ಸರ್ಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಕ್ಕೆ ಲಂಚ ಪಡೆಯುವುದು ನಿಯಮವಾಗಿದೆ, ಇದು ಕಾನ್ಸರ್‌ಗಿಂತ ಗಂಭೀರ: ಹೈಕೋರ್ಟ್‌

ಎಲ್ಲವೂ ತಿಳಿದಿದ್ದೂ ಅರ್ಜಿದಾರರ ವಿರುದ್ಧ ಯಾವುದೇ ಕ್ರಮಕೈಗೊಳ್ಳದೇ ಸರ್ಕಾರವು ಮಂಜುನಾಥ್‌ ಅವರನ್ನು ಬೇರೆ ಇಲಾಖೆಗೆ ವರ್ಗಾಯಿಸಿದೆ ಎಂದು ಪೀಠವು ಕಿಡಿಕಾರಿದೆ.
Justice K Natarajan and Karnataka HC
Justice K Natarajan and Karnataka HC

“ಸರ್ಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಕ್ಕೆ ಲಂಚ ಪಡೆಯುವುದು ನಿಯಮವಾಗಿದೆ. ಇದು ಕ್ಯಾನ್ಸರ್‌ಗಿಂತ ಅತ್ಯಂತ ಗಂಭೀರ ರೋಗ” ಎಂದು ಕರ್ನಾಟಕ ಹೈಕೋರ್ಟ್‌ ಆಕ್ರೋಶ ವ್ಯಕ್ತಪಡಿಸಿದೆ.

ಬೆಂಗಳೂರು ನಗರದ ಹಿಂದಿನ ಜಿಲ್ಲಾಧಿಕಾರಿ ಜೆ ಮಂಜುನಾಥ್‌ ಅವರ ಜಾಮೀನು ಅರ್ಜಿಯನ್ನು ಈಚೆಗೆ ತಿರಸ್ಕರಿಸಿರುವ ನ್ಯಾಯಮೂರ್ತಿ ಕೆ ನಟರಾಜನ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಲಿಖಿತ ಆದೇಶದಲ್ಲಿ ಹಲವು ಮಹತ್ವದ ಅಂಶಗಳನ್ನು ಉಲ್ಲೇಖಿಸಿದೆ.

“ಇತ್ತೀಚಿನ ದಿನಗಳಲ್ಲಿ ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದ್ದು, ಅತ್ಯುನ್ನತ ಮಟ್ಟದಿಂದ ಕೆಳಮಟ್ಟದವರೆಗೆ ಲಂಚ ನೀಡದೇ ಯಾವುದೇ ಕಡತವು ಸಾಮಾನ್ಯವಾಗಿ ವರ್ಗಾವಣೆಯಾಗುವುದಿಲ್ಲ. ಸರ್ಕಾರಿ ಕಚೇರಿಗಳಲ್ಲಿ ಲಂಚ ಪಡೆಯುವುದು ಅಧಿಕೃತ ಕರ್ತವ್ಯವಾಗಿದ್ದು, ಇದು ಕ್ಯಾನ್ಸರ್‌ಗಿಂತ ಅತ್ಯಂತ ಗಂಭೀರವಾಗಿದೆ. ಎಲ್ಲವೂ ತಿಳಿದಿದ್ದೂ ಅರ್ಜಿದಾರರ ವಿರುದ್ಧ ಯಾವುದೇ ಕ್ರಮಕೈಗೊಳ್ಳದೇ ಸರ್ಕಾರವು ಮಂಜುನಾಥ್‌ ಅವರನ್ನು ಬೇರೆ ಇಲಾಖೆಗೆ ವರ್ಗಾಯಿಸಿದೆ” ಎಂದು ಪೀಠವು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಮುಂದುವರಿದು, “ಪ್ರಥಮ ಮಾಹಿತಿ ಹೇಳಿಕೆಯಲ್ಲಿ ದೂರುದಾರ ಆಜಂ ಪಾಷಾ ಅವರು ಮಂಜುನಾಥ್‌ ಅವರ ಹೆಸರು ಉಲ್ಲೇಖಿಸಿದ್ದರೂ ಎಫ್‌ಐಆರ್‌ನಲ್ಲಿ ಅರ್ಜಿದಾರರ ಹೆಸರು ಇಲ್ಲ. ಆದ್ದರಿಂದ, ಮಂಜುನಾಥ್‌ ಅವರಿಗೆ ಜಾಮೀನು ಮಂಜೂರು ಮಾಡಿದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವುದು ಮತ್ತು ಸಾಕ್ಷ್ಯ ತಿರುಚುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಹೀಗಾಗಿ, ತನಿಖೆ ಬಾಕಿಯಿದ್ದು, ಮೂರನೇ ಆರೋಪಿಯಾಗಿರುವ ಮಂಜುನಾಥ್‌ ಜಾಮೀನಿಗೆ ಅರ್ಹರಾಗಿಲ್ಲ” ಎಂದು ನ್ಯಾಯಾಲಯ ಹೇಳಿದೆ.

“ಮಂಜುನಾಥ್‌ ಮತ್ತು ಅಜಂ ಪಾಷಾ ಅವರ ನಡುವಿನ ಸಂಭಾಷಣೆಯನ್ನು ಪೊಲೀಸರ ಪಂಚನಾಮೆಯಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಅಜಂ ಪಾಷಾ ಮತ್ತು ಆರೋಪಿಗಳು ಪ್ರಕರಣದ ಬಗ್ಗೆ ಚರ್ಚಿಸಿದ್ದಾರೆ ಎಂಬುದು ಬಹಿರಂಗವಾಗಿದ್ದು, ದಾಖಲೆಯಲ್ಲಿ ಉಲ್ಲೇಖಿಸಿರುವಷ್ಟು ಹಣಕ್ಕೆ ಮೊದಲ ಆರೋಪಿ ಉಪತಹಶೀಲ್ದಾರ್‌ ಪಿ ಎಸ್‌ ಮಹೇಶ್‌ ಬೇಡಿಕೆ ಇಟ್ಟಿದ್ದಾರೆ. ಮಹೇಶ್‌ ಮತ್ತು ಅಜಂ ಪಾಷಾ ನಡುವಿನ ಸಂಭಾಷಣೆಯ ಡಿವಿಡಿಯನ್ನೂ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ” ಎಂದು ಆದೇಶದಲ್ಲಿ ವಿವರಿಸಲಾಗಿದೆ.

“ಮಂಜುನಾಥ್‌ ಪರ ಹಿರಿಯ ವಕೀಲರಾದ ಎಚ್‌ ಎಸ್‌ ಚಂದ್ರಮೌಳಿ ಅವರು ಸಾಮಾನ್ಯವಾಗಿ ಜಿಲ್ಲಾಧಿಕಾರಿ ಆದೇಶ ಸಿದ್ಧಪಡಿಸಿ, ಅದನ್ನು ಅಧೀನ ಅಧಿಕಾರಿಗಳಿಗೆ ನೀಡುತ್ತಾರೆ. ಆನಂತರ ಜಿಲ್ಲಾಧಿಕಾರಿ ಆದೇಶ ಓದುತ್ತಾರೆ ಎಂದು ವಾದಿಸಿದ್ದಾರೆ. ಇದು ಆದೇಶವನ್ನು ಸಿದ್ಧಪಡಿಸಿ ಅದನ್ನು ಓದದೇ ಇಟ್ಟುಕೊಳ್ಳುವುದು ಲಂಚಕ್ಕಾಗಿ ಬೇಡಿಕೆ ಇಡುವ ಕಂದಾಯ ಇಲಾಖೆಯ ಕಾರ್ಯ ರೀತಿಯನ್ನು (ಮೋಡಸ್‌ ಅಪರೆಂಡಿ) ಬಹಿರಂಗಪಡಿಸಿದೆ” ಎಂದು ಪೀಠ ಹೇಳಿದೆ.

“ಲಂಚ ಪ್ರಕರಣದ ತನಿಖೆ ನಡೆಯುತ್ತಿದ್ದು, ಪೊಲೀಸರು ಇನ್ನೂ ಸಾಕಷ್ಟು ದಾಖಲೆಗಳನ್ನು ಜಪ್ತಿ ಮಾಡಬೇಕಿದೆ. ಮಂಜುನಾಥ್‌ ಅವರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವುದಕ್ಕೆ ಹಾಗೂ ಅವರ ಆಪ್ತ ಸಹಾಯಕ ಮತ್ತು ಬಂಟ ಲಂಚ ಪಡೆದಿದ್ದಾರೆ ಎನ್ನುವುದಕ್ಕೆ ಸಂಬಂಧಿಸಿದಂತೆ ಮೇಲ್ನೋಟಕ್ಕೆ ಕಾಣುವಂಥ ಕೆಲವು ದಾಖಲೆಗಳನ್ನು ನ್ಯಾಯಾಲಯದ ಮುಂದೆ ಇಟ್ಟಿದ್ದಾರೆ. ಹೀಗಾಗಿ, ಲಂಚ ಪ್ರಕರಣದಲ್ಲಿ ಮಂಜುನಾಥ್‌ ಅವರು ಭಾಗಿಯಾಗಿಲ್ಲ ಮತ್ತು ಅದರಲ್ಲಿ ಅವರ ಪಾತ್ರವಿಲ್ಲ ಎಂದು ಹೇಳಲಾಗದು” ಎಂದು ನ್ಯಾಯಾಲಯ ಹೇಳಿದೆ.

ಆನೇಕಲ್‌ ತಾಲ್ಲೂಕಿನ ಕೂಡ್ಲು ಗ್ರಾಮದ 38 ಗುಂಟೆ ಜಮೀನು ಒಡೆತನಕ್ಕೆ ಸಂಬಂಧಿಸಿದಂತೆ ಅನುಕೂಲಕರ ಆದೇಶ ಮಾಡಲು ಅಜಂ ಪಾಷಾ ಎಂಬುವರಿಂದ 5 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಪ ತಹಶೀಲ್ದಾರ್‌ ಆಗಿದ್ದ ಪಿ ಎಸ್‌ ಮಹೇಶ್‌ ಮತ್ತು ನ್ಯಾಯಾಲಯ ವಿಭಾಗದ ಸಹಾಯಕ ಚೇತನ್‌ ಕುಮಾರ್‌ ಅಲಿಯಾಸ್‌ ಚಂದ್ರ ಅವರನ್ನು ಮೇ 21ರಂದು ಎಸಿಬಿ ಬಂಧಿಸಿತ್ತು. ಎಸಿಬಿ ಪೊಲೀಸರು ನಿಗದಿತ 60 ದಿನಗಳ ಒಳಗೆ ಆರೋಪ ಪಟ್ಟಿ ಸಲ್ಲಿಸದ ಹಿನ್ನೆಲೆಯಲ್ಲಿ ಮಹೇಶ್‌ಗೆ ವಿಚಾರಣಾಧೀನ ನ್ಯಾಯಾಲಯದಿಂದ ಡಿಫಾಲ್ಟ್‌ ಜಾಮೀನು ಸಿಕ್ಕಿದೆ. ಚಂದ್ರುವಿಗೆ ಸಾಮಾನ್ಯ ಜಾಮೀನು ದೊರೆತಿದೆ.

Also Read
[ಲಂಚ ಪ್ರಕರಣ] ಅಮಾನತುಗೊಂಡಿರುವ ಐಎಎಸ್‌ ಅಧಿಕಾರಿ ಮಂಜುನಾಥ್‌ ಜಾಮೀನು ಮನವಿ ವಜಾ ಮಾಡಿದ ಕರ್ನಾಟಕ ಹೈಕೋರ್ಟ್‌

ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಕೆ ಲಕ್ಷ್ಮಿನಾರಾಯಣ ಭಟ್‌ ಅವರು ಜುಲೈ 11ರಂದು ಮಂಜುನಾಥ್‌ ಅವರ ಜಾಮೀನು ಮನವಿಯನ್ನು ವಜಾಗೊಳಿಸಿದ್ದರು. ಜುಲೈ 4ರಂದು ಮಂಜುನಾಥ್‌ ಬಂಧನವಾಗಿದ್ದು, ಅಂದಿನಿಂದಲೂ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

ಮಂಜುನಾಥ್‌ ಅವರನ್ನು ಹಿರಿಯ ವಕೀಲರಾದ ಎಚ್‌ ಎಸ್‌ ಚಂದ್ರಮೌಳಿ, ವಕೀಲೆ ಕೀರ್ತನಾ ನಾಗರಾಜ್‌ ಪ್ರತಿನಿಧಿಸಿದ್ದರು. ಎಸಿಬಿಯನ್ನು ವಿಶೇಷ ಸರ್ಕಾರಿ ಅಭಿಯೋಜಕ ಪಿ ಎನ್‌ ಮನಮೋಹನ್‌ ಪ್ರತಿನಿಧಿಸಿದ್ದರು.

Related Stories

No stories found.
Kannada Bar & Bench
kannada.barandbench.com