು ನಾಗರಿಕರ ಸಂಯುಕ್ತ ಜವಾಬ್ದಾರಿ ಎಂದಿತು. ಪ್ರಕರಣದ ಮುಂದಿನ ವಿಚಾರಣೆ ಮಾರ್ಚ್ 25, 2026ರಂದು ನಡೆಯಲಿದೆ.

Kannada Bar & Bench
kannada.barandbench.com