ಕೇತಗಾನಹಳ್ಳಿ ಭೂ ಹಗರಣ: ನ್ಯಾಯಾಂಗ ನಿಂದನೆ ಅರ್ಜಿಯಲ್ಲಿ ಎಚ್‌ಡಿಕೆ ಆರೋಪಿಯಾಗಿಸಲು ಹೈಕೋರ್ಟ್‌ ನಿರ್ದೇಶನ

ಲೋಕಾಯುಕ್ತ ವರದಿಯಲ್ಲಿ ಕುಮಾರಸ್ವಾಮಿ ಅವರನ್ನು ಆರೋಪಮುಕ್ತ ಮಾಡಲಾಗಿದೆ. ವಿಭಾಗೀಯ ಪೀಠದ ಮುಂದಿದ್ದ ಅರ್ಜಿಯಲ್ಲೂ ಅವರನ್ನು ಪ್ರತಿವಾದಿಯನ್ನಾಗಿಸಲಾಗಿಲ್ಲ. ಹಾಗಾಗಿ, ವಾದ ಮಂಡನೆಗೆ ಅವಕಾಶ ಸಿಕ್ಕಿಲ್ಲ ಎಂದು ಹಿರಿಯ ವಕೀಲ ಉದಯ್‌ ಹೊಳ್ಳ ವಾದ.
HD Kumaraswamy Karnataka HC
HD Kumaraswamy Karnataka HC
Published on

ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿ ಒತ್ತುವರಿ ತೆರವು ಸಂಬಂಧ ದಾಖಲಾಗಿರುವ ನ್ಯಾಯಾಂಗ ನಿಂದನೆ ಅರ್ಜಿಯಲ್ಲಿ ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಅವರನ್ನು ಆರೋಪಿಯನ್ನಾಗಿಸಿ, ಅರ್ಜಿಗೆ ತಿದ್ದುಪಡಿ ಮಾಡಲು ಕರ್ನಾಟಕ ಹೈಕೋರ್ಟ್‌ ಗುರುವಾರ ಸಮಾಜ ಪರಿವರ್ತನಾ ಸಮುದಾಯಕ್ಕೆ ನಿರ್ದೇಶಿಸಿದೆ.

ಕುಮಾರಸ್ವಾಮಿ ಅವರ ಅರ್ಜಿ ಇತ್ಯರ್ಥಪಡಿಸುವಾಗ ಸುಪ್ರೀಂ ಕೋರ್ಟ್‌ ಮಾಡಿರುವ ಆದೇಶದ ಅನ್ವಯ ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್‌ ಮತ್ತು ಕೆ ವೆಂಕಟೇಶ್‌ ನಾಯ್ಕ್‌ ಅವರ ವಿಭಾಗೀಯ ಪೀಠವು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿರುವ ಸಮಾಜ ಪರಿವರ್ತನಾ ಸಮುದಾಯದ ಪರ ಹಿರಿಯ ವಕೀಲ ಎಸ್‌ ಬಸವರಾಜು ಅವರಿಗೆ ಕುಮಾರಸ್ವಾಮಿ ಅವರನ್ನು ಮೂರನೇ ಆರೋಪಿಯನ್ನಾಗಿಸಿ ತಿದ್ದುಪಡಿ ಮಾಡುವಂತೆ ನಿರ್ದೇಶಿಸಿತು. ಅಲ್ಲದೇ, ಕುಮಾರಸ್ವಾಮಿ ಪರ ಹಿರಿಯ ವಕೀಲ ಉದಯ್‌ ಹೊಳ್ಳ ಅವರಿಗೆ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಆದೇಶಿಸಿದ್ದು, ಆನಂತರ ಪ್ರತ್ಯುತ್ತರ ದಾಖಲಿಸಲು ಬಸವರಾಜು ಅವರಿಗೆ ಅನುಮತಿಸಿ, ವಿಚಾರಣೆಯನ್ನು ಜೂನ್‌ 10ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ, ಕುಮಾರಸ್ವಾಮಿ ಪ್ರತಿನಿಧಿಸಿದ್ದ ಉದಯ್‌ ಹೊಳ್ಳ ಅವರು “ಲೋಕಾಯುಕ್ತ ವರದಿಯಲ್ಲಿ ಕುಮಾರಸ್ವಾಮಿ ಅವರನ್ನು ಆರೋಪಮುಕ್ತ ಮಾಡಲಾಗಿದೆ. ವಿಭಾಗೀಯ ಪೀಠದ ಮುಂದಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲೂ ಕುಮಾರಸ್ವಾಮಿಯನ್ನು ಪ್ರತಿವಾದಿಯನ್ನಾಗಿಸಲಾಗಿಲ್ಲ. ನ್ಯಾಯಾಂಗ ನಿಂದನೆ ಅರ್ಜಿಯಲ್ಲೂ ಅವರನ್ನು ಆರೋಪಿಯನ್ನಾಗಿಸಲಾಗಿಲ್ಲ. ತಮ್ಮ ವಾದವನ್ನು ಮಂಡಿಸಲು ಅವಕಾಶವೇ ಸಿಕ್ಕಿಲ್ಲ. ಹೀಗಾಗಿ, ಹಾಲಿ ಅರ್ಜಿಯಲ್ಲಿ ತಮ್ಮನ್ನು ಆರೋಪಿಯನ್ನಾಗಿಸಲು ಕೋರಿ ಅರ್ಜಿ ಸಲ್ಲಿಸಲಾಗಿದೆ” ಎಂದರು.

Also Read
ಎಚ್‌ಡಿಕೆ ಭೂಒತ್ತುವರಿ: ದಾಖಲೆ ನಾಪತ್ತೆ ಎಂದ ಅಧಿಕಾರಿ ಕಠಾರಿಯಾ, ಜಮೀನು ನಾಪತ್ತೆಯಾಗಬಹುದು ಎಂದು ಹೈಕೋರ್ಟ್‌ ಕಿಡಿ

ಬಸವರಾಜು ಅವರು “ವಿಭಾಗೀಯ ಪೀಠದ ಮುಂದಿದ್ದ ಪಿಐಎಲ್‌ನಲ್ಲಿ ಹಲವು ಮಂದಿಯನ್ನು ಪ್ರತಿವಾದಿಗಳನ್ನಾಗಿಸಲಾಗಿತ್ತು. ನ್ಯಾಯಾಲಯದ ಸೂಚನೆ ಆಧರಿಸಿ ಎಲ್ಲರನ್ನೂ ಕೈಬಿಡಲಾಗಿತ್ತು. ಆನಂತರ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವಾಗ ರಿಜಿಸ್ಟ್ರಿ ಆಕ್ಷೇಪಿಸಿದ್ದರಿಂದ ಕುಮಾರಸ್ವಾಮಿ ಮತ್ತಿತರರ ಹೆಸರನ್ನು ಕೈಬಿಡಲಾಗಿತ್ತೇ ವಿನಾ ಉದ್ದೇಶಪೂರ್ವಕವಾಗಿಯಲ್ಲ. ಆರೋಪಿಯಾಗಿ ಕುಮಾರಸ್ವಾಮಿ ಅವರು ಪ್ರಕರಣದಲ್ಲಿ ಭಾಗಿಯಾಗುವುದು ಸಮಂಜಸವಾಗಿದೆ” ಎಂದು ವಿವರಿಸಿದರು.

ಮಾರ್ಚ್‌ 28ರಂದು ಸುಪ್ರೀಂ ಕೋರ್ಟ್‌ ನ್ಯಾಯಾಂಗ ನಿಂದನೆ ಅರ್ಜಿ ಸಂಬಂಧ ಹೈಕೋರ್ಟ್‌ ಎಡತಾಕಲು ಕುಮಾರಸ್ವಾಮಿ ಅವರಿಗೆ ಸೂಚಿಸಿತ್ತು. ಇದರ ಆಧಾರದಲ್ಲಿ ಕುಮಾರಸ್ವಾಮಿ ಅವರು ಹೈಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದರು.

Kannada Bar & Bench
kannada.barandbench.com