ಎಸ್ಐಆರ್ ಪ್ರಕರಣದಲ್ಲಿ ಅಮೆರಿಕ ತೀರ್ಪಿನ ಅವಲಂಬನೆಗೆ ಚುನಾವಣಾ ಆಯೋಗ ಆಕ್ಷೇಪ: ಟ್ರಂಪ್ ಆಕ್ರಮಣಶೀಲತೆಯ ಪ್ರಸ್ತಾಪ

ಅಮೆರಿಕದ ನ್ಯಾಯಾಲಯಗಳು ನೀಡುವ ತೀರ್ಪುಗಳ ಮೇಲೆ ಅರ್ಜಿದಾರರ ಅವಲಂಬನೆ ಖಂಡಿಸಿ ಆಯೋಗ ವಾದ ಮಂಡಿಸಿತು.
Donald Trump
Donald Trump X.com
Published on

ಮತದಾರರ ಪಟ್ಟಿಯ ವಿಶೇಷ ಆಮೂಲಾಗ್ರ ಪರಿಷ್ಕರಣೆ (ಎಸ್‌ಐಆರ್‌) ಕುರಿತ ಅರ್ಜಿಗಳ ವಿಚಾರಣೆ ವೇಳೆ ಚುನಾವಣಾ ಆಯೋಗ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ವಶಕ್ಕೆ ಪಡೆದ ಅಮೆರಿಕದ ಇತ್ತೀಚಿನ ಬೆಳವಣಿಗೆಗಳು ಮತ್ತು ಗ್ರೀನ್‌ಲ್ಯಾಂಡ್‌ನ ಮೇಲೆ ಹಿಡಿತ ಸಾಧಿಸುವ ನಿಟ್ಟಿನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಒಡ್ಡಿರುವ ಬೆದರಿಕೆಗಳನ್ನು ಸುಪ್ರೀಂ ಕೋರ್ಟ್‌ ಗಮನಕ್ಕೆ ತಂದಿತು.

ಅರ್ಜಿದಾರರು ಅಮೆರಿಕದ ನ್ಯಾಯಾಲಯಗಳು ನೀಡಿದ ತೀರ್ಪುಗಳನ್ನು ಆಧಾರವಾಗಿ ಉಲ್ಲೇಖಿಸಿರುವುದಕ್ಕೆ ಪ್ರತಿಯಾಗಿ ಚುನಾವಣಾ ಆಯೋಗ ಈ ವಾದಗಳನ್ನು ಮಂಡಿಸಿತು.

Also Read
'ಎಸ್ಐಆರ್ ಪ್ರಕ್ರಿಯೆ ಕೈಗೊಳ್ಳುವ ಇಸಿಐ ಅಧಿಕಾರ ಅನಿಯಂತ್ರಿತವೇ? ನ್ಯಾಯಾಂಗ ಪರಿಷ್ಕರಣೆಗೆ ಒಳಪಡದೇ?' ಸುಪ್ರೀಂ ಪ್ರಶ್ನೆ

“ಅಮೆರಿಕದ ನ್ಯಾಯಾಲಯಗಳ ತೀರ್ಪುಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ. ಆದರೆ ಅಮೆರಿಕದಲ್ಲಿ  ಸೂಕ್ತ ಕಾನೂನು ಪ್ರಕ್ರಿಯೆ ಎಲ್ಲಿದೆ? ಅಧ್ಯಕ್ಷ ಟ್ರಂಪ್ ಅವರು ವಿಚಾರಣೆಗೊಳಪಡಿಸಲು ವೆನೆಜುವೆಲಾ ಅಧ್ಯಕರನ್ನೇ ಸೆರೆ ಹಿಡಿಯಬಹುದು. ಇಲ್ಲಿ ನ್ಯಾಯಸಮ್ಮತ ಪ್ರಕ್ರಿಯೆ ಎಲ್ಲಿದೆ? ಈಗ ಅವರು ಗ್ರೀನ್‌ಲ್ಯಾಂಡ್‌ ಕೂಡ ಬೇಕೆಂದು ಹೇಳುತ್ತಿದ್ದಾರೆ. ಇಂತಹ ವ್ಯವಸ್ಥೆಯನ್ನು ಇಲ್ಲಿ ತರಬೇಕೆಂದು ಅರ್ಜಿದಾರರು ಬಯಸುತ್ತಿದ್ದಾರೆ” ಎಂದು ಚುನಾವಣಾ ಆಯೋಗದ ಪರವಾಗಿ ಹಿರಿಯ ವಕೀಲ ರಾಕೇಶ್ ದ್ವಿವೇದಿ ವಾದ ಮಂಡಿಸಿದರು.

ಅಧ್ಯಕ್ಷ ಟ್ರಂಪ್ ಅವರು ವಿಚಾರಣೆಗಾಗಿ ವೆನೆಜುವೆಲಾ ಅಧ್ಯಕ್ಷರನ್ನೇ ಸೆರೆ ಹಿಡಿಯುತ್ತಾರೆ. ಇಲ್ಲಿ ನ್ಯಾಯಸಮ್ಮತ ಪ್ರಕ್ರಿಯೆ ಎಲ್ಲಿದೆ? ಈಗ ಅವರು ಗ್ರೀನ್‌ಲ್ಯಾಂಡ್‌ ಕೂಡ ಬೇಕೆಂದು ಹೇಳುತ್ತಿದ್ದಾರೆ.
ಚುನಾವಣಾ ಆಯೋಗ

ವಿವಿಧ ರಾಜ್ಯಗಳಲ್ಲಿ ಚುನಾವಣಾ ಆಯೋಗ ಮತದಾರರ ಪಟ್ಟಿ ವಿಶೇಷ ಆಮೂಲಾಗ್ರ ಪರೀಕ್ಷೆ ನಡೆಸುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಸಿಜೆಐ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ಆಲಿಸಿತು.

ಬಿಹಾರದಲ್ಲಿ ಆಯೋಗ ಮತದಾರರ ಪಟ್ಟಿ ಆಮೂಲಾಗ್ರ ಪರಿಷ್ಕರಣೆಗೆ ಮುಂದಾದಾಗ ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್‌) ಮತ್ತು ನ್ಯಾಷನಲ್ ಫೆಡರೇಷನ್ ಫಾರ್ ಇಂಡಿಯನ್ ವಿಮೆನ್ (ಎನ್‌ಎಫ್‌ಐಡಬ್ಲ್ಯೂ) ಸೇರಿದಂತೆ ಹಲವು ಸಂಸ್ಥೆಗಳು ಪ್ರಶ್ನಿಸಿದ್ದವು. ಆದರೆ ಸುಪ್ರೀಂ ಕೋರ್ಟ್‌ ಪರಿಷ್ಕರಣೆಗೆ ತಡೆ ನೀಡದೆ ಇದ್ದುದರಿಂದ ಪ್ರಕ್ರಿಯೆ ಮುಂದುವರೆದಿತ್ತು. ಬಳಿಕ 2025ರ ಅಕ್ಟೋಬರ್ 27ರಂದು, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಎಸ್‌ಐಆರ್‌ ಪ್ರಕ್ರಿಯೆ ವಿಸ್ತರಿಸಲಾಗಿತ್ತು. ಹೀಗಾಗಿ ಇನ್ನಷ್ಟು ಅರ್ಜಿಗಳು ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದ್ದವು.

ಜನವರಿ 19ರಂದು, ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಎಸ್‌ಐಆರ್‌ ಕುರಿತು ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಹಲವು ನಿರ್ದೇಶನಗಳನ್ನು ನೀಡಿತ್ತು. ಬುಧವಾರ ಮತದಾರರ ಪಟ್ಟಿ ಎಸ್‌ಐಆರ್‌ ನಡೆಸುವ ಚುನಾವಣಾ ಆಯೋಗದ ಅಧಿಕಾರ ಅನಿಯಂತ್ರಿತವೇ ಅದು ನ್ಯಾಯಾಂಗ ಪರಿಶೀಲನೆಗೆ ಒಳಪಡುವುದಿಲ್ಲವೇ ಎಂಬ ಪ್ರಶ್ನೆಯನ್ನು ನ್ಯಾಯಾಲಯ ಎತ್ತಿತ್ತು.

Also Read
ಪ. ಬಂಗಾಳ ಎಸ್ಐಆರ್: ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ನಿಯೋಜನೆಗೆ ಕೋರಿಕೆ, ಇಸಿಐಗೆ ಸುಪ್ರೀಂ ನೋಟಿಸ್

ಗುರುವಾರ ಜನ ಪ್ರತಿನಿಧಿಗಳ ಕಾಯಿದೆ ಸೆಕ್ಷನ್‌ 21(3)ರ ಅಡಿಯಲ್ಲಿ ಎಸ್‌ಐಆರ್‌ಗೆ ಆದೇಶಿಸಿದ ನಂತರ ಅದನ್ನು ಹೇಗೆ ನಡೆಸಬೇಕು ಎಂಬ ಪ್ರಕ್ರಿಯೆಯನ್ನು ನಿರ್ಧರಿಸುವ ಅಧಿಕಾರವೂ ಆಯೋಗಕ್ಕೇ ಸೇರಿದೆ ಎಂದು ಚುನಾವಣಾ ಆಯೋಗದ ಪರ ವಕೀಲರು ವಾದಿಸಿದರು. “ಸೆಕ್ಷನ್ 21(3) ಅಡಿಯಲ್ಲಿ ಎಲ್ಲಾ ಎಸ್‌ಐಆರ್‌ಗಳು ಗಳು ಒಂದೇ ರೀತಿಯಲ್ಲಿರಬೇಕು ಎಂಬ ಯಾವುದೇ ಕಡ್ಡಾಯ ನಿಯಮವಿಲ್ಲ” ಎಂದು ದ್ವಿವೇದಿ ಹೇಳಿದರು.

ಕಳೆದ 20 ವರ್ಷಗಳಿಂದ ಎಸ್‌ಐಆರ್‌ ನಡೆದಿರಲಿಲ್ಲ. ಅಗತ್ಯ ಇದ್ದುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಎಸ್‌ಐಆರ್‌ ಪ್ರಕ್ರಿಯೆ ಪಾರದರ್ಶಕವಾಗಿದ್ದು ಐದು ಕೋಟಿಗೂ ಹೆಚ್ಚು ಎಸ್‌ಎಂಎಸ್‌ಗಳನ್ನು ಕಳುಹಿಸಲಾಗಿದೆ ಎಂದು ಅವರು ವಿವರಿಸಿದರು. ಎಸ್‌ಐಆರ್‌ನಿಂದ ನೇರ ತೊಂದರೆಗೊಳಗಾದವರಾರೂ ನ್ಯಾಯಾಲಯದ ಮೆಟ್ಟಿಲೇರಿಲ್ಲ ಕೇವಲ ರಾಜಕೀಯ ಪಕ್ಷಗಳಷ್ಟೇ ಅರ್ಜಿ ಸಲ್ಲಿಸಿದ್ದಾರೆ ಎಂದು ಅವರು ವಾದಿಸಿದರು. ಇಂದು (ಶುಕ್ರವಾರ) ಕೂಡ ಪ್ರಕರಣದ ವಿಚಾರಣೆ ಮುಂದುವರೆಯಲಿದೆ.

Kannada Bar & Bench
kannada.barandbench.com