B S Yediyurappa and Karnataka HC
B S Yediyurappa and Karnataka HC

ಯಡಿಯೂರಪ್ಪಗೆ ಸದ್ಯಕ್ಕಿಲ್ಲ ಬಂಧನ ಭೀತಿ: 'ಯಾರನ್ನು ಸಂತುಷ್ಟಗೊಳಿಸಲು ಬಿಎಸ್‌ವೈ ಬಂಧನ?' ಎಂದು ಪ್ರಶ್ನಿಸಿದ ಹೈಕೋರ್ಟ್

ಸುಪ್ರೀಂ ಕೋರ್ಟ್‌ ಆದೇಶ ಮಾಡಿದರೂ ಅವುಗಳು ಪಾಲನೆಯಾಗದ ಸಂದರ್ಭವಿದೆ. ನಾಲ್ಕು ದಿನದಲ್ಲಿ ಅವರು ಬರದಿದ್ದರೆ ಆಕಾಶ ಕಳಚಿ ಬೀಳಲಿದೆಯೇ? ವಾರೆಂಟ್‌ ನೋಡಿದರೆ ಅನುಮಾನ ಬರುತ್ತದೆ? ಎಂದು ಸಮರ್ಥನೆ ನೀಡಿದ ಹೈಕೋರ್ಟ್‌.

ಪೋಕ್ಸೊ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರನ್ನು ಮುಂದಿನ ವಿಚಾರಣೆಯವರೆಗೆ ಬಂಧಿಸದಂತೆ ಆದೇಶಿಸಿರುವ ಕರ್ನಾಟಕ ಹೈಕೋರ್ಟ್‌, "ಬಿಎಸ್‌ವೈ ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಬೇಕು ಎಂದು ಸಿಐಡಿ ಬಯಸುತ್ತಿರುವುದು ಯಾರನ್ನು ಸಂತುಷ್ಟಗೊಳಿಸಲು?" ಎಂದು ಕಟುವಾಗಿ ಪ್ರಶ್ನಿಸಿತು.

ವಿಚಾರಣಾಧೀನ ನ್ಯಾಯಾಲಯವು ಗುರುವಾರ ತಮ್ಮ ವಿರುದ್ಧ ಬಂಧನ ವಾರೆಂಟ್‌ ಹೊರಡಿಸುವ ಸುಳಿವು ದೊರೆಯುತ್ತಲೇ ನಿರೀಕ್ಷಣಾ ಜಾಮೀನು ಕೋರಿ ಯಡಿಯೂರಪ್ಪ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಇದಕ್ಕೂ ಮುನ್ನ, ತಮ್ಮ ವಿರುದ್ಧದ ಪೋಕ್ಸೊ ಪ್ರಕರಣ ರದ್ದುಪಡಿಸಲು ಮನವಿ ಮಾಡಿದರು. ಈ ಎರಡೂ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ಏಕಸದಸ್ಯ ಪೀಠವು ಇಂದು ವಿಸ್ತೃತವಾಗಿ ವಿಚಾರಣೆ ನಡೆಸಿತು.

ನ್ಯಾಯಾಲಯವು ತನ್ನ ಆದೇಶದಲ್ಲಿ “ಸಿಆರ್‌ಪಿಸಿ ಸೆಕ್ಷನ್‌ 41ಎ ಅಡಿ ಸಿಐಡಿ ಪೊಲೀಸರು ಮಾರ್ಚ್‌ 28ರಂದು ಯಡಿಯೂರಪ್ಪ ಅವರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ತನಿಖೆಯಲ್ಲಿ ಭಾಗಿಯಾಗಿದ್ದಾರೆ. ಜೂನ್‌ 6ರಂದು ಸಿಐಡಿ ಎರಡನೇ ನೋಟಿಸ್‌ ಜಾರಿ ಮಾಡಿದೆ. ಆದರೆ, ಯಡಿಯೂರಪ್ಪ ಅವರು ಪೊಲೀಸರ ಮುಂದೆ ಹಾಜರಾಗಿರಲಿಲ್ಲ. ಹೀಗಾಗಿ, ವಿಚಾರಣಾಧೀನ ನ್ಯಾಯಾಲಯದ ನ್ಯಾಯಾಧೀಶರಿಂದ ಬಂಧನ ವಾರೆಂಟ್‌ ಪಡೆಯಲಾಗಿದೆ” ಎಂದು ದಾಖಲಿಸಿದೆ.

ಅರ್ಜಿದಾರರ ಪರ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು “ಜೂನ್‌ 11ರಂದು ಯಡಿಯೂರಪ್ಪ ಅವರು ಜೂನ್‌ 17ರಂದು ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ. ಹೀಗಾಗಿ, ಯಡಿಯೂರಪ್ಪ ಅವರ ಬಂಧನ ಮಾಡಲು ಇದು ಸೂಕ್ತ ಕಾರಣವಾಗುವುದಿಲ್ಲ. ಅಲ್ಲದೇ, ಕಸ್ಟಡಿ ವಿಚಾರಣೆಗೂ ತೆಗೆದುಕೊಳ್ಳಲಾಗದು. ಅನಾರೋಗ್ಯಪೀಡಿತರಾಗಿರುವ ಯಡಿಯೂರಪ್ಪ ಅವರು ಮಾಜಿ ಮುಖ್ಯಮಂತ್ರಿಯಾಗಿದ್ದು, ಅವರು ಬದುಕಿನ ಮುಸ್ಸಂಜೆಯಲ್ಲಿದ್ದಾರೆ. ಹೀಗಾಗಿ, ರಕ್ಷಣೆ ನೀಡಬೇಕು” ಎಂದು ಕೋರಿದರು.

ಈ ವಾದ ಪುರಸ್ಕರಿಸದ ಪೀಠವು, “ಯಡಿಯೂರಪ್ಪ ಅವರನ್ನು ಬಂಧಿಸಿ ವಶಕ್ಕೆ ಪಡೆಯುವ ಪ್ರಕ್ರಿಯೆಗೆ ಮುಂದಿನ ವಿಚಾರಣೆವರೆಗೆ ತಡೆ ನೀಡಲಾಗಿದೆ. ಜೂನ್‌ 11ರಂದು ಯಡಿಯೂರಪ್ಪ ಸಿಐಡಿಗೆ ಕಳುಹಿಸಿರುವ ಪತ್ರದ ಪ್ರಕಾರ ತನಿಖೆಗಾಗಿ ಪೊಲೀಸರ ಮುಂದೆ ಹಾಜರಾಗಬೇಕು” ಎಂದು ಆದೇಶಿಸಿತು.

ಸರ್ಕಾರ ಸೇರಿದಂತೆ ಎಲ್ಲಾ ಪಕ್ಷಕಾರರಿಗೆ ಆಕ್ಷೇಪಣೆ ಸಲ್ಲಿಸಲು ನೋಟಿಸ್‌ ಜಾರಿ ಮಾಡಿ ವಿಚಾರಣೆಯನ್ನು ಜೂನ್‌ 28ಕ್ಕೆ ಮುಂದೂಡಿತು.

ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರ ವಾದ

ಜೂನ್‌ 6ರಂದು ಸಿಆರ್‌ಪಿಸಿ ಸೆಕ್ಷನ್‌ 41(ಎ) ಅಡಿ ಯಡಿಯೂರಪ್ಪ ಅವರಿಗೆ ನೋಟಿಸ್‌ ಜಾರಿ ಮಾಡಲಾಗಿದ್ದು, ನಾಳೆ ಬೆಳಿಗ್ಗೆ 10.30ಕ್ಕೆ ಸಿಐಡಿ ಮುಂದೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೆ, ಹಿಂದಿನ ದಿನ ಅವರು ಯಾವುದೇ ಕಾರ್ಯಕ್ರಮವಿಲ್ಲದಿದ್ದರೂ ಜೂನ್‌ 11ರ ಸಂಜೆ ದೆಹಲಿಗೆ ಪ್ರಯಾಣಿಸಿದ್ದಾರೆ. ಇದಕ್ಕೂ ಮುನ್ನ, ಜೂನ್‌ 17ರಂದು ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ.

ಪ್ರಕರಣದಲ್ಲಿ ತನಿಖಾಧಿಕಾರಿಗಳಿಗೆ ಬಂಧನದ ಅವಶ್ಯಕತೆ ಇದೆ ಎನಿಸಿರುವ ಹಿನ್ನೆಲೆಯಲ್ಲಿ ವಿಚಾರಣಾಧೀನ ನ್ಯಾಯಾಲಯದಿಂದ ಬಂಧನ ವಾರೆಂಟ್‌ ಪಡೆದಿದ್ದಾರೆ. ಅಲ್ಲದೇ, ರಾಜ್ಯದ ವ್ಯಾಪ್ತಿಯಿಂದ ಹೊರಗೆ ಇದ್ದಾಗ ಸ್ಥಳೀಯ ಪೊಲೀಸರ ನೆರವು ಪಡೆಯಲು ಬಂಧನ ವಾರೆಂಟ್‌ ಅತ್ಯಗತ್ಯ.

ಅರ್ಜಿದಾರರು ಆಕ್ಷೇಪಿಸಿರುವಂತೆ ರಾಜ್ಯ ಸರ್ಕಾರ ಯಾವುದೇ ದುರುದ್ದೇಶದ ಭಾವನೆ ಹೊಂದಿಲ್ಲ. ಆರೋಪಿ ಸಾಕ್ಷ್ಯ ನಾಶ ಮಾಡಬಹುದು ಎಂಬುದಷ್ಟೇ ತನಿಖಾಧಿಕಾರಿಗಳ ಆತಂಕ. ಅರ್ಜಿಯ ಊರ್ಜಿತತ್ವ ಪ್ರಶ್ನೆಯನ್ನು ಮುಕ್ತವಾಗಿರಿಸಬೇಕು ಮತ್ತು ವಿಸ್ತೃತ ಆಕ್ಷೇಪಣೆ ಸಲ್ಲಿಸಲು ಅನುಮತಿಸಬೇಕು.

ದೂರುದಾರೆಯನ್ನು ಅವಿಶ್ವಾಸಾರ್ಹವಾಗಿ ಕಾಣಲಾಗದು. ಆಕೆಯ ವಿರುದ್ಧ ಎರಡು ಕ್ರಿಮಿನಲ್‌ ಪ್ರಕರಣ ದಾಖಲಾಗಿದ್ದು, ಒಂದು ಹೈಕೋರ್ಟ್‌ನಲ್ಲಿ ವಜಾ ಆಗಿದೆ. ಇನ್ನೊಂದು ವಿಚಾರಣಾ ಹಂತದಲ್ಲಿದೆ. ಇನ್ನೊಂದು ಮೂಲ ದಾವೆಯೂ ಬಾಕಿ ಇದೆ.

ಬಿಎಸ್‌ವೈ ಪರ ಹಿರಿಯ ವಕೀಲ ಸಿ ವಿ ನಾಗೇಶ್‌ ವಾದ

ಯಡಿಯೂರಪ್ಪ ವಿರುದ್ಧ ದಾಖಲಿಸಿರುವ ದೂರುದಾರ ಮಹಿಳೆ ಈಗ ಬದುಕಿಲ್ಲ. ಸಮಾಜದಲ್ಲಿನ ಗಣ್ಯರ ವಿರುದ್ಧ ಇಂತಹುದೇ ದೂರುಗಳನ್ನು ನೀಡುವ ಚಾಳಿಯನ್ನು ಆಕೆ ಹೊಂದಿದ್ದರು. ಪತಿ, ಪುತ್ರ ಮತ್ತು ಸಂಬಂಧಿಗಳನ್ನೂ ಆಕೆ ಬಿಟ್ಟಿಲ್ಲ. ಆಕೆ ಸುಮಾರು 53 ದೂರು ನೀಡಿದ್ದಾರೆ. ಇದರಲ್ಲೆಲ್ಲಾ ದೊಡ್ಡವರನ್ನು, ಅಧಿಕಾರಸ್ಥರನ್ನೇ ಗುರಿಯಾಗಿಸಿಕೊಳ್ಳಲಾಗಿದೆ. ಆಕೆಯ ಪ್ರವೃತ್ತಿ ಮತ್ತು ದೂರುಗಳು ಅಪ್ರಾಮಾಣಿಕತೆಯಿಂದ ಕೂಡಿವೆ. ಆದರೆ, ಇದನ್ನೇ ನೆಪವಾಗಿರಿಸಿಕೊಂಡು ಆಡಳಿತಾರೂಢ ಸರ್ಕಾರ ರಾಜಕೀಯ ಪ್ರತೀಕಾರದ ಧೋರಣೆಯಲ್ಲಿ ಯಡಿಯೂರಪ್ಪ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲು ಮುಂದಾಗಿದೆ.

ಕಾಂಗ್ರೆಸ್‌ ವಿರುದ್ಧ ಬಿಜೆಪಿ ದಾಖಲಿಸಿರುವ ಮಾನನಷ್ಟ ದಾವೆಯಲ್ಲಿ ಆರೋಪಿಗಳಾಗಿರುವ ಸಂಸದ ರಾಹುಲ್‌ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಇತ್ತೀಚೆಗಷ್ಟೇ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿದ್ದರು. ಇದೇ ಕಾರಣಕ್ಕಾಗಿಯೇ ಬಿಜೆಪಿ ಮುಖಂಡರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳಲ್ಲಿಯೂ ರಾಜ್ಯ ಸರ್ಕಾರ ಮುಯ್ಯಿ ತೀರಿಸಿಕೊಳ್ಳಲು ಮುಂದಾಗಿದೆ. ಇದಕ್ಕಾಗಿಯೇ ಯಡಿಯೂರಪ್ಪ ವಿರುದ್ಧ ಬಂಧನ ವಾರಂಟ್ ಆದೇಶ ಪಡೆಯಲಾಗಿದೆ.

ಸಿಐಡಿ ತನಿಖಾಧಿಕಾರಿ ಮಾಹಿತಿ ಬಚ್ಚಿಟ್ಟು ವಾರೆಂಟ್‌ ಜಾರಿ ಮಾಡಲು ಕೋರಿದ್ದಾರೆ. ಇದಕ್ಕೆ ನ್ಯಾಯಾಲಯ ಅನುಮತಿಸಿದೆ. ತಮ್ಮ ರಾಜಕೀಯ ಪ್ರಭುಗಳನ್ನು ಸಂತುಷ್ಟಗೊಳಿಸಲು ತನಿಖಾಧಿಕಾರಿಗಳು ವಿಚಾರಣಾಧೀನ ನ್ಯಾಯಾಲಯದಿಂದ ಬಂಧನ ವಾರೆಂಟ್‌ ಪಡೆಯುವ ಪ್ರವೃತ್ತಿ ಹೆಚ್ಚುತ್ತಿದೆ. ಇದನ್ನು ತಡೆಯಬೇಕಿದೆ. ಸಿಆರ್‌ಪಿಸಿ ಸೆಕ್ಷನ್‌ 73ರ ಪ್ರಕಾರ ಬಂಧನ ವಾರೆಂಟ್‌ ಪಡೆಯದೇ ಬಂಧಿಸಲು ಪೊಲೀಸರಿಗೆ ಅವಕಾಶವಿದೆ.

ಸಂತ್ರಸ್ತೆಯ ಪರ ವಕೀಲ ಬಾಲನ್‌ ವಾದ

ದೂರು ದಾಖಲಾಗಿ ಮೂರು ತಿಂಗಳು ಕಳೆದರೂ ತನಿಖೆಯಲ್ಲಿ ಪ್ರಗತಿಯಾಗಿಲ್ಲ. ಇದೊಂದು ಗಂಭೀರ ಪ್ರಕರಣ. ಆದ್ದರಿಂದ, ಆರೋಪಿಯನ್ನು ರಾಜ್ಯ ಸರ್ಕಾರಕ್ಕೆ ಬಂಧಿಸಲು ನಿರ್ದೇಶಿಸಬೇಕು ಎಂದು ಸಂತ್ರಸ್ತೆ ಪರ ವಕೀಲ ಬಾಲನ್‌ ಮನವಿ ಮಾಡಿದರು.

Also Read
ಪೋಕ್ಸೊ ಪ್ರಕರಣ: ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ವಿರುದ್ಧ ಬಂಧನ ವಾರೆಂಟ್‌ ಜಾರಿಗೆ ವಿಶೇಷ ನ್ಯಾಯಾಲಯದ ಅನುಮತಿ

ಸರ್ಕಾರಕ್ಕೆ ನ್ಯಾ. ದೀಕ್ಷಿತ್‌ ಪ್ರಶ್ನೆಗಳು

  • ದೂರು ನೀಡಿದ ತಕ್ಷಣ ಎಲ್ಲವೂ ಮುಗಿಯಲ್ಲ. ದೂರುದಾರೆಯ ಅಸಲಿಯತ್ತನ್ನು ಪರಿಶೀಲಿಸಬೇಕಿದೆ ಎಂದು ದೂರುದಾರೆಯ ಹಿನ್ನೆಲೆ ಜಾಲಾಡಿದ ನ್ಯಾಯಮೂರ್ತಿಗಳು.

  • ನಾವು ಮಾಧ್ಯಮ ವರದಿ ಆಧರಿಸಿ ಅಥವಾ ಕೋರ್ಟ್‌ನಲ್ಲಿ ನೆರೆದಿರುವ ಜನರನ್ನು ಆಧರಿಸಿ ಪ್ರಕರಣ ನಿರ್ಧರಿಸುವುದಿಲ್ಲ. ನಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಪ್ರಕರಣ ನಿರ್ಧರಿಸುತ್ತೇವೆ.

  • ನೀವು (ಸರ್ಕಾರ) ಏಕೆ ಯಡಿಯೂರಪ್ಪ ಅವರನ್ನು ಬಂಧಿಸಬೇಕು? ಕಸ್ಟಡಿಗೆ ಪಡೆಯುವ ಅಗತ್ಯ ಎಲ್ಲಿದೆ? ಒಂದೊಮ್ಮೆ ನಾಳೆ ಬರದಿದ್ದರೂ ಮಾರನೇಯ ದಿನ ಬಂದರೆ ಏನಾಗುತ್ತದೆ? ಆಕಾಶ ಕಳಚಿ ಬೀಳಲಿದೆಯೇ? ಬಿಎಸ್‌ವೈ ಮಾಜಿ ಸಿಎಂ. ಅವರು ದೇಶ ತೊರೆಯುತ್ತಾರೆ ಎಂಬುದು ನಿಮ್ಮ ವಾದವೇ? ಮಾಜಿ ಮುಖ್ಯಮಂತ್ರಿಯನ್ನು ನೀವು ಏಕೆ ಬಂಧಿಸಬೇಕು? ಅವರು ಓಡಿ ಹೋಗುತ್ತಾರೆಯೇ? ನೀವು ನ್ಯಾಯಾಲಯದಲ್ಲಿ ಸಮಯ ಕೇಳುವುದಿಲ್ಲವೇ?

  • ಧ್ವನಿ ಮಾದರಿ ನೀಡಲು ಅವರು ಬಂದಿದ್ದಾರೆ. ಅವರು ನಿಮ್ಮ ತನಿಖೆಗೆ ಸಹಕರಿಸಿದ್ದಾರೆ. ಕೆಲವೊಮ್ಮೆ ಇಂಥವು ನಡೆಯುತ್ತವೆ. ಸುಪ್ರೀಂ ಕೋರ್ಟ್‌ ಆದೇಶ ಮಾಡಿದರೂ ಅವುಗಳು ಪಾಲನೆಯಾಗದ ಸಂದರ್ಭವಿದೆ. ನಾಲ್ಕು ದಿನದಲ್ಲಿ ಅವರು ಬರದಿದ್ದರೆ ಆಕಾಶ ಕಳಚಿ ಬೀಳಲಿದೆಯೇ? ವಾರೆಂಟ್‌ ನೋಡಿದರೆ ಅನುಮಾನ ಬರುತ್ತದೆ?

  • ದುರುದ್ದೇಶ ಭಾವನೆ ಬರಬಾರದು ಎಂಬುದು ನಮ್ಮ ಪ್ರಯತ್ನ. ಬಿಎಸ್‌ವೈ ಜೂನ್‌ 17ರಂದು ಬರುತ್ತೇನೆ ಎಂದಿದ್ದಾರೆ. ಅದಾಗ್ಯೂ, ಅವರನ್ನು ಬಂಧಿಸಬೇಕೆ? ಯಾರನ್ನು ಸಂತುಷ್ಟಗೊಳಿಸಲು ಬಂಧಿಸಬೇಕು? ಕಸ್ಟಡಿ ತನಿಖೆ ಅಗತ್ಯ ಎಂದು ಎಲ್ಲಿ ಹೇಳಲಾಗಿದೆ? ಮಾಜಿ ಮುಖ್ಯಮಂತ್ರಿಯನ್ನು ಈ ರೀತಿ ನಡೆಸಿಕೊಂಡರೆ, ಸಾಮಾನ್ಯ ಮನುಷ್ಯನ ಗತಿಯೇನು? ಇದಕ್ಕಿಂತ ಹೆಚ್ಚನ್ನು ನಾನು ಹೇಳುವುದಿಲ್ಲ.

Kannada Bar & Bench
kannada.barandbench.com