ಗಾಜಿಯಾಬಾದ್ ದಾಳಿ ವಿಡಿಯೊ ಪ್ರಸಾರ ಕುರಿತು ಉತ್ತರಪ್ರದೇಶ ಪೊಲೀಸರು ಸಲ್ಲಿಸಿದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಗುರುವಾರ ಟ್ವಿಟರ್ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ಅವರಿಗೆ ಬಂಧನದಿಂದ ಮಧ್ಯಂತರ ರಕ್ಷಣೆ ಒದಗಿಸಿದೆ.
ಮಧ್ಯಂತರ ರಕ್ಷಣೆಯ ಆದೇಶ ಜಾರಿಯಲ್ಲಿರುವಾಗ ಮಹೇಶ್ವರಿ ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ನ್ಯಾಯಾಲಯ ಉತ್ತರಪ್ರದೇಶ ಪೊಲೀಸರಿಗೆ ನಿರ್ದೇಶನ ನೀಡಿದೆ.
ಪ್ರಕರಣದ ಮುಂದಿನ ವಿಚಾರಣೆ ಜೂನ್ 29ರಂದು ನಡೆಯಲಿದೆ. ಸಿಆರ್‌ಪಿಸಿ ಸೆಕ್ಷನ್ 41ಎ ಅಡಿಯಲ್ಲಿ ಉತ್ತರಪ್ರದೇಶ ಪೊಲೀಸರು ನೀಡಿದ್ದ ನೋಟಿಸ್ ಪ್ರಶ್ನಿಸಿ ಮಹೇಶ್ವರಿ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.
ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ಕೆಲವು ದಾಳಿಕೋರರು ಮುಸ್ಲಿಂ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬರ ಗಡ್ಡ ಕತ್ತರಿಸಿದ್ದಾರೆ ಎಂಬ ವೀಡಿಯೊ ಟ್ವೀಟ್ ಮಾಡಿದ್ದಕ್ಕಾಗಿ ಸಾಮಾಜಿಕ ಮಾಧ್ಯಮ ಜಾಲತಾಣ ಟ್ವಿಟರ್, ಸುದ್ದಿತಾಣ ದಿ ವೈರ್ , ಪತ್ರಕರ್ತರಾದ ರಾಣಾ ಅಯೂಬ್ ಮತ್ತು ಸಬಾ ನಖ್ವಿ, ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್, ಕಾಂಗ್ರೆಸ್ ರಾಜಕಾರಣಿಗಳಾದ ಶಾಮಾ ಮೊಹಮ್ಮದ್, ಸಲ್ಮಾನ್ ನಿಜಾಮಿ ಮತ್ತು ಮಸ್ಕೂರ್ ಉಸ್ಮಾನಿ ವಿರುದ್ಧ ಪೊಲೀಸರು ಇತ್ತೀಚೆಗೆ ಎಫ್‌ಐಆರ್ ದಾಖಲಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಅವರಲ್ಲಿ ಕೆಲವರಿಗೆ ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು, ಮತ್ತೆ ಕೆಲವರಿಗೆ ಮಧ್ಯಂತರ ರಕ್ಷಣೆ ದೊರೆತಿದೆ.