ಮಹಿಳಾ ಸ್ತ್ರೀರೋಗ ತಜ್ಞರಿಂದಷ್ಟೇ ಲೈಂಗಿಕ ಸಂತ್ರಸ್ತರ ಪರೀಕ್ಷೆ: ನಿಯಮ ಎತ್ತಿಹಿಡಿದ ಕೇರಳ ಹೈಕೋರ್ಟ್

ಅರ್ಜಿ ಸಲ್ಲಿಸಿರುವ ಸ್ತ್ರೀ ರೋಗ ತಜ್ಞರು ತಮ್ಮ ಅಹವಾಲುಗಳನ್ನು ಸೂಕ್ತ ಸರ್ಕಾರಿ ಅಧಿಕಾರಿಗಳ ಮುಂದಿಡಲು ನ್ಯಾ. ದೇವನ್‌ ರಾಮಚಂದ್ರನ್‌ ಅವಕಾಶ ಕಲ್ಪಿಸಿದರು.
ಕೇರಳ ಹೈಕೋರ್ಟ್ ಮತ್ತು ವೈದ್ಯರು
ಕೇರಳ ಹೈಕೋರ್ಟ್ ಮತ್ತು ವೈದ್ಯರು

ಲೈಂಗಿಕ ಅಪರಾಧಗಳ ಸಂತ್ರಸ್ತರನ್ನು ಮಹಿಳಾ ಸ್ತ್ರೀರೋಗ ತಜ್ಞರೇ ಪರೀಕ್ಷೆ ನಡೆಸಬೇಕು ಎಂಬ ಶಿಷ್ಟಾಚಾರ ಪ್ರಶ್ನಿಸಿ ಕೇರಳದ ಅನೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿವಿಧ ಸ್ತ್ರೀರೋಗ ತಜ್ಞರು ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.

ಆದಾಗ್ಯೂ ಅರ್ಜಿ ಸಲ್ಲಿಸಿರುವ ಸ್ತ್ರೀ ರೋಗ ತಜ್ಞರು ತಮ್ಮ ಅಹವಾಲುಗಳನ್ನು ಸೂಕ್ತ ಸರ್ಕಾರಿ ಅಧಿಕಾರಿಗಳ ಮುಂದಿಡಲು ನ್ಯಾ. ದೇವನ್‌ ರಾಮಚಂದ್ರನ್‌ ಸ್ವಾತಂತ್ರ್ಯ ನೀಡಿದರು.

ಲೈಂಗಿಕ ಅಪರಾಧಗಳ ಸಂತ್ರಸ್ತರ ಪರೀಕ್ಷೆಗಾಗಿ ಕೇರಳ ವೈದ್ಯಕೀಯ- ಕಾನೂನು ಶಿಷ್ಟಾಚಾರ- 2019 ರ ಕಲಂ 6 ಮತ್ತು ಏಪ್ರಿಲ್ 2023 ರಲ್ಲಿ ಮಾಡಿದ ತಿದ್ದುಪಡಿಯನ್ನು ಪ್ರಮುಖವಾಗಿ ಸ್ತ್ರೀರೋಗ ತಜ್ಞರು ಪ್ರಶ್ನಿಸಿದ್ದರು. 2023ರ ತಿದ್ದುಪಡಿಯ ಪ್ರಕಾರ, ಲೈಂಗಿಕ ಅಪರಾಧಕ್ಕೆ ತುತ್ತಾದ ಸಂತ್ರಸ್ತರನ್ನು ಪರೀಕ್ಷಿಸುವಂತೆ ಪೊಲೀಸರು ಮಹಿಳಾ ಸ್ತ್ರೀರೋಗ ತಜ್ಞರಿಗಷ್ಟೇ ಮನವಿ ಮಾಡಬಹುದಾಗಿದೆ.

ಯಾವುದೇ ನೋಂದಾಯಿತ ವೈದ್ಯರ ಬದಲು ಸ್ತ್ರೀ ರೋಗ ತಜ್ಞರಷ್ಟೇ ಲೈಂಗಿಕ ಅಪರಾಧಕ್ಕೆ ತುತ್ತಾದ ಸಂತ್ರಸ್ತರನ್ನು ಪರೀಕ್ಷೆ ನಡೆಸುವಂತೆ ಕಡ್ಡಾಯಗೊಳಿಸುವುದು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆಯ (ಪೋಕ್ಸೊ ಕಾಯಿದೆ) ಸೆಕ್ಷನ್ 27 (2) ಮತ್ತು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 164ಎಗೆ ವಿರುದ್ಧವಾಗಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.

ಕೇರಳ ವೈದ್ಯಕೀಯ- ಕಾನೂನು ಶಿಷ್ಟಾಚಾರ- 2019 ರ ಕಲಂ 6ರಲ್ಲಿ ಕಂಡು ಬರುವ ಆದೇಶ ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಮಾರ್ಗಸೂಚಿಗಳಲ್ಲಿ ಇಲ್ಲ ಎಂದು ಕೂಡ ಹೇಳಿದ್ದರು.

ಕಡಿಮೆ ಸಿಬ್ಬಂದಿ ಇರುವ ಆಸ್ಪತ್ರೆಗಳಲ್ಲಿ ಮಹಿಳಾ ಸ್ತ್ರೀರೋಗತಜ್ಞರೇ ಲೈಂಗಿಕ ದೌರ್ಜನ್ಯಕ್ಕೆ ತುತ್ತಾದವರ ಪರೀಕ್ಷೆ ನಡೆಸಲು ಕಾಯಬೇಕಾಗುವುದರಿಂದ ಈ ಶಿಷ್ಟಾಚಾರ ಜಾರಿ ಲೈಂಗಿಕ ದೌರ್ಜನ್ಯಕ್ಕೊಳಗಾದವರ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದರು.

ವೈದ್ಯಕೀಯ ಕಾನೂನು ಪರೀಕ್ಷೆಯ ಜವಾಬ್ದಾರಿಯನ್ನು ನಿರ್ದಿಷ್ಟ ರೀತಿಯ ತಜ್ಞರಿಗಷ್ಟೇ ವಹಿಸುವುದು ಪ್ರಭುತ್ವ ಸಾಕಾರಗೊಳಿಸಲು ಬಯಸುವ ನಿಜವಾದ ಉದ್ದೇಶಕ್ಕೆ ವಿರುದ್ಧವಾಗಿದೆ ಎಂದು ವಿವರಿಸಿದ್ದರು.

ಸಿಆರ್‌ಪಿಸಿ ಸೆಕ್ಷನ್ 53 (2) (ಬಿ) ವ್ಯಾಖ್ಯಾನದೊಳಗೆ ಬರುವ ಎಲ್ಲಾ ನೋಂದಾಯಿತ ವೈದ್ಯರು ಸಿಆರ್‌ಪಿಸಿ ಸೆಕ್ಷನ್ 164 ಎನಲ್ಲಿ ತಿಳಿಸಿರುವಂತೆ ಸಂತ್ರಸ್ತರ ವೈದ್ಯಕೀಯ ಪರೀಕ್ಷೆ ನಡೆಸಬಹುದು ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.

ವೈದ್ಯಕೀಯ ಶಿಕ್ಷಣ ಪಡೆಯುವಾಗಲೇ ವೈದ್ಯಕೀಯಕ್ಕೆ ಸಂಬಂಧಿಸಿದ ಎಲ್ಲಾ ಕ್ಷೇತ್ರಗಳನ್ನು ವೈದ್ಯರು ಅಭ್ಯಾಸ ಮಾಡಿರುವುದರಿಂದ ಲೈಂಗಿಕ ಅಪರಾಧಗಳಿಂದ ಸಂತ್ರಸ್ತರನ್ನು ಪರೀಕ್ಷಿಸಲು ಎಲ್ಲಾ ಭಾರತೀಯ ವೈದ್ಯಕೀಯ ಪದವೀಧರರು ಸಮರ್ಥರಾಗಿದ್ದಾರೆ ಎಂದು ಮನವಿ ಸಲ್ಲಿಸಲಾಗಿತ್ತು.

ಮಹಿಳಾ ಸ್ತ್ತೀ ರೋಗತಜ್ಞರ ಮೇಲೆ ಮಾತ್ರ ಹೊರೆ ಹೊರಿಸುವುದು ಕಾನೂನುಬಾಹಿರ, ಅನುಚಿತ, ಅಸಮಂಜಸ ಹಾಗೂ ನಿರಂಕುಶ ನಿರ್ಧಾರವಾಗುತ್ತದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು.

ಆದ್ದರಿಂದ ಶಿಷ್ಟಾಚಾರದ ಕಲಂ 6ಕ್ಕೆ ಮಾರ್ಪಾಡು ಮಾಡಬೇಕು. ಸಂತ್ರಸ್ತರನ್ನು ಪರೀಕ್ಷಿಸಲು ಎಲ್ಲಾ ನೋಂದಾಯಿತ ವೈದ್ಯರಿಗೆ ಅಗತ್ಯ ತರಬೇತಿ ನೀಡಬೇಕು ಎಂದು ವಿನಂತಿಸಿದ್ದರು.

Related Stories

No stories found.
Kannada Bar & Bench
kannada.barandbench.com