ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ಕೆಲವು ದಾಳಿಕೋರರು ಮುಸ್ಲಿಂ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬರ ಗಡ್ಡ ಕತ್ತರಿಸಿದ್ದಾರೆ ಎಂಬ ವೀಡಿಯೊ ಟ್ವೀಟ್ ಮಾಡಿದ್ದಕ್ಕಾಗಿ ಸಾಮಾಜಿಕ ಮಾಧ್ಯಮ ಜಾಲತಾಣ ಟ್ವಿಟರ್, ಸುದ್ದಿತಾಣ ದಿ ವೈರ್ , ಪತ್ರಕರ್ತರಾದ ರಾಣಾ ಅಯೂಬ್ ಮತ್ತು ಸಬಾ ನಖ್ವಿ, ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್, ಕಾಂಗ್ರೆಸ್ ರಾಜಕಾರಣಿಗಳಾದ ಶಾಮಾ ಮೊಹಮ್ಮದ್, ಸಲ್ಮಾನ್ ನಿಜಾಮಿ ಮತ್ತು ಮಸ್ಕೂರ್ ಉಸ್ಮಾನಿ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ವೀಡಿಯೊದಲ್ಲಿ ಮುಸ್ಲಿಂ ವ್ಯಕ್ತಿಯ ಮೇಲೆ ಹಿಂದೂಗಳು ದಾಳಿ ನಡೆಸುತ್ತಿರುವಂತೆ ಚಿತ್ರಿತವಾಗಿದೆ. ಆದರೆ ಪೊಲೀಸರು "ದಾಳಿ ಮಾಡಿದ್ದು ಹಿಂದೂ ಮತ್ತು ಮುಸ್ಲಿಂ ಸಮುದಾಯಗಳೆರಡಕ್ಕೂ ಸೇರಿದವರು" ಎಂದು ತಿಳಿಸಿದ್ದು "ಇದಕ್ಕೆ ಖಾಸಗಿ ವೈಮನಸ್ಸು ಕಾರಣವೇ ಹೊರತು ಕೋಮುದ್ವೇಷವಲ್ಲ" ಎಂದು ಪ್ರತಿಪಾದಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 153 (ಗಲಭೆಗೆ ಪ್ರಚೋದನೆ), 153 ಎ (ಧಾರ್ಮಿಕ ಗುಂಪುಗಳ ನಡುವೆ ದ್ವೇಷಕ್ಕೆ ಪ್ರಚೋದನೆ), 295 ಎ (ಧಾರ್ಮಿಕ ನಂಬಿಕೆಗಳಿಗೆ ಅಪಮಾನ), 505 (ಸಾರ್ವಜನಿಕ ಕಿಡಿಗೇಡಿತನ), 120 ಬಿ (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ.