ತನಿಖೆಯೋತ್ತರ ಎಫ್ಐಆರ್ ಸಲ್ಲಿಕೆ ನ್ಯಾಯಶಾಸ್ತ್ರಕ್ಕೆ ಹೊರತಾದ ಕಲ್ಪನೆ: ಪೊಲೀಸರಿಗೆ ಗುವಾಹಟಿ ಹೈಕೋರ್ಟ್ ಛೀಮಾರಿ

ಬಿಲಾಸಿಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿಕೊಳ್ಳದೆ, ಶಿಶುವಿನೊಂದಿಗಿದ್ದ ಮಹಿಳೆಯೊಬ್ಬರನ್ನು ಬಂಧಿಸಿದ್ದ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯ ಹೀಗೆ ಕಿಡಿಕಾರಿದೆ.
Gauhati High Court Main Building
Gauhati High Court Main Building

ವ್ಯಕ್ತಿಯೊಬ್ಬರನ್ನು ಬಂಧಿಸಿ ಆನಂತರ ಕ್ರಿಮಿನಲ್ ಮೊಕದ್ದಮೆ ಹೂಡಿರುವುದನ್ನು ಸಮರ್ಥಿಸಿಕೊಳ್ಳುವುದಕ್ಕಾಗಿ ಬಿಲಾಸಿಪುರ ಪೊಲೀಸರು ʼತನಿಖೆಯೋತ್ತರ ಎಫ್‌ಐಆರ್ʼನಂತೆ ತೋರುತ್ತಿರುವುದನ್ನು ದಾಖಲಿಸಿದ್ದಾರೆ ಎಂದು ಗುವಾಹಟಿ ಹೈಕೋರ್ಟ್ ಶುಕ್ರವಾರ ಕೆಂಡಾಮಂಡಲವಾಗಿದೆ.

ಇಂತಹ ಕ್ರಮ ಕ್ರಿಮಿನಲ್ ನ್ಯಾಯಶಾಸ್ತ್ರಕ್ಕೆ ಸಂಪೂರ್ಣವಾಗಿ ಹೊರತಾದುದಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಸಂದೀಪ್ ಮೆಹ್ತಾ, ನ್ಯಾಯಮೂರ್ತಿ ದೇವಶಿಶ್‌ ಬರುವಾ ಅವರಿದ್ದ ಪೀಠ ತಿಳಿಸಿದೆ.

ಬಿಲಾಸಿಪುರ ಪೊಲೀಸ್‌ಠಾಣೆಯ ಅಧಿಕಾರಿಗಳಾದ, ಸಬ್ ಇನ್ಸ್‌ಪೆಕ್ಟರ್ ಮಾನಶ್ ಜ್ಯೋತಿ ಸೈಕಿಯಾ ಮತ್ತು ಪ್ರಭಾರ ಅಧಿಕಾರಿ ಜ್ಯೋತಿರ್ಮಯ್ ಗಯಾನ್ ಅವರು ತನಿಖೆಯೋತ್ತರ ಎಫ್‌ಐಆರ್ ದಾಖಲಿಸಿದ್ದಾರೆ ಎಂಬುದು ಹಗಲಿನಷ್ಟೇ ಸ್ಪಷ್ಟ ಎಂದು ಪೀಠ ಬೇಸರ ವ್ಯಕ್ತಪಡಿಸಿದೆ.

Also Read
[ಆಮ್ಲಜನಕ ಸಾಂದ್ರಕ ಮುಟ್ಟುಗೋಲು] ವ್ಯಾಪಾರ ಮಾಡುವುದು ಅಪರಾಧವೇ? ಪೊಲೀಸರಿಗೆ ದೆಹಲಿ ಹೈಕೋರ್ಟ್ ಪ್ರಶ್ನೆ

ಜೊತೆಗೆ ರೋಖಿಯಾ ಖಾತುನ್‌ ಅವರ ಬಂಧನವನ್ನು ಹೇಗಾದರೂ ಸರಿ ಸಮರ್ಥನೆ ಮಾಡಿಕೊಳ್ಳುವುದಕ್ಕಾಗಿ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಸ್ಪಷ್ಟವಾಗಿ ತೋರುತ್ತಿದೆ. ಇಂತಹ ಕ್ರಮ ಕ್ರಿಮಿನಲ್‌ ನ್ಯಾಯಶಾಸ್ತ್ರದ ತತ್ವಗಳಿಗೆ ಸಂಪೂರ್ಣ ಅನ್ಯವಾದುದು ಎಂದು ಅದು ನುಡಿದಿದೆ.

ಅಸ್ಸಾಂನ ಧುಬ್ರಿ ಜಿಲ್ಲೆಯ ಬಿಲಾಸಿಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿಕೊಳ್ಳದೆ ಶಿಶುವಿನೊಂದಿಗಿದ್ದ ಮಹಿಳೆಯೊಬ್ಬರನ್ನು ಬಂಧಿಸಿದ ಸುದ್ದಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ತಿಳಿಸಿದೆ.

ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಹಾಲುಣಿಸುವ ತಾಯಿಯಾಗಿದ್ದ ಮಹಿಳೆಯೊಬ್ಬರನ್ನುಯಾವೂದೇ ಎಫ್‌ಐಆರ್‌ ದಾಖಲಿಸದೆ ಸುಮಾರು ಆರು ದಿನಗಳ ಕಾಲ ಬಂಧನದಲ್ಲಿರಿಸಲಾಗಿತ್ತು. ಇದರಿಂದಾಗಿ ಆಕೆಯ ಸಹೋದರ ಹೈಕೋರ್ಟ್‌ ಮೆಟ್ಟಿಲೇರಿರುವಂತಾಗಿತ್ತು.

ಪೊಲೀಸ್ ಅಧಿಕಾರಿಗಳಿಂದ ಅಧಿಕಾರ ದುರ್ಬಳಕೆಯಾಗಿದೆ ಎಂದು ದೃಢ ಅಭಿಪ್ರಾಯವನ್ನು ನ್ಯಾಯಾಲಯ ಜೂನ್ 9ರಂದು ನೀಡಿದ್ದ ಆದೇಶದಲ್ಲಿಯೂ ವ್ಯಕ್ತಪಡಿಸಿತ್ತು.

ಅಧಿಕಾರಿಗಳು ನ್ಯಾಯಾಲಯಕ್ಕೆ ವಾಸ್ತವಿಕ ವರದಿ ಸಲ್ಲಿಸಬೇಕಿರುವ ಹಿನ್ನೆಲೆಯಲ್ಲಿ ಜೂನ್ 21ಕ್ಕೆ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.

Related Stories

No stories found.
Kannada Bar & Bench
kannada.barandbench.com