ನ್ಯಾ.ಕುನ್ಹಾ ವರದಿಗೆ ಡಿಎನ್‌ಎ ಆಕ್ಷೇಪ: ಆಡಳಿತ ಮಂಡಳಿಯ ನಿರ್ಣಯ ಸಲ್ಲಿಸಲು ಹೈಕೋರ್ಟ್‌ ನಿರ್ದೇಶನ

“ಈ ರಿಟ್‌ ಅರ್ಜಿ ಸಲ್ಲಿಸುವುದಕ್ಕೆ ಅನುಮತಿಸಿ ಕಂಪನಿಯ ಆಡಳಿತ ಮಂಡಳಿಯು ನಿರ್ಣಯ ಕೈಗೊಂಡಿರುವ ದಾಖಲೆಯನ್ನು ಸಲ್ಲಿಸಬೇಕು. ಅದು ಇಲ್ಲದೇ ವಿಚಾರಣೆ ನಡೆಸಲಾಗದು” ಎಂದ ಪೀಠ.
Karnataka HC, DNA Networks & Justice John Michael D'Cunha
Karnataka HC, DNA Networks & Justice John Michael D'Cunha
Published on

ಕಾಲ್ತುಳಿತ ಪ್ರಕರಣದ ಸಂಬಂಧ ನಿವೃತ್ತ ನ್ಯಾಯಮೂರ್ತಿ ಜಾನ್‌ ಮೈಕಲ್‌ ಕುನ್ಹಾ ಅವರ ವಿಚಾರಣಾ ಆಯೋಗ ವರದಿಯನ್ನು ಪ್ರಶ್ನಿಸುವುದಕ್ಕೆ ಡಿಎನ್‌ಎ ಎಂಟರ್‌ಟೈನ್‌ಮೆಂಟ್‌ ನೆಟ್‌ವರ್ಕ್ಸ್‌ನ ಆಡಳಿತ ಮಂಡಳಿಯು ನಿರ್ಣಯಿಸಿರುವ ಪ್ರತಿಯನ್ನು ಸಲ್ಲಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌ ಸೋಮವಾರ ಆದೇಶಿಸಿದೆ.

ನ್ಯಾಯಮೂರ್ತಿ ಮೈಕಲ್‌ ಕುನ್ಹಾ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗವು ಜುಲೈ 11ರಂದು ನೀಡಿರುವ ವರದಿಯನ್ನು ರದ್ದುಗೊಳಿಸಲು ಕೋರಿ ಆರ್‌ಸಿಬಿ ವಿಜಯೋತ್ಸವದ ಆಯೋಜನೆಯ ಹೊಣೆ ಹೊತ್ತಿದ್ದ ಡಿಎನ್‌ಎ ಎಂಟರ್‌ಟೈನ್‌ಮೆಂಟ್‌ ನೆಟ್‌ವರ್ಕ್ಸ್‌ ಪ್ರೈವೇಟ್‌ ಲಿಮಿಟೆಡ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಜಯಂತ್‌ ಬ್ಯಾನರ್ಜಿ ಮತ್ತು ಉಮೇಶ್‌ ಎಂ. ಅಡಿಗ ಅವರ ವಿಭಾಗೀಯ ಪೀಠ ನಡೆಸಿತು.

ಡಿಎನ್‌ಎ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಂಪತ್‌ ಕುಮಾರ್‌ ಅವರು ನ್ಯಾ. ಕುನ್ಹಾ ವರದಿಯನ್ನು ನಮಗೆ ನೀಡಲಾಗಿಲ್ಲ. ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು ಕಂಪನಿಯ ನಿರ್ದೇಶಕರು ಮತ್ತು ಅಧಿಕಾರಿಗಳ ಘನತೆಗೆ ಚ್ಯುತಿಯಾಗುವ ರೀತಿಯ ವರದಿ ಮಾಡುತ್ತಿವೆ. ಹೀಗಾಗಿ, ತುರ್ತಾಗಿ ವಿಚಾರಣೆ ಕೋರುತ್ತಿದ್ದೇವೆ” ಎಂದರು.

ಆಗ ಪೀಠವು “ಈ ರಿಟ್‌ ಅರ್ಜಿ ಸಲ್ಲಿಸುವುದಕ್ಕೆ ಅನುಮತಿಸಿ ಕಂಪನಿಯ ಆಡಳಿತ ಮಂಡಳಿಯು ನಿರ್ಣಯ ಕೈಗೊಂಡಿರುವ ದಾಖಲೆಯನ್ನು ಸಲ್ಲಿಸಬೇಕು. ಅದು ಇಲ್ಲದೇ ವಿಚಾರಣೆ ನಡೆಸಲಾಗದು. ನಾಳೆ ಆ ದಾಖಲೆಯನ್ನು ಸಲ್ಲಿಸಿ, ವಿಚಾರಣೆ ನಡೆಸಲಾಗುವುದು” ಎಂದು ನಾಳೆಗೆ ವಿಚಾರಣೆ ಮುಂದೂಡಿತು.

Also Read
ಕಾಲ್ತುಳಿತ ಪ್ರಕರಣ: ನ್ಯಾ. ಕುನ್ಹಾ ಆಯೋಗದ ವರದಿ ರದ್ದು ಕೋರಿ ಹೈಕೋರ್ಟ್‌ ಕದತಟ್ಟಿದ ಡಿಎನ್‌ಎ ಎಂಟರ್‌ಟೈನ್‌ಮೆಂಟ್‌

ಇನ್ನು, ಈ ಪ್ರಕರಣದ ರೋಸ್ಟರ್‌ ಬಗ್ಗೆಯೂ ಪೀಠ ಸ್ಪಷ್ಟನೆ ಪಡೆಯಿತು. ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ರೊಬೆನ್‌ ಜಾಕಬ್‌ ಅವರು “ನಿವೃತ್ತ ನ್ಯಾಯಮೂರ್ತಿಗಳ ನೇತ್ವತ್ವದ ಆಯೋಗ ಸಲ್ಲಿಸುವ ವರದಿಯನ್ನು ಪ್ರಶ್ನಿಸುವ ಅರ್ಜಿಗಳು ಇದೇ ಪೀಠದ ಮುಂದೆ ವಿಚಾರಣೆಗೆ ಬರುತ್ತವೆ” ಎಂದು ಸ್ಪಷ್ಟನೆ ನೀಡಿದರು.

ನ್ಯಾ. ಕುನ್ಹಾ ವಿಚಾರಣಾ ಆಯೋಗವು ದಾಖಲಿಸಿರುವ ಸಾಕ್ಷಿಗಳ ಪಾಟೀ ಸವಾಲಿಗೆ ವಿಚಾರಣಾ ಆಯೋಗ ಕಾಯಿದೆ 1952ರಲ್ಲಿ ಅವಕಾಶವಿದೆ. ಅರ್ಜಿದಾರರ ಹಿತಾಸಕ್ತಿಗೆ ವಿರುದ್ಧವಾಗಿ ಸಾಕ್ಷಿ ನೀಡಿರುವವರ ಪಾಟೀ ಸವಾಲಿಗೆ ಅರ್ಜಿದಾರರು ಕೋರಿದ್ದು, ಇದಕ್ಕೆ ನ್ಯಾ. ಕುನ್ಹಾ ಆಯೋಗ ನಿರಾಕರಿಸಿದೆ. ಹೀಗಾಗಿ, ಇಡೀ ವಿಚಾರಣಾ ವರದಿಯು ಸಹಜ ನ್ಯಾಯತತ್ವಕ್ಕೆ ವಿರುದ್ಧವಾಗಿರುವುದರಿಂದ ಅದನ್ನು ವಜಾಗೊಳಿಸಬೇಕು ಎಂದು ಕೋರಲಾಗಿದೆ.

Kannada Bar & Bench
kannada.barandbench.com