ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಬಸವರಾಜನ್‌ಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್‌

ರಾಜಕೀಯ ದುರುದ್ದೇಶದಿಂದ ಬಸವರಾಜನ್‌ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಪೋಕ್ಸೊ ಪ್ರಕರಣದಲ್ಲಿ ಶರಣರು ಸಿಲುಕಿರುವುದರಿಂದ ಮಠದ ಹಾಲಿ ಉಸ್ತುವಾರಿ ಸ್ವಾಮೀಜಿ ಬಸವಪ್ರಭು ಅವರು ಬಸವರಾಜನ್‌ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ ಎಂದು ವಾದ.
S K Basavarajan and Karnataka HC
S K Basavarajan and Karnataka HC

ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಸಂಬಂಧ ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಸುಳ್ಳು ಕೇಸು ದಾಖಲಿಸಲು ಕ್ರಿಮಿನಲ್ ಸಂಚು ರೂಪಿಸಿದ ಆರೋಪದಡಿ ಬಂಧನಕ್ಕೆ ಒಳಗಾಗಿದ್ದ ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಹಾಗೂ ಮಾಜಿ ಶಾಸಕ ಎಸ್ ಕೆ ಬಸವರಾಜನ್ ಅವರಿಗೆ ಕರ್ನಾಟಕ ಹೈಕೋರ್ಟ್ ಗುರುವಾರ ಜಾಮೀನು ನೀಡಿದೆ.

ಎಸ್ ಕೆ ಬಸವರಾಜನ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್ ರಾಚಯ್ಯ ಅವರ ನೇತೃತ್ವದ ರಜಾಕಾಲೀನ ಏಕಸದಸ್ಯ ಪೀಠವು ಅರ್ಜಿದಾರರ ಕೋರಿಕೆಯನ್ನು ಮಾನ್ಯ ಮಾಡಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಹಷ್ಮತ್ ಪಾಷ ಅವರು “ಅರ್ಜಿದಾರರ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 120-ಬಿ (ಅಪರಾಧಿಕ ಪಿತೂರಿ), 384 (ಸುಲಿಗೆ), 420 (ವಂಚನೆ) ಮತ್ತು 366-ಎ (ಅಪ್ರಾಪ್ತ ಬಾಲಕಿಯನ್ನು ದುರುದ್ದೇಶ ಸಾಧನೆಗೆ ಬಳಸಿಕೊಂಡ ಆರೋಪ) ಅಡಿಯಲ್ಲಿ ಆರೋಪ ಮಾಡಲಾಗಿದೆ. ಇದೇ ಆರೋಪ ಸಂಬಂಧ ಈ ಹಿಂದೆ ಅರ್ಜಿದಾರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ತದನಂತರ ಎರಡನೇ ಎಫ್‌ಐಆರ್ ದಾಖಲಿಸಲಾಗಿದೆ. ಒಂದೇ ಪ್ರಕರಣದ ಸಂಬಂಧ ಎರಡೆರಡು ಎಫ್‌ಐಆರ್ ದಾಖಲಿಸಲು ಕಾನೂನಿನಲ್ಲಿ ಅವಕಾಶವಿಲ್ಲ” ಎಂದು ವಾದಿಸಿದರು.

“ರಾಜಕೀಯ ದುರುದ್ದೇಶದಿಂದ ಅರ್ಜಿದಾರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿ ಮುರುಘಾ ಶರಣರು ಪೋಕ್ಸೊ ಪ್ರಕರಣದಲ್ಲಿ ಸಿಲುಕಿರುವುದರಿಂದ ಅರ್ಜಿದಾರರ ವಿರುದ್ಧ ಮಠದ ಹಾಲಿ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಅವರು ಪ್ರತಿದೂರು ದಾಖಲಿಸಿದ್ದಾರೆ. ಅಪರಾಧವೇ ನಡೆದಿಲ್ಲದಿರುವಾಗ ಅರ್ಜಿದಾರರನ್ನು ನ್ಯಾಯಾಂಗ ಬಂಧನದಲ್ಲಿಡುವುದು ಕಾನೂನು ಬಾಹಿರ. ಇನ್ನೂ ಈ ಪ್ರಕರಣದಲ್ಲಿ ಸುಲಿಗೆ ಆರೋಪ ಉದ್ಭವಿಸುವ ಪ್ರಶ್ನೆಯೇ ಇಲ್ಲ. ಆದ್ದರಿಂದ, ಜಾಮೀನು ನೀಡಬೇಕು” ಎಂದು ಕೋರಿದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಸರ್ಕಾರಿ ಅಭಿಯೋಜಕರಾದ ಶಂಕರ್ ಅವರು “ಅರ್ಜಿದಾರರ ವಿರುದ್ಧ ಗಂಭೀರ ಸ್ವರೂಪದ ಆರೋಪಗಳಿವೆ. ಪ್ರಕರಣ ತನಿಖಾ ಹಂತದಲ್ಲಿದೆ. ಈ ಪರಿಸ್ಥಿತಿಯಲ್ಲಿ ಜಾಮೀನು ನೀಡಬಾರದು” ಎಂದು ಮನವಿ ಮಾಡಿದರು.

ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಸುಳ್ಳು ಕೇಸು ದಾಖಲಿಸುವ ಸಂಬಂಧ ಮಠದ ಪ್ರಿಯದರ್ಶಿನಿ ಹೈಸ್ಕೂಲ್‌ನಲ್ಲಿ ಕೆಲಸ ಮಾಡುತ್ತಿರುವ ಬಸವರಾಜೇಂದ್ರ ಮತ್ತು ಮಠದ ದಾಸೋಹದ ಸಿಬ್ಬಂದಿಯಾದ ಮಹಿಳೆಯೊಬ್ಬರ ನಡುವೆ ನಡೆದಿದೆ ಎನ್ನಲಾದ ಫೋನ್ ಸಂಭಾಷಣೆಯ ತುಣಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಪ್ರಕರಣ ಸಂಬಂಧ ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಅವರು ಚಿತ್ರದುರ್ಗ ಗ್ರಾಮೀಣ ಠಾಣಾ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಪೊಲೀಸರು ಎಫ್‌ಐಆರ್ ದಾಖಲಿಸಿ, ಅರ್ಜಿದಾರರನ್ನು ಬಂಧಿಸಿದ್ದರು.

Related Stories

No stories found.
Kannada Bar & Bench
kannada.barandbench.com