ಕೆ ಕೆ ವೇಣುಗೋಪಾಲ್‌ ವಿರುದ್ಧ ತೀರ್ಪುಗಳನ್ನು ನೀಡುವಂತಾಗಿದ್ದು ನನ್ನ ದೌರ್ಭಾಗ್ಯ: ನ್ಯಾ. ರೋಹಿಂಟನ್ ನಾರಿಮನ್

ಕೆ ಕೆ ವೇಣುಗೋಪಾಲ್ ಅವರು ವಾದ ಮಂಡಿಸಿದ ಬಹುತೇಕ ಪ್ರಕರಣಗಳಲ್ಲಿ ಅವರು ಪ್ರತಿನಿಧಿಸುತ್ತಿದ್ದ ಸರ್ಕಾರದ ಕಾರಣದಿಂದಾಗಿ ಅವರ ವಿರುದ್ಧ ತೀರ್ಪು ನೀಡುವಂತಾದದ್ದು ನನ್ನ ಬದುಕಿನ ದೊಡ್ಡ ವಿಪರ್ಯಾಸ ಎಂದು ನ್ಯಾ. ನಾರಿಮನ್ ತಿಳಿಸಿದರು.
Justice Rohinton Nariman
Justice Rohinton Nariman
Published on

ತಮ್ಮ ವೃತ್ತಿ ಜೀವನವನ್ನು ರೂಪಿಸಿದ ಮಾಜಿ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರನ್ನು ಹೊಗಳಿರುವ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ರೋಹಿಂಟನ್‌ ನಾರಿಮನ್‌ ಅವರು, ಕೆ ಕೆ ವೇಣುಗೋಪಾಲ್ ಅವರು ವಾದ ಮಂಡಿಸಿದ ಬಹುತೇಕ ಪ್ರಕರಣಗಳಲ್ಲಿ ಅವರು ಪ್ರತಿನಿಧಿಸುತ್ತಿದ್ದ ಸರ್ಕಾರದ ಕಾರಣದಿಂದಾಗಿ ಅವರ ವಿರುದ್ಧ ತೀರ್ಪು ನೀಡುವಂತಾದದ್ದು ತಮ್ಮ ಬದುಕಿನ ದೌರ್ಭಾಗ್ಯ ಎಂದಿದ್ದಾರೆ.

ಹೈದರಾಬಾದ್‌ನ ನಲ್ಸಾರ್‌ ಕಾನೂನು ವಿವಿಯ ಆವರಣದಲ್ಲಿ ಫೆಬ್ರವರಿ 15ರಂದು ನಡೆದ ಮಿಲನ್‌ ಕೆ ಬ್ಯಾನರ್ಜಿ ಮಧ್ಯಸ್ಥಿಕೆ ಕಾನೂನು ಕೇಂದ್ರದ (ಎಂಕೆಬಿಎಸಿ) ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

Also Read
ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅವರ ಸೇವಾವಧಿಯನ್ನು ಒಂದು ವರ್ಷ ವಿಸ್ತರಿಸಿದ ಕೇಂದ್ರ

ನ್ಯಾ. ರೋಹಿಂಟನ್‌ ಅವರು ಸ್ವತಂತ್ರವಾಗಿ ಪ್ರಾಕ್ಟೀಸ್‌ ಮಾಡುವ ಮುನ್ನ ವೇಣುಗೋಪಾಲ್ ಅವರ ಬಳಿ ಕಿರಿಯ ವಕೀಲರಾಗಿ ಕೆಲಸ ಮಾಡುತ್ತಿದ್ದರು.

"ವಾಸ್ತವವಾಗಿ ನನ್ನ ವೃತ್ತಿಜೀವನ ರೂಪಿಸಿದ್ದೇ ವೇಣುಗೋಪಾಲ್‌ ಅವರು. ನಾನು ನ್ಯಾಯಮೂರ್ತಿಯಾಗಿ ಹಾಗೂ ವೇಣುಗೋಪಾಲ್‌ ಅವರು ಅಟಾರ್ನಿ ಜನರಲ್‌ (ಕೇಂದ್ರ ಸರ್ಕಾರದ ಪರಮೋಚ್ಚ ಕಾನೂನು ಅಧಿಕಾರಿ) ಆಗಿ ಸರ್ಕಾರದ ಪರವಾಗಿ ವಾದ ಮಂಡಿಸುತ್ತಿದ್ದ ಪ್ರತಿಯೊಂದು ಪ್ರಕರಣದಲ್ಲಿಯೂ ಅವರ ವಿರುದ್ಧ ತೀರ್ಪು ನೀಡಬೇಕಾಗಿ ಬಂದಿದ್ದು ನನ್ನ ಬದುಕಿನ ದೊಡ್ಡ ವಿಪರ್ಯಾಸ ಎಂದು ನಿಮಗೆ ಹೇಳಲೇಬೇಕು" ಎಂಬುದಾಗಿ ಅವರು ವಿವರಿಸಿದರು.

ಕೆ ಕೆ ವೇಣುಗೋಪಾಲ್ ಅವರು ಸರ್ಕಾರದ ಪ್ರತಿನಿಧಿಯಾಗಿ ವಾದ ಮಂಡಿಸಿದ ಬಹುತೇಕ ಪ್ರಕರಣಗಳಲ್ಲಿ ಅವರು ವಿರುದ್ಧ ತೀರ್ಪು ನೀಡುವಂತಾದದ್ದು ನನ್ನ ಬದುಕಿನ ದೊಡ್ಡ ವಿಪರ್ಯಾಸ.
 ನ್ಯಾ. ರೋಹಿಂಟನ್‌ ನಾರಿಮನ್‌

ವೇಣುಗೋಪಾಲ್ ಅವರನ್ನು ಎನ್‌ಡಿಎ ಸರ್ಕಾರ 2017ರಲ್ಲಿ ಅಟಾರ್ನಿ ಜನರಲ್ ಆಗಿ ನೇಮಿಸಿತು.  ಅವರು ಸೆಪ್ಟೆಂಬರ್ 2022ರವರೆಗೆ ಆ ಹುದ್ದೆಯಲ್ಲಿದ್ದರು. ನಾರಿಮನ್ ಅವರನ್ನು ಜುಲೈ 2014ರಲ್ಲಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಯಿತು. ಅವರು ಆಗಸ್ಟ್ 2021ರಲ್ಲಿ ನಿವೃತ್ತರಾದರು.

ಈ ಅವಧಿಯಲ್ಲಿ, ವೇಣುಗೋಪಾಲ್ ಅವರು ನ್ಯಾಯಮೂರ್ತಿ ನಾರಿಮನ್ ಅವರೆದುರು ಆಧಾರ್ ಸಿಂಧುತ್ವಕ್ಕೆ ಸಂಬಂಧಿಸಿದ ಗಮನಾರ್ಹ ಗೌಪ್ಯತೆಯ ಹಕ್ಕಿನ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ವಾದ ಮಂಡಿಸಿದ್ದರು.

Also Read
ನ್ಯಾ. ಕುರೇಶಿ ಅವರಿಗೆ ಪದೋನ್ನತಿ ದೊರೆಯದ ಬಗ್ಗೆ ನ್ಯಾ. ರೋಹಿಂಟನ್ ಅವರು ಹೇಳಿದ್ದೇನು?

ತಮ್ಮ ಭಾಷಣದಲ್ಲಿ, ನ್ಯಾಯಮೂರ್ತಿ ನಾರಿಮನ್ ಅವರು ನ್ಯಾಯಮೂರ್ತಿ ಜೀವನ್ ರೆಡ್ಡಿ ಅವರೊಂದಿಗಿನ ತಮ್ಮ ಅನುಭವಗಳನ್ನು ಸಹ ವಿವರಿಸಿದರು.

ಇದೇ ವೇಳೆ ನ್ಯಾ. ನಾರಿಮನ್‌ ಅವರು ಮಿಲನ್ ಕೆ ಬ್ಯಾನರ್ಜಿ ಹಾಗೂ ನ್ಯಾ. ಜೀವನ್‌ ರೆಡ್ಡಿ ಅವರು ಕಾನೂನು ಕ್ಷೇತ್ರಕ್ಕೆ ನೀಡಿದ ಅವಿಸ್ಮರಣೀಯ ಕೊಡುಗೆಗಳನ್ನು ಪ್ರಸ್ತಾಪಿಸಿದರು.  

ಮಿಲನ್ ಬ್ಯಾನರ್ಜಿ ನನ್ನ ವೃತ್ತಿ ಜೀವನದಲ್ಲಿ ತಂದೆಯಂತೆ ಇದ್ದರು.
ನ್ಯಾಯಮೂರ್ತಿ ರೋಹಿಂಟನ್ ನಾರಿಮನ್

ನ್ಯಾಯಮೂರ್ತಿ ನಾರಿಮನ್ ಅವರು 1996ರ ಮಧ್ಯಸ್ಥಿಕೆ ಕಾಯ್ದೆಯ ನ್ಯೂನತೆಗಳನ್ನು ಎತ್ತಿ ತೋರಿಸಿದರು. ಅಲ್ಲದೆ 2016ರಲ್ಲಿ ಕಾಯಿದೆಗೆ ಮಾಡಲಾದ ತಿದ್ದುಪಡಿಯು "ಪೇಟೆಂಟ್ ಅಕ್ರಮ"ದ ನೆಲೆಯನ್ನು ಪರಿಚಯಿಸಿದರೂ, ಅದು ಆಳವಾದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲವಾಗಿದೆ ಎಂದು ಗಮನಸೆಳೆದರು.

ಮಧ್ಯಸ್ಥಿಕೆ ಪ್ರಕರಣಗಳಲ್ಲಿ ಏಕಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸುವುದನ್ನು ತಪ್ಪಿಸುವುದು ಸೇರಿದಂತೆ ಹೆಚ್ಚು ಆಮೂಲಾಗ್ರ ಬದಲಾವಣೆಗಳಾಗಬೇಕಿದೆ ಎಂದರು.

Kannada Bar & Bench
kannada.barandbench.com