
ರಾಜ್ಯ ಶಾಸಕಾಂಗ ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಅಂಕಿತ ಹಾಕುವುದಕ್ಕೆ ಗಡುವು ವಿಧಿಸಬಹುದೇ ಎನ್ನುವ ಕುರಿತು ಪರಿಶೀಲಿಸಲು ರಾಷ್ಟ್ರಪತಿಗಳು ಮಾಡಿರುವ ಶಿಫಾರಸ್ಸಿನ ಕುರಿತಾದ ವಿಚಾರಣೆಯನ್ನು ಆಗಸ್ಟ್ 19 ರಿಂದ ವಿಚಾರಣೆ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ ಮಂಗಳವಾರ ತಿಳಿಸಿದೆ [ಭಾರತದ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಮಸೂದೆಗೆ ಒಪ್ಪಿಗೆ ನೀಡುವ ಅಥವಾ ತಡೆ ಹಿಡಿಯುವ ಇಲ್ಲವೇ ಕಾದಿರಿಸುವ ಕುರಿತಾದ ಸ್ವಯಂ ಪ್ರೇರಿತ ಪ್ರಕರಣ].
ಪ್ರಕರಣದ ಎಲ್ಲಾ ಕಕ್ಷಿದಾರರು ಆಗಸ್ಟ್ 12ರೊಳಗೆ ಎಲ್ಲಾ ಪಕ್ಷಗಳು ತಮ್ಮ ಲಿಖಿತ ವಾದ ಮಂಡಿಸುವಂತೆ ಸೂಚಿಸಿರುವ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ , ನ್ಯಾಯಮೂರ್ತಿಗಳಾದ ಸೂರ್ಯಕಾಂತ್ , ವಿಕ್ರಮ್ ನಾಥ್ , ಪಿ ಎಸ್ ನರಸಿಂಹ ಹಾಗೂ ಅತುಲ್ ಎಸ್ ಚಂದೂರ್ಕರ್ ಅವರಿದ್ದ ಸಾಂವಿಧಾನಿಕ ಪೀಠ ರಾಷ್ಟ್ರಪತಿಯವರ ಶಿಫಾರಸು ನಿರ್ವಹಣಾರ್ಹವೇ ಎಂಬ ಅಂಶವನ್ನು ಮೊದಲು ಆಲಿಸುವುದಾಗಿ ತಿಳಿಸಿದೆ.
"ನಾವು ಮೊದಲು ಪ್ರಕರಣದ ನಿರ್ವಹಣೆಯ ಬಗ್ಗೆ ಪಕ್ಷಕಾರರ ವಾದಗಳನ್ನು ಆಲಿಸಲಿದ್ದೇವೆ. ಆಗಸ್ಟ್ 19, 20, 21 ಮತ್ತು 26 ರಂದು ಪ್ರತಿವಾದಿ ಪಕ್ಷಕಾರರ ವಿಚಾರಣೆ ನಡೆಸಲಾಗುವುದು. ರಾಷ್ಟ್ರಪತಿಯವರ ಶಿಫಾರಸ್ಸನ್ನು ಬೆಂಬಲಿಸುವ ಪಕ್ಷಕಾರರ ವಿಚಾರಣೆಯನ್ನು ಆಗಸ್ಟ್ 20, ಸೆಪ್ಟೆಂಬರ್ 2, 3 ಮತ್ತು 9 ರಂದು ಆಲಿಸಲಾಗುವುದು. ಸಮಯದ ವೇಳಾಪಟ್ಟಿಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಪಕ್ಷಗಳು (ನ್ಯಾಯಾಲಯವು) ಸೂಚಿಸಿರುವ ರೀತಿಯಲ್ಲಿ ವಾದಮಂಡನೆ ಪೂರ್ಣಗೊಳಿಸಬೇಕು" ಎಂದು ನ್ಯಾಯಾಲಯ ಹೇಳಿದೆ.
ಕೇರಳ ರಾಜ್ಯದ ಪರವಾಗಿ ಹಾಜರಾದ ಹಿರಿಯ ವಕೀಲ ಕೆ ಕೆ ವೇಣುಗೋಪಾಲ್ ಅವರು ಶಿಫಾರಸ್ಸಿನ ನಿರ್ವಹಣೆಯ ಬಗ್ಗೆ ಪ್ರಶ್ನಿಸಿದರು. ಶಿಫಾರಸನ್ನು ರಾಷ್ಟ್ರಪತಿಯವರಿಗೆ ಮರಳಿಸಲು ಆಧಾರಗಳಿವೆ ಎಂದರು. ರಾಷ್ಟ್ರಪತಿಯವರ ಶಿಫಾರಸ್ಸಿಗೆ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಕೂಡ ವಿರೋಧ ವ್ಯಕ್ತಪಡಿಸಿದರು. ಶ್ರೀಮತಿ ಮಿಶಾ ರೋಹಟ್ಗಿ ನಮ್ಮ ಕಡೆಯಿಂದ ನೋಡಲ್ ಕೌನ್ಸೆಲ್ ಆಗಿರುತ್ತಾರೆ ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರದ ಪರವಾಗಿ ಅಮನ್ ಮೆಹ್ತಾ ಸ್ಥಾಯಿ ವಕೀಲರಾಗಿ ಕೆಲಸ ಮಾಡಲಿದ್ದಾರೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದರು. ನ್ಯಾಯಾಲಯ ಅಂತಿಮವಾಗಿ ಆಗಸ್ಟ್ 19ಕ್ಕೆ ವಿಚಾರಣೆ ಮುಂದೂಡಿತು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಾನೂನು ಮತ್ತು ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳಲ್ಲಿ ರಾಷ್ಟ್ರಪತಿಗಳು ಸುಪ್ರೀಂ ಕೋರ್ಟ್‌ನ ಅಭಿಪ್ರಾಯ ಪಡೆಯಲು ಅವಕಾಶ ನೀಡುವ ಸಂವಿಧಾನದ 143 (1)ನೇ ವಿಧಿಯಡಿ ಸುಪ್ರೀಂ ಕೋರ್ಟ್‌ಗೆ ಮಾಡಿದ ಶಿಫಾರಸ್ಸಿನ ಕುರಿತು ತೀರ್ಪು ನೀಡುವ ಸಂಬಂಧ ಸಾಂವಿಧಾನಿಕ ಪೀಠ ರಚಿಸಲಾಗಿತ್ತು.
ಸಂವಿಧಾನದ 200 ನೇ ವಿಧಿಯ ಅಡಿಯಲ್ಲಿ ರಾಜ್ಯ ಶಾಸಕಾಂಗ ಮಂಡಿಸಿದ ಮಸೂದೆಗಳಿಗೆ ಸಂಬಂಧಿಸಿದಂತೆ ರಾಜ್ಯಪಾಲರ ಅಧಿಕಾರ ಮತ್ತು ಜವಾಬ್ದಾರಿಗಳನ್ನು ವಿವರಿಸುವ ಮಹತ್ವದ ತೀರ್ಪನ್ನು ಏಪ್ರಿಲ್ 8ರಂದು ನೀಡಿದ್ದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಆರ್ ಮಹಾದೇವನ್ ಅವರಿದ್ದ ಪೀಠ ಆ ಮೂಲಕ ಸಂವಿಧಾನದ 201 ನೇ ವಿಧಿಯ ಅಡಿಯಲ್ಲಿ ಭಾರತದ ರಾಷ್ಟ್ರಪತಿಗಳ ಅಧಿಕಾರಗಳಿಗೆ ಇರುವ ಮಿತಿಯನ್ನೂ ವ್ಯಾಖ್ಯಾನಿಸಿತ್ತು.
ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಮಸೂದೆಗಳಿಗೆ ಒಪ್ಪಿಗೆ ನೀಡುವ ಪ್ರಕ್ರಿಯೆಯನ್ನು ನಿಯಂತ್ರಿಸುವ ಸಂವಿಧಾನದ 200 ಮತ್ತು 201 ನೇ ವಿಧಿಗಳು ಯಾವುದೇ ಗಡುವನ್ನು ಅಥವಾ ನಿರ್ದಿಷ್ಟ ಕಾರ್ಯವಿಧಾನದ ಅವಶ್ಯಕತೆಗಳನ್ನು ಸೂಚಿಸುವುದಿಲ್ಲ ಎಂದು ಒತ್ತಿ ಹೇಳಿದ್ದ ರಾಷ್ಟ್ರಪತಿ ಮುರ್ಮು ಅವರು ಸುಪ್ರೀಂ ಕೋರ್ಟ್‌ಗೆ 14 ಪ್ರಶ್ನೆಗಳನ್ನು ಕೇಳಿದ್ದರು.
ಈ ಸಂಬಂಧ ಕೆಲ ದಿನಗಳ ಹಿಂದೆ ಸರ್ವೋಚ್ಚ ನ್ಯಾಯಾಲಯ ಕೇಂದ್ರ ಸರ್ಕಾರ ಮತ್ತು ಎಲ್ಲಾ ರಾಜ್ಯ ಸರ್ಕಾರಗಳಿಗೆ ನೋಟಿಸ್ ನೀಡಿತ್ತು. ರಾಷ್ಟ್ರಪತಿಯವರು ಮಾಡಿರುವ ಶಿಫಾರಸು ನಿರ್ವಹಣಾರ್ಹವಲ್ಲ ಎಂದು ಕೇರಳ ಮತ್ತು ತಮಿಳುನಾಡು ಸರ್ಕಾರಗಳು ವಾದ ಮಂಡಿಸಿದ್ದವು.