
ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ಇತ್ತೀಚೆಗೆ ನಡೆದ ಫ್ಯಾಷನ್ ಶೋ ಅಶ್ಲೀಲತೆಯಿಂದ ಕೂಡಿತ್ತು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಐಷಾರಾಮಿ ಫ್ಯಾಷನ್ ಸಂಸ್ಥೆ ಶಿವನ್ ಅಂಡ್ ನರೇಶ್ ನಿರ್ದೇಶಕರು ಹಾಗೂ ಎಲ್ ಇಂಡಿಯಾ (Elle India) ನಿಯತಕಾಲಿಕೆಯ ಪ್ರಧಾನ ಸಂಪಾದಕರಿಗೆ ಶ್ರೀನಗರ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.
ದೂರನ್ನು ವಿಚಾರಣೆ ನಡೆಸುವ ಮೊದಲು ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS) ಸೆಕ್ಷನ್ 223(1) ರ ಅಡಿಯಲ್ಲಿ ಆರೋಪಿಗಳ ಅಹವಾಲು ಆ ನಡೆಸುವುದು ನ್ಯಾಯಾಲಯಕ್ಕೆ ಕಡ್ಡಾಯ ಸಂಗತಿ ಎಂದು ವಿಶೇಷ ಸಂಚಾರಿ ನ್ಯಾಯಾಲಯದ ನ್ಯಾಯಾಧೀಶ ಫೈಜಾನ್- ಇ- ನಜರ್ ಹೇಳಿದರು. ಏಪ್ರಿಲ್ 8ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.
ಅವಾಮಿ ಇತ್ತೆಹಾದ್ ಪಕ್ಷದ ವಕ್ತಾರ ಆದಿಲ್ ನಜೀರ್ ಖಾನ್ ಅವರು ವಕೀಲ ನವೀದ್ ಬುಖ್ತಿಯಾರ್ ಮೂಲಕ ಸಲ್ಲಿಸಿದ ದೂರಿಗೆ ಸಂಬಂಧಿಸಿದಂತೆ ಈ ಆದೇಶ ನೀಡಲಾಗಿದೆ.
ಶಿವನ್ ಮತ್ತು ನರೇಶ್ ಸಂಸ್ಥೆಯ ನಿರ್ದೇಶಕರು ಮತ್ತು ಎಲ್ ಇಂಡಿಯಾ ಪ್ರಧಾನ ಸಂಪಾದಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 296 (ಅಶ್ಲೀಲ ಕೃತ್ಯ ಮತ್ತು ಹಾಡುಗಳು) ಮತ್ತು 299 (ಧಾರ್ಮಿಕ ಭಾವನೆ ಕೆರಳಿಸುವ ಕುಕೃತ್ಯ), ಜಮ್ಮು ಮತ್ತು ಕಾಶ್ಮೀರ ಅಬಕಾರಿ ಕಾಯಿದೆ- 1958 ರ ಸೆಕ್ಷನ್ 50-ಎ (ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ) ಅಡಿಯಲ್ಲಿ ಕಾನೂನು ಕ್ರಮ ಜರುಗಿಸಬೇಕೆಂದು ಅರ್ಜಿ ಕೋರಿತ್ತು.
ಫ್ಯಾಷನ್ ಶೋ ಅಶ್ಲೀಲ ಮತ್ತು ಅನುಚಿತವಾಗಿತ್ತು ಮತ್ತು ಮುಸ್ಲಿಮರ ಪವಿತ್ರ ಉಪವಾಸ ಮಾಸವಾದ ರಂಜಾನ್ ತಿಂಗಳಲ್ಲಿ ಇದನ್ನು ಆಯೋಜಿಸಲಾಗಿತ್ತು. ಇದು ಮುಸ್ಲಿಂ ಸಮುದಾಯದ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂವೇದನೆಗಳಿಗೆ ಮತ್ತು ವಿಶೇಷವಾಗಿ ಕಾಶ್ಮೀರ ಸಂಸ್ಕೃತಿಗೆ ಅಗೌರವವನ್ನುಂಟುಮಾಡುತ್ತಿತ್ತು. ಸಾರ್ವಜನಿಕವಾಗಿ ಮದ್ಯ ಸೇವನೆಗೆ ಅವಕಾಶ ಕಲ್ಪಿಸಿದ್ದು ರಂಜಾನ್ ಸಮಯದಲ್ಲಿ ಸಾರ್ವಜನಿಕ ಸಭ್ಯತೆ ಮತ್ತು ನೈತಿಕ ನಡವಳಿಕೆಯ ಉಲ್ಲಂಘನೆಯಾಗಿದೆ. ಇದು ಈ ಪವಿತ್ರ ತಿಂಗಳಲ್ಲಿ ಮುಸ್ಲಿಮರು ಪಾಲಿಸುವ ಇಂದ್ರಿಯನಿಗ್ರಹದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ದೂರಲಾಗಿತ್ತು.
ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದ ಫ್ಯಾಷನ್ ಶೋನ ಛಾಯಾಚಿತ್ರಗಳು ಕಾಶ್ಮೀರದಲ್ಲಿ ದೊಡ್ಡ ವಿವಾದವನ್ನೇ ಸೃಷ್ಟಿಸಿದ್ದವು. ಈ ಸಂಬಂಧ ವರದಿ ಕೇಳಿರುವ ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.