[ಕೇರಳ ರಾಜ್ಯಪಾಲರ ಪ್ರಕರಣ] ಅರ್ಜಿ ಹಿಂಪಡೆಯಲು ರಾಜ್ಯ ಸರ್ಕಾರ ನಿರ್ಧಾರ: ಕೇಂದ್ರದ ವಿರೋಧ

ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಅರ್ಜಿ ಹಿಂಪಡೆಯುವುದಕ್ಕೆ ವಿರೋಧ ವ್ಯಕ್ತಪಡಿಸಿದರು.
Supreme Court and Kerala
Supreme Court and Kerala
Published on

ರಾಜ್ಯ ವಿಧಾನಸಭೆ ಅಂಗೀಕರಿಸಿದ ಮಸೂದೆಗಳಿಗೆ ಒಪ್ಪಿಗೆ ನೀಡದ ರಾಜ್ಯಪಾಲರ ವಿರುದ್ಧ ಸಲ್ಲಿಸಿದ್ದ ಅರ್ಜಿಗಳನ್ನು ಹಿಂಪಡೆಯಲು ಬಯಸುವುದಾಗಿ ಕೇರಳ ಸರ್ಕಾರ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ರಾಜ್ಯಪಾಲರು ಮಸೂದೆಗಳನ್ನು ರಾಷ್ಟ್ರಪತಿಗಳಿಗೆ ಉಲ್ಲೇಖಿಸಿರುವ ಹಿನ್ನೆಲೆಯಲ್ಲಿ ಕೇರಳ ಸರ್ಕಾರದ ಪರ ಹಾಜರಿದ್ದ ಹಿರಿಯ ವಕೀಲ ಹಾಗೂ ಮಾಜಿ ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌, ಪ್ರಕರಣ ಹಿಂಪಡೆಯಲು ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಜೋಯ್‌ಮಲ್ಯ ಬಾಗ್ಚಿ ಅವರಿದ್ದ ಪೀಠವನ್ನು ಕೋರಿದರು.

Also Read
ಕೇರಳ ರಾಜ್ಯಪಾಲರ ಪ್ರಕರಣ: ಸುಪ್ರೀಂ ಕೋರ್ಟ್‌ನಲ್ಲಿ ಮಾಜಿ ಎಜಿ ವಿರುದ್ಧ ಹಾಲಿ ಎಜಿ, ಎಸ್‌ಜಿ ವಾದ

"ಎರಡೂ ಅರ್ಜಿಗಳು ನಿಷ್ಫಲಕಾರಿಯಾಗಿವೆ. ನಾವು ಎರಡನ್ನೂ ಹಿಂತೆಗೆದುಕೊಳ್ಳುತ್ತೇವೆ" ಎಂದು ವೇಣುಗೋಪಾಲ್ ಹೇಳಿದರು. ಆದರೆ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ, ಇದಕ್ಕೆ ವಿರೋಧ ವ್ಯಕ್ತಪಡಿಸಿದರು.

"ಇವು ಸಾಂವಿಧಾನಿಕ ಸಮಸ್ಯೆಗಳು. ಇದನ್ನು ಅಷ್ಟು ಸಲೀಸಾಗಿ ದಾಖಲಿಸಿ, ಅಷ್ಟೇ ಸಲೀಸಾಗಿ ಹಿಂಪಡೆಯುವಂತಿಲ್ಲ. ನಾವು ಪ್ರಕರಣ ಒಳಗೊಂಡಿರುವ ವಿಚಾರಗಳ ಕುರಿತು ಕೆಲಸ ಮಾಡುತ್ತಿದ್ದೇವೆ” ಎಂದು ಹೇಳಿದರು.

ಆಗ ವೇಣುಗೋಪಾಲ್‌ "ಅವರು ಹಾಗೆ ಹೇಳಲು ಹೇಗೆ ಸಾಧ್ಯ? ಅಟಾರ್ನಿ ಜನರಲ್ ಮತ್ತು ಸಾಲಿಸಿಟರ್ ಜನರಲ್ ಇಬ್ಬರೂ ಅರ್ಜಿ ಹಿಂಪಡೆಯುವಿಕೆಯನ್ನು ವಿರೋಧಿಸುವುದು ವಿಚಿತ್ರವಾಗಿದೆ" ಎಂದು ಪ್ರತಿಕ್ರಿಯಿಸಿದರು.

ಆಗ ಮೆಹ್ತಾ, "ನಿಮ್ಮಂತಹ ಉನ್ನತ ವ್ಯಕ್ತಿ ಹಿಂಪಡೆದರೆ (ಅರ್ಜಿಯನ್ನು) ಆ ಹಿಂಪಡೆಯುವಿಕೆಯನ್ನೂ ಸಹ ಗಂಭೀರವಾಗಿಯೇ ಪರಿಗಣಿಸಬೇಕಾಗುತ್ತದೆ," ಎಂದು ಉತ್ತರಿಸಿದರು.

ಎರಡೂ ಬದಿಯ ಕಕ್ಷಿದಾರರ ಕೋರಿಕೆ ಮೇರೆಗೆ ಪೀಠ ಅಂತಿಮವಾಗಿ ಪ್ರಕರಣವನ್ನು ಮೇ 13ಕ್ಕೆ ಮುಂದೂಡಿತು. ಜೊತೆಗೆ ಕೇರಳ ಸರ್ಕಾರಕ್ಕೆ ಅರ್ಜಿ ಹಿಂಪಡೆಯುವ ಹಕ್ಕು ಇರುವುದು ತಮಗೆ ತಿಳಿದಿದೆ ಎಂದು ಪೀಠ ನುಡಿಯಿತು.

Also Read
ರಾಜ್ಯಪಾಲ ರವಿ ಅವರಿಗೆ ನ್ಯಾಯಾಲಯದ ಬಗ್ಗೆ ಗೌರವ ಕಡಿಮೆ, ಬಾಹ್ಯ ಪರಿಗಣನೆಗಳಿಂದ ಪ್ರಭಾವಿತ: ಸುಪ್ರೀಂ ತರಾಟೆ

ರಾಜ್ಯ ಶಾಸಕಾಂಗ ಅಂಗೀಕರಿಸಿದ ಮಸೂದೆಗಳಿಗೆ ಕೇರಳದ ಅಂದಿನ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ಅಂಕಿತ ಹಾಕದೆ ಇದ್ದುದರಿಂದ 2023ರಲ್ಲಿ ಅರ್ಜಿಯೊಂದನ್ನು ಸಲ್ಲಿಸಲಾಗಿತ್ತು. ಎಂಟು ಮಸೂದೆಗಳಿಗೆ ಏಳರಿಂದ ಇಪತ್ತಮೂರು ತಿಂಗಳವರೆಗೆ ರಾಜ್ಯಪಾಲರು ಅಂಕಿತ ಹಾಕದೆ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಆಪಾದಿಸಲಾಗಿತ್ತು.

2023 ರಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಏಳು ಮಸೂದೆಗಳನ್ನು ರವಾನಿಸಿದ್ದರು. ಅದರಲ್ಲಿ ನಾಲ್ಕು ಮಸೂದೆಗೆ ಮುರ್ಮು ಅವರು ಅಂಕಿತ ಹಾಕದೆ ಇದ್ದುದರಿಂದ ಕೇರಳ ಸರ್ಕಾರ ಎರಡನೇ ಅರ್ಜಿ ಸಲ್ಲಿಸಿತ್ತು.

Kannada Bar & Bench
kannada.barandbench.com