ಹಿಂದಿ ಭಾಷಿಕರ ಮೇಲಿನ ದೌರ್ಜನ್ಯ: ರಾಜ್ ಠಾಕ್ರೆ ವಿರುದ್ಧದ ಅರ್ಜಿ, ಬಾಂಬೆ ಹೈಕೋರ್ಟ್‌ ಎಡತಾಕಲು ಸೂಚಿಸಿದ ಸುಪ್ರೀಂ

ಉತ್ತರ ಭಾರತೀಯರ ಒಳಿತಿಗಾಗಿ ರೂಪುಗೊಂಡಿರುವ ರಾಜಕೀಯ ಪಕ್ಷ ಉತ್ತರ ಭಾರತೀಯ ವಿಕಾಸ್ ಸೇನೆ ರಾಷ್ಟ್ರೀಯ ಘಟಕದ ಅಧ್ಯಕ್ಷ ಸುನೀಲ್ ಶುಕ್ಲಾ ಈ ಅರ್ಜಿ ಸಲ್ಲಿಸಿದ್ದರು.
Raj Thackeray and Supreme Court
Raj Thackeray and Supreme Court
Published on

ಹಿಂದಿ ಭಾಷಿಕರನ್ನು ಗುರಿಯಾಗಿಸಿಕೊಂಡು ದ್ವೇಷ ಭಾಷಣ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ವಿರುದ್ಧ  ಎಫ್‌ಐಆರ್ ದಾಖಲಿಸುವಂತೆ ಮತ್ತು ಎಂಎನ್‌ಎಸ್‌ ಮಾನ್ಯತೆ ರದ್ದುಗೊಳಿಸಲು ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ [ಸುನೀಲ್ ಶುಕ್ಲಾ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಮೊದಲು ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವಂತೆ ಅರ್ಜಿದಾರರ ಪರ ವಕೀಲರಿಗೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆ ವಿನೋದ್ ಚಂದ್ರನ್ ಅವರಿದ್ದ ಪೀಠ ಸೂಚಿಸಿತು. ಅದರಂತೆ ಅರ್ಜಿದಾರರು ಮನವಿ ಹಿಂಪಡೆಯಲು ಅದು ಅನುಮತಿಸಿತು.

Also Read
[ಹಿಂದಿ ಹೇರಿಕೆ] ₹2,151 ಕೋಟಿ ಶಿಕ್ಷಣ ನಿಧಿ ಸ್ಥಗಿತ: ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋದ ತಮಿಳುನಾಡು

ಮಾರ್ಚ್ 2025ರಲ್ಲಿ ಗುಡಿ ಪಾಡ್ವಾ ಮೆರವಣಿಗೆ ವೇಳೆ, ಠಾಕ್ರೆ ಉತ್ತರ ಭಾರತೀಯರ ವಿರುದ್ಧ, ಅದರಲ್ಲಿಯೂ ಮರಾಠಿ ಮಾತನಾಡದ ಸಾರ್ವಜನಿಕರೊಂದಿಗೆ ದಿನನಿತ್ಯ ವ್ಯವಹರಿಸುವವರನ್ನು ಗುರಿಯಾಗಿಸಿಕೊಂಡು ಹಿಂಸೆಗೆ ಕುಮ್ಮಕ್ಕು ನೀಡುವ ಬಹಿರಂಗ ಭಾಷಣ ಮಾಡಿದ್ದರು ಎಂದು ಶುಕ್ಲಾ ಅರ್ಜಿ ಸಲ್ಲಿಸಿದ್ದರು.

ಟಿವಿ ವಾಹಿನಿಯಲ್ಲಿ ಭಾಷಣ ಪ್ರಸಾರವಾದ ಮೇಲೆ ಮುಂಬೈನಲ್ಲಿ ಹಿಂದಿ ಮಾತನಾಡುವ ಕಾರ್ಮಿಕರ ವಿರುದ್ಧ ಪೊವೈ ಮತ್ತು ವರ್ಸೋವಾ ಸೇರಿದಂತೆ ವಿವಿಧೆಡೆ ಹಿಂಸಾಚಾರಕ್ಕೆ ಕಾರಣವಾಯಿತು ಎಂದು ಶುಕ್ಲಾ ಹೇಳಿದ್ದರು.

Also Read
ಹಿಂದಿ ಹೇರಿಕೆ ಕೂಗಿನ ನಡುವೆಯೇ ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳದಲ್ಲಿ ಎನ್ಇಪಿ ಜಾರಿ ಕೋರಿ ಸುಪ್ರೀಂಗೆ ಅರ್ಜಿ

ಸಾಮಾಜಿಕ ಮಾಧ್ಯಮಗಳಲ್ಲಿ ತಮಗೆ ವೈಯಕ್ತಿಕವಾಗಿ ಜೀವ ಬೆದರಿಕೆ ಹಾಕಲಾಗಿದ್ದು, 100ಕ್ಕೂ ಹೆಚ್ಚು ಅನಾಮಧೇಯ ಕರೆಗಳು ಬಂದಿವೆ. ಅಕ್ಟೋಬರ್ 6, 2024ರಂದು, ಎಂಎನ್‌ಎಸ್‌ನೊಂದಿಗೆ ಸಂಯೋಜಿತವಾಗಿರುವ ಸುಮಾರು 30 ವ್ಯಕ್ತಿಗಳ ಗುಂಪು ಮುಂಬೈನಲ್ಲಿರುವ ಉತ್ತರ ಭಾರತೀಯ ವಿಕಾಸ ಸೇನೆ ಪಕ್ಷದ ಕಚೇರಿಯನ್ನು ಧ್ವಂಸ ಮಾಡಲು ಯತ್ನಿಸಿತ್ತು ಎಂದು ಅವರು ಆರೋಪಿಸಿದ್ದರು.

ಮಹಾರಾಷ್ಟ್ರದ ಮುಖ್ಯಮಂತ್ರಿ, ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಭಾರತದ ಚುನಾವಣಾ ಆಯೋಗಕ್ಕೆ ಹಲವು ಬಾರಿ ಲಿಖಿತ ದೂರುಗಳನ್ನು ನೀಡಿದ್ದರೂ, ಎಫ್‌ಐಆರ್‌ ದಾಖಲಿಸಲಿಲ್ಲ ಅಥವಾ ತಮ್ಮ ಅಥವಾ ತಮ್ಮ ಪಕ್ಷದ ಸದಸ್ಯರಿಗೆ ಯಾವುದೇ ರಕ್ಷಣೆ ನೀಡಲಿಲ್ಲ ಎಂದು ಅವರು ಅರ್ಜಿಯಲ್ಲಿ ವಿವರಿಸಿದ್ದರು.

ಅರ್ಜಿದಾರರ ಪರವಾಗಿ ವಕೀಲರಾದ ಅಬಿದ್ ಅಲಿ ಬೀರನ್, ಶ್ರೀರಾಮ್ ಪರಾಕ್ಕಟ್‌, ಆನಂದು ಎಸ್ ನಾಯರ್ ಮತ್ತು ಮನೀಶಾ ಸುನೀಲ್ ಕುಮಾರ್ ವಾದ ಮಂಡಿಸಿದರು.

Kannada Bar & Bench
kannada.barandbench.com