[ರಸ್ತೆ ಗುಂಡಿ] ಬೆಂಗಳೂರಿಗೆ ಕೆಟ್ಟ ಹೆಸರು ಬರುತ್ತಿದೆ ಎಂಬುದನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು: ಹೈಕೋರ್ಟ್‌

"ಪ್ರಧಾನ ಮಂತ್ರಿ ಬಂದು ಹೋದ ಬಳಿಕ ರಸ್ತೆ ಹಾಳಾಗಿದೆ ಎಂಬ ವರದಿಗಳನ್ನು ನಾವು ನೋಡಿದ್ದೇವೆ" ಎಂದು ವಿಚಾರಣೆಯ ಸಂದರ್ಭದಲ್ಲಿ ಉಲ್ಲೇಖಿಸಿದ ಮುಖ್ಯ ನ್ಯಾಯಮೂರ್ತಿ ಅವಸ್ಥಿ.
BBMP
BBMP

“ರಸ್ತೆ ಗುಂಡಿ ವಿಚಾರದಿಂದ ಬೆಂಗಳೂರಿಗೆ ಅತಿ ಕೆಟ್ಟ ಹೆಸರು ಬರುತ್ತಿದೆ ಎಂಬುದನ್ನು ನೀವುಗಳು (ಅಧಿಕಾರಿಗಳು) ಅರ್ಥ ಮಾಡಿಕೊಳ್ಳಬೇಕು. ಪ್ರಧಾನ ಮಂತ್ರಿ ಬಂದು ಹೋದ ಬಳಿಕ ರಸ್ತೆ ಹಾಳಾಗಿದೆ ಎಂಬ ವರದಿಗಳನ್ನು ನಾವು ನೋಡಿದ್ದೇವೆ” ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳನ್ನು ಕುರಿತು ಕರ್ನಾಟಕ ಹೈಕೋರ್ಟ್‌ ಗುರುವಾರ ಕಿವಿಮಾತು ಹೇಳಿತು.

ಬೆಂಗಳೂರು ನಗರದ ವ್ಯಾಪ್ತಿಯಲ್ಲಿನ ರಸ್ತೆಗಳ ಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿದಂತೆ ವಿಜಯನ್ ಮೆನನ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ಬಿಬಿಎಂಪಿ ಪ್ರತಿನಿಧಿಸಿದ್ದ ವಕೀಲ ವಿ ಶ್ರೀನಿಧಿ ಅವರು “ನಗರದಲ್ಲಿ 847.56 ಕಿ ಮೀ ರಸ್ತೆ ಗುಂಡಿ ಮುಚ್ಚಬೇಕು ಎಂದು ಜಂಟಿ ಸರ್ವೆಯಲ್ಲಿ ಹೇಳಲಾಗಿದೆ. 397 ಕಿ. ಮೀಗೆ ಸಂಬಂಧಿಸಿದಂತೆ ಈಗಾಗಲೇ ಅಮೆರಿಕನ್‌ ರೋಡ್‌ ಟೆಕ್ನಾಲಜೀಸ್‌ ಸಲ್ಯೂಷನ್ಸ್‌ಗೆ (ಎಆರ್‌ಟಿಎಸ್‌) ಕಾರ್ಯಾದೇಶ ನೀಡಲಾಗಿದೆ. ಬಾಕಿ ಉಳಿದ 576 ಕಿ.ಮೀ ಗೆ ಸಂಬಂಧಿಸಿದಂತೆ ಟೆಂಡರ್‌ ಕರೆಯಲಾಗಿದೆ” ಎಂದರು.

ಆಗ ಪೀಠವು “ರಸ್ತೆ ರಿಪೇರಿ ಮಾಡಲು ಏನಾದರೂ ಸಮಸ್ಯೆ ಇದೆಯೇ” ಎಂದು ವಿಚಾರಣೆಗೆ ಹಾಜರಾಗಿದ್ದ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರನ್ನು ಪ್ರಶ್ನಿಸಿತು. “ರಸ್ತೆ ಗುಂಡಿ ಮುಚ್ಚುವ ವಿಚಾರವು ಬೆಂಗಳೂರಿಗೆ ಕೆಟ್ಟ ಹೆಸರು ತರುತ್ತಿದೆ ಎಂಬುದನ್ನು ನೀವುಗಳು (ಅಧಿಕಾರಿಗಳು) ಅರ್ಥ ಮಾಡಿಕೊಳ್ಳಬೇಕು. ಪ್ರಧಾನ ಮಂತ್ರಿ ಬಂದು ಹೋದ ಬಳಿಕ ರಸ್ತೆ ಹಾಳಾಗಿದೆ ಎಂಬ ವರದಿಗಳನ್ನು ನಾವು ನೋಡಿದ್ದೇವೆ” ಎಂದಿತು.

ಇದಕ್ಕೆ ಶ್ರೀನಿಧಿ ಅವರು “ರಸ್ತೆ ರಿಪೇರಿ ಮಾಡುವಾಗ ಅಲ್ಲಿ ಒಳಚರಂಡಿ ಇದ್ದಿದ್ದು ಗೊತ್ತಿರಲಿಲ್ಲ. ಬಳಿಕ ಮುಖ್ಯ ಆಯುಕ್ತರೇ ಅಲ್ಲಿಗೆ ತೆರಳಿ ಪರಿಶೀಲಿಸಿ ಸಮಸ್ಯೆ ಬಗೆಹರಿಸಿದ್ದಾರೆ. ಆ ರಸ್ತೆಯನ್ನು ಪ್ರಧಾನ ಮಂತ್ರಿ ಬಳಸಲೇ ಇಲ್ಲ” ಎಂದು ಸಮಜಾಯಿಷಿ ನೀಡುವ ಪ್ರಯತ್ನ ಮಾಡಿದರು.

ಈ ನಡುವೆ ಮಧ್ಯಪ್ರವೇಶಿಸಿದ ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎಸ್‌ ಆರ್‌ ಅನುರಾಧಾ ಅವರು “23 ಕೋಟಿ ರೂಪಾಯಿ ವೆಚ್ಚ ಮಾಡಿ ಆ ರಸ್ತೆಗಳನ್ನು ನಿರ್ಮಿಸಲಾಗಿದೆ” ಎಂದರು.

ಆಗ ಮುಖ್ಯ ನ್ಯಾಯಮೂರ್ತಿ ಅವಸ್ಥಿ ಅವರು “ಎಷ್ಟು ಖರ್ಚು ಮಾಡಲಾಗಿದೆ ಎಂಬುದು ನಮಗೆ ಬೇಕಿಲ್ಲ. ಅದನ್ನು ಆಡಿಟ್‌ ವಿಭಾಗ ನೋಡಿಕೊಳ್ಳಲಿದೆ. ರಸ್ತೆಗಳನ್ನು ರಿಪೇರಿ ಮಾಡದ ಹೊರತು ನಾವು ಪ್ರಕರಣವನ್ನು ಇತ್ಯರ್ಥಪಡಿಸುವುದಿಲ್ಲ. ಟೆಂಡರ್‌ ತೆರೆದ ಮೇಲೆ ಉಳಿದೆಲ್ಲಾ ಪ್ರಕ್ರಿಯೆಯನ್ನು ಒಂದು ವಾರದಲ್ಲಿ ಪೂರ್ಣಗೊಳಿಸಬೇಕು” ಎಂದು ಬಿಬಿಎಂಪಿಗೆ ತಾಕೀತು ಮಾಡಿದರು.

ಅಂತಿಮವಾಗಿ ಪೀಠವು “ಪೈಥಾನ್‌ ಯಂತ್ರದ ಮೂಲಕ 397 ಕಿ ಮೀ ರಸ್ತೆ ಗುಂಡಿ ಮುಚ್ಚಲು ಆರ್‌ಟಿಎಸ್‌ ಜೊತೆ ಒಪ್ಪಂದ ಮಾಡಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ಕಾರ್ಯಾದೇಶ ನೀಡಲಾಗಿದೆ. 847.56 ಕಿ ಮೀ ರಸ್ತೆ ಗುಂಡಿ ಮುಚ್ಚಬೇಕು ಎಂದು ಜಂಟಿ ಸರ್ವೆಯಲ್ಲಿ ಹೇಳಲಾಗಿದೆ. ಬಾಕಿ ಉಳಿದ 576 ಕಿ ಮೀ ಗೆ ಸಂಬಂಧಿಸಿದಂತೆ ಬುಧವಾರ ಟೆಂಡರ್‌ ಕರೆಯಲಾಗಿದೆ. ಜುಲೈ 15ರಂದು ಟೆಂಡರ್‌ ತೆರೆದು, ಬಳಿಕ ಗುಂಡಿ ಮುಚ್ಚುವ ಕೆಲಸವನ್ನು ಒಂದು ವಾರದ ಒಳಗೆ ಹಂಚಿಕೆ ಮಾಡಲಾಗುವುದು” ಎಂದು ಬಿಬಿಎಂಪಿ ಹೇಳಿದೆ ಎಂದು ಆದೇಶದಲ್ಲಿ ದಾಖಲಿಸಿತು.

ಮುಂದುವರಿದು, “ಪಾರದರ್ಶಕತೆ ಕಾಪಾಡಿಕೊಳ್ಳುವ ದೃಷ್ಟಿಯಿಂದ ಗುತ್ತಿಗೆ ಪಡೆಯುವ ಕಂಪೆನಿಯು ರಸ್ತೆ ಗುಂಡಿ ಮುಚ್ಚಿದ ರಸ್ತೆಯ ಅಳತೆಯ ದಾಖಲೆ, ಬಿಲ್‌ಗಳು, ರಸ್ತೆ ನಿರ್ಮಿಸಿದ ಬಳಿಕ ಮತ್ತು ಅದಕ್ಕೂ ಮುನ್ನ ಜಿಯೊ ಟ್ಯಾಗ್‌ ಫೋಟೊಗಳನ್ನು ಪ್ರತಿ ತಿಂಗಳ 5ನೇ ತಾರೀಕಿನಂದು ಸಲ್ಲಿಸಬೇಕು. ರಸ್ತೆ ಗುಂಡಿ ಪರಿಶೀಲನೆ ವೇಳೆ ಆಕ್ಷೇಪಣೆಗಳು ಇದ್ದರೆ ಗುತ್ತಿಗೆ ಪಡೆದ ಕಂಪೆನಿಗೆ ಬಿಬಿಎಂಪಿ ತಿಳಿಸಬೇಕು. ಆನಂತರ ಒಂದು ವಾರದೊಳಗೆ ಹಣ ಪಾವತಿಸಬೇಕು” ಎಂದು ಆದೇಶದಲ್ಲಿ ವಿವರಿಸಿದೆ.

Also Read
[ರಸ್ತೆ ಗುಂಡಿ] ಬಿಬಿಎಂಪಿ ಮುಖ್ಯ ಆಯುಕ್ತ, ಎಂಜಿನಿಯರ್‌ಗಳ ಅಮಾನತಿಗೆ ನಿರ್ದೇಶಿಸಬೇಕಾದೀತು: ಹೈಕೋರ್ಟ್‌ ಆಕ್ರೋಶ

“ಎಆರ್‌ಟಿಎಸ್‌ಗೆ ಬಾಕಿ ಉಳಿದಿರುವ ಹಣ ಪಾವತಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿ ಮುಖ್ಯ ಆಯುಕ್ತರು ಹತ್ತು ದಿನಗಳಲ್ಲಿ ಕ್ರಮಕೈಗೊಳ್ಳಬೇಕು. ರಸ್ತೆ ಗುಂಡಿ ಮುಚ್ಚಿರುವುದು ಮತ್ತು ಬಾಕಿ ರಸ್ತೆ ಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಯು ಸ್ಥಿತಿಗತಿ ವರದಿ ಸಲ್ಲಿಸಬೇಕು. ಇದಕ್ಕೆ ಎಆರ್‌ಟಿಎಸ್‌ ಸಹಕಾರ ನೀಡಬೇಕು” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದ್ದು, ವಿಚಾರಣೆಯನ್ನು ಜುಲೈ 27ಕ್ಕೆ ಮುಂದೂಡಿತು. ಬಿಬಿಎಂಪಿ ಪ್ರಧಾನ ಎಂಜಿನಿಯರ್‌ ಎಂ ಲೋಕೇಶ್‌ ಅವರು ನ್ಯಾಯಾಲಯದ ಮುಂದೆ ಹಾಜರಾಗಿದ್ದರು.

ಕಳೆದ ವಿಚಾರಣೆಯಲ್ಲಿ ಬೆಂಗಳೂರಿನ ರಸ್ತೆ ಗುಂಡಿ ಮುಚ್ಚುವ ವಿಚಾರದಲ್ಲಿ ಸಂಪೂರ್ಣವಾಗಿ ಅಸಮರ್ಥರಾಗಿರುವ ಬಿಬಿಎಂಪಿ ಮುಖ್ಯ ಆಯುಕ್ತ, ಎಂಜಿನಿಯರ್‌ ಸೇರಿದಂತೆ ಎಲ್ಲರನ್ನೂ ಅಮಾನತು ಮಾಡಲು ನಾವು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುತ್ತೇವೆ ಎಂದು ಹೈಕೋರ್ಟ್‌ ಮೌಖಿಕವಾಗಿ ಆಕ್ರೋಶ ವ್ಯಕ್ತಪಡಿಸಿದ್ದನ್ನು ಇಲ್ಲಿ ನೆನೆಯಬಹುದಾಗಿದೆ.

Related Stories

No stories found.
Kannada Bar & Bench
kannada.barandbench.com