ಗಿರ್ ವನ್ಯಜೀವಿ ಅಭಯಾರಣ್ಯದಲ್ಲಿ ಸಿಂಹಗಳು ಆಗಾಗ್ಗೆ ರೈಲಿಗೆ ಸಿಲುಕಿ ಸಾವನ್ನಪ್ಪುವುದನ್ನು ತಪ್ಪಿಸಲು ಯೋಜನೆ ರೂಪಿಸುವಲ್ಲಿ ರಾಜ್ಯ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ರೈಲ್ವೇ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಗುಜರಾತ್ ಹೈಕೋರ್ಟ್ ಇತ್ತೀಚೆಗೆ ಮತ್ತೆ ಅಸಮಾಧಾನ ವ್ಯಕ್ತಪಡಿಸಿದೆ [ಸ್ವಯಂ ಪ್ರೇರಿತ ಮೊಕದ್ದಮೆ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಪರಿಸ್ಥಿತಿ ನಿಯಂತ್ರಿಸಲು ಎರಡೂ ಇಲಾಖೆಯ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ ಮತ್ತು ತಾನು ಈ ಹಿಂದೆ ನೀಡಿದ್ದ ನಿರ್ದೇಶನ ಪಾಲಿಸಲು ವಿಫಲರಾಗಿದ್ದಾರೆ ಎಂದು ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್ವಾಲ್ ಮತ್ತು ನ್ಯಾಯಮೂರ್ತಿ ಪ್ರಣವ್ ತ್ರಿವೇದಿ ಅವರಿದ್ದ ಪೀಠ ಕಿಡಿಕಾರಿತು.
ರೈಲು ಡಿಕ್ಕಿಯಿಂದ ಸಿಂಹಗಳು ಸಾಯುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯವು ಈ ಹಿಂದೆ ಅಧಿಕಾರಿಗಳಿಗೆ ಆದೇಶಿಸಿತ್ತು. ಗಿರ್ ಅಭಯಾರಣ್ಯದಲ್ಲಿರುವ ಯಾವುದೇ ಪ್ರಾಣಿಗಳಿಗೆ ಹೊರಗಿನ ಸಂಗತಿಗಳಿಂದ ಹಾನಿಯಾಗದಂತೆ ನೋಡಿಕೊಳ್ಳುವುದು ರಾಜ್ಯ ಅರಣ್ಯ ಇಲಾಖೆ ಕರ್ತವ್ಯ ಎಂದು ನ್ಯಾಯಾಲಯ ಆ ಸಮಯದಲ್ಲಿ ಎಚ್ಚರಿಕೆ ನೀಡಿತ್ತು.
ಆದರೂ ಕಳೆದ ಒಂದೇ ತಿಂಗಳಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ ಎರಡು ಮರಿಗಳು ಸೇರಿದಂತೆ ಒಟ್ಟು ನಾಲ್ಕು ಸಿಂಹಗಳು ಮೃತಪಟ್ಟಿರುವುದು ನ್ಯಾಯಾಲಯ ಸಿಟ್ಟಿಗೇಳಲು ಕಾರಣವಾಯಿತು.
ಎರಡು ಘಟನೆಗಳು ಒಂದು ವಾರ ಇಲ್ಲವೇ ಅದಕ್ಕಿಂತಲೂ ಕಡಿಮೆ ಅವಧಿಯಲ್ಲಿ ನಡೆದಿದ್ದು ಅರಣ್ಯ ಇಲಾಖೆ ಮತ್ತು ರೈಲ್ವೆ ಇಲಾಖೆ ಅಧಿಕಾರಿಗಳ ಕಾರ್ಯವೈಖರಿಗೆ ಕನ್ನಡಿ ಹಿಡಿಯುತ್ತಿದೆ. ಇಂತಹ ಘಟನೆಗಳು ಮರುಕಳಿಸದಂತೆ ಮಾಡಲು ಏನು ಪ್ರಯತ್ನ ಕೈಗೊಳ್ಳಲಾಗುವುದು ಎನ್ನುವುದಕ್ಕೆ ಸಂಬಂಧಿಸಿದಂತೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರ ಅಫಿಡವಿಟ್ ಮೌನವಹಿಸಿದೆ ಎಂಬುದಾಗಿ ನ್ಯಾಯಾಲಯ ಹೇಳಿದೆ.
ಹೀಗಾಗಿ ಇಂತಹ ಪ್ರತಿಕ್ರಿಯೆ ತನ್ನ ಹಿಂದಿನ ನಿರ್ದೇಶನಗಳಿಂದ ನುಣುಚಿಕೊಳ್ಳುವ ಯತ್ನ ಯಾಕಲ್ಲ ಎಂಬುದನ್ನು ಜುನಾಗಢ್‌ನ ಅರಣ್ಯಾಧಿಕಾರಿ ವಿವರಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಹಳಿಯ ಇಕ್ಕೆಲಗಳಲ್ಲಿ ಬೇಲಿ ಹಾಕುವ, ಅಥವಾ ರೈಲುಗಳ ವೇಗ ಕಡಿಮೆ ಮಾಡುವ ಬಗ್ಗೆ ಅಮಿಕಸ್ ಕ್ಯೂರಿ ವರದಿ ಸಲ್ಲಿಸಿದ್ದರು. ಆದರೆ, ರೈಲ್ವೆ ಇಲಾಖೆಯಾಗಲಿ ಅಥವಾ ಅರಣ್ಯ ಇಲಾಖೆಯಾಗಲಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ . ಪರಿಣಾಮ ನಾಲ್ಕು ಸಿಂಹಗಳು ಮೃತಪಟ್ಟವು ಎಂದು ನ್ಯಾಯಾಲಯ ಹೇಳಿದೆ.
ಈ ಸಂಬಂಧ ಅರಣ್ಯ ಇಲಾಖೆಗೆ ಶೋಕಾಸ್ ನೋಟಿಸ್ ನೀಡಿದ ಪೀಠ ಮತ್ತು ಏಪ್ರಿಲ್ 23 ರಂದು ನ್ಯಾಯಾಲಯದ ಆದೇಶದಂತೆ ರಚಿಸಲಾದ ಉನ್ನತ ಮಟ್ಟದ ಸಮಿತಿಯ ಮುಂದೆ ಘಟನೆಗೆ ಕಾರಣಗಳನ್ನು ತಿಳಿಸುವಂತೆ ಸೂಚಿಸಿತು.
ಸಿಂಹಗಳು ಬೇಟೆಯಾಡಲು ಬಂದು ರೈಲುಗಳಿಗೆ ಸಿಲುಕುತ್ತಿವೆ ಎಂಬ ರೈಲ್ವೆ ಇಲಾಖೆಯ ವಾದವನ್ನು ನ್ಯಾಯಾಲಯ ಈ ಹಿಂದೆ ತಿರಸ್ಕರಿಸಿತ್ತು. ದೇಶದ ಹೆಮ್ಮೆಯ ಸಿಂಹಗಳನ್ನು ಹೇಗೆ ಉಳಿಸಬೇಕು ಎಂಬುದರ ಬಗ್ಗೆ ರೈಲ್ವೆ ಮತ್ತು ಅರಣ್ಯ ಅಧಿಕಾರಿಗಳು ಒಗ್ಗೂಡಿ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಪೀಠ ಬುದ್ಧಿವಾದ ಹೇಳಿತ್ತು. ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ 30 ರಂದು ನಡೆಯಲಿದೆ.