ಕೇರಳ ರಾಜ್ಯಪಾಲರ ಪ್ರಕರಣ: ಸುಪ್ರೀಂ ಕೋರ್ಟ್‌ನಲ್ಲಿ ಮಾಜಿ ಎಜಿ ವಿರುದ್ಧ ಹಾಲಿ ಎಜಿ, ಎಸ್‌ಜಿ ವಾದ

ಕೇರಳ ಸರ್ಕಾರವನ್ನು ಪ್ರತಿನಿಧಿಸಿದ್ದ ಮಾಜಿ ಎ ಜಿ ಕೆ ಕೆ ವೇಣುಗೋಪಾಲ್, ತಮಿಳುನಾಡು ರಾಜ್ಯಪಾಲರ ಪ್ರಕರಣದಲ್ಲಿ ಇತ್ತೀಚಿಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಕೇರಳ ರಾಜ್ಯಪಾಲರ ಪ್ರಕರಣಕ್ಕೂ ಅನ್ವಯಿಸುತ್ತದೆ ಎಂದು ವಾದಿಸಿದರು.
SG Tushar Mehta AG R Venkataramani, and KK Venugopal
SG Tushar Mehta AG R Venkataramani, and KK Venugopal
Published on

ತಮಿಳುನಾಡು ರಾಜ್ಯಪಾಲರಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ನೀಡಿದ ತೀರ್ಪು, ಮಸೂದೆ ಅಂಗೀಕರಿಸಲು ಅನಗತ್ಯ ವಿಳಂಬ ಮಾಡುತ್ತಿದ್ದಾರೆ ಎಂದು ಕೇರಳ ರಾಜ್ಯಪಾಲರ ವಿರುದ್ಧ ಕೇರಳ ಸರ್ಕಾರ ಹೂಡಿದ್ದ ಪ್ರಕರಣಕ್ಕೂ ಅನ್ವಯಿಸುತ್ತದೆ ಎಂಬ ಕೇರಳ ಸರ್ಕಾರದ ವಾದಕ್ಕೆ ಕೇಂದ್ರ ಸರ್ಕಾರದ ಪರ ವಾದ ಮಂಡಿಸುವ ಅತ್ಯುನ್ನತ ಕಾನೂನು ಅಧಿಕಾರಿಗಳಾದ ಅಟಾರ್ನಿ ಜನರಲ್ (ಎಜಿ) ಆರ್ ವೆಂಕಟರಮಣಿ ಮತ್ತು ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಮಂಗಳವಾರ ವಿರೋಧ ವ್ಯಕ್ತಪಡಿಸಿದರು.

ಕುತೂಹಲಕರ ಸಂಗತಿ ಎಂದರೆ ಕೇರಳದ ಎಲ್‌ಡಿಎಫ್‌ ನೇತೃತ್ವದ ಸರ್ಕಾರವನ್ನು ಪ್ರತಿನಿಧಿಸಿದ್ದು ಹಿರಿಯ ವಕೀಲ ಹಾಗೂ ಮಾಜಿ ಅಟಾರ್ನಿ ಜನರಲ್‌  ಕೆ ಕೆ ವೇಣುಗೋಪಾಲ್‌. ಇದು ಇಂದು ನ್ಯಾಯಾಲಯದ ಗಮನಕ್ಕೆ ಬಾರದೆ ಇರಲಿಲ್ಲ.  

Also Read
ರಾಜ್ಯಪಾಲ ರವಿ ಅವರಿಗೆ ನ್ಯಾಯಾಲಯದ ಬಗ್ಗೆ ಗೌರವ ಕಡಿಮೆ, ಬಾಹ್ಯ ಪರಿಗಣನೆಗಳಿಂದ ಪ್ರಭಾವಿತ: ಸುಪ್ರೀಂ ತರಾಟೆ

ವೇಣುಗೋಪಾಲ್‌ ಅವರನ್ನುದ್ದೇಶಿಸಿ ನ್ಯಾಯಮೂರ್ತಿಗಳಾದ ಪಿ ಎಸ್‌ ನರಸಿಂಹ ಮತ್ತು ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠ “ನಿಮ್ಮನ್ನು ನೋಡಿದಾಗಲೆಲ್ಲಾ ನಿಮ್ಮನ್ನು ಮಿಸ್ಟರ್‌ ಎಜಿ ಎಂದೇ ಕರೆಯುವುದು ಅಭ್ಯಾಸವಾಗಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿತು.

ರಾಜ್ಯ ಶಾಸಕಾಂಗ ಅಂಗೀಕರಿಸಿದ ಮಸೂದೆಗಳಿಗೆ ಕೇರಳದ ಅಂದಿನ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ಅಂಕಿತ ಹಾಕದೆ ಇದ್ದುದರಿಂದ 2023ರಲ್ಲಿ ಅರ್ಜಿಯೊಂದನ್ನು ಸಲ್ಲಿಸಲಾಗಿತ್ತು. ಎಂಟು ಮಸೂದೆಗಳಿಗೆ ಏಳರಿಂದ ಇಪತ್ತಮೂರು ತಿಂಗಳವರೆಗೆ ರಾಜ್ಯಪಾಲರು ಅಂಕಿತ ಹಾಕದೆ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಆಪಾದಿಸಲಾಗಿತ್ತು.

2023 ರಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಏಳು ಮಸೂದೆಗಳನ್ನು ರವಾನಿಸಿದ್ದರು. ಅದರಲ್ಲಿ ನಾಲ್ಕು ಮಸೂದೆಗೆ ಮುರ್ಮು ಅವರು ಅಂಕಿತ ಹಾಕದೆ ಇದ್ದುದರಿಂದ ಕೇರಳ ಸರ್ಕಾರ ಎರಡನೇ ಅರ್ಜಿ ಸಲ್ಲಿಸಿತ್ತು.

ಇಂದು ವಾದ ಮಂಡಿಸಿದ ಕೆ ಕೆ ವೇಣುಗೋಪಾಲ್‌ ಎರಡೂ ಅರ್ಜಿಗಳಿಗೆ ತಮಿಳುನಾಡು ರಾಜ್ಯಪಾಲರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ಅನ್ವಯವಾಗುತ್ತದೆ. ರಾಷ್ಟ್ರಪತಿಗಳಿಗೆ ಉಲ್ಲೇಖಿಸಿದ ನಂತರ 3 ತಿಂಗಳ ಕಾಲಮಿತಿಯೊಳಗೆ ಅವರು ನಿರ್ಧರಿಸಬೇಕಿದ್ದು ಇದರ ಹೊರತಾಗಿ ಇನ್ನಾವುದೇ ಪ್ರಶ್ನೆ ಉದ್ಭವಿಸದು ಎಂದರು.

ಈ ವಾದ ಒಪ್ಪದ ಎಸ್‌ಜಿ ತುಷಾರ್‌ ಮೆಹ್ತಾ ಎರಡೂ ಪ್ರಕರಣಗಳಿಗೆ ವ್ಯತ್ಯಾಸವಿದೆ ಎಂದರು. ಇದಕ್ಕೆ ಅಟಾರ್ನಿ ಜನರಲ್‌ ವೆಂಕಟರಮಣಿ ದನಿಗೂಡಿಸಿದರು.

“ವೇಣುಗೋಪಾಲ್ ಅವರ ಬಗ್ಗೆ ಆಳವಾದ ಗೌರವ ಇರಿಸಿಕೊಂಡೇ ವಿನಮ್ರನಾಗಿ ಹೇಳುತ್ತೇನೆ, ಈ ಪ್ರಕರಣದಲ್ಲಿ ಮೂಲಭೂತವಾಗಿ ವಿಭಿನ್ನವಾಗಿರುವ ಕೆಲವು ಸಂಗತಿಗಳನ್ನು ತೀರ್ಪು ಒಳಗೊಂಡಿಲ್ಲ. ನಾವು ವ್ಯತ್ಯಾಸಗಳನ್ನು ತೋರಿಸಲು ಬಯಸುತ್ತೇವೆ…" ಎಂದು ವೆಂಕಟರಮಣಿ ಹೇಳಿದರು.

Also Read
ಮಸೂದೆಗಳನ್ನು ತಡೆ ಹಿಡಿದು ಕೂರಲು ರಾಜ್ಯಪಾಲರಿಗೆ ವಿಟೋ ಅಧಿಕಾರವಿಲ್ಲ: ತಮಿಳುನಾಡು ರಾಜ್ಯಪಾಲರಿಗೆ ಸುಪ್ರೀಂ ಕಪಾಳಮೋಕ್ಷ

ಈ ಮಧ್ಯೆ, ಸಂವಿಧಾನದ 200ನೇ ವಿಧಿಯಡಿ ರಾಜ್ಯಪಾಲರು ತನ್ನ ಕಾರ್ಯಗಳನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಕೆಲವು ಮಾರ್ಗಸೂಚಿಗಳನ್ನು ಕೋರಿ ಸಲ್ಲಿಸಲಾಗಿದ್ದ ತಿದ್ದುಪಡಿ ಅರ್ಜಿಯನ್ನು ಕೇರಳ ಸರ್ಕಾರ ಹಿಂತೆಗೆದುಕೊಳ್ಳುತ್ತಿದೆ ಎಂದು ಹಿರಿಯ ವಕೀಲ ವೇಣುಗೋಪಾಲ್ ನ್ಯಾಯಾಲಯಕ್ಕೆ ತಿಳಿಸಿದರು.

ತಮಿಳುನಾಡು ರಾಜ್ಯಪಾಲರ ತೀರ್ಪು ಪ್ರಕರಣದ ಈ ಅಂಶವನ್ನು ಒಳಗೊಂಡಿರುವುದರಿಂದ ಈ ತಿದ್ದುಪಡಿ ಇನ್ನು ಮುಂದೆ ಅಗತ್ಯವಿಲ್ಲ ಎಂದು ವೇಣುಗೋಪಾಲ್ ಹೇಳಿದರು. ಅಂತಿಮವಾಗಿ ಪ್ರಕರಣವನ್ನು ಮೇ 6ಕ್ಕೆ ಮುಂದೂಡಲಾಯಿತು.

Kannada Bar & Bench
kannada.barandbench.com