
ಇದೇ ಮೇ 24ರಂದು ನಿವೃತ್ತರಾಗಲಿರುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎ ಎಸ್ ಓಕಾ ಅವರು, "ನಿವೃತ್ತರಾಗುವ ನ್ಯಾಯಮೂರ್ತಿಗಳು ತಮ್ಮ ಕೊನೆಯ ದಿನದಂದು ಕೆಲಸ ಮಾಡದೆ ಇರುವ ಸಂಪ್ರದಾಯವನ್ನು ತಾವು ಒಪ್ಪುವುದಿಲ್ಲ," ಎಂದು ಹೇಳಿದರು.
ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್-ಆನ್-ರೆಕಾರ್ಡ್ ಸಂಘ (ಎಸ್‌ಸಿಎಒಆರ್ ಎ) ಇಂದು ನವದೆಹಲಿಯಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
"ನಿವೃತ್ತ ನ್ಯಾಯಮೂರ್ತಿಗಳು ಕೊನೆಯ ದಿನದಂದು ಕೆಲಸ ಮಾಡಬಾರದು ಎಂಬುದಾಗಿ ಸುಪ್ರೀಂ ಕೋರ್ಟ್‌ನಲ್ಲಿ ಅನುಸರಿಸುತ್ತಿರುವ ಸಂಪ್ರದಾಯವನ್ನು ನಾನು ಒಪ್ಪುವುದಿಲ್ಲ ಎಂದು ನಿನ್ನೆ ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಹೇಳಿದ್ದೆ. ಈ ಸಂಪ್ರದಾಯವನ್ನು ತೊಡೆದುಹಾಕಲು ನಮಗೆ ಸ್ವಲ್ಪ ಸಮಯ ಬೇಕಾಗುತ್ತದೆ. ಆದರೆ ಕನಿಷ್ಠ ಒಂದು ತೃಪ್ತಿ ನನಗಿದೆ, ಕೊನೆಯ ದಿನದಂದು ನಾನು ಸಾಮಾನ್ಯ ಪೀಠದಲ್ಲಿ ಕುಳಿತು ಕೆಲವು ತೀರ್ಪುಗಳನ್ನು ನೀಡಲಿದ್ದೇನೆ," ಎಂದು ಅವರು ಹೇಳಿದರು.
ನಿವೃತ್ತರಾಗುವ ನ್ಯಾಯಮೂರ್ತಿಗಳಿಗೆ ಮಧ್ಯಾಹ್ನ 1:30 ಕ್ಕೆ ಗೌರವ ರಕ್ಷೆ ನೀಡುವ ಪದ್ಧತಿಯನ್ನು ವಿಳಂಬವಾಗಿ ನಡೆಸಬೇಕು ಎಂದು ನ್ಯಾಯಮೂರ್ತಿ ಓಕಾ ಹೇಳಿದರು.
"ನಿವೃತ್ತ ನ್ಯಾಯಮೂರ್ತಿಗಳನ್ನು ಊಟದ ನಂತರ ತಕ್ಷಣ ಮನೆಗೆ ಹೋಗಲು ಏಕೆ ಹೇಳಬೇಕು? ನ್ಯಾಯಮೂರ್ತಿಗಳು ತಮ್ಮ ಕೊನೆಯ ಕೆಲಸದ ದಿನದಂದು ನಾಲ್ಕು ಗಂಟೆಯವರೆಗೂ ಕೆಲಸ ಮಾಡಿದ ತೃಪ್ತಿ ಹೊಂದಲು ಆ ಪದ್ಧತಿಯನ್ನು (ಊಟದ ನಂತರ ಮನೆಗೆ ಕಳುಹಿಸಿಕೊಡುವುದು) ಕೂಡ ಬದಲಿಸಬೇಕು" ಎಂದು ಅವರು ಹೇಳಿದರು.
ತಾನು ನಿವೃತ್ತಿ ಎಂಬ ಪದ ದ್ವೇಷಿಸುವೆ ಎಂದ ಅವರು ಜನವರಿಯಿಂದಲೇ ಸಾಕಷ್ಟು ಪ್ರಕರಣ ಆಲಿಸಲು ನಿರ್ಧರಿಸಿದ್ದಾಗಿ ತಿಳಿಸಿದರು.
ಮುಂದುವರೆದು, "ನಾನು ನಿವೃತ್ತಿಯ ಬಗ್ಗೆ ಎಂದಿಗೂ ಯೋಚಿಸಲು ಬಯಸಲಿಲ್ಲ. ಆದ್ದರಿಂದ ನನಗಿದ್ದ ಒಂದು ಆಯ್ಕೆ ಎಂದರೆ ಜನವರಿಯಿಂದ ಎಷ್ಟು ಸಾಧ್ಯವೋ ಅಷ್ಟು ಹೆಚ್ಚಿನ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿದೆ. ಇದರ ಪರಿಣಾಮವೆಂದರೆ ನಾನು, ನನ್ನ ಇಬ್ಬರು ಗೌರವಾನ್ವಿತ ಸಹೋದ್ಯೋಗಿಗಳಾದ ನ್ಯಾಯಮೂರ್ತಿ [ಎಜಿ] ಮಸೀಹ್ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್, ಮೂವರೂ ತೀರ್ಪುಗಳನ್ನು ಪೂರ್ಣಗೊಳಿಸಲು ಹೆಣಗಾಡುತ್ತಿದ್ದೇವೆ" ಎಂದರು.
ಮುಂದುವರೆದು,"ಇದು ಎಷ್ಟು ಸೂಕ್ಷ್ಮ ವಿಷಯವಾಯಿತೆಂದರೆ, ಪ್ರತಿದಿನ ನನ್ನ ಹೆಂಡತಿ ಮುಂಜಾನೆಯ ನಡಿಗೆಗೆ ಜೊತೆಯಾಗುತ್ತಾಳೆ. ಈ ವೇಳೆ ಆಕೆ ಮೊದಲು ನನ್ನನ್ನು ಕೇಳುವ ಪ್ರಶ್ನೆ 'ಎಷ್ಟು (ಪ್ರಕರಣಗಳು ಬಾಕಿ) ಉಳಿದಿವೆ?' ಎನ್ನುವುದು. ಏಕೆಂದರೆ ನಾನು ತುಂಬಾ ಸೂಕ್ಷ್ಮ ಮತ್ತು ನನ್ನ ತೀರ್ಪುಗಳನ್ನು ಪೂರ್ಣಗೊಳಿಸುವ ಒತ್ತಡದಲ್ಲಿದ್ದೇನೆ ಎಂದು ಅವಳಿಗೆ ತಿಳಿದಿದೆ" ಎಂದರು.
ಕಾರ್ಯಕ್ರಮದ ವೇಳೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರು ನ್ಯಾ ಓಕಾ ಅವರೊಂದಿಗಿನ ತಮ್ಮ ನಾಲ್ಕು ದಶಕಗಳ ಒಡನಾಟವನ್ನು ಸ್ಮರಿಸಿದರು. "ಅವರೊಬ್ಬ ಕಾರ್ಯತತ್ಪರ ವ್ಯಕ್ತಿ. ತಮ್ಮ ನಿವೃತ್ತಿಯ ನಂತರವೂ ಅವರು ಇದೇ ರೀತಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ, ವಿರಾಮದಿಂದಿರುವುದಿಲ್ಲ ಎಂದು ನಾನು ಬಲ್ಲೆ," ಎಂದು ತಮ್ಮ ಮೆಚ್ಚುಗೆ ಸೂಚಿಸಿದರು.
ಸಂಘದ ಅಧ್ಯಕ್ಷ ವಿಪಿನ್ ನಾಯರ್, ಕಾರ್ಯದರ್ಶಿ ನಿಖಿಲ್ ಜೈನ್ ಓಕಾ ಅವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.