ಪ. ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಕೀಲಿಕೆಯ ಹೆಜ್ಜೆ ಗುರುತುಗಳು

ಎಸ್ಐಆರ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಎದುರು ಅವರು ಬುಧವಾರ ಹಾಜರಾಗಿ ವಾದ ಮಂಡಿಸಿದ್ದು ದೇಶದ ಗಮನ ಸೆಳೆಯಿತು. ಹೀಗೆ ಅವರು ನ್ಯಾಯಾಲಯದೆದುರು ವಕೀಲೆಯಾಗಿ ನಿಂತಿದ್ದಕ್ಕೆ ಮೂರು ದಶಕಗಳ ಇತಿಹಾಸ ಇದೆ.
(Left) Mamata  in SC for SIR case; (Right) Mamata in early 90's outside a West Bengal district court
(Left) Mamata in SC for SIR case; (Right) Mamata in early 90's outside a West Bengal district court
Published on

ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ಆಮೂಲಾಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಶ್ನಿಸಿ ತಾವು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಬುಧವಾರ ಸುಪ್ರೀಂ ಕೋರ್ಟ್‌ನಲ್ಲಿ ಖುದ್ದು ವಾದ ಮಂಡಿಸಿದರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ.

ಹೀಗೆ ಅವರು ವಕೀಲೆಯ ಪೋಷಾಕು ತೊಟ್ಟದ್ದು ಇದೇ ಮೊದಲಲ್ಲ. 1990ರ ದಶಕದಲ್ಲಿ ಪಶ್ಚಿಮ ಬಂಗಾಳದ ಜಿಲ್ಲಾ ನ್ಯಾಯಾಲಯಗಳಲ್ಲಿ ವಾದ ಮಂಡಿಸುತ್ತಿದ್ದ ಅವರು ಬಳಿಕ ಸುಪ್ರೀಂ ಕೋರ್ಟ್‌ನಲ್ಲಿಯೂ ಧ್ವನಿ ಎತ್ತಿದ್ದಾರೆ.

Also Read
'ಎಸ್ಐಆರ್ ಪ್ರಕ್ರಿಯೆ ಕೈಗೊಳ್ಳುವ ಇಸಿಐ ಅಧಿಕಾರ ಅನಿಯಂತ್ರಿತವೇ? ನ್ಯಾಯಾಂಗ ಪರಿಷ್ಕರಣೆಗೆ ಒಳಪಡದೇ?' ಸುಪ್ರೀಂ ಪ್ರಶ್ನೆ

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌, ನ್ಯಾಯಮೂರ್ತಿಗಳಾದ ಜೊಯಮಲ್ಯ ಬಾಗ್ಚಿ ಹಾಗೂ ವಿ ಎಂ ಪಂಚೋಲಿ ಅವರಿದ್ದ ಪೀಠದೆದುರು ಅವರು ಚುನಾವಣಾ ಆಯೋಗವನ್ನು ಉದ್ದೇಶಿಸಿ "ಇದು ಎಲೆಕ್ಷನ್‌ ಕಮಿಷನ್‌ ಅಲ್ಲ, ವಾಟ್ಸಾಪ್‌ ಕಮಿಷನ್‌" ಎಂದು ಮಮತಾ ಗುಡುಗಿದರು. ಚುನಾವಣಾ ಸಂಸ್ಥೆಯಿಂದ ಅನೌಪಚಾರಿಕವಾಗಿ ವಾಟ್ಸಾಪ್ ಮೂಲಕ ನಿರ್ದೇಶನಗಳನ್ನು ನೀಡಲಾಗುತ್ತಿದೆ ಎಂದು ಆರೋಪಿಸಿದರು. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡುವುದಕ್ಕಿಂತಲೂ ಇರುವ ಹೆಸರುಗಳನ್ನು ತೆಗೆದುಹಾಕಲು ಎಸ್‌ಐಆರ್‌ ಪ್ರಕ್ರಿಯೆ ಹೊರಟಿದೆ. ನೈಜ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗುತ್ತಿದೆ ಎಂದು ಆಕ್ಷೇಪಿಸಿದರು.

ಬಡ ಮತದಾರರು ಮತ್ತು ಮಹಿಳೆಯರ ಕುರಿತಾಗಿ ಮಮತಾ ಬ್ಯಾನರ್ಜಿ ಆತಂಕ ವ್ಯಕ್ತಪಡಿಸಿದರು. ಜೊತೆಗೆ, ಪಶ್ಚಿಮ ಬಂಗಾಳದ ಹೊರಗಿನಿಂದ ಮೈಕ್ರೋ ಆಬ್ಸರ್ವರ್‌ಗಳನ್ನು ನಿಯೋಜಿಸಿರುವುದಕ್ಕೆ ಆಕ್ಷೇಪಿಸಿದ ಅವರು ಸ್ಥಳೀಯ ಬೂತ್ ಮಟ್ಟದ ಅಧಿಕಾರಿಗಳ ಆಟಾಟೋಪ ಹೆಚ್ಚಿದೆ ಎಂದರು.

ಕೊನೆಗೆ, ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿದ ಸುಪ್ರೀಂ ಕೋರ್ಟ್‌, ಯೋಗ್ಯ ಮತ್ತು ನಿಜವಾದ ಮತದಾರರಿಗೆ ಮತದಾನ ಹಕ್ಕು  ದೊರೆಯುವಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿತು.

ಪ. ಬಂಗಾಳದಲ್ಲಿ ಕಮ್ಯುನಿಸ್ಟ್‌ ಪಕ್ಷ ಅಧಿಕಾರ ನಡೆಸುತ್ತಿದ್ದಾಗ ಅವರು ವಿರೋಧ ಪಕ್ಷದಲ್ಲಿದ್ದಾಗ  ಹೀಗೆ ಅವರು ನ್ಯಾಯಾಲಯಗಳಲ್ಲಿ ಖುದ್ದು ವಾದಿಸಿದ ಅನೇಕ ಉದಾಹರಣೆಗಳಿವೆ. 2003ರಲ್ಲಿ ಕೊಲ್ಕತ್ತಾದ ಬ್ಯಾಂಕ್‌ಶಾಲ್ ನ್ಯಾಯಾಲಯದಲ್ಲಿ, ಕೊಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ ಸದಸ್ಯರ ಬಂಧನ ರಾಜಕೀಯ ಪ್ರೇರಿತವೆಂದು ಅವರು ಸ್ವಯಂ ವಾದ ಮಂಡಿಸಿದ್ದರು.

Also Read
ಎಸ್ಐಆರ್ ಪ್ರಕರಣದಲ್ಲಿ ಅಮೆರಿಕ ತೀರ್ಪಿನ ಅವಲಂಬನೆಗೆ ಚುನಾವಣಾ ಆಯೋಗ ಆಕ್ಷೇಪ: ಟ್ರಂಪ್ ಆಕ್ರಮಣಶೀಲತೆಯ ಪ್ರಸ್ತಾಪ

1996ರ ಅಲಿಪುರ ನ್ಯಾಯಾಲಯದ ವಿಚಾರಣೆ, ಹಾಗೆಯೇ ಪೊಲೀಸ್ ಗುಂಡಿನ ದಾಳಿ ಪ್ರಕರಣಗಳಲ್ಲಿ ಬಾಳುರ್‌ಘಾಟ್‌ ಮತ್ತು ಚಿನ್ಸುರಾ ಜಿಲ್ಲಾ ನ್ಯಾಯಾಲಯಗಳಲ್ಲಿ ಉಸಿರು ಕಳೆದುಕೊಂಡವರ ಪರವಾಗಿ  ಅವರು ನ್ಯಾಯಾಲಯದಲ್ಲಿ ಧ್ವನಿ ಎತ್ತಿದ್ದರು.

ಸಾಂಪ್ರದಾಯಿಕವಾಗಿ ವಕಾಲತ್ತು ನಡೆಸಿದ ಹಿನ್ನೆಲೆ ಇಲ್ಲದಿದ್ದರೂ, ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳ ರಾಜ್ಯ ಬಾರ್ ಕೌನ್ಸಿಲ್‌ನಲ್ಲಿ ನೋಂದಾಯಿತರಾಗಿದ್ದು, 2023ರ ಕೋಲ್ಕತ್ತಾ ಹೈಕೋರ್ಟ್ ವಕೀಲರ ಸಂಘದ ಸದಸ್ಯರ ಪಟ್ಟಿಯಲ್ಲಿಯೂ ಅವರ ಹೆಸರು ಇದೆ. ಜಿಲ್ಲಾ ನ್ಯಾಯಾಲಯಗಳಿಂದ ಆರಂಭವಾದ ಅವರ ಖುದ್ದು ವಾದ ಮಂಡನೆಯ ಯಾನ ಎಸ್‌ಐಆರ್‌ ಪ್ರಕರಣದಿಂದಾಗಿ ಸುಪ್ರೀಂ ಕೋರ್ಟ್‌ಗೂ ತಲುಪಿದೆ.

Kannada Bar & Bench
kannada.barandbench.com