ಮಹತ್ವದ ಬೆಳವಣಿಗೆಯೊಂದರಲ್ಲಿ 1991ರ ಗುಜರಾತ್ ತೊಂದರೆಗೊಳಗಾದ ಪ್ರದೇಶಗಳ ಕಾಯಿದೆಗೆ ತಿದ್ದುಪಡಿ ತರುವುದಕ್ಕೆ ಅಲ್ಲಿನ ಹೈಕೋರ್ಟ್ ತಡೆ ನೀಡಿದೆ. ತಿದ್ದುಪಡಿಯು ಒಂದು ಸಮುದಾಯದ ವ್ಯಕ್ತಿಗಳ ವಾಸಸ್ಥಳವನ್ನು ಅನುಚಿತವಾಗಿ ಆಧರಿಸಿ ʼತೊಂದರೆಗೊಳಗಾದ ಪ್ರದೇಶʼ ಎಂದು ಗುರುತಿಸಲು ಸರ್ಕಾರಕ್ಕೆ ಅಧಿಕಾರ ನೀಡುತ್ತಿತ್ತು.
2020ರ ತಿದ್ದುಪಡಿ ಕಾಯಿದೆ ಪ್ರಶ್ನಿಸಿ ಜಮೀಯತ್ ಉಲಮಾ-ಎ-ಹಿಂದ್ ಸಂಘಟನೆ ಸಲ್ಲಿಸಿದ್ದ ಅರ್ಜಿ ಆಧರಿಸಿ ಮುಖ್ಯ ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಅಶುತೀಶ್ ಜೆ ಶಾಸ್ತ್ರಿ ಅವರಿದ್ದ ಪೀಠ ಗುಜರಾತ್ ಸರ್ಕಾರದ ಪ್ರತಿಕ್ರಿಯೆ ಕೋರಿತು. ಸಮಾನತೆ ಮತ್ತು ಜಾತ್ಯತೀತ ತತ್ವಗಳನ್ನು ಉಲ್ಲಂಘಿಸಲಾಗಿದೆ ಮತ್ತು ಕೋಮು ವಿಭಜನೆಯನ್ನು ಶಾಶ್ವತವಾಗಿಸಲಾಗುತ್ತಿದೆ ಎಂಬ ಕಾರಣಕ್ಕೆ ಜಮಿಯತ್ ಉಲಮಾ-ಎ-ಹಿಂದ್ ಕಾನೂನನ್ನು ಪ್ರಶ್ನಿಸಿದೆ.
“ಸರ್ಕಾರಿ ವಕೀಲರಾದ ಮನೀಶಾ ಲವಕುಮಾರ್ ಅವರು ತಿದ್ದುಪಡಿ ಕಾಯಿದೆಯ ಸೆಕ್ಷನ್ 3 (1) (ii) ಮತ್ತು (iii) ರ ಅಡಿಯಲ್ಲಿ ಅಧಿಸೂಚನೆಯನ್ನು ಇನ್ನೂ ಹೊರಡಿಸಲಾಗಿಲ್ಲ ಮತ್ತು ರಾಜ್ಯಪಾಲರ ಅನುಮೋದನೆಗೆ ಕಾಯುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ಮುಂದಿನ ದಿನಾಂಕ ನಿಗದಿಪಡಿಸುವವರೆಗೆ ಮೇಲಿನ ನಿಬಂಧನೆಯ ಅಡಿಯಲ್ಲಿ ಯಾವುದೇ ಅಧಿಸೂಚನೆಯನ್ನು ನೀಡದಂತೆ ಪ್ರತಿವಾದಿ ರಾಜ್ಯವನ್ನು ನಿರ್ಬಂಧಿಸಲಾಗಿದೆ,” ಎಂದು ನ್ಯಾಯಾಲಯ ತಿಳಿಸಿತು.
ಸೂಚಿತ ತೊಂದರೆಗೊಳಗಾದ ಪ್ರದೇಶಗಳಲ್ಲಿ ಗಲಭೆ ಪೀಡಿತ ಸಮುದಾಯಗಳು
ಭೀತಿಯ ಹಿನ್ನೆಲೆಯಲ್ಲಿ ಸ್ಥಿರಾಸ್ತಿ ಮಾರಾಟ ಮಾಡಲು ಮುಂದಾಗುವುದನ್ನು ನಿಷೇಧಿಸುವ ಕಾನೂನು ʼವಸುದೈವ ಕುಟುಂಬಕಂʼ ಎಂಬ ಭಾರತೀಯ ತತ್ವಕ್ಕೆ ವಿರುದ್ಧವಾಗಿದೆ ಎಂದು ಸಂಘಟನೆ ವಾದಿಸಿದೆ.
ರಾಜ್ಯದಲ್ಲಿ ಹಿಂದೂ ಮುಸ್ಲಿಮರ ಬೇಧವನ್ನು ಕಡಿಮೆ ಮಾಡುವ ಬದಲು ಈ ಕಾನೂನು ವಿಭಜನೆಯನ್ನೇ ಸರ್ಕಾರದ ನೀತಿಯನ್ನಾಗಿ ಮಾಡುತ್ತದೆ. ವಿವಿಧ ಸಮುದಾಯಗಳ ಜನರು ಒಟ್ಟಿಗೆ ಸಾಮರಸ್ಯದಿಂದ ಬದುಕಲು ಸಾಧ್ಯವಿಲ್ಲ ಎಂಬ ಲೆಕ್ಕಾಚಾರದಲ್ಲಿ ಈ ಕಾಯಿದೆ ಜಾರಿಗೆ ತರಲಾಗಿದೆ. ಇದು ಭಾರತ ಮತ್ತು ಸಂವಿಧಾನ ಪ್ರತಿಪಾದಿಸುವ ಮೂಲಭೂತ ಪರಿಕಲ್ಪನೆಗೆ ವಿರುದ್ಧವಾಗಿದ್ದು ಬದಲಿಗೆ ಧಾರ್ಮಿಕ ಮಾರ್ಗದಲ್ಲಿ ದೇಶ ವಿಭಜನೆಗೆ ಕಾರಣವಾಗುವ ಸಿದ್ಧಾಂತವನ್ನು ಕಾಯಿದೆ ಅನುಮೋದಿಸುತ್ತದೆ” ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.
ಇದೊಂದು ಲಜ್ಜೆಗೆಟ್ಟ ಕಾನೂನಾಗಿದ್ದು ಶಾಸಕಾಂಗಕ್ಕೆ ತಕ್ಕ ಸಂದೇಶ ಕಳಿಸಬೇಕಿದೆ ಎಂದು ಅರ್ಜಿದಾರರ ಪರ ಹಿರಿಯ ವಕೀಲ ಮಿಹಿರ್ ಜೋಶಿ ವಿವರಿಸಿದರು. ಫೆಬ್ರುವರಿ 3ಕ್ಕೆ ಪ್ರಕರಣದ ವಿಚಾರಣೆ ನಡೆಯಲಿದೆ.