ನನಗೆ ತಿಳಿಸದೆಯೇ ನನ್ನ ಹೆಸರಿನಲ್ಲಿ ಕಲಾಪ ಮುಂದೂಡಲು ಕೋರಲಾಗಿದೆ: ಹಿರಿಯ ವಕೀಲ ಹರೀಶ್ ಸಾಳ್ವೆ

ಹೀಗೆ ಆಗುತ್ತಿರುವುದು ಇದೇ ಮೊದಲಲ್ಲ. ಹಿಂದೆಯೂ ಇದು ನಡೆದಿತ್ತು ಎಂದು ಸಾಳ್ವೆ ಅವರ ಕಚೇರಿಯ ವಕೀಲರು ನ್ಯಾಯಮೂರ್ತಿಗಳಾದ ಎ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠಕ್ಕೆ ತಿಳಿಸಿದರು.
Senior Advocate Harish Salve
Senior Advocate Harish Salve
Published on

ತನಗೆ ತಿಳಿಸದೆಯೇ ತನ್ನ ಪರವಾಗಿ ವಿಚಾರಣೆ ಮುಂದೂಡುವಂತೆ ಕೋರಲಾಗಿದೆ ಎಂದು ಹಿರಿಯ ವಕೀಲ ಹರೀಶ್ ಸಾಳ್ವೆ ಗುರುವಾರ ಸುಪ್ರೀಂ ಕೋರ್ಟ್‌ ಮುಂದೆ ಬೇಸರಿಸಿದರು.

ಹೀಗೆ ಆಗುತ್ತಿರುವುದು ಇದೇ ಮೊದಲಲ್ಲ. ಹಿಂದೆಯೂ ಇದು ನಡೆದಿತ್ತು ಎಂದು ಸಾಳ್ವೆ ಅವರ ಕಚೇರಿಯ ವಕೀಲರು ನ್ಯಾಯಮೂರ್ತಿಗಳಾದ ಎ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠಕ್ಕೆ  ವಿವರಿಸಿದರು.

Also Read
ಒಂದು ರಾಷ್ಟ್ರ ಒಂದು ಚುನಾವಣೆ: ಕೇಂದ್ರ ರಚಿಸಿರುವ ಉನ್ನತ ಮಟ್ಟದ ಸಮಿತಿಯಲ್ಲಿ ಹಿರಿಯ ನ್ಯಾಯವಾದಿ ಹರೀಶ್ ಸಾಳ್ವೆ

ನನಗೆ ಇದರ ಮಾಹಿತಿಯೇ ಗೊತ್ತಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸುವಂತೆ ಸಾಳ್ವೆ ಅವರು ನನ್ನನ್ನು ಕೇಳಿಕೊಂಡಿದ್ದಾರೆ. ನ್ಯಾಯಾಲಯಕ್ಕೆ ಹಾಗೂ ವಕೀಲರಿಗೆ ಇದರಿಂದ ತುಂಬಾ ಅನ್ಯಾಯವಾಗಿದೆ. ಸಾಳ್ವೆ ಅವರಿಗೂ ಮುಂದೂಡಿಕೆ ವಿಚಾರವನ್ನು ತಿಳಿಸಿಲ್ಲ ಮತ್ತು ಇದು ಹೀಗಾಗುತ್ತಿರುವುದು ಇದೇ ಮೊದಲಲ್ಲ ಎಂದು ಸಾಳ್ವೆ ಅವರ ಕಚೇರಿಯ ವಕೀಲರೊಬ್ಬರು ಹೇಳಿದರು.

ಪ್ರಕರಣದಲ್ಲಿ ಹಾಜರಾಗಬೇಕಿದ್ದ ಸಾಳ್ವೆ ಅವರು ಹಾಜರಾಗಲು ಸಾಧ್ಯ ಇಲ್ಲದಿರುವುದರಿಂದಾಗಿ ವಿಚಾರಣೆ ಮುಂದೂಡುವಂತೆ ಬುಧವಾರ ವಕೀಲರೊಬ್ಬರು ಮನವಿ ಮಾಡಿದ್ದರು. ಇದಕ್ಕೆ ಪೀಠ ಆಕ್ಷೇಪ ವ್ಯಕ್ತಪಡಿಸಿತ್ತು. ಹಿರಿಯ ವಕೀಲರ ಹೆಸರನ್ನು ಬಳಸಿಕೊಂಡು ವಿಚಾರಣೆ ಮುಂದೂಡುವ ಅಭ್ಯಾಸ ಹೆಚ್ಚುತಿದೆ ಎಂದು ಹೇಳಿತ್ತು.

ಸಾಳ್ವೆ ಅವರಿಗೆ ಪ್ರಕರಣ ಮುಂದೂಡಿಕೆ ಮನವಿ ಬಗ್ಗೆ ಮಾಹಿತಿ ಇಲ್ಲ ಎಂದು ಸಾಳ್ವೆ ಕಚೇರಿಯ ವಕೀಲರು ತಿಳಿಸಿದರು. ಆಗ ನ್ಯಾಯಾಲಯ ಪ್ರಕರಣ ಮುಂದೂಡುವುದು ವಕೀಲರ ವೈಯಕ್ತಿಕ ವಿಚಾರವಲ್ಲ ಎಂದಿತು.

 ಆದರೆ ಪ್ರಕರಣ ಮುಂದೂಡಿಕೆ ಕೋರಿದ್ದ ವಕೀಲರ ವಿರುದ್ಧ ಸಾಳ್ವೆ ಅವರ ಕಚೇರಿ ಯಾವ ಕ್ರಮ ಕೈಗೊಳ್ಳಲಿದೆ ಎಂದು ನ್ಯಾ. ಓಕಾ ಪ್ರಶ್ನಿಸಿದಾಗ, ಸಾಳ್ವೆ ಕಚೇರಿಯ ವಕೀಲರು, ಸಾಳ್ವೆ ಅವರ ಹೆಸರಿನಲ್ಲಿ ಪ್ರಕರಣ ಮುಂದೂಡಿಕೆ ಕೋರಲಾಗುತ್ತದೆ ಎಂಬುದು ಸಂಬಂಧಪಟ್ಟ ಅಡ್ವೊಕೇಟ್‌ ಆನ್‌ ರೆಕಾರ್ಡ್‌ ಅವರಿಗೂ ತಿಳಿದಿರಲಿಲ್ಲ ಎಂದರು. ಇದಕ್ಕೆ ಹೊಣೆಯಾರು ಎಂದು ಪ್ರಶ್ನಿಸಿದ ನ್ಯಾ. ಓಕಾ ವಕೀಲರು ಕ್ಷಮೆಯಾಚಿಸಿದರೆ ಹಾನಿ ಇರುವುದಿಲ್ಲ ಎಂದರು.

Also Read
[ಮಹಾ ರಾಜಕಾರಣ] ಮುಖ್ಯಮಂತ್ರಿ ಬದಲಾದ ಮಾತ್ರಕ್ಕೆ ದೇವಲೋಕ ಬೀಳದು ಎಂದ ಸಾಳ್ವೆ; ಇದು 'ಯೋಜಿತ ಬಹುಮತ'ವೆಂದ ಸಿಂಘ್ವಿ

ಈ ಹಂತದಲ್ಲಿ ಹಾಜರಾದ, ಪ್ರಕರಣ ಮುಂದೂಡವಂತೆ ಬುಧವಾರ ಕೋರಿದ್ದ ವಕೀಲರು ಕಕ್ಷಿದಾರರ ಸೂಚನೆ ಮೇರೆಗೆ ತಾವು ಪ್ರಕರಣ ಮುಂದೂಡುವ ಮನವಿ ಪ್ರಸ್ತಾಪಿಸಿದ್ದಾಗಿ ತಿಳಿಸಿದರು. ಆಗ ನ್ಯಾಯಾಲಯ ಕಕ್ಷಿದಾರರ ವಿರುದ್ಧ ಕ್ರಮ ಕೈಗೊಂಡಿದ್ದೀರಾ ಎಂದು ಪ್ರಶ್ನಿಸಿತು.

“ಕಕ್ಷಿದಾರರು ಸದಾ ಸಾಳ್ವೆ ಅವರ ಕಚೇರಿಯೊಂದಿಗೆ ನೇರ ಸಂಪರ್ಕದಲ್ಲಿರುತ್ತಿದ್ದರು. ಆದ್ದರಿಂದ ಅವರು ಹೇಳಿದ್ದನ್ನು ನಂಬದೇ ಇರಲು ಬೇರೆ ಕಾರಣ ಇರಲಿಲ್ಲ. ತಪ್ಪು ಸಂವಹನ ಉಂಟಾಗಿದ್ದಕ್ಕಾಗಿ ನಾವು ಕ್ಷಮೆ ಯಾಚಿಸುತ್ತೇವೆ. ಸಾಳ್ವೆ ಅವರಿಗೂ ಕೂಡ” ಎಂದು ವಕೀಲರು ಮನವಿ ಮಾಡಿದರು. ಸರಿ ಈಗ ಅದು ಮುಗಿದ ವಿಚಾರ ಎಂದ ನ್ಯಾ. ಓಕಾ ಸಮಸ್ಯೆ ಇತ್ಯರ್ಥಪಡಿಸಿದರು. 

Kannada Bar & Bench
kannada.barandbench.com