ಗಾಜಿಯಾಬಾದ್‌ನಲ್ಲಿ ಮುಸ್ಲಿಮ್ ಸಮುದಾಯದ ವ್ಯಕ್ತಿಯ ಮೇಲೆ ಹಲ್ಲೆ ನಡೆದ ಕುರಿತು ಮಾಡಲಾದ ಟ್ವೀಟ್‌ಗಾಗಿ ಉತ್ತರ ಪ್ರದೇಶ ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಫ್ಯಾಕ್ಟ್ ಚೆಕ್ ಜಾಲತಾಣ ʼಆಲ್ಟ್‌ನ್ಯೂಸ್ʼ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್ ಅವರಿಗೆ ತಮ್ಮ ಟ್ರಾನ್ಸಿಟ್ ಜಾಮೀನು ಅರ್ಜಿ ಹಿಂಪಡೆಯಲು ಕರ್ನಾಟಕ ಹೈಕೋರ್ಟ್ ಮಂಗಳವಾರ ಅನುಮತಿ ನೀಡಿದೆ.
ಸಿಆರ್‌ಪಿಸಿ ಸೆಕ್ಷನ್ 41 ಎ ಅಡಿಯಲ್ಲಿ ಪೊಲೀಸರು ನೀಡಿದ್ದ ನೋಟಿಸ್‌ನಂತೆ ಅರ್ಜಿದಾರ ಜುಬೈರ್ ಸೋಮವಾರ ಪೊಲೀಸರ ಮುಂದೆ ಹಾಜರಾಗಿದ್ದು ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಅರ್ಜಿದಾರರ ಪರ ವಕೀಲೆ ವೃಂದಾ ಗ್ರೋವರ್ ಅವರು ಪೀಠಕ್ಕೆ ತಿಳಿಸಿದ ಬಳಿಕ ಈ ಆದೇಶ ಹೊರಡಿಸಲಾಗಿದೆ.
ಭವಿಷ್ಯದಲ್ಲಿ ಪ್ರತಿವಾದಿ ಪೊಲೀಸರಿಂದ ಬಂಧನದ ಬೆದರಿಕೆ ಇದ್ದರೆ ನ್ಯಾಯಾಲಯವನ್ನು ಸಂಪರ್ಕಿಸುವ ಸ್ವಾತಂತ್ರ್ಯದೊಂದಿಗೆ ಅರ್ಜಿ ಹಿಂಪಡೆಯಲು ಜುಬೈರ್‌ಗೆ ಅನುಮತಿ ನೀಡಬಹುದು ಎಂದು ಮನವಿ ಮಾಡಲಾಯಿತು.
"ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದ ವಕೀಲೆ ವೃಂದಾ ಗ್ರೋವರ್ ಅವರು ಅರ್ಜಿಯನ್ನು ಹಿಂಪಡೆಯಲು ನ್ಯಾಯಾಲಯದ ಅನುಮತಿ ಕೋರಿದ್ದು, ಅರ್ಜಿದಾರರಿಗೆ ಯಾವುದೇ ಸಮಯದಲ್ಲಿ ಬಂಧನದ ಬೆದರಿಕೆ ಇದ್ದಲ್ಲಿ ಸಕಾಲದಲ್ಲಿ ನ್ಯಾಯಾಲಯವನ್ನು ಸಂಪರ್ಕಿಸಲು ಸ್ವಾತಂತ್ರ್ಯ ಮೀಸಲಿಡಲಾಗಿದೆ. ವಿನಂತಿಯನ್ನು ಅನುಮತಿಸಲಾಗಿದೆ. ಮನವಿದಾರರು ಅರ್ಜಿಯನ್ನು ಹಿಂತೆಗೆದುಕೊಂಡಿರುವುದರಿಂದ ವಿಲೇವಾರಿ ಮಾಡಲಾಗಿದೆ” ಎಂದು ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ತಮ್ಮ ಆದೇಶದಲ್ಲಿ ದಾಖಲಿಸಿದ್ದಾರೆ. ಕಳೆದ ವಾರ ಜುಬೈರ್ ಮನವಿಗೆ ಸಂಬಂಧಿಸಿದಂತೆ ನ್ಯಾಯಾಲಯ ನೋಟಿಸ್ ನೀಡಿತ್ತು.
ಕೆಲವು ದಾಳಿಕೋರರು ಮುಸ್ಲಿಮ್ ವ್ಯಕ್ತಿಯ ಗಡ್ಡ ಕತ್ತರಿಸಿದ ವಿಡಿಯೊ ಟ್ವೀಟ್ ಮಾಡಿದ್ದಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಸುದ್ದಿತಾಣ ʼದಿ ವೈರ್ʼ, ಸಾಮಾಜಿಕ ಜಾಲತಾಣವಾದ ʼಟ್ವಿಟರ್ʼ, ಪತ್ರಕರ್ತರಾದ ರಾಣಾ ಆಯೂಬ್, ಸಬಾ ನಖ್ವಿ, ಕಾಂಗ್ರೆಸ್ ಮುಖಂಡರಾದ ಶಮಾ ಮೊಹಮ್ಮದ್, ಸಲ್ಮಾನ್ ನಿಜಾಮಿ ಮತ್ತು ಮಸ್ಕೂರ್ ಉಸ್ಮಾನಿ ಮತ್ತು ʼಆಲ್ಟ್ ನ್ಯೂಸ್ʼ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್ ಮತ್ತಿತರರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.
ʼಟ್ವಿಟರ್ʼ ವ್ಯವಸ್ಥಾಪಕ ನಿರ್ದೇಶಕ ಮನೀಷ್ ಮಹೇಶ್ವರಿ ಅವರಿಗೆ ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಮಧ್ಯಂತರ ರಕ್ಷಣೆ ಒದಗಿಸಿತ್ತು. ಇದನ್ನು ಉತ್ತರಪ್ರದೇಶ ಪೊಲೀಸರು ಸುಪ್ರೀಂಕೋರ್ಟ್‌ನಲ್ಲಿ ಸೋಮವಾರ ಪ್ರಶ್ನಿಸಿದ್ದಾರೆ.