ಬನಿಯನ್‌, ಟಿಶರ್ಟ್‌ಗಳಲ್ಲಿ ಹಾಜರಿಯಿಂದ ಹಿಡಿದು ಕಾಮದಾಟದವರೆಗೆ: ವರ್ಚುವಲ್ ವಿಚಾರಣೆಗಳ ವೇಳೆ ನಡೆದ ಪ್ರಮಾದಗಳು

ವಕೀಲರು ಮತ್ತು ದಾವೆದಾರರು ಮತ್ತೆ ಮತ್ತೆ ನಿಯಮ ಉಲ್ಲಂಘಿಸಿದ್ದು ವರ್ಚುವಲ್ ವಿಧಾನದಲ್ಲಿ ಕಾಣಿಸಿಕೊಳ್ಳುವಾಗ ಸಭ್ಯತೆಯಿಂದ ವರ್ತಿಸುವಂತೆ ವಿವಿಧ ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್ ವಕೀಲರಿಗೆ ಆಗಾಗ ಎಚ್ಚರಿಕೆ ನೀಡಿವೆ.
Virtual hearing

Virtual hearing

Published on

ಕೋವಿಡ್‌ ಸಾಂಕ್ರಾಮಿಕದ ಪರಿಣಾಮವಾಗಿ ವರ್ಚುವಲ್‌ ವಿಚಾರಣೆಯತ್ತ ದೇಶದ ನ್ಯಾಯಾಲಯಗಳು ಹೊರಳುತ್ತಿದ್ದಂತೆಯೇ ಒಂದೆಡೆ ನ್ಯಾಯಿಕ ಪ್ರಕ್ರಿಯೆ ವಿಸ್ತರಿಸಿದರೆ ಮತ್ತೊಂದೆಡೆ ವಕೀಲರು ಮತ್ತು ದಾವೆದಾರರ ವಿಚಿತ್ರ ಮತ್ತು ಅಹಿತಕರ ವರ್ತನೆಗಳು ತೋರಿದ ಘಟನೆಗಳೂ ವರದಿಯಾಗುತ್ತಲೇ ಇವೆ.

ವರ್ಚುವಲ್‌ ವಿಚಾರಣೆ ವೇಳೆ ಮಹಿಳೆ ಜೊತೆ ಚಕ್ಕಂದವಾಡಿದ್ದಕ್ಕಾಗಿ ದೇಶದ ನ್ಯಾಯಾಲಯಗಳು ಮತ್ತು ನ್ಯಾಯಮಂಡಳಿಗಳಲ್ಲಿ ಪ್ರಾಕ್ಟೀಸ್‌ ಮಾಡದಂತೆ ವಕೀಲರೊಬ್ಬರನ್ನು ತಮಿಳುನಾಡು ಮತ್ತು ಪುದುಚೆರಿ ವಕೀಲರ ಪರಿಷತ್‌ ಅಮಾನತುಗೊಳಿಸಿರುವ ಘಟನೆ ನಿನ್ನೆಯಷ್ಟೇ ನಡೆದಿದೆ. ವಿಚಾರಣೆ ನಡೆಯುತ್ತಿರುವಾಗಲೇ ಆ ವಕೀಲ ಮಹಿಳೆಯೊಬ್ಬರನ್ನು ಅಪ್ಪಿಕೊಂಡ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಕ್ಯಾಮೆರಾದಲ್ಲಿ ದೃಶ್ಯ ದಾಖಲಾಗುತ್ತಿದೆ ಎಂಬುದು ವಕೀಲರಿಗೆ ತಿಳಿದಿರಲಿಲ್ಲವಂತೆ. ಆದರೆ ಈ ರೀತಿ ನಡೆಯುತ್ತಿರುವುದು ಇದೇ ಮೊದಲಲ್ಲ. ವಕೀಲರು ಮತ್ತು ದಾವೆದಾರರು ಮತ್ತೆ ಮತ್ತೆ ನಿಯಮ ಉಲ್ಲಂಘಿಸಿದ್ದು ವರ್ಚುವಲ್‌ ವಿಧಾನದಲ್ಲಿ ಕಾಣಿಸಿಕೊಳ್ಳುವಾಗ ಸಭ್ಯತೆಯಿಂದ ವರ್ತಿಸುವಂತೆ ವಿವಿಧ ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ ಅನೇಕ ಬಾರಿ ಎಚ್ಚರಿಕೆ ನೀಡಿವೆ. ಆದರೂ ಇಂತಹ ಘಟನೆಗಳು ಮರುಕಳಿಸುತ್ತಲೇ ಇವೆ.

ಬನಿಯನ್‌- ಟಿಶರ್ಟ್‌ ತೊಟ್ಟು ವಿಚಾರಣೆಗೆ ಹಾಜರಿ!

2020 ರ ಏಪ್ರಿಲ್‌ನಲ್ಲಿ ರಾಜಸ್ಥಾನ ಹೈಕೋರ್ಟ್‌ನಲ್ಲಿ ಅಂತಹ ಮೊದಲ ಪ್ರಮಾದ ವರದಿಯಾಯಿತು. ನ್ಯಾಯಾಧೀಶ ಎಸ್‌ ಪಿ ಶರ್ಮಾ ಅವರು ವೀಡಿಯೊ ಕಾನ್ಫರೆನ್ಸ್‌ ಮೂಲಕ ಜಾಮೀನು ಅರ್ಜಿ ವಿಚಾರಣೆ ನಡೆಸುವಾಗ ವಕೀಲರೊಬ್ಬರು ಬನಿಯನ್‌ನಲ್ಲಿ ಕಾಣಿಸಿಕೊಂಡರು. ವೀಡಿಯೊ ಕಾನ್ಫರೆನ್ಸ್‌ ಮೂಲಕ ನಡೆಸಲಾದ ವಿಚಾರಣೆಯ ವೇಳೆ ಸಮವಸ್ತ್ರ ಧರಿಸಿ ಹಾಜರಾಗುವಂತೆ ಎಲ್ಲಾ ವಕೀಲರಿಗೆ ಸೂಚಿಸಬೇಕು ಎಂದು ನ್ಯಾ. ಶರ್ಮಾ ಹೈಕೋರ್ಟ್ ವಕೀಲರ ಸಂಘಕ್ಕೆ ಸೂಚಿಸಿದರು.

ಆದರೆ ಅಂತಹ ಘಟನೆಗಳು ಅಲ್ಲಿಗೇ ಕೊನೆಯಾಗಲಿಲ್ಲ. ಬನಿಯನ್‌ನಲ್ಲೇ ಹಾಜರಾದ ವಕೀಲರೊಬ್ಬರಿಗೆ ದೆಹಲಿ ಹೈಕೋರ್ಟ್‌ ರೂ 10,000 ದಂಡ ವಿಧಿಸಿತು. ಟಿ- ಶರ್ಟ್‌ ಧರಿಸಿ ಹಾಸಿಗೆಯ ಮೇಲೆ ಮಲಗಿಯೇ ವಕೀಲರೊಬ್ಬರು ಸುಪ್ರೀಂಕೋರ್ಟ್‌ ವರ್ಚುವಲ್‌ ವಿಚಾರಣೆಗೆ ಹಾಜರಾದರು. ಅವರ ಕ್ಷಮಾಪಣೆಯನ್ನು ಅಂಗೀಕರಿಸುತ್ತಾ ನ್ಯಾ. ಎಸ್ ರವೀಂದ್ರ ಭಟ್ ಅವರು ಔಚಿತ್ಯಪೂರ್ಣ ರೀತಿಯಲ್ಲಿ ವಕೀಲರು ಹಾಜರಾಗುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು.

ವೀಡಿಯೊದಲ್ಲಿ ದುರ್ನಡತೆ

ಆಗಸ್ಟ್ 2020 ರಲ್ಲಿ, ವರ್ಚುವಲ್‌ ವಿಚಾರಣೆ ವೇಳೆ ವಕೀಲರೊಬ್ಬರು ಗುಟ್ಕಾ ಜಗಿಯುತ್ತಿರುವುದನ್ನು ಕಂಡು ಸುಪ್ರೀಂ ಕೋರ್ಟ್‌ ತರಾಟೆಗೆ ತಗೆದುಕೊಂಡಾಗ ಆ ವಕೀಲರಿಂದ ಹೊರಹೊಮ್ಮಿದ್ದು ಕ್ಷಮಿಸಿ ಎಂಬ ಪದ ಮಾತ್ರ. ಮತ್ತೊಂದು ವೀಡಿಯೊ ವಿಚಾರಣೆ ವೇಳೆ ಹಿರಿಯ ವಕೀಲ ರಾಜೀವ್ ಧವನ್ ಹುಕ್ಕಾ ಸೇದುತ್ತಿರುವುದು ಸರ್ವೋಚ್ಚ ನ್ಯಾಯಾಲಯದ ಗಮನಕ್ಕೆ ಬಂದಿತ್ತು. ಸೆಪ್ಟೆಂಬರ್ 2020ರಲ್ಲಿ ಆರೋಪಿಯೊಬ್ಬ ಕ್ಯಾಮೆರಾಗೆ ಉಗುಳುತ್ತಿರುವುದನ್ನು ಗಮನಿಸಿದ ಗುಜರಾತ್‌ ಹೈಕೋರ್ಟ್‌ ಆತನಿಗೆ ದಂಡ ವಿಧಿಸಿತ್ತು. ಇದೇ ಹೈಕೋರ್ಟ್‌ ಕಾರಿನಲ್ಲಿ ಕುಳಿತು ಸಿಗರೇಟ್‌ ಸೇದುತ್ತ ವಿಚಾರಣೆಗೆ ಹಾಜರಾಗಿದ್ದ ವಕೀಲರೊಬ್ಬರ ನಡವಳಿಕೆಯನ್ನು ಖಂಡಿಸಿತ್ತು.

ತ್ವರಿತ ನ್ಯಾಯಕ್ಕಾಗಿ?

ಜೂನ್ 2021 ರಲ್ಲಿ, ವಕೀಲರೊಬ್ಬರು ಸ್ಕೂಟರ್ ಸವಾರಿ ಮಾಡುತ್ತಲೇ ಅಲಹಾಬಾದ್ ಹೈಕೋರ್ಟ್‌ಗೆ ಹಾಜರಾಗಲು ಪ್ರಯತ್ನಿಸಿದರು. ಹಾಸಿಗೆಯ ಮೇಲೆ ಮಲಗಿ, ಸಮವಸ್ತ್ರವಲ್ಲದ ಉಡುಪು ಧರಿಸಿ, ಫೇಸ್‌ ಪ್ಯಾಕ್‌ ಹಾಕಿಕೊಂಡು ವಿಚಾರಣೆಗೆ ಹಾಜರಾಗುವುದನ್ನು ಒಪ್ಪಲಾಗದು ಎಂದು ಹೈಕೋರ್ಟ್‌ ಆದೇಶಿಸಿತು. ಇಂತಹ ಆದೇಶಗಳು ಆ ವಕೀಲರ ಮೇಲೆ ಪರಿಣಾಮ ಬೀರಿದಂತೆ ಕಾಣಲಿಲ್ಲ. ಅವರು ಮತ್ತೊಂದು ಸಂದರ್ಭದಲ್ಲಿ ಕಾರಿನಲ್ಲಿ ಕುಳಿತೇ ವಿಚಾರಣೆಗೆ ಹಾಜರಾಗಿ ನ್ಯಾಯಾಲಯದ ಟೀಕೆಗೆ ಗುರಿಯಾದರು.

ವಕೀಲರು ವಿಚಾರಣೆ ವೇಳೆ ತಿನ್ನುವುದು, ಉದ್ಯಾನ ಮತ್ತು ಕಾರುಗಳಲ್ಲಿ ವಾದ ಮಾಡುವುದು, ವಕೀಲರ ಪತ್ನಿ ವಕೀಲರೊಂದಿಗೆ ಕಾಣಿಸಿಕೊಳ್ಳುವ ಘಟನೆ ನಡೆಯುತ್ತಿದೆ ಎಂದು ಸೆಪ್ಟೆಂಬರ್ 2020ರಲ್ಲಿ ಹೊರಡಿಸಿದ ಆದೇಶದಲ್ಲಿ ಒಡಿಶಾ ಹೈಕೋರ್ಟ್ ಹೇಳಿತ್ತು.

ಹಾಡು-ಪಾಡು!

ಮತ್ತೊಂದು ಗಮನಾರ್ಹ ಘಟನೆಯೆಂದರೆ, 5ಜಿ ತಂತ್ರಜ್ಞಾನ ಬಳಕೆ ಪ್ರಶ್ನಿಸಿ ನಟಿ ಜೂಹಿ ಚಾವ್ಲಾ ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನಡೆದ ಪ್ರಮಾದಗಳು. ವಿಚಾರಣೆ ನಡೆಯುತ್ತಿದ್ದಾಗ ಅವರ ಅಭಿಮಾನಿಯೊಬ್ಬರು ಜೂಹಿ ಅವರ ಸಿನಿಮಾ ಹಾಡು ಹಾಡಲು ಆರಂಭಿಸಿದರು. ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾ. ಜೆ.ಆರ್.ಮಿಧಾ ಅವರು ಆರಂಭದಲ್ಲಿ ಆ ವ್ಯಕ್ತಿಯ ವೀಡಿಯೊ ಮ್ಯೂಟ್‌ ಮಾಡಲು ನ್ಯಾಯಾಲಯದ ಸಿಬ್ಬಂದಿಗೆ ಸೂಚಿಸಿದರು. ಆದರೂ ಹಾಡು ಕೇಳುತ್ತಲೇ ಇದ್ದುದರಿಂದ ನ್ಯಾಯಾಂಗ ನಿಂದನೆ ನೋಟಿಸ್‌ ಜಾರಿ ಮಾಡಿದ ನ್ಯಾಯಾಲಯ ವ್ಯಕ್ತಿಯನ್ನು ಪತ್ತೆ ಹಚ್ಚುವಂತೆ ಪೊಲೀಸರಿಗೆ ಸೂಚಿಸಿತು.

Also Read
ಬಾಲಿವುಡ್‌ ನಟಿ ಜೂಹಿ ಚಾವ್ಲಾರ 5ಜಿ ತರಂಗಾಂತರ ವಿರೋಧಿಸಿದ್ದ ಅರ್ಜಿ ವಜಾ- ₹20 ಲಕ್ಷ ದಂಡ ವಿಧಿಸಿದ ದೆಹಲಿ ಹೈಕೋರ್ಟ್‌

ಅರೆ-ನಗ್ನತೆಯ ಪ್ರಕರಣಗಳು:

ತೀರಾ ಇತ್ತೀಚೆಗೆ ರಮೇಶ್‌ ಜಾರಕಿಹೊಳಿ ಸಿಡಿ ಹಗರಣಕ್ಕೆ ಸಂಬಂಧಿಸಿದ್ದು. ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್‌ ಕರ್ನಾಟಕ ಹೈಕೋರ್ಟ್‌ನಲ್ಲಿ ವಾದ ಮಂಡಿಸುತ್ತಿದ್ದಾಗ ವ್ಯಕ್ತಿಯೊಬ್ಬರು ಅರೆನಗ್ನವಾಗಿ ಕಾಣಿಸಿಕೊಂಡರು. ಪರಿಣಾಮ ನೋಟಿಸ್‌ ಜಾರಿ ಮಾಡುವಂತೆ ಕರ್ನಾಟಕ ಹೈಕೋರ್ಟ್‌ ಆದೇಶಿಸಿತು.

Also Read
ವರ್ಚುವಲ್‌ ವಿಚಾರಣೆಯಲ್ಲಿ ಅರೆನಗ್ನವಾಗಿ ಕಾಣಿಸಿಕೊಂಡ ವ್ಯಕ್ತಿ: ಜೈಸಿಂಗ್‌ ಆಕ್ಷೇಪ; ನೋಟಿಸ್‌ ನೀಡಲು ಆದೇಶಿಸಿದ ಪೀಠ

"ನನ್ನ ಆಕ್ಷೇಪಣೆಯ ಹೊರತಾಗಿಯೂ ಪೂರ್ತಿ 20 ನಿಮಿಷಗಳ ಕಾಲ ಅರೆ ಬೆತ್ತಲೆಯಾಗಿ ವ್ಯಕ್ತಿ ಪರದೆಯ ಮೇಲೆ ಕಾಣಿಸಿಕೊಂಡಿದ್ದಾನೆ. ನಾನು ನ್ಯಾಯಾಂಗ ನಿಂದನೆ ಮತ್ತು ಲೈಂಗಿಕ ಕಿರುಕುಳದ ಬಗ್ಗೆ ಅಧಿಕೃತ ದೂರು ನೀಡುತ್ತಿದ್ದೇನೆ. ನ್ಯಾಯಾಲಯದಲ್ಲಿ ವಾದ ಮಂಡಿಸುವಾಗ ನಡೆಯುವ ಇಂತಹ ಘಟನೆಗಳು ಅತೀವ ಘಾಸಿ ಉಂಟುಮಾಡುವಂತಹವು," ಎಂದು ಜೈಸಿಂಗ್ ನಂತರ ಟ್ವೀಟ್ ಮಾಡಿದ್ದರು.

Kannada Bar & Bench
kannada.barandbench.com