
ಹರಿಯಾಣದ ಬಿಜೆಪಿ ಸರ್ಕಾರ ಯಮುನಾ ನದಿಗೆ ವಿಷವುಣಿಸುತ್ತಿದೆ ಎಂಬ ಹೇಳಿಕೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ದೆಹಲಿಯ ಮಾಜಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರಿಗೆ ಹರಿಯಾಣದ ಸೋನಿಪತ್ ನ್ಯಾಯಾಲಯ ಬುಧವಾರ ಸಮನ್ಸ್ ಜಾರಿ ಮಾಡಿದೆ.
ಸಿಜೆಎಂ ನ್ಯಾಯಾಲಯದ ನ್ಯಾಯಧೀಶೆ ನೇಹಾ ಗೋಯಲ್ ಅವರು ಕೇಜ್ರಿವಾಲ್ ಅವರ ಪ್ರತಿಕ್ರಿಯೆ ಕೇಳಿದ್ದು ಫೆಬ್ರವರಿ 17ರಂದು ಖುದ್ದು ಹಾಜರಿರುವಂತೆ ಸೂಚಿಸಿದ್ದಾರೆ.
ಒಂದು ವೇಳೆ ಮುಂದಿನ ವಿಚಾರಣೆಯ ದಿನ ಅವರು ನ್ಯಾಯಾಲಯಕ್ಕೆ ಹಾಜರಾಗದಿದ್ದರೆ ಅವರು ಈ ವಿಚಾರವಾಗಿ ಏನನ್ನೂ ಹೇಳುತ್ತಿಲ್ಲ ಎಂಬುದನ್ನು ಪರಿಗಣಿಸಿ ಕಾನೂನು ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ನ್ಯಾಯಾಲಯ ಹೇಳಿದೆ.
ವಿಪತ್ತು ನಿರ್ವಹಣಾ ಕಾಯಿದೆ- 2005ರ ಸೆಕ್ಷನ್ 54ರ ಅಡಿಯಲ್ಲಿ ಕೇಜ್ರಿವಾಲ್ ವಿರುದ್ಧ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮೂಲಕ ಹರಿಯಾಣ ಸರ್ಕಾರ ದೂರು ಸಲ್ಲಿಸಿತ್ತು. ಕೇಜ್ರಿವಾಲ್ ಹೇಳಿಕೆ ದೆಹಲಿ ಮತ್ತು ಹರಿಯಾಣದ ನಿವಾಸಿಗಳಲ್ಲಿ ತಪ್ಪು ಮಾಹಿತಿ ಹರಡುತ್ತಿದ್ದು ಅವರು ಭಯಭೀತರಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಜನವರಿ 28 ರಂದು, ಸೋನಿಪತ್‌ನ ನೀರಾವರಿ ಇಲಾಖೆಯ ಆವರಣದಲ್ಲಿ ಯಮುನಾ ನದಿಯ ಸಮೀಪದ ಹಳ್ಳಿಯ ನಿವಾಸಿಗಳು ಜಮಾಯಿಸಿದ್ದರು. ಹರಿಯಾಣ ಸರ್ಕಾರ ಯಮುನಾ ನದಿಗೆ ವಿಷಪ್ರಾಶನ ಮಾಡಿದ್ದು ಏಕೆ ಎಂಬುದಕ್ಕೆ ವಿವರಣೆ ನೀಡಬೇಕು ಎಂದು ಆಗ್ರಹಿಸಿದರು. ಈ ಮಾಹಿತಿಯ ಮೂಲದ ಬಗ್ಗೆ ಕೇಳಿದಾಗ, ಕೆಲ ವ್ಯಕ್ತಿಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದ ವಿಡಿಯೋ ತುಣುಕೊಂದನ್ನು ಪ್ರಸ್ತುತಪಡಿಸಿದರು ಎಂದು ಮನವಿ ಹೇಳಿತ್ತು.
ವಿಡಿಯೋದಲ್ಲಿ ಕೇಜ್ರಿವಾಲ್ ಅವರು, ಹರಿಯಾಣ ಸರ್ಕಾರ ಯಮುನಾ ನದಿಗೆ ವಿಷವುಣಿಸುತ್ತಿದ್ದು ದೆಹಲಿ ಜಲ ಮಂಡಳಿಯ ಅಧಿಕಾರಿಗಳ ಜಾಗರೂಕತೆಯಿಂದ ಅದನ್ನು ಸಮಯಕ್ಕೆ ಸರಿಯಾಗಿ ಪತ್ತೆಹಚ್ಚಲಾಯಿತು. ಇದರಿಂದಾಗಿ ದೆಹಲಿ ನಿವಾಸಿಗಳಿಗೆ ಹಾನಿಯಾಗುವುದನ್ನು ತಪ್ಪಿಸಲಾಗಿದೆ ಎಂದು ಹೇಳುತ್ತಿರುವುದು ಕಂಡುಬಂದಿದೆ ಎಂದು ಅರ್ಜಿ ವಿವರಿಸಿತ್ತು.
ಜಲಸೇವಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಆಶಿಶ್ ಕೌಶಿಕ್ ದೂರು ಸಲ್ಲಿಸಿದ್ದು ವೈರಲ್ ವಿಡಿಯೋದಲ್ಲಿ ಮಾಡಲಾದ ಆರೋಪಗಳು ಸಂಪೂರ್ಣ ಸುಳ್ಳು ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಭರವಸೆ ನೀಡಿದ ಬಳಿಕ ಗುಂಪು ಅಲ್ಲಿಂದ ಚದುರಿತು ಎಂದಿದ್ದಾರೆ.
ಕೇಜ್ರಿವಾಲ್ ಅವರು ಉದ್ದೇಶಪೂರ್ವಕವಾಗಿ ಈ ಹೇಳಿಕೆ ನೀಡಿದ್ದು ಸುತ್ತಮುತ್ತಲಿನ ಜನರಲ್ಲಿ ಭೀತಿ ಸೃಷ್ಟಿಸಿದೆ. ಆದ್ದರಿಂದ, ಭಾರತೀಯ ನ್ಯಾಯ ಸಂಹಿತೆ- 2023ರ ಸೆಕ್ಷನ್ 353 (ಸಾರ್ವಜನಿಕ ಕಿಡಿಗೇಡಿತನ) ಮತ್ತು ಸೆಕ್ಷನ್ 356 (ಮಾನನಷ್ಟ) ಜೊತೆಗೆ ವಿಪತ್ತು ನಿರ್ವಹಣಾ ಕಾಯಿದೆ, 2005ರ ಸೆಕ್ಷನ್ 54ರಡಿ ಆರೋಪಿ-ಕೇಜ್ರಿವಾಲ್ ಅವರಿಗೆ ಸಮನ್ಸ್ ನೀಡಿ ವಿಚಾರಣೆಗೊಳಪಡಿಸಿ ಶಿಕ್ಷೆ ವಿಧಿಸಬೇಕು ಎಂದು ಮನವಿ ಮಾಡಲಾಗಿದೆ.
[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]