ಗಿರ್ ಬಳಿ ಸಿಂಹಕ್ಕೆ ತೊಂದರೆ ನೀಡಿದ ಆರೋಪ: ಪತ್ರಕರ್ತನ ವಿರುದ್ಧದ ಪ್ರಕರಣ ರದ್ದುಗೊಳಿಸಿದ ಗುಜರಾತ್ ಹೈಕೋರ್ಟ್

ತಾನು ಬೇಟೆಯಾಡಿದ್ದ ಪ್ರಾಣಿಯನ್ನು ಸಿಂಹ ತಿನ್ನುತ್ತಿದ್ದಾಗ ಪತ್ರಕರ್ತ ಸ್ಕಾರ್ಪಿಯೋ ಕಾರಿನ ದೀಪಗಳನ್ನು ಬೆಳಗಿಸಿದ್ದರು ಎಂದು ಆರೋಪಿಸಲಾಗಿತ್ತು.
Gir National Park
Gir National Park
Published on

ಗುಜರಾತ್‌ನ ಪ್ರಸಿದ್ಧ ಗಿರ್‌ ರಾಷ್ಟ್ರೀಯ ಉದ್ಯಾನದ ಬಳಿ 2009ರಲ್ಲಿ ಸಿಂಹಕ್ಕೆ ತೊಂದರೆ ಉಂಟುಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಎನ್‌ಡಿಟಿವಿಯ ಮಾಜಿ ಪತ್ರಕರ್ತರೊಬ್ಬರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯಿದೆಯಡಿ ನಡೆಯುತ್ತಿದ್ದ ವಿಚಾರಣೆಯನ್ನು ಗುಜರಾತ್ ಹೈಕೋರ್ಟ್ ಇತ್ತೀಚೆಗೆ ರದ್ದುಗೊಳಿಸಿದೆ [ಮನೀಶ್ ಭೂಪೇಂದ್ರಭಾಯಿ ಪಾನ್ವಾಲಾ ಮತ್ತು ಗುಜರಾತ್ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಪ್ರಾಣಿ ತಾನು ಬೇಟೆಯಾಡಿದ್ದ ಪ್ರಾಣಿಯನ್ನು ತಿನ್ನುತ್ತಿದ್ದಾಗ ಎನ್‌ಡಿಟಿವಿಯಲ್ಲಿ ಅಂದು ಉದ್ಯೋಗಿಯಾಗಿದ್ದ ಪತ್ರಕರ್ತ ಮನೀಶ್ ಭೂಪೇಂದ್ರಭಾಯಿ ಪಾನ್ವಾಲಾ ಮತ್ತು ಸರ್ಕಾರೇತರ ಸಂಸ್ಥೆಯೊಂದರ ಇಬ್ಬರು ಸದಸ್ಯರು ಸ್ಕಾರ್ಪಿಯೋ ಕಾರಿನ ದೀಪ ಬೆಳಗಿಸಿದ್ದರು ಎಂದು ಆರೋಪಿಸಲಾಗಿತ್ತು.

Also Read
ಬೇಟೆಯಾಡಲು ಹೋಗಿ ಸಿಂಹಗಳು ರೈಲಿಗೆ ಸಿಲುಕುತ್ತಿವೆ: ರೈಲ್ವೆ ಇಲಾಖೆ ವಾದಕ್ಕೆ ಗುಜರಾತ್ ಹೈಕೋರ್ಟ್ ಸಿಡಿಮಿಡಿ

ಪಾನ್ವಾಲಾ ಅವರು ಎಸಗಿದ್ದಾರೆನ್ನಲಾದ ಕೃತ್ಯ ವನ್ಯಜೀವಿ (ರಕ್ಷಣೆ) ಕಾಯಿದೆಯ ಸೆಕ್ಷನ್ 2(16)(ಬಿ) ಅಡಿಯಲ್ಲಿ 'ಬೇಟೆ'ಯ ವ್ಯಾಖ್ಯಾನದ ವ್ಯಾಪ್ತಿಗೆ  ಬರುವುದಿಲ್ಲ ಎಂದು ನ್ಯಾಯಮೂರ್ತಿ ಜೆ ಸಿ ದೋಶಿ ಅಭಿಪ್ರಾಯಪಟ್ಟರು.

ʼಬೇಟೆʼ ಎನ್ನುವುದು ಕಾಡು ಪ್ರಾಣಿಯನ್ನು ಸೆರೆಹಿಡಿಯುವುದು, ಕೊಲ್ಲುವುದು, ವಿಷ ಉಣಿಸುವುದು, ಕುಣಿಕೆ ಹಾಕುವುದು ಅಥವಾ ಬಲೆಗೆ ಬೀಳಿಸುವುದು ಅಥವಾ ಅಂತಹ ಪ್ರಯತ್ನ ಮಾಡುವುದು ಇಲ್ಲವೇ ದೈಹಿಕ ಹಾನಿ ಅಥವಾ ವಿನಾಶ ಉಂಟುಮಾಡುವ ಕ್ರಿಯೆಗಳನ್ನು ಸೂಚಿಸುತ್ತದೆ. ಕೇವಲ ಸಿಂಹಕ್ಕೆ ತೊಂದರೆ ಉಂಟುಮಾಡುವುದು ಕಾಯಿದೆಯಡಿಯಲ್ಲಿ ʼಬೇಟೆʼಯ ಅಪರಾಧವಾಗದು ಎಂದು ನ್ಯಾಯಾಲಯ ವಿವರಿಸಿದೆ.

ಅರಣ್ಯ ಇಲಾಖೆಯ ದಾಖಲೆಯ ಪ್ರಕಾರ, 2009ರ ನವೆಂಬರ್ 5ರಂದು ಇಲಾಖೆಯ ಅಧಿಕಾರಿಗಳು ಸಿಂಹ ಗಣತಿ ಮಾಡುತ್ತಿದ್ದಾಗ  ಮಧುಪುರ ರಸ್ತೆಯಲ್ಲಿ ಸ್ಕಾರ್ಪಿಯೊ ವಾಹನದಲ್ಲಿದ್ದ ಪಾನ್ವಾಲಾ ಮತ್ತಿಬ್ಬರು ಸಿಂಹದ ಕಡೆಗೆ ಹೆಡ್‌ಲೈಟ್‌ ಹರಿಸುತ್ತಿದ್ದುದು ಕಂಡುಬಂದಿತ್ತು. ಅವರು ಛಾಯಾಚಿತ್ರಗಳನ್ನು ಕೂಡ ತೆಗೆಯುತ್ತಿದ್ದರು.  

ನಂತರ, ಅಧಿಕಾರಿಗಳು ಮೂವರನ್ನು ಬಂಧಿಸಿ, ಅವರ ಕ್ಯಾಮೆರಾಗಳು ಮತ್ತು ವಾಹನವನ್ನು ವಶಪಡಿಸಿಕೊಂಡಿದ್ದರು. ಆರೋಪಿಗಳನ್ನು ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

ಕೃತ್ಯ ನಡೆದಿದೆ ಎಂದು ಮೇಲ್ನೋಟಕ್ಕೆ ಒಪ್ಪಿದರೂ ಕೂಡ ಆರೋಪಿಗಳ ವಿರುದ್ಧ ಮಾಡಲಾದ ಆರೋಪದ ಅಂಶಗಳು ತೃಪ್ತಿಕರವಾಗಿಲ್ಲ. ಅಲ್ಲದೆ ಆರೋಪಪಟ್ಟಿ ಆಧರಿಸಿ ಪ್ರಕರಣ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ ಎಂದು ವಿಚಾರಣಾ ನ್ಯಾಯಾಲಯ ಹೇಳಿದ್ದನ್ನು ಪಾನ್ವಾಲಾ ಪರ ವಕೀಲರು ಪ್ರಸ್ತಾಪಿಸಿದರು.

ವಾದ ಆಲಿಸಿದ ನ್ಯಾಯಾಲಯ ಪಾನ್ವಾಲಾ ಅವರ ನಡೆ ವಿವೇಚನಾರಹಿತವಾಗದ್ದರೂ ಕಾಯಿದೆಯಡಿ ಅಪರಾಧ ಎನ್ನಬಹುದಾದ ಶಾಸನಬದ್ಧ ಪೂರ್ವಾಪೇಕ್ಷಿತ ಅಂಶಗಳನ್ನು ಅದು ಒಳಗೊಂಡಿಲ್ಲ ಎಂದಿತು.

ಆದರೂ, ಪಾನ್ವಾಲಾ ಅವರ ನಡೆ ಸಂರಕ್ಷಿತ ಪ್ರಭೇದವಾದ ಸಿಂಹದ ನೈಸರ್ಗಿಕ ಆವಾಸಸ್ಥಾನಕ್ಕೆ  ಕಿರಿಕಿರಿ ಮೂಡಿಸುವಂತಹ ಸಂವೇದನಾರಹಿತ ವರ್ತನೆಯನ್ನು ಹೇಳುತ್ತದೆ ಎಂಬ ವಿಚಾರವನ್ನು ಮರೆಯಲಾಗದು ಎಂದ ನ್ಯಾಯಾಲಯ  ಅರ್ಜಿದಾರರ ಕೃತ್ಯ ಬೇಟೆ ಎನಿಸಿಕೊಳ್ಳದಿದ್ದರೂ ಅಜಾಗರೂಕತೆ ಮತ್ತು ವನ್ಯಜೀವಿ ಸಂರಕ್ಷಣಾ ನೀತಿಗೆ ವಿರುದ್ಧವೆಂದಷ್ಟೇ ವಿವರಿಸಬಹುದು ಎಂದು ಸ್ಪಷ್ಟಪಡಿಸಿತು.

Also Read
ರೈಲು ಡಿಕ್ಕಿಯಾಗಿ ಸಿಂಹಗಳ ಸಾವು: ಅಧಿಕಾರಿಗಳಿಗೆ ಗುಜರಾತ್ ಹೈಕೋರ್ಟ್ ಮತ್ತೆ ತಪರಾಕಿ

ಇದೇ ವೇಳೆ ಅವರು ತಮ್ಮ ಕೃತ್ಯಕ್ಕೆ ಪಶ್ಚಾತ್ತಾಪದ ರೂಪದಲ್ಲಿ ಪಾನ್ವಾಲಾ ಅವರು ಜುನಾಗಢದಲ್ಲಿರುವ ಗುಜರಾತ್ ರಾಜ್ಯ ಸಿಂಹ ಸಂರಕ್ಷಣಾ ಸಂಘಕ್ಕೆ ಸ್ವಯಂಪ್ರೇರಣೆಯಿಂದ ಈಗಾಗಲೇ ₹1 ಲಕ್ಷ ದೇಣಿಗೆ ನೀಡಿದ್ದಾರೆ ಎಂಬ ಅಂಶವನ್ನು ದಾಖಲಿಸಿಕೊಂಡ ನ್ಯಾಯಾಲಯ ಇದು ಆಗಿರುವ ತೊಂದರೆಯನ್ನು ಸರಿಪಡಿಸದಿದ್ದರೂ ಸುಧಾರಣಾ ಮನೋಭಾವವನ್ನು ಸೂಚಿಸುತ್ತದೆ ಎಂದಿತು.

ಕಾನೂನು ದೌರ್ಬಲ್ಯಗಳಿಂದಾಗಿ ವಿಚಾರಣೆ ದುರ್ಬಲಗೊಂಡಿದ್ದರಿಂದ, ನ್ಯಾಯಾಲಯ, ಅರಣ್ಯ ಕಚೇರಿಯ ಪ್ರಥಮ ವರದಿ (ಎಫ್‌ಒಎಫ್‌ಆರ್‌) ಮತ್ತು ವಿಚಾರಣೆಯನ್ನು ರದ್ದುಪಡಿಸಿತು. ಆದರೆ ಕಾನೂನಿನ ಪ್ರಕಾರ ತನಿಖೆಯ ಸಮಯದಲ್ಲಿ ಸಂಗ್ರಹಿಸಿದ ಸಾಕ್ಷ್ಯಗಳ ಆಧಾರದ ಮೇಲೆ ಅಧಿಕಾರಿಗಳು ಪ್ರಕರಣದಲ್ಲಿ ಸೂಕ್ತ ಕ್ರಮ ಕೈಗೊಳ್ಳಬಹುದು ಎಂದು ಅದು ಸ್ಪಷ್ಟಪಡಿಸಿದೆ.

[ತೀರ್ಪಿನ ಪ್ರತಿ]

Attachment
PDF
Manish_Bhupendrabhai_Panwala_v_State_of_Gujarat___Anr
Preview
Kannada Bar & Bench
kannada.barandbench.com