ಗಾಡ್ಗೀಳ್‌, ಕಸ್ತೂರಿರಂಗನ್ ವರದಿ ಕುರಿತು ಕೇಂದ್ರ, ರಾಜ್ಯಗಳ ನಿಷ್ಕ್ರಿಯತೆ ಬಗ್ಗೆ ನ್ಯಾ. ಸುಂದರೇಶನ್‌ ಕಳವಳ

ವಯನಾಡ್‌ ದುರಂತದ ಜೊತೆಗೆ ಉತ್ತರ ಕನ್ನಡದ ಶಿರೂರಿನಲ್ಲಿ ಸಂಭವಿಸಿದ್ದ ಭೂಕುಸಿತ, 2023ರ ರಾಯಗಡ ಭೂಕುಸಿತ, ಭೀಮಾಶಂಕರ ಜಲಪಾತಕ್ಕೆ ಪ್ರವೇಶ ನಿಷೇಧ ಮತ್ತು ಉತ್ತರಾಖಂಡದ ಜ್ಯೋತಿರ್ಮಠ ಮುಳುಗಡೆ ಘಟನೆಗಳನ್ನೂ ಅವರು ಎತ್ತಿ ತೋರಿಸಿದರು.
Justice Somasekhar Sundaresan
Justice Somasekhar Sundaresan
Published on

ಪಶ್ಚಿಮ ಘಟ್ಟಗಳ ಗಮನಾರ್ಹ ಭಾಗಗಳನ್ನು ಪರಿಸರ ಸೂಕ್ಷ್ಮ ಪ್ರದೇಶ (ಇಎಸ್ಎ) ಎಂದು ಗುರುತಿಸುವ ವರದಿಗಳ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಳೆದಿರುವ ನಿಷ್ಕ್ರಿಯತೆಯನ್ನು ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿ ಸೋಮಶೇಖರ್ ಸುಂದರೇಶನ್ ಪ್ರಸ್ತಾಪಿಸಿದ್ದಾರೆ.

ಕಾಮನ್‌ವೆಲ್ತ್ ಕಾನೂನು ಶಿಕ್ಷಣ ಸಂಘದ ವತಿಯಿಂದ (CLEA) ಕೇರಳದ ಕುಮಾರಕೊಮ್‌ನಲ್ಲಿ ಶನಿವಾರ ಮತ್ತು ಭಾನುವಾರ ಆಯೋಜಿಸಲಾಗಿದ್ದ "ಕಾನೂನು ಮತ್ತು ತಂತ್ರಜ್ಞಾನ: ಸುಸ್ಥಿರ ಸಾರಿಗೆ, ಪ್ರವಾಸೋದ್ಯಮ ಮತ್ತು ತಾಂತ್ರಿಕ ಆವಿಷ್ಕಾರಗಳು" ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದ ತಾಂತ್ರಿಕ ಗೋಷ್ಠಿಯಲ್ಲಿ ಭಾನುವಾರ ಪಾಲ್ಗೊಂಡು ಅವರು ಮಾತನಾಡಿದರು. 'ಪರಿಸರ ಪ್ರವಾಸೋದ್ಯಮ ಮತ್ತು ಸಾರಿಗೆ ಕಾನೂನಿನಲ್ಲಿ ಸಹಯೋಗದ ವಿಧಾನಗಳು ಮತ್ತು ಉತ್ತಮ ಅಭ್ಯಾಸಗಳುʼ ಎಂಬುದು ಗೋಷ್ಠಿಯ ವಿಷಯವಾಗಿತ್ತು.

Also Read
ಪಶ್ಚಿಮ ಘಟ್ಟಗಳ ಕುರಿತಾದ ಕರಡು ಅಧಿಸೂಚನೆ: ಗಾಡ್ಗೀಳ್‌, ರಂಗನ್‌ ಸಮಿತಿ ವರದಿ ಪ್ರಶ್ನಿಸಿ ಸುಪ್ರೀಂನಲ್ಲಿ ಅರ್ಜಿ

ಗಾಡ್ಗೀಳ್‌ ಆಯೋಗ ಎಂದೂ ಹೆಸರಾಗಿರುವ ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿ (WGEEP), ಪಶ್ಚಿಮ ಘಟ್ಟಗಳ ಶೇ  70ರಷ್ಟು ಪ್ರದೇಶವನ್ನು ಇಎಸ್‌ಎ ಎಂದು ಗುರುತಿಸಿತ್ತು. ಎರಡು ವರ್ಷಗಳ ಬಳಿಕ ವರದಿ ಪರಿಶೀಲಿಸಿದ ಕಸ್ತೂರಿ ರಂಗನ್‌ ಆಯೋಗವು ಶೇ 37ರಷ್ಟು ಪಶ್ಚಿಮ ಘಟ್ಟ ಪ್ರದೇಶವನ್ನು ಇಎಸ್‌ಎ ವ್ಯಾಪ್ತಿಗೆ ತಂದಿತು.

ಆದರೆ ಈ ಎರಡೂ ವರದಿಗಳ ಶಿಫಾರಸುಗಳನ್ನು ರಾಜ್ಯಗಳು (ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಹಾಗೂ ತಮಿಳುನಾಡು) ಮತ್ತು ಕೇಂದ್ರ ಸರ್ಕಾರ ಜಾರಿಗೆ ತಂದಿಲ್ಲ ಎಂದು ಕಳವಳ ವ್ಯಕ್ತಪಡಿಸಿರುವ ನ್ಯಾಯಮೂರ್ತಿಗಳು ಇದೀಗ ಎಚ್ಚೆತ್ತುಕೊಳ್ಳುವ ಸಮಯ ಬಂದಿದೆ ಎಂದರು.

Also Read
ವಿವೇಚನಾರಹಿತವಾಗಿ ಪರಿಸರ ನಾಶ ಮಾಡದೆ ಸುಸ್ಥಿರ ಅಭಿವೃದ್ಧಿಗೆ ಮುಂದಾಗುವುದು ಅಗತ್ಯ: ನ್ಯಾಯಮೂರ್ತಿ ಬಿ ಆರ್‌ ಗವಾಯಿ

ಇತ್ತೀಚೆಗೆ ಕೇರಳದ ವಯನಾಡ್‌ನಲ್ಲಿ ಉಂಟಾದ ಭೂಕುಸಿತದಲ್ಲಿ 420 ಕ್ಕೂ ಹೆಚ್ಚು ಜನರು ಸಾವನ್ನಪ್ಪಿ 118 ಕ್ಕೂ ಹೆಚ್ಚು ಮಂದಿ ನಾಪತ್ತೆಯಾದದ್ದು, ಕಳೆದ ತಿಂಗಳು ಉತ್ತರ ಕನ್ನಡದ ಶಿರೂರಿನಲ್ಲಿ ಸಂಭವಿಸಿದ ಗುಡ್ಡ ಕುಸಿತ, 2023ರ ರಾಯಗಡ ಭೂಕುಸಿತ, ಭೀಮಾಶಂಕರದ ಜಲಪಾತಕ್ಕೆ ಪ್ರವೇಶ ನಿಷೇಧ ಮತ್ತು ಉತ್ತರಾಖಂಡದ ಜ್ಯೋತಿರ್ಮಠ ಮುಳುಗಡೆ ಘಟನೆಗಳನ್ನು ಅವರು ಇದೇ ವೇಳೆ ಉದಾಹರಿಸಿದರು.

ಈ ಹಿನ್ನೆಲೆಯಲ್ಲಿ ಕಳೆದ ಎರಡು ಮೂರು ವರ್ಷಗಳಲ್ಲಿ ನಡೆದಿರುವ ಅನಾಹುತಗಳನ್ನು ಗಮನಿಸಿದರೆ ಈಗ ಸಮಸ್ಯೆಯು ಪೀಳಿಗೆಗಳ ನಡುವೆ (ಮುಂದಿನ ಪೀಳಿಗೆಗೆ) ನ್ಯಾಯ ಒದಗಿಸುವ ಕುರಿತಾಗಿ ಆಗಿರದೆ ಈ ಪೀಳಿಗೆಯವರಿಗೇ ನ್ಯಾಯ ಒದಗಿಸುವುದರ ಕುರಿತಾಗಿದೆ ಎಂದರು.

ಸಮ್ಮೇಳನದಲ್ಲಿ ನಡೆದ ಮತ್ತೊಂದು ಅಧಿವೇಶನದಲ್ಲಿ ಮಾತನಾಡಿದ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು ನ್ಯಾಯಾಂಗ ಮತ್ತು ಕಾರ್ಯಾಂಗಗಳು ಕಾಗದ ಬಳಕೆಗೆ ಹೆಚ್ಚು ಒತ್ತು ನೀಡದೆ ಎಲೆಕ್ಟ್ರಾನಿಕ್‌ ಕಾರ್ಯವಿಧಾನಕ್ಕೆ ಸ್ಥಿತ್ಯಂತರಗೊಳ್ಳುವ ಅಗತ್ಯವಿದೆ ಎಂದರು.   

ನ್ಯಾಯಾಂಗವು 3,600 ಕೋಟಿ ಪುಟಗಳನ್ನು ಡಿಜಿಟಲೀಕರಣಗೊಳಿಸುವ ಪ್ರಕ್ರಿಯೆಯಲ್ಲಿದೆ ಎಂದ ಅವರು ಅಷ್ಟು ಕಾಗದಕ್ಕೆ 45 ಅಡಿ ಉದ್ದದ 1.44 ಕೋಟಿ ಪೈನ್ (ದೇವದಾರು) ಮರಗಳನ್ನು ಕತ್ತರಿಸಬೇಕಾಗುತ್ತದೆ ಎಂದು ಗಮನ ಸೆಳೆದರು.

Also Read
ಬಂಡೀಪುರ ಸೂಕ್ಷ್ಮ ಪರಿಸರ ವಲಯದ ಜಕ್ಕಳಿ ಗ್ರಾಮದ ಜಮೀನಿನಲ್ಲಿ ಕಟ್ಟಡ ನಿರ್ಮಿಸಲು ನಟ ಗಣೇಶ್‌ಗೆ ಹೈಕೋರ್ಟ್‌ ಅನುಮತಿ

ಇದಲ್ಲದೆ, ಸಂಚಾರ ಕಡಿಮೆ ಮಾಡುವುದಕ್ಕಾಗಿ ಇ-ಫೈಲಿಂಗ್ ಮತ್ತು ಹೈಬ್ರಿಡ್ ವಿಚಾರಣೆಗಳಿಗೆ ಉತ್ತೇಜನ ನೀಡಬೇಕಿದೆ. ಪರಿಸರ ಸಂರಕ್ಷಣೆಗೆ ನ್ಯಾಯಾಂಗದ ಕೊಡುಗೆ ಎಂಬಂತೆ ಸೌರ ಮತ್ತು ಪವನ ವಿದ್ಯುತ್‌ ಚಾಲಿತ ನ್ಯಾಯಾಲಯಗಳನ್ನು ತೆರೆಯಬೇಕಿದೆ ಎಂದರು.

ಇ-ಪ್ರವಾಸೋದ್ಯಮವನ್ನು ಉತ್ತೇಜಿಸಿ ಟಿಕೆಟ್ ಮಾರಾಟದಿಂದ ಬರುವ ಆದಾಯದ ಶೇ 20ರಷ್ಟು ಹಣವನ್ನು ಪ್ರವಾಸಿತಾಣ ಇರುವ ಪುರಸಭೆಗೆ ನೀಡಬಹುದು ಎಂದು ಅವರು ಸಲಹೆ ನೀಡಿದರು.

Kannada Bar & Bench
kannada.barandbench.com