ನಕಲಿ ನ್ಯಾಯಾಲಯ ಸೃಷ್ಟಿಸಿದ್ದಲ್ಲದೆ ಸಿಜೆಐ ರೀತಿ ಸೋಗು ಹಾಕಿ ಉದ್ಯಮಿಗೆ ₹7 ಕೋಟಿ ವಂಚನೆ

ರಹಸ್ಯ ಮೇಲ್ವಿಚಾರಣಾ ಖಾತೆಗೆ ₹ 7 ಕೋಟಿ ಕಳುಹಿಸುವಂತೆ ಸೂಚಿಸಿದ್ದ ಸುಪ್ರೀಂ ಕೋರ್ಟ್ ನಕಲಿ ಆದೇಶವನ್ನು ಕೂಡ ವಂಚಕರು ತನಗೆ ಕಳಿಸಿದ್ದರು ಎಂದು ವರ್ಧಮಾನ್ ಸಮೂಹ ಸಂಸ್ಥೆ ಅಧ್ಯಕ್ಷ, ಎಸ್ ಪಿ ಓಸ್ವಾಲ್ ತಿಳಿಸಿದ್ದಾರೆ.
CJI DY Chandrachud (L), Vardhman Group Chairman SP Oswal (R)
CJI DY Chandrachud (L), Vardhman Group Chairman SP Oswal (R)
Published on

ಸೈಬರ್‌ ಅಪರಾಧಿಗಳ ಗುಂಪೊಂದು ನಕಲಿ ವರ್ಚುವಲ್‌ ನ್ಯಾಯಾಲಯ ಸೃಷ್ಟಿಸಿ ಸಿಬಿಐ ಅಧಿಕಾರಿಗಳು ಹಾಗೂ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್‌ ಅವರಂತೆಯೇ ಸೋಗು ಹಾಕಿ ಜವಳಿ ಉದ್ಯಮಿ ಮತ್ತು ವರ್ಧಮಾನ್ ಸಮೂಹ ಸಂಸ್ಥೆ ಅಧ್ಯಕ್ಷ, ಎಸ್ ಪಿ ಓಸ್‌ವಾಲ್‌ ಅವರಿಗೆ ₹ 7 ಕೋಟಿ ವಂಚಿಸಿದೆ.

ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿದ್ದ ಜೆಟ್‌ ಏರ್‌ವೇಸ್‌ ಸಂಸ್ಥಾಪಕ ನರೇಶ್‌ ಗೋಯೆಲ್‌ ಅವರಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಓಸ್‌ವಾಲ್‌ ಅವರು ಶಾಮೀಲಾಗಿದ್ದಾರೆ ಎಂದು ಸಿಬಿಐ ಅಧಿಕಾರಿಗಳ ಸೋಗಿನಲ್ಲಿದ್ದ ವಂಚಕರು ಆರೋಪಿಸಿರುವುದು ವರದಿಯಾಗಿದೆ.

Also Read
ಸಿಜೆಐ ಚಂದ್ರಚೂಡ್ ಹೆಸರಿನಲ್ಲಿ ವಂಚನೆ: ಸಾಮಾಜಿಕ ಜಾಲತಾಣದ ಖಾತೆ ವಿರುದ್ಧ ದೂರು ದಾಖಲಿಸಿದ ಸುಪ್ರೀಂ ಕೋರ್ಟ್

ನಕಲಿ ಪಾಸ್‌ಪೋರ್ಟ್‌ ಮತ್ತು ಡೆಬಿಟ್‌ ಕಾರ್ಡ್‌ ಬಳಸಿ ಮಲೇಷ್ಯಾಕ್ಕೆ ಪಾರ್ಸೆಲ್‌ ಕಳಿಸುವುದಕ್ಕಾಗಿ ಓಸ್ವಾಲ್‌ ತಮ್ಮ ಆಧಾರ್‌ ಕಾರ್ಡ್‌ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಕೂಡ ಆರೋಪಿಸಿದ್ದ ವಂಚಕರು ನಕಲಿ ಬಂಧನ ವಾರೆಂಟ್‌ಗಳ ಮೂಲಕ ಬೆದರಿಕೆ ಹಾಕಿದ್ದರು ಎಂದು ತಿಳಿದುಬಂದಿದೆ.

ವಂಚಕರು ವರ್ಚುವಲ್‌ ವಿಧಾನದಲ್ಲಿ ಕರೆ ಮಾಡಿ ಸುಪ್ರೀಂ ಕೋರ್ಟ್‌ ವಿಚಾರಣೆಯನ್ನು ಮರು ಸೃಷ್ಟಿಸಿ ಸಿಜೆಐ ಅವರ ರೀತಿ ಸೋಗು ಹಾಕಿದ್ದರು. ಅಲ್ಲದೆ ಮುದ್ರೆಯುಳ್ಳ ಸುಪ್ರೀಂ ಕೋರ್ಟ್‌ ಆದೇಶವನ್ನು ಓಸ್‌ವಾಲ್‌ ಅವರ ವಾಟ್ಸಾಪ್‌ಗೆ ಕಳುಹಿಸಿದ್ದ ವಂಚಕರು ₹ 7 ಕೋಟಿ ನೀಡುವಂತೆ ಸೂಚಿಸಿದ್ದರು.

ಸ್ಕೈಪ್‌ ವೀಡಿಯೊ ಕಾನ್ಫರೆನ್ಸ್‌ ಅಪ್ಲಿಕೇಷನ್‌ ಮೂಲಕ ತನ್ನನ್ನು ಸಂಪರ್ಕಿಸಿದ ವಂಚಕರು ನ್ಯಾ. ಚಂದ್ರಚೂಡ್‌ ಎಂದು ವ್ಯಕ್ತಿಯೊಬ್ಬನನ್ನು ಪರಿಚಯಿಸಿದರು. ಆದರೆ ಆತನ ಮುಖ ನನಗೆ ಕಾಣಲಿಲ್ಲ. ಬದಲಿಗೆ ಆತ ಮಾತನಾಡುವುದು ಮತ್ತು ಮೇಜಿನ ಮೇಲೆ ಸುತ್ತಿಗೆ ಬಡಿಯುವುದು ಕೇಳಿಸಿತು. ಲಿಖಿತ ಸುಪ್ರೀಂ ಕೋರ್ಟ್‌ ಆದೇಶ ಎಷ್ಟು ಪರಿಪೂರ್ಣವಾಗಿತ್ತೆಂದರೆ ಅದು ನಿಜವೆಂದೇ ನಂಬಿ ಹಣ ವರ್ಗಾಯಿಸಿದೆ. ನ್ಯಾ. ಧನಂಜಯ ವೈ ಚಂದ್ರಚೂಡ್ ಮತ್ತು ಶ್ರೀ ಪಾಲ್ ಓಸ್ವಾಲ್ ನಡುವಣ ಪ್ರಕರಣ ಎಂದು ಉಲ್ಲೇಖಿಸಿರುವ ಸುಪ್ರೀಂ ಕೋರ್ಟ್‌ನ ಕೆಲ ನಕಲಿ ದಾಖಲೆಗಳನ್ನು ಕೂಡ ವಂಚಕರು ತನಗೆ ಕಳಿಸಿಕೊಟ್ಟಿದ್ದಾರೆ ಎಂದು ಓಸ್ವಾಲ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Also Read
ಸಿಜೆಐ ಡಿ ವೈ ಚಂದ್ರಚೂಡ್ ಹೆಸರಿನಲ್ಲಿ ಸುಳ್ಳು ಸುದ್ದಿ: ಎಚ್ಚರಿಕೆ ನೀಡಿದ ಸುಪ್ರೀಂ ಕೋರ್ಟ್

ತಮ್ಮ ಕಂಪೆನಿಯ ಹಿರಿಯ ಸದಸ್ಯರೊಬ್ಬರು ಪ್ರಕರಣದ ವಿವರಗಳಲ್ಲಿ ಅಸಂಗತತೆ ಇರುವುದನ್ನು ತಿಳಿಸಿದಾಗ ಓಸ್‌ವಾಲ್‌ ಪೊಲೀಸರನ್ನು ಸಂಪರ್ಕಿಸಿದ್ದರು.

ಈ ಮಧ್ಯೆ ಘಟನೆ ಕುರಿತಂತೆ ಎಫ್‌ಐಆರ್‌ ದಾಖಲಿಸಿಕೊಂಡಿದ್ದ ಪೊಲೀಸರು ಅಂತರ-ರಾಜ್ಯ ವಂಚಕರ ಗುಂಪಿನ  ಇಬ್ಬರನ್ನು ಬಂಧಿಸಿದ್ದಾರೆ. ವಂಚಿಸಲಾಗಿದ್ದ ₹ 5.25 ಕೋಟಿ ಮೊತ್ತವನ್ನು ಈವರೆಗೆ ಮರಳಿ ಪಡೆದಿರುವ ಅಧಿಕಾರಿಗಳು ಹಣವನ್ನು ಓಸ್‌ವಾಲ್‌ ಅವರ ಬ್ಯಾಂಕ್‌ ಖಾತೆಗೆ ಮರಳಿಸಿದ್ದಾರೆ. ಅಸ್ಸಾಂ, ಪಶ್ಚಿಮ ಬಂಗಾಳ ಹಾಗೂ ದೆಹಲಿಯಲ್ಲಿ ಈ ಗ್ಯಾಂಗ್ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿರುವ ಅಧಿಕಾರಿಗಳು ಇನ್ನೂ ಏಳು ಶಂಕಿತರಿಗಾಗಿ ಶೋಧ ಮುಂದುವರೆಸಿದ್ದಾರೆ.

Kannada Bar & Bench
kannada.barandbench.com