ಹರ್ಷ ಕೊಲೆ ಪ್ರಕರಣ: 8ನೇ ಆರೋಪಿ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಕೊಲೆಯಾದ ಹರ್ಷನ ಬಗ್ಗೆ ಮಾಹಿತಿ ನೀಡುವ ಮೂಲಕ ಮೇಲ್ಮನವಿದಾರ ಕೂಡ ಪಿತೂರಿಯ ಭಾಗವಾಗಿದ್ದಾನೆ ಎಂದಿದೆ ನ್ಯಾಯಾಲಯ.
Harsha
HarshaA1

ಶಿವಮೊಗ್ಗದ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಎಂಟನೇ ಆರೋಪಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ವಿಭಾಗೀಯ ಪೀಠ ಈಚೆಗೆ ವಜಾ ಮಾಡಿದೆ.  

ತನ್ನ ಜಾಮೀನು ಅರ್ಜಿಯನ್ನು ಎನ್‌ಐಎ ವಿಶೇಷ ನ್ಯಾಯಾಲಯ ವಜಾಗೊಳಿಸಿದ್ದನ್ನು ಪ್ರಶ್ನಿಸಿ ಪ್ರಕರಣದ ಎಂಟನೇ ಆರೋಪಿ ಫರಾಜ್‌ ಪಾಷಾ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ.

ಆದರೆ ವಿಶೇಷ ನ್ಯಾಯಾಲಯ ಅರ್ಜಿ ವಜಾಗೊಳಿಸಿರುವುದು ಸೂಕ್ತವಾಗಿಯೇ ಇದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್‌ ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ಶ್ರೀನಿವಾಸ್‌ ಹರೀಶ್‌ ಕುಮಾರ್‌ ಮತ್ತು ಜಿ ಬಸವರಾಜ ಅವರಿದ್ದ ಪೀಠ ಮೇಲ್ಮನವಿಯನ್ನು ಜೂನ್‌ 26ರಂದು ವಜಾಗೊಳಿಸಿದೆ.

Also Read
ಹರ್ಷ ಕೊಲೆ ಪ್ರಕರಣ: ಆರೋಪಿಗಳ ನ್ಯಾಯಾಂಗ ಬಂಧನವನ್ನು 90ರಿಂದ 180 ದಿನಗಳಿಗೆ ವಿಸ್ತರಿಸಿದ ಎನ್‌ಐಎ ವಿಶೇಷ ನ್ಯಾಯಾಲಯ

ಪ್ರಕರಣದಲ್ಲಿ ಆರೋಪಿ ಭಯೋತ್ಪದಕ ಸಂಘಟನೆಯ ಸದಸ್ಯನಾಗಿದ್ದನೇ ಇಲ್ಲವೇ ಎಂಬುದು ಈ ಹಂತದಲ್ಲಿ ಆಧಾರವಾಗುವುದಿಲ್ಲ. ಆದರೆ ತನಿಖಾಧಿಕಾರಿಗಳು ಸಂಗ್ರಹಿಸಿದ ಸಾಕ್ಷ್ಯಗಳ ಪ್ರಕಾರ  1ರಿಂದ 6ನೇ ಸಂಖ್ಯೆಯ ಆರೋಪಿಗಳು ಅನೌಪಚಾರಿಕವಾಗಿ ಸಂಘಟಿತರಾಗಿ ಹಿಂದೂಗಳಲ್ಲಿ ಭಯ ಬಿತ್ತಲು ಹರ್ಷನನ್ನು ಕೊಲ್ಲಲು ನಿರ್ಧರಿಸಿದ್ದರು. ಪ್ರಕರಣದ 8ನೇ ಆರೋಪಿಯನ್ನು ನಂತರ ಹೆಸರಿಸಿರುವುದು ನಿಜವಾದರೂ ಒಂದರಿಂದ ಏಳನೇ ಸಂಖ್ಯೆಯ ಆರೋಪಿಗಳ ಸಂಚನ್ನು ತಿಳಿದು ನಂತರ ಹರ್ಷನನ್ನು ಹಿಂಬಾಲಿಸಿ ಆ ಆರೋಪಿಗಳಿಗೆ ಮಾಹಿತಿ ನೀಡಿದ್ದರಿಂದ ಅವರು ತಮ್ಮ ಯೋಜನೆಯನ್ನು ಕಾರ್ಯಗತಗೊಳಿಸಲು ಸಾಧ್ಯವಾಗಿದೆ. ಹೀಗಾಗಿ ಮಾಹಿತಿ ನೀಡುವ ಮೂಲಕ ಮೇಲ್ಮನವಿದಾರ ಕೂಡ ಪಿತೂರಿಯ ಭಾಗವಾಗಿದ್ದಾನೆ ಎಂದು ನ್ಯಾಯಾಲಯ ವಿವರಿಸಿದೆ.

ಅಲ್ಲದೆ ʼಸಿಸಿಟಿವಿಯ ದೃಶ್ಯಾವಳಿಗಳು ಮತ್ತು ಫೋನ್‌ ಕರೆ ವಿವರಗಳು ಹಾಗೂ ಸಾಕ್ಷಿಗಳ ಹೇಳಿಕೆಗಳು ಕೂಡ ಕೃತ್ಯದಲ್ಲಿ ಮೇಲ್ಮನವಿದಾರನ ಸಕ್ರಿಯ ಭಾಗವಹಿಸುವಿಕೆ ಇದೆ ಎಂಬುದನ್ನು ಹೇಳುತ್ತವೆ. ಆದ್ದರಿಂದ ಮೇಲ್ನೋಟಕ್ಕೆ ಆರೋಪಿ ವಿರುದ್ಧ ತಾನು ಮಾಡಿದ್ದ ವಾದದಲ್ಲಿ ಹುರಳಿದೆ ಎಂಬುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ ಸಮರ್ಥವಾಗಿದೆ.

Also Read
ಹರ್ಷ ಕೊಲೆ: ಸಚಿವ ಈಶ್ವರಪ್ಪ, ಪಾಲಿಕೆ ಸದಸ್ಯ ಚನ್ನಬಸಪ್ಪ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ನಡೆಸಲು ನ್ಯಾಯಾಲಯದ ಆದೇಶ

ತ್ವಾಹ ಫಸಲ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ಕೂಡ ಮೇಲ್ಮನವಿದಾರನಿಗೆ ನೆರವಾಗಿಲ್ಲ ಎಂದು ನ್ಯಾಯಾಲಯ ವಿವಿಧ ಕಾರಣಗಳೊಂದಿಗೆ ವಿವರಿಸಿದೆ.

ಜೊತೆಗೆ ʼಆರೋಪಿ ವಿರುದ್ಧ ಆರೋಪಪಟ್ಟಿಯಲ್ಲಿ ಮಾಡಲಾದ ಆರೋಪ ಮೇಲ್ನೋಟಕ್ಕೆ ನಿಜ ಎಂದು ಪ್ರಾಸಿಕ್ಯೂಷನ್‌ ಒಮ್ಮೆ ಸಾಬೀತುಪಡಿಸಿದರೂ ಯಾವುದೇ ಕಾರಣಕ್ಕೂ ಜಾಮೀನು ನೀಡುವಂತಿಲ್ಲ. ಆರೋಪಿಗೆ ಚಿಕ್ಕ ವಯಸ್ಸು, ಅಪರಾಧದ ಹಿನ್ನೆಲೆಯಲ್ಲಿ ಎಂಬಂತಂಹ ಅಂಶಗಳು ನ್ಯಾಯಾಲಯ ಜಾಮೀನು ನೀಡಲು ಪ್ರಭಾವ ಬೀರಬಾರದು ಎಂದು  ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌  ಪಿ ಪ್ರಸನ್ನ ಕುಮಾರ್‌ ಅವರು ಮಂಡಿಸಿದ ವಾದ ಸ್ವೀಕಾರಾರ್ಹವಾಗಿದೆʼ ಎಂಬುದಾಗಿ ಅದು ನುಡಿದಿದೆ.

ಯುಎಪಿಎ ಕಾಯಿದೆಯಡಿ ಮಾಡಲಾದ ಆರೋಪಗಳು ನಿಸ್ಸಂದೇಹವಾಗಿ ರಾಷ್ಟ್ರದ ವಿರುದ್ಧದ ಅಪರಾಧಗಳಾಗಿದ್ದು ದೇಶದ ಏಕತೆ, ಸಮಗ್ರತೆ, ಭದ್ರತೆ ಹಾಗೂ ಸಾರ್ವಭೌಮತೆಗೆ ಧಕ್ಕೆ ತರುತ್ತವೆ. ಜೊತೆಗೆ ಇದು ಸಮಾಜದ ವಿರುದ್ಧದ ಅಪರಾಧವೂ ಹೌದು. ಈ ಪ್ರಕರಣದ ವಾಸ್ತವಾಂಶಗಳು ವಿವರಿಸುವಂತೆ ಕೋಮುವಾದಿಗಳಂತೆ ಕಂಡುಬರುವ ಎಲ್ಲಾ ಆರೋಪಿಗಳಿಗೆ ಮೃತ ಹರ್ಷನ ಬಗ್ಗೆ ಯಾವುದೇ ವೈಯಕ್ತಿಕ ದ್ವೇಷ ಇರಲಿಲ್ಲ. ಹಿಂದೂಗಳಲ್ಲಿ ಭಯ ಬಿತ್ತುವ ಉದ್ದೇಶದಿಂದ ಹತ್ಯೆಗೆ ಹರ್ಷನನ್ನು ಆಯದುಕೊಳ್ಳಲಾಗಿದ್ದು. ಹೀಗಾಗಿ ಮೇಲ್ಮನವಿದಾರನ ವಯಸ್ಸು ಚಿಕ್ಕದು, ಅತನಿಗೆ ಕ್ರಿಮಿನಲ್‌ ಹಿನ್ನೆಲೆಯಲ್ಲಿ ಎಂಬುದು ಆತನಿಗೆ ಜಾಮೀನು ನೀಡಲು ಪರಿಗಣಿಸಬೇಕಾದ ಆಧಾರವಲ್ಲ ಎಂದ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿದೆ. ಮೇಲ್ಮನವಿದಾರ- ಆರೋಪಿ ಪರವಾಗಿ ಎಚ್‌ ಎನ್‌ ದಿವ್ಯತೇಜ ವಾದ ಮಂಡಿಸಿದ್ದರು.

Related Stories

No stories found.
Kannada Bar & Bench
kannada.barandbench.com