ಜಾತಿ ಗಣತಿ ವರದಿ ಸ್ವೀಕರಿಸಿದ ಕುರಿತು ಅಫಿಡವಿಟ್‌ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ

ನ್ಯಾ. ಗೌಡ ಅವರು “ಜಾತಿ ಸಮೀಕ್ಷೆಯನ್ನು (ಲೋಕಸಭಾ) ಚುನಾವಣೆಗೆ ಬಳಕೆ ಮಾಡುತ್ತಾರೆ ಎಂಬುದು ಅರ್ಜಿದಾರರ ಆತಂಕ” ಎಂದು ಹೇಳಿದರು.
ಜಾತಿ ಗಣತಿ ವರದಿ ಸ್ವೀಕರಿಸಿದ ಕುರಿತು ಅಫಿಡವಿಟ್‌ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ
Published on

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ಜಾತಿ ಗಣತಿ ವರದಿ ಸ್ವೀಕರಿಸಿರುವ ಕುರಿತ ಮಾಹಿತಿಯನ್ನು ಅಫಿಡವಿಟ್‌ನಲ್ಲಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ನಿರ್ದೇಶಿಸಿದೆ.

ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುವಂತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ 2014ರ ಜನವರಿ 23ರಂದು ಸರ್ಕಾರ ಆದೇಶಿಸಿರುವುದನ್ನು ವಜಾ ಮಾಡುವಂತೆ ಹಾಗೂ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಕಾಯಿದೆ ಸೆಕ್ಷನ್‌ 9ಕ್ಕೆ ತಂದಿರುವ ತಿದ್ದುಪಡಿ ವಜಾ ಮಾಡುವಂತೆ ಕೋರಿ ಬೀದರ್‌ನ ಶಿವರಾಜ್‌ ಕಣಶೆಟ್ಟಿ, ಮುಖ್ಯಮಂತ್ರಿ ಚಂದ್ರು ಮತ್ತಿತರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಟಿ ಜಿ ಶಿವಶಂಕರೇಗೌಡ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ಹಿರಿಯ ವಕೀಲ ಜಿ ಆರ್‌ ಗುರುಮಠ ಅವರು “2015ರ ಮೇ 5ರಂದು ಜಾತಿ ಗಣತಿ ಮುಗಿದಿದೆ ಎಂದು ಅರ್ಜಿದಾರರೇ (ಡಾ. ಮುಖ್ಯಮಂತ್ರಿ ಚಂದ್ರು) ಹೇಳಿದ್ದಾರೆ. ಈ ವರದಿಯು ಒಂಭತ್ತು ವರ್ಷಗಳಿಂದ ಹಾಗೇ ಇತ್ತು. ಈಗ ಯಾವುದೇ ತುರ್ತು ಇಲ್ಲ. ವರದಿ ಸ್ವೀಕರಿಸಲು ಕಾಲಾವಕಾಶ ತೆಗೆದುಕೊಂಡಿರುವುದಕ್ಕೆ ನಮಗೆ ಆಕ್ಷೇಪವಿಲ್ಲ. ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರು ಗುರುವಾರ ಸಂಜೆ ವರದಿ ಸಲ್ಲಿಸಿದ್ದಾರೆ. ಜಾತಿ ಗಣತಿ ನಡೆಸಲು ರಾಜ್ಯ ಸರ್ಕಾರಕ್ಕೆ ಸಾಂವಿಧಾನಿಕ ಸಾಮರ್ಥ್ಯ ಇಲ್ಲ ಎಂಬ ವಿಚಾರವನ್ನು ಮನವಿ ಒಳಗೊಂಡಿದೆ. ಈ ವಿಚಾರದಲ್ಲಿ ಮುಂದುವರಿಯದಂತೆ ಮಧ್ಯಂತರ ಆದೇಶ ಮಾಡಬೇಕು” ಎಂದು ಕೋರಿದರು.

“1931ರ ಬಳಿಕ ಮೊದಲ ಬಾರಿಗೆ ಜಾತಿ ಸಮೀಕ್ಷೆ ನಡೆಸಲಾಗುತ್ತಿದೆ ಎಂದು 2014ರಲ್ಲಿ ಬಜೆಟ್‌ ಅಧಿವೇಶನದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನಕ್ಕೆ ತಿಳಿಸಿದ್ದರು. ಆದರೆ, ಜಾತಿ ಸಮೀಕ್ಷೆ ನಡೆಸಲು ಕೇಂದ್ರ ಸರ್ಕಾರಕ್ಕೆ ಮಾತ್ರ ಅಧಿಕಾರವಿದೆ. 2015ರಲ್ಲಿ ಸಂಗ್ರಹಿಸಿರುವ ದತ್ತಾಂಶವನ್ನು ಹಿಂದುಳಿದ ವರ್ಗದ ವರದಿಗೆ ಮಾತ್ರ ಬಳಕೆ ಮಾಡಲಾಗುತ್ತದೆ. ಇದರಲ್ಲಿ ಜಾತಿ ಉಲ್ಲೇಖಿಸುವುದಿಲ್ಲ ಎಂದು ಸರ್ಕಾರ, ಅರ್ಜಿದಾರರು (ಡಾ. ಮುಖ್ಯಮಂತ್ರಿ) ಮತ್ತು ಹಿಂದುಳಿದ ವರ್ಗಗಳ ಆಯೋಗ ಹೇಳಿದರೆ ವಿವಾದವನ್ನು ಬಗೆಹರಿಸಬಹುದು” ಎಂದರು.

ಮುಂದುವರಿದು, “ಭಾರತ ಸರ್ಕಾರವು ನಮ್ಮ ಅರ್ಜಿಗೆ ಬೆಂಬಲಿಸಿ ಆಕ್ಷೇಪಣೆ ಹಾಕಿದ್ದು, ನಮ್ಮ ಅರ್ಜಿ ಪುರಸ್ಕರಿಸುವಂತೆ ಅಭಿಪ್ರಾಯ ವ್ಯಕ್ತಪಡಿಸಿದೆ. ಸಂವಿಧಾನದ 245 ಮತ್ತು 246ರ ಪ್ರಕಾರ ಜಾತಿ ಸಮೀಕ್ಷೆ ನಡೆಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ. ರಾಜ್ಯ ಸರ್ಕಾರಕ್ಕೆ ಆ ಅಧಿಕಾರ ಇಲ್ಲ” ಎಂದರು.

ಆಗ ಮುಖ್ಯ ನ್ಯಾಯಮೂರ್ತಿ ಅಂಜಾರಿಯಾ ಅವರು “ಯಾವುದೇ ಆಕ್ಷೇಪ ಇಲ್ಲದೇ ಎಲ್ಲಾ ಜಾತಿಗಳನ್ನು ಪತ್ತೆ ಮಾಡಲಾಗಿದೆಯೇ? ಎರಡೂ ಕಡೆ ಇದಕ್ಕೆ ಆಕ್ಷೇಪ ಇರುತ್ತದೆ ಅಲ್ಲವೇ” ಎಂದರು.

ಆಗ ಗುರುಮಠ ಅವರು “ಜಾತಿ ಗಣತಿ ವರದಿ ಸಲ್ಲಿಕೆ ಅಥವಾ ಅದರ ಸ್ವೀಕಾರದ ಸಂದರ್ಭದ ಬಗ್ಗೆ ನಾವು ಆಕ್ಷೇಪಿಸುವುದಿಲ್ಲ. ನಾವು ಸಾಂವಿಧಾನಿಕ ಮತ್ತು ಕಾನೂನಾತ್ಮಕ ವಿಚಾರಕ್ಕಷ್ಟೇ ಸೀಮಿತವಾಗಿದ್ದೇವೆ” ಎಂದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲೆ ನಿಲೋಫರ್ ಅಕ್ಬರ್ ಅವರು “ಏನೋ ಆಗಬಹುದು ಎಂಬ ಆತಂಕವನ್ನು ನಮ್ಮ ಹಿರಿಯ ವಕೀಲರ ಯಾಕೆ ವ್ಯಕ್ತಪಡಿಸುತ್ತದ್ದಾರೆ ಎಂಬುದು ಅರ್ಥವಾಗುತ್ತಿಲ್ಲ.‌ ರಾಜ್ಯ ಸರ್ಕಾರಕ್ಕೆ ನಿನ್ನೆ ಜಾತಿ ಗಣತಿ ಸಲ್ಲಿಸಲಾಗಿದೆ ಎಂಬ ವಿಚಾರ ನಮಗೆ ತಿಳಿದಿಲ್ಲ. ಈ ಮಾಹಿತಿ ಅವರಿಗೆ ಎಲ್ಲಿಂದ ಬಂದಿದೆಯೋ ಗೊತ್ತಿಲ್ಲ. ಇದೊಂದು ಸೂಕ್ಷ್ಮ ವಿಚಾರವಾಗಿದ್ದು, ನಮಗೆ ಸ್ವಲ್ಪ ಸಮಯಾವಕಾಶ ನೀಡಿದರೆ ನಾನು ಪೀಠಕ್ಕೆ ವಿಚಾರ ತಿಳಿಸುತ್ತೇನೆ. ವರದಿಗೆ ಸಂಬಂಧಿಸಿದಂತೆ ಮುಂದುವರಿಯುವುದಿಲ್ಲ ಎಂದು ಹೇಳಿಕೆ ನೀಡುವಂತೆ ಮೌಖಿಕವಾಗಿ ಕೇಳುವುದು ಸೂಕ್ತವಲ್ಲ” ಎಂದರು.

ಆಗ ಗುರುಮಠ ಅವರು “ಎಲ್ಲಾ ಸುದ್ದಿ ಮಾಧ್ಯಮ ಮತ್ತು ಪತ್ರಿಕೆಗಳು ಜಾತಿ ಸಮೀಕ್ಷಾ ವರದಿ ಸ್ವೀಕರಿಸಿರುವ ಬಗ್ಗೆ ವರದಿ ಮಾಡಿವೆ. ಹಿಂದುಳಿದ ವರ್ಗದ ಆಯೋಗವು ಸರ್ಕಾರಕ್ಕೆ ವರದಿ ಸಲ್ಲಿಸಿದೆ ಎಂಬ ವಿಚಾರವನ್ನು ವೈಯಕ್ತಿಕ ಜವಾಬ್ದಾರಿಯಿಂದ ತಿಳಿಸುತ್ತಿದ್ದೇನೆ” ಎಂದರು.

ಈ ಮಧ್ಯೆ, ನ್ಯಾ. ಶಿವಶಂಕರೇ ಗೌಡ ಅವರು ಸರ್ಕಾರದ ವಕೀಲರನ್ನು ಕುರಿತು “ವರದಿ ಸ್ವೀಕರಿಸಿಲ್ಲ ಎಂದರೆ ಮುಂದುವರಿಯದಂತೆ ಆದೇಶ ಮಾಡುವ ವಿಚಾರ ಎಲ್ಲಿ ಬರುತ್ತದೆ? ನೀವು ಮುಕ್ತವಾಗಿರುತ್ತೀರಿ” ಎಂದರು.

ಆಗ ನಿಲೋಫರ್ ಅವರು “ವರದಿ ಸ್ವೀಕರಿಸುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಅರ್ಜಿದಾರರ ಅರ್ಜಿಯು ಇಂದು ವಿಚಾರಣೆಗೆ ನಿಗದಿಯಾಗಿಲ್ಲ. ನಮಗೆ ಸಮಯ ನೀಡಿ. ಅಡ್ವೊಕೇಟ್‌ ಜನರಲ್‌ ಅವರನ್ನು ಕರೆತರಲಾಗುವುದು. ಈ ವಿಚಾರದಲ್ಲಿ ನಮಗೆ ಯಾವುದೇ ಮಾಹಿತಿ ಇಲ್ಲ” ಎಂದರು.

ಇಲ್ಲಿ ಮಧ್ಯಪ್ರವೇಶಿಸಿದ ಗುರುಮಠ ಅವರು “ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಆಕ್ಷೇಪಣೆ ಸಲ್ಲಿಸಿವೆ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ ಅವರು ವರದಿಯನ್ನು ಮುಖ್ಯಮಂತ್ರಿ ಅವರಿಗೆ ಸಲ್ಲಿಸಿರುವ ಕುರಿತು ನಾನು ವೈಯಕ್ತಿಕ ಜವಾಬ್ದಾರಿ ವಹಿಸಿಕೊಳ್ಳುವೆ” ಎಂದು ಖಚಿತವಾಗಿ ಹೇಳಿದರು.

ಆಗ ನ್ಯಾ. ಗೌಡ ಅವರು “ಜಾತಿ ಸಮೀಕ್ಷೆಯನ್ನು (ಲೋಕಸಭಾ) ಚುನಾವಣೆಗೆ ಬಳಕೆ ಮಾಡುತ್ತಾರೆ ಎಂಬುದು ಅರ್ಜಿದಾರರ ಆತಂಕ” ಎಂದರು. ಇದಕ್ಕೆ ವಕೀಲರ ಗುರುಮಠ ಅವರು ಸಹಮತಿಸಿದರು.

ಈ ಹಂತದಲ್ಲಿ ಸಿಜೆ ಅವರು “ಮುಂದಿನ ಕ್ರಮ ಜಾತಿ ಗಣತಿ ವರದಿಯನ್ನು ಸದನದಲ್ಲಿ ಮಂಡಿಸುವುದೇ? ಅವರ ನಡೆ ನಿಮಗೆ ಗೊತ್ತಿಲ್ಲವೇ? ಇದು ಸಂಪುಟಕ್ಕೆ ಹೋಗುತ್ತದೆಯೇ?” ಎಂದರು.

Also Read
ಜಾತಿ ಗಣತಿ ವರದಿ ಸ್ವೀಕಾರಕ್ಕೆ ಆಕ್ಷೇಪ: ನಾಳೆ ಅರ್ಜಿ ವಿಚಾರಣೆ ನಡೆಸಲಿರುವ ಹೈಕೋರ್ಟ್‌

ಆಗ ಗುರುಮಠ ಅವರು “ಸದನದ ಮುಂದೆ ಮಂಡಿಸಬಹುದು ಅಥವಾ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಬಹುದು. ಪ್ರತಿವಾರ ಸಂಪುಟ ಸಭೆ ನಡೆಯುತ್ತದೆ. ಅವರ ಉದ್ದೇಶ ಏನು ಎಂದು ನಮಗೆ ತಿಳಿದಿಲ್ಲ. ಕಾನೂನು ಸಚಿವ ಎಚ್‌ ಕೆ ಪಾಟೀಲ್‌ ಅವರು ಅದನ್ನು ಸದನದ ಮುಂದೆ ಮಂಡಿಸಲಾಗುವುದು ಅಥವಾ ಸಂಪುಟದ ಮುಂದೆ ಮಂಡಿಸಬಹುದು ಎಂದಿದ್ದಾರೆ. ಸದನದ ಮುಂದೆ ಇಡುವುದಕ್ಕೂ ಮುನ್ನ ಸಂಪುಟದಲ್ಲಿ ನಿರ್ಧಾರವಾಗಬೇಕಿದೆ. ಸಂಪುಟ ಯಾವುದೇ ನಿರ್ಧಾರ ಕೈಗೊಂಡರೂ ಒಂದು ಸಮುದಾಯ ಅಥವಾ ಇನ್ನೊಂದು ಸಮುದಾಯಕ್ಕೆ ಸಮಸ್ಯೆಯಾಗುತ್ತದೆ ಎಂಬ ಆತಂಕವಿಲ್ಲ. ಜಾತಿ ಸಮೀಕ್ಷೆ ನಡೆಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ ಎಂಬುದು ನಮ್ಮ ವಾದ” ಎಂದರು.

ಇದನ್ನು ಆಲಿಸಿದ ಪೀಠವು ಹಿರಿಯ ವಕೀಲರಾದ ಗುರುಮಠ ಅವರ ಹೇಳಿಕೆಯನ್ನು ದಾಖಲಿಸಿಕೊಂಡು ಅಫಿಡವಿಟ್‌ ಮೂಲಕ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಮಾರ್ಚ್‌ 5ಕ್ಕೆ ಮುಂದೂಡಿತು.

Kannada Bar & Bench
kannada.barandbench.com